ADVERTISEMENT

ಹಾಸನ ಜಿಲ್ಲೆಯಲ್ಲಿ ಜಲ್ಲಿ ಕ್ರಷರ್‌ಗಳ ಅಕ್ರಮ: ಸದನದಲ್ಲಿ ರೇವಣ್ಣ– ಶಿವಲಿಂಗೇಗೌಡ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 23:30 IST
Last Updated 15 ಜುಲೈ 2023, 23:30 IST
ವಿಧಾನಸಭೆ ಕಲಾಪ
ವಿಧಾನಸಭೆ ಕಲಾಪ   

ಬೆಂಗಳೂರು: ಹಾಸನ ಜಿಲ್ಲೆಯಲ್ಲಿನ ಜಲ್ಲಿ ಕ್ರಷರ್‌ಗಳ ಅಕ್ರಮಗಳ ಬಗ್ಗೆ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಪ್ರಸ್ತಾಪ ಮಾಡಿದ್ದು, ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡರನ್ನು ಕೆರಳಿಸಿತು. ಇದು ಇಬ್ಬರ ಮಧ್ಯೆ ಜಟಾಪಟಿಗೆ ಕಾರಣವಾಯಿತು.

ಜಿಎಸ್‌ಟಿ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರೇವಣ್ಣ ಅವರು, ಜಲ್ಲಿ ಕ್ರಷರ್‌ಗಳ ಮಾಲೀಕರು ಜಿಎಸ್‌ಟಿ ಸರಿಯಾಗಿ ಪಾವತಿಸದೇ ತೆರಿಗೆ ವಂಚನೆ ಮಾಡುತ್ತಿವೆ. ಇವುಗಳ ಮೇಲೆ ನಿಗಾ ಇಟ್ಟು ತೆರಿಗೆ ವಸೂಲಿ ಮಾಡಬೇಕು. ಡ್ರೋನ್‌ ಮೂಲಕ ಎಷ್ಟು ಪ್ರಮಾಣದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಸರ್ವೆ ಮಾಡಬೇಕು. ಹಾಸನ ಜಿಲ್ಲೆಯಲ್ಲೂ ಸಾಕಷ್ಟು ಕ್ರಷರ್‌ಗಳಿವೆ ಎಂದರು.

ಇದರಿಂದ ಕಿರಿಕಿರಿಗೊಳಗಾದ ಶಿವಲಿಂಗೇಗೌಡ ಅವರು, ‘ನಂದೂ ಒಂದು ಕ್ರಷರ್ ಇದೆ. ನಾವು ರಾಯಲ್ಟಿ ಮತ್ತು ಜಿಎಸ್‌ಟಿ ಕಟ್ಟುತ್ತೇವೆ. ಪರೋಕ್ಷವಾಗಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ADVERTISEMENT

‘ನಾನು ನಿನ್ನ ಬಗ್ಗೆ ಹೇಳುತ್ತಿಲ್ಲ. ಅವರಿಗೆ (ಶಿವಲಿಂಗೇಗೌಡ) ಅಳುಕು ಏಕೆ. ಅವರು ದೊಡ್ಡವರು, ಅವರ ಲೆವೆಲ್ಲಿಗೆ ಮಾತನಾಡುವ ಶಕ್ತಿ ಇಲ್ಲ’ ಎಂದು ರೇವಣ್ಣ ವ್ಯಂಗ್ಯವಾಡಿದರು.

‘ದಿನವೂ ಕ್ರಷರ್‌ಗಳಿಂದ ಎಷ್ಟು ಲೋಡ್‌ ಹೊಡೆಯುತ್ತಾರೆ. ಎಷ್ಟು ವಿದ್ಯುತ್‌ ಎಷ್ಟು ಖರ್ಚಾಗುತ್ತದೆ ಎಲ್ಲ ಲೆಕ್ಕಹಾಕಿ. ಡ್ರೋನ್‌ ಸರ್ವೆ ಮಾಡಿಸಿದರೆ ಯಾರು ಯಾರು ಲೂಟಿ ಹೊಡೆದಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.