ADVERTISEMENT

ಸರಳತೆಗೆ ಒಲಿದ ಉನ್ನತ ಗೌರವ

ಕಾಗೇರಿಗೆ ಸ್ಪೀಕರ್ ಹುದ್ದೆ; ಬಿಜೆಪಿ ವಲಯದಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:14 IST
Last Updated 30 ಜುಲೈ 2019, 20:14 IST
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಶಿರಸಿಗೆ ಬಂದಿದ್ದ ನರೇಂದ್ರ ಮೋದಿ ಅವರ ಜೊತೆ ವಿಶ್ವೇಶ್ವರ ಹೆಗಡೆ ಕಾಗೇರಿ
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಶಿರಸಿಗೆ ಬಂದಿದ್ದ ನರೇಂದ್ರ ಮೋದಿ ಅವರ ಜೊತೆ ವಿಶ್ವೇಶ್ವರ ಹೆಗಡೆ ಕಾಗೇರಿ   

ಶಿರಸಿ: ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಚಿವ ಸ್ಥಾನ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ, ದಿಢೀರ್ ಆಗಿ ಅವರನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ.

ಅಂಕೋಲಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಅವರು, ಶಿರಸಿ–ಸಿದ್ದಾಪುರ ಕ್ಷೇತ್ರಕ್ಕೆ ಬಂದ ಮೇಲೆ ಇಲ್ಲಿಯೂ ಹ್ಯಾಟ್ರಿಕ್ ವೀರರಾಗಿದ್ದಾರೆ. ಒಮ್ಮೆಯೂ ಸೋಲು ಕಾಣದೇ ಸತತ ಆರು ಬಾರಿ ಶಾಸಕರಾಗಿರುವ ಅವರು ಸರಳತೆ, ಸಜ್ಜನಿಕೆಯಿಂದ ಎಲ್ಲರ ಮನ ಗೆದ್ದವರು. ಹಿರಿಯ ಶಾಸಕರಾಗಿ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಮಾಡಿಲ್ಲವೆಂಬ ಆರೋಪವಿದ್ದರೂ, ಒಬ್ಬ ಸಾಮಾನ್ಯ ವ್ಯಕ್ತಿಯ ಜೊತೆ ಸಾಮಾನ್ಯನಂತೆ ಬೆರೆಯುವ ಅವರ ಗುಣದಿಂದಲೇ ಕ್ಷೇತ್ರದ ಜನತೆ ಅವರನ್ನು ನಿರಂತರವಾಗಿ ಆಯ್ಕೆ ಮಾಡುತ್ತ ಬಂದಿದೆ.

ಕೃಷಿಕ ಹಿನ್ನೆಲೆಯ ಅವರದು ಕೂಡು ಕುಟುಂಬ. ಐವರು ಸಹೋದರರಲ್ಲಿ ವಿಶ್ವೇಶ್ವರ ಹೆಗಡೆ ಎರಡನೆಯವರು. ಅವರ ಪತ್ನಿ ಭಾರತಿ, ಮೂವರು ಪುತ್ರಿಯರು ಹಾಗೂ ಅವರ ಸಹೋದರರು, ಅವರ ಕುಟುಂಬ ಎಲ್ಲರೂ ಒಟ್ಟಿಗೆ ಕಾಗೇರಿಯಲ್ಲಿಯೇ ನೆಲೆಸಿದ್ದಾರೆ. ವಿಶ್ವೇಶ್ವರ ಹೆಗಡೆ ಅವರ ಪುತ್ರಿಯರು ಸರ್ಕಾರಿ ಶಾಲೆಯಲ್ಲಿ ಕಲಿತವರು. 2008ರಲ್ಲಿ ಬಿಜೆಪಿ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿಯೇ ಅವರ ಪುತ್ರಿಯರಾದ ಜಯಲಕ್ಷ್ಮಿ ಮತ್ತು ರಾಜಲಕ್ಷ್ಮಿ ಸರ್ಕಾರಿ ಶಾಲೆಗೆ ಹೋಗುತ್ತಿದ್ದರು. ಇದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿ ಗಮನ ಸೆಳೆದಿತ್ತು. ಹಿರಿಯ ರಾಜಕಾರಣಿಯಾಗಿ ಸರಳತೆಯನ್ನು ಕಾರ್ಯಕರ್ತರಿಗೆ ಉಪದೇಶಿಸುವ ಜೊತೆಗೆ ಅಕ್ಷರಶಃ ಅದನ್ನು ಅನುಸರಿಸಿಕೊಂಡು ಬಂದವರು.

ADVERTISEMENT

‘ನಾನು ಮಾಡಿರುವ ಕೆಲಸಗಳು, ನಿರ್ವಹಿಸಿರುವ ಜವಾಬ್ದಾರಿಯ ಬಗ್ಗೆ ನನಗೆ ಪ್ರಚಾರ ಬೇಕಾಗಿಲ್ಲ. ನಾನು ರಾಜಕಾರಣಕ್ಕೆ ಬಂದ ಆರಂಭದಲ್ಲಿ ಸಂಘ ಪರಿವಾರದ ಹಿರಿಯರೊಬ್ಬರು ‘ನಿನ್ನ ಕರ್ತವ್ಯವನ್ನು ನೀನು ನಿಭಾಯಿಸು. ಜನರು ಅದನ್ನು ಗಮನಿಸುತ್ತಾರೆ’ ಎಂದು ಉಪದೇಶಿಸಿದ್ದರು. ಆ ತತ್ವವನ್ನು ನಾನು ಅನುಸರಿಸಿಕೊಂಡು ಬಂದಿದ್ದೇನೆ’ ಎಂದು ಕಳೆದ ಚುನಾವಣೆ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಕಾಗೇರಿ ಹೇಳಿದ್ದರು.

ಕಾಗೇರಿಗೆ ಉನ್ನತ ಸ್ಥಾನ ದೊರೆತಿರುವುದಕ್ಕೆ ಜಿಲ್ಲೆಯಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕಾಗೇರಿ ನಾಮಪತ್ರ ಸಲ್ಲಿಕೆ ವಿಷಯ ತಿಳಿಯುತ್ತಿದ್ದಂತೆ, ಅವರನ್ನು ಅಭಿನಂದಿಸಲು ಬಿಜೆಪಿ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದಾರೆ.

ಸಚಿವರಾಗುವ ನಿರೀಕ್ಷೆಯಿತ್ತು:’ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕಾಗೇರಿ ಸಚಿವರಾಗಬೇಕೆಂಬ ಅಭಿಲಾಷೆಯಿತ್ತು. ಅವರು ಈ ಹಿಂದೆ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದವರು. ಈಗಿನ ರಾಜಕೀಯ ಸನ್ನಿವೇಶದಲ್ಲಿ ಎಲ್ಲರಿಗೂ ಸಚಿವ ಸ್ಥಾನ ಕೊಡಲಾಗದು. ಹೀಗಾಗಿ, ಗೌರವಾನ್ವಿತ ಸ್ಪೀಕರ್ ಹುದ್ದೆ ಕೊಟ್ಟಿದ್ದಾರೆ. ಸಚಿವರಿಗಿಂತ ಸ್ಪೀಕರ್ ಹುದ್ದೆ ಉನ್ನತ ಸ್ಥಾನವಾಗಿರುವುದರಿಂದ ವಿಶ್ವೇಶ್ವರ ಹೆಗಡೆಯವರು ಹೇಳುವ ಜಿಲ್ಲೆಯ ಎಲ್ಲ ಕೆಲಸಗಳು ಆಗುತ್ತವೆ ಎಂಬ ವಿಶ್ವಾಸವಿದೆ. ಜಿಲ್ಲೆಯ ಬೇರೆ ಶಾಸಕರು ಯಾರನ್ನಾದರೂ ಸಚಿವರನ್ನಾಗಿ ಮಾಡಬಹುದು. ಮುಖ್ಯಮಮತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಜಿಲ್ಲೆ ನಿರ್ಲಕ್ಷ್ಯಕ್ಕೆ ಒಳಗಾಗುವ ಅನುಮಾನ ಬೇಡ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.