ADVERTISEMENT

ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 8:38 IST
Last Updated 7 ಮಾರ್ಚ್ 2019, 8:38 IST
   

ಹುಬ್ಬಳ್ಳಿ: ಕೇಂದ್ರ ಸರ್ಕಾರಮಹದಾಯಿ ನ್ಯಾಯಮಂಡಳಿ ತೀರ್ಪಿನ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಿಸಾನ್ ಕಾಂಗ್ರೆಸ್‌ನ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.

ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದು ತೇಜಿ ಮಾತನಾಡಿ, ನ್ಯಾಯಮಂಡಳಿ ತೀರ್ಪು ಪ್ರಕಟವಾದ ನಂತರ ಪ್ರಧಾನ ಮಂತ್ರಿ ಅವರು ಮೂರೂ ರಾಜ್ಯದ ಪ್ರತಿನಿಧಿಗಳ ಸಭೆ ಕರೆದು, ತೀರ್ಪಿನ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಬೇಕಿತ್ತು. ಆದರೆ ಅಂತಹ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದರು.

ADVERTISEMENT

ಕೇಂದ್ರ ಸರ್ಕಾರದ ಕಿಸಾನದ ಸಮ್ಮಾನ್ ಯೋಜನೆ ಲಾಭ ಪಡೆಯಲು ದಾಖಲೆ ಒದಗಿಸಲು ಒಂದು ಒಂದೂವರೆ ಸಾವಿರ ಖರ್ಚು ಮಾಡಬೇಕಿದೆ ಎಂದು ಅವರು ದೂರಿದರು.

ಸಂಕಷ್ಟದಲ್ಲಿರುವ ದೇಶದ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು‌ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ₹72 ಸಾವಿರ ಕೋಟಿ ಸಾಲ‌ಮನ್ನಾ ಮಾಡಿದ್ದರು ಎಂದು ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಪ್ರಕಾಶ್ ಅಂಗಡಿ ಹೇಳಿದರು.

ಮುಖಂಡರಾದ ಬಾಬಾಜಾನ್ ಮುಧೋಳ್, ಬಿ.ಎ. ಮುಧೋಳ್, ಇಲಿಯಾಸ್ ಪಾಟೀಲ, ಎ.ಎಸ್. ಪೀರಜಾದೆ, ತಾಜುದ್ದೀನ್ ಮುನವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.