ADVERTISEMENT

ಅಕಾಡೆಮಿಗಳ ಅನುದಾನಕ್ಕೆ ಸರ್ಕಾರದ ಕತ್ತರಿ

ತಡವಾಗಿ ಬಿಡುಗಡೆಯಾದ ವಾರ್ಷಿಕ ಅನುದಾನ | ದೀರ್ಘಾವಧಿ ಯೋಜನೆಗಳಿಗೆ ಹಣದ ಕೊರತೆ

ವರುಣ ಹೆಗಡೆ
Published 3 ಸೆಪ್ಟೆಂಬರ್ 2020, 18:31 IST
Last Updated 3 ಸೆಪ್ಟೆಂಬರ್ 2020, 18:31 IST
   

ಬೆಂಗಳೂರು: ಕಳೆದ ಸಾಲಿನಲ್ಲಿ ಅಕಾಡೆಮಿಗಳಿಗೆ ನೀಡಿದ್ದ ಅನುದಾನವನ್ನುಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರು ಹಾಗೂ ಸಾಹಿತಿಗಳಿಗೆ ಆರ್ಥಿಕ ನೆರವು ನೀಡಲು ಬಳಸಿಕೊಂಡಿದ್ದ ಸರ್ಕಾರ ಅದನ್ನು ವಾಪಸ್ ಕೊಟ್ಟಿಲ್ಲ. ಅದರ ಬೆನ್ನಿಗೆ ಈ ಬಾರಿಯವಾರ್ಷಿಕ ಅನುದಾನವನ್ನು ತಲಾ ₹ 80 ಲಕ್ಷಕ್ಕೆ ಸೀಮಿತಗೊಳಿಸಿರುವುದು ಸಾಂಸ್ಕೃತಿಕ ವಲಯದ ಸಿಟ್ಟಿಗೆ ಕಾರಣವಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ 16,924 ಕಲಾವಿದರು ಹಾಗೂ ಸಾಹಿತಿಗಳಿಗೆ ಸರ್ಕಾರ ತಲಾ ₹ 2 ಸಾವಿರ ಆರ್ಥಿಕ ನೆರವು ನೀಡಿದೆ. ಒಟ್ಟು ₹ 3.38 ಕೋಟಿ ಹಣವನ್ನು ಕಲಾವಿದರ ಬ್ಯಾಂಕ್‌ ಖಾತೆಗೆ ಆರ್‌ಟಿಜಿಎಸ್‌ ಮೂಲಕ ಜಮಾ ಮಾಡಲಾಗಿದೆ. ಈ ನೆರವಿಗೆ ಹಾಗೂ ಮಾಸಾಶನ ನೀಡಲು ಸರ್ಕಾರವು ವಿವಿಧ ಅಕಾಡೆಮಿಗಳ ಖಾತೆಗಳಲ್ಲಿದ್ದ ಹಣವನ್ನು ಬಳಸಿಕೊಂಡಿತ್ತು. ಕೆಲವು ಅಕಾಡೆಮಿಗಳಿಂದ ತಲಾ ₹ 10 ಲಕ್ಷ, ಇನ್ನೂ ಕೆಲವು ಅಕಾಡೆಮಿಗಳಿಂದ ₹ 50 ಲಕ್ಷ ಮೊತ್ತ ವಾಪಸ್‌ ಪಡೆಯಲಾಗಿತ್ತು.

ಜೂನ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಮೊದಲ ಕಂತಿನ ಅನುದಾನವನ್ನು ಈಗ ಹಂಚಿಕೆ ಮಾಡಿದೆ. ಅದು ಕೂಡ ನಾಟಕ, ಜಾನಪದ ಸೇರಿದಂತೆ ಕೆಲ ಅಕಾಡೆಮಿಗಳನ್ನು ತಲುಪಿಲ್ಲ.

ADVERTISEMENT

‘₹ 80 ಲಕ್ಷ ಅನುದಾನದಲ್ಲಿ ಯಾವುದೇ ಯೋಜನೆ ಹಮ್ಮಿಕೊಳ್ಳುವುದು ಅಸಾಧ್ಯ. ಶೇ 30ರಷ್ಟು ಅನುದಾನ ಸಿಬ್ಬಂದಿ ವೇತನಕ್ಕೆ ಹೋಗುತ್ತದೆ. ಉಳಿದ ಹಣದಲ್ಲಿ ಏನು ಮಾಡಲು ಸಾಧ್ಯ’ ಎಂದು ಅಕಾಡೆಮಿಯ ಸದಸ್ಯರೊಬ್ಬರು ಪ್ರಶ್ನಿಸಿದರು.

ಹೆಚ್ಚಿನ ಅನುದಾನದ ನಿರೀಕ್ಷೆ: ‘ಕಳೆದ ಬಾರಿ ನೀಡಲಾಗಿದ್ದ ಅನುದಾನದಲ್ಲಿ ₹ 50 ಲಕ್ಷವನ್ನು ಕಲಾವಿದರಿಗೆ ನೀಡಲು ಸರ್ಕಾರ ಪಡೆದಿದೆ. ಬಾಕಿ ಉಳಿದ ಹಣದಲ್ಲಿ ಸಿಬ್ಬಂದಿಗೆ ವೇತನ ನೀಡಲು ಸರ್ಕಾರ ಸೂಚಿಸಿದೆ. ಈ ಬಾರಿ ವಸ್ತುಪ್ರದರ್ಶನ ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು, ₹ 3 ಕೋಟಿ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಮೊದಲ ಕಂತಿನ ಹಣ ನಮಗೆ ಬಂದಿಲ್ಲ’ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಮಂಜಮ್ಮ ಜೋಗತಿ ತಿಳಿಸಿದರು.

‘ಕೋವಿಡ್‌ನಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಹೀಗಾಗಿ ಇಷ್ಟುದಿನ ಅನುದಾನ ವಿಳಂಬವಾದರೂ ಸಮಸ್ಯೆಯಾಗಿರಲಿಲ್ಲ. ಕಲಾವಿದರಿಗೆ ಪೂರಕವಾದ ವಿವಿಧ ಯೋಜನೆಗಳನ್ನು ರೂಪಿಸಲು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಸರ್ಕಾರ ಬಿಡುಗಡೆ ಮಾಡಿದೆ ಎನ್ನಲಾದ ಅನುದಾನ ತಲುಪಿಲ್ಲ’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷಪ್ರೊ.ಆರ್. ಭೀಮಸೇನ ಮಾಹಿತಿ ನೀಡಿದರು.

‘ಒಟ್ಟು ₹ 80 ಲಕ್ಷ ನೀಡಲಾಗಿದ್ದು, ಮೊದಲ ಕಂತಿನ ಅನುದಾನ ನಮಗೆ ತಲುಪಿದೆ. ಕಲಾವಿದರಿಗೆಆರ್ಥಿಕ ನೆರವಿನ ಸಂಬಂಧ ₹ 10 ಲಕ್ಷ ಪಡೆದಿದ್ದು, ಆ ಹಣವನ್ನು ಹಿಂದಿರುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ತಿಳಿಸಿದರು.

ಅಕಾಡೆಮಿಗಳಿಗೆ ತಲಾ ₹ 80 ಲಕ್ಷ ಹಂಚಿಕೆ ಮಾಡಲಾಗಿದ್ದು, ಮೊದಲ ಕಂತಿನ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ. ನೆರವಿಗೆ ಬಳಸಿದ ಹಣ ಹಿಂದಿರುಗಿಸಲಾಗುವುದು ಎಂದುಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಹೇಳಿದರು.

'ದೀರ್ಘಾವಧಿ ಯೋಜನೆ ಅಸಾಧ್ಯ'

‘ಸರ್ಕಾರವು 2018–19ನೇ ಸಾಲಿನಲ್ಲಿ 13 ಅಕಾಡೆಮಿಗಳಿಗೆ ₹ 12 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಕೆಲ ಅಕಾಡೆಮಿಗಳಿಗೆ ತಲಾ ₹ 1.10 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. ಕಳೆದ ಸಾಲಿನಲ್ಲಿ ಅನುದಾನವನ್ನು ₹ 8 ಕೋಟಿಗೆ ಇಳಿಕೆ ಮಾಡಿ, ಕಾರ್ಯವ್ಯಾಪ್ತಿ ಅನುಸಾರ ನೀಡಲಾಗಿತ್ತು. ಇದರಿಂದಾಗಿ ಅಕಾಡೆಮಿಗಳು ಕೇವಲ ತರಬೇತಿ, ಶಿಬಿರದಂತಹ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದವು. ನಿಗದಿತ ಅನುದಾನದ ಖಚಿತತೆ ನೀಡಿದಲ್ಲಿ ಮಾತ್ರ ದೀರ್ಘಾವಧಿ ಯೋಜನೆ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.