ADVERTISEMENT

ವಂಚನೆ; ಜೆಎಎ ಲೈಫ್ ಸ್ಟೈಲ್ ಇಂಡಿಯಾ ಕಂಪನಿ ನಿರ್ದೇಶಕ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 5:24 IST
Last Updated 5 ಜೂನ್ 2021, 5:24 IST
   

ಬೆಂಗಳೂರು: ಸಾರ್ವಜನಿಕರಿಗೆ ಲಾಭದ ಆಮಿಷವೊಡ್ಡಿ ಸದಸ್ಯತ್ವದ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಆರೋಪದಡಿ ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ‌ ನಿರ್ದೇಶಕ ಕೆ.ವಿ. ಜಾನಿ ಎಂಬುವರನ್ನು ಸಿಸಿಬಿ‌ ಪೊಲೀಸರು ಬಂಧಿಸಿದ್ದಾರೆ.

'ಬಸವೇಶ್ವರನಗರದಲ್ಲಿ ಕಚೇರಿ ಹೊಂದಿದ್ದ ಆರೋಪಿ, ಸಾರ್ವಜನಿಕರಿಗೆ ಸದಸ್ಯತ್ವ ನೀಡುತ್ತಿದ್ದ. ಬೇರೆಯವರನ್ನೂ ಚೈನ್ ಲಿಂಕ್ ರೀತಿಯಲ್ಲಿ ಸದಸ್ಯರನ್ನಾಗಿ ಮಾಡಿದರೆ ಕಮಿಷನ್ ನೀಡುವುದಾಗಿಯೂ ಹೇಳುತ್ತಿದ್ದ' ಎಂದು ಸಿಸಿಬಿ ಪೊಲೀಸರು ಹೇಳಿದರು.

'ಜಾ ಲೈಫ್ ಸ್ಟೈಲ್ ಹೆಸರಿನ ಜಾಲತಾಣದ ಮೂಲಕ ಆರೋಪಿ‌ ವಹಿವಾಟು ನಡೆಸುತ್ತಿದ್ದ. ಕಂಪನಿ ಸದಸ್ಯತ್ವಕ್ಕೆಂದು ₹ 1,109 ಪಡೆಯುತ್ತಿದ್ದ. ಸಮಯ ಸಿಕ್ಕಾಗಲೆಲ್ಲ ಅರ್ಧ ಗಂಟೆ ಜಾಹೀರಾತು ನೋಡಿದರೆ, ದಿನಕ್ಕೆ ₹ 240 ಸಿಗುತ್ತದೆ. ಇದೇ ರೀತಿಯಲ್ಲಿ ನಿತ್ಯವೂ ಜಾಹೀರಾತು ವಿಡಿಯೊ ನೋಡಿದರೆ, ಪ್ರತಿ ತಿಂಗಳು ₹ 7,200ರಿಂದ ₹ 86,400ರವರೆಗೂ ಹಣ ಸಂಪಾದಿಸಹುದು. ಹಣವೂ ಆನ್‌ಲೈನ್ ಮೂಲಕವೇ ಖಾತೆಗೆ ಜಮೆ ಆಗುವುದೆಂದು ಆರೋಪಿ ಹೇಳುತ್ತಿದ್ದ.'

ADVERTISEMENT

'ಆರೋಪಿ‌ ಮಾತು ನಂಬಿದ್ದ 4 ಲಕ್ಷ ಮಂದಿ ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಿದ್ದರು. ಆದರೆ, ಇತ್ತೀಚಿಗೆ ಆರೋಪಿ ಯಾವುದೇ ಹಣ ನೀಡಿರಲಿಲ್ಲ.‌ ಈ ಬಗ್ಗೆ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ನೊಂದ ಸಾರ್ವಜನಿಕರು, ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಲಕ್ಷಾಂತರ ರೂಪಾಯಿ‌ ವಂಚನೆಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ' ಎಂದೂ ಸಿಸಿಬಿ‌ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.