ADVERTISEMENT

ರಂಗೇರುತ್ತಿದೆ ಕಸಾಪ ಚುನಾವಣೆ ಅಖಾಡ: ಬಿರುಸುಗೊಂಡ ಚುನಾವಣೆ ಪ್ರಚಾರ

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿಂದ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 15:40 IST
Last Updated 31 ಮಾರ್ಚ್ 2021, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದ್ದು, ಆಕಾಂಕ್ಷಿಗಳು ಉತ್ಸಾಹದಿಂದ ನಾಮಪತ್ರ ಸಲ್ಲಿಸಲಾರಂಭಿಸಿದ್ದಾರೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪರಿಷತ್ತಿನ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದೆ. ಈಗಾಗಲೇ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಹಲವರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ದೂರದರ್ಶನದ ನಿವೃತ್ತ ಮಹಾ ನಿರ್ದೇಶಕ ಮಹೇಶ್‌ ಜೋಶಿ, ಕನ್ನಡ ಪರ ಹೋರಾಟಗಾರರಾದ ವ.ಚ. ಚನ್ನೇಗೌಡ, ಸಿ.ಕೆ. ರಾಮೇಗೌಡ, ಕೊಪ್ಪಳದ ಶೇಖರ್‌ಗೌಡ ಮಾಲಿ ಪಾಟೀಲ್, ಸಂಗಮೇಶ ಬಾದವಾಡಗಿ, ಮಾಯಣ್ಣ,ಪ್ರೊ. ಶಿವರಾಜ ಪಾಟೀಲ, ಲೇಖಕಿ ಡಾ. ಸರಸ್ವತಿ ಚಿಮ್ಮಲಗಿ ಸೇರಿದಂತೆ ಕೆಲವರು ಕಾರ್ಯಪ್ರವೃತ್ತರಾಗಿದ್ದಾರೆ.

ವ.ಚ. ಚನ್ನೇಗೌಡ ಹಾಗೂ ಮಹೇಶ್ ಜೋಶಿ ಅವರು ತಮ್ಮ ಬೆಂಬಲಿಗರೊಂದಿಗೆ ಪರಿಷತ್ತಿನ ಕೇಂದ್ರ ಕಚೇರಿಗೆ ಬುಧವಾರ ತೆರಳಿ, ಕೇಂದ್ರ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದರು. ಸಂಗಮೇಶ ಬಾದವಾಡಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಸಿ.ಕೆ. ರಾಮೇಗೌಡ ಹಾಗೂ ಕಲಬುರ್ಗಿಯ ಸಾಹಿತಿ ಪ್ರೊ. ಶಿವರಾಜ ಪಾಟೀಲ ಅವರು ನಾಮಪತ್ರವನ್ನು ಗುರುವಾರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷ ರಾಜ್ಯಾಧ್ಯಕ್ಷ ಸ್ಥಾನಕ್ಕೆ 13 ಮಂದಿ ಸ್ಪರ್ಧಿಸಿದ್ದರು. ‍ಪರಿಷತ್ತಿನ ಬೈಲಾ ಪ್ರಕಾರ 10 ವರ್ಷಗಳ ಹಿಂದಿನಿಂದ ಸದಸ್ಯರಾಗಿರುವವರು ಅಧ್ಯಕ್ಷ ಸ್ಥಾನಕ್ಕೆ, 5 ವರ್ಷಗಳಿಂದ ಸದಸ್ಯರಾಗಿರುವವರು ಜಿಲ್ಲಾ ಮತ್ತು ಗಡಿನಾಡು ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಈ ಬಾರಿ 3 ಲಕ್ಷಕ್ಕೂ ಅಧಿಕ ಮತದಾರರಿದ್ದು, 400 ಕ್ಕೂ ಅಧಿಕ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.

ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ 28 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಪ್ರತ್ಯೇಕವಾಗಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಮತದಾರರ ವಿಳಾಸ ಮತ್ತು ವಿವರಗಳನ್ನು ಸುಲಭವಾಗಿ ಪಡೆದುಕೊಳ್ಳಲು Election kasapa ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಏ.7ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ

*ರಾಜ್ಯಾಧ್ಯಕ್ಷ ಹಾಗೂ ಗಡಿನಾಡು ಘಟಕದ ಅಧ್ಯಕ್ಷರ ಸ್ಥಾನಕ್ಕೆ ಮಾ.29ರಿಂದ ಏ.7ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತಿದೆ.

*ಜಿಲ್ಲಾ ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲಾ ಕೇಂದ್ರದ ತಾಲ್ಲೂಕು ತಹಶೀಲ್ದಾರ್ (ಜಿಲ್ಲಾ ಕಸಾಪ ಚುನಾವಣಾಧಿಕಾರಿಗಳು) ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ.

*ಏ.8ರಂದು ಎಲ್ಲ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.12ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಅವಕಾಶ ಇರಲಿದೆ.

*ಏ.12ರಂದು ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.