ADVERTISEMENT

ಜ. 22ರಿಂದ ವಿಧಾನ ಮಂಡಲದ ಜಂಟಿ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 15:31 IST
Last Updated 14 ಜನವರಿ 2026, 15:31 IST
ಎಚ್‌.ಕೆ. ಪಾಟೀಲ
ಎಚ್‌.ಕೆ. ಪಾಟೀಲ   

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನ ಇದೇ 22ರಿಂದ 31ರವರೆಗೆ ನಡೆಸಲು ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವಿಬಿ ಜಿ ರಾಮ್‌ ಜಿ’ ಕಾಯ್ದೆಯ ಕುರಿತು ಸದನದಲ್ಲಿ ವಿಶೇಷ ಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ.

ಮಂಗಳವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಧಿವೇಶನದ ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ’ ಎಂದರು.

ADVERTISEMENT

‘ಸಮಾಜದ ಮೇಲೆ ವಿಬಿ ಜಿ ರಾಮ್ ಜಿ ಕಾಯ್ದೆ ಬೀರುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು ಅಧಿವೇಶನದಲ್ಲಿ ಚರ್ಚಿಸಲಾಗುವುದು. ಈ ಬಗ್ಗೆ  ನಿರ್ಣಯ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಮೂಲಕ, ನರೇಗಾ ಕಾಯ್ದೆಯ ಪುನರ್ ಸ್ಥಾಪನೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗುವುದು’ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜ್ಯದ ಜನರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾದರೆ ಸರ್ಕಾರ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.
ಎಚ್‌.ಕೆ. ಪಾಟೀಲ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

‘22ರಿಂದ 31ರ ನಡುವೆ ರಜಾ ದಿನಗಳೂ ಬರುತ್ತವೆ. ಯಾವೆಲ್ಲ ದಿನಗಳಲ್ಲಿ ಅಧಿವೇಶನ ನಡೆಸಬೇಕು ಎಂದು ವಿಧಾನಸಭಾಧ್ಯಕ್ಷರ ಜೊತೆ ಸಮಾಲೋಚಿಸಿ, ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದೂ ಪಾಟೀಲ ಹೇಳಿದರು.

‘ಕೇಂದ್ರದ ಕಾಯ್ದೆ ಕುರಿತು ವಿಶೇಷ ಚರ್ಚೆ ನಡೆಸುವ ಅಗತ್ಯ ಇದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಜನಹಿತ, ರಾಜ್ಯದ ಹಿತ ಕಾಪಾಡಲು ಸರ್ಕಾರ ಸೂಕ್ತ ಹೆಜ್ಜೆ ಇಡಲಿದೆ.‌ ಅಲ್ಲದೆ, ಇಂತಹ ವಿಚಾರದಲ್ಲಿ ಸರ್ಕಾರ ಅಧಿವೇಶನ ಕರೆಯದೇ ಬಿಡಲು ಸಾಧ್ಯವೂ ಇಲ್ಲ. ಜನರ ನ್ಯಾಯಾಲಯಕ್ಕೆ ಮಾತ್ರವಲ್ಲದೆ, ಕಾನೂನಿನ ನ್ಯಾಯಾಲಯದ ಮೊರೆ ಹೋಗಲು ಕೂಡಾ ನಿರ್ಣಯಿಸಲಾಗಿದೆ’ ಎಂದರು.

‘ಇತರ ರಾಜ್ಯಗಳು ಕಾಯ್ದೆಗೆ ತಕರಾರು ತೆಗೆದಿಲ್ಲವಲ್ಲ’ ಎಂದಾಗ, ‘ಪಂಜಾಬ್, ತಮಿಳುನಾಡು ಸರ್ಕಾರ ಧ್ವನಿ ಎತ್ತಿವೆ. ಆರೇಳು ರಾಜ್ಯಗಳು ಸ್ಪಷ್ಟ ನಿಲುವು ಹಾಗೂ ಅಸಮಾಧಾನ ವ್ಯಕ್ತಪಡಿಸಿವೆ’ ಎಂದರು.

‘ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಣಯ’

‘ನರೇಗಾ ಕಾಯ್ದೆಯಡಿ ಕೆಲಸ ಕೊಡುವುದು ಮಾತ್ರವಲ್ಲ ಕೆಲಸ ಕೊಡದಿದ್ದರೆ ಫಲಾನುಭವಿ ಉದ್ಯೋಗ ಭತ್ಯೆ ಕೇಳಬಹುದಾಗಿತ್ತು. ಪಂಚಾಯಿತಿಗಳಿಗೆ ಕೆಲಸಗಳ ಬಗ್ಗೆ ತೀರ್ಮಾನಿಸುವ ಹಕ್ಕು ಇತ್ತು. ಹೊಸ ಕಾಯ್ದೆ ಮೂಲಕ ಕೇಂದ್ರವು ಈ ಅಧಿಕಾರ ಕಿತ್ತುಕೊಂಡು ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದು ವಿಕೇಂದ್ರೀಕರಣದ ಪರಿಕಲ್ಪನೆಗೆ ಕೊಡಲಿ ಏಟು ನೀಡಲಿದೆ. ಈ ಕಾರಣಗಳಿಗೆ ವಿಶೇಷ ಚರ್ಚೆ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯಿಸಲಾಗಿದೆ’ ಎಂದು ಎಚ್.ಕೆ. ಪಾಟೀಲ ವಿವರಿಸಿದರು.

‘ರಾಮ್’ ಎಲ್ಲಿಂದ ಬರುತ್ತದೆ?

‘ರಾಜಕೀಯವಾಗಿ ಕೆಲವರು ಕಾಯ್ದೆಯನ್ನು ವಿಬಿ ಜಿ ರಾಮ್ ಜಿ ಎನ್ನುತ್ತಾರೆ. ಇದರಲ್ಲಿ ರಾಮ್ ಎಲ್ಲಿಂದ ಬರುತ್ತದೆ? ಬರೆಯುವಾಗ ಹೇಳುವಾಗ ತಪ್ಪು ಏಕೆ ಮಾಡುತ್ತಾರೆ? ಭಾವನಾತ್ಮಕ ಅಂಶದಡಿ ಆಶ್ರಯ ಪಡೆಯುತ್ತಿರುವುದು ದುರದೃಷ್ಟಕರ ಸಂಗತಿ’ ಎಂದೂ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.