ADVERTISEMENT

ಜ.27ರಿಂದ ಅಧಿವೇಶ| ಆಡಳಿತ– ವಿರೋಧ ಪಕ್ಷಗಳ ವಾಕ್ಸಮರಕ್ಕೆ ವೇದಿಕೆ ಸಜ್ಜು

ನಾಳೆಯಿಂದ ವಿಧಾನಮಂಡಲ ಅಧಿವೇಶ lಗೋಹತ್ಯೆ ನಿಷೇಧ ಕಾಯ್ದೆ ಮಂಡಿಸಲು ಬಿಜೆಪಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 18:19 IST
Last Updated 26 ಜನವರಿ 2021, 18:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಗಳ ಮರು ಹಂಚಿಕೆ ಕಸರತ್ತು ಮುಗಿದ ಬೆನ್ನಲ್ಲೇ ವಿಧಾನಮಂಡಲ ಅಧಿವೇಶನಕ್ಕೆ ವೇದಿಕೆ ಸಿದ್ಧವಾಗಿದೆ. ಗುರುವಾರದಿಂದ (ಜ.28) ಫೆ. 5 ರವರೆಗೆ ನಡೆಯಲಿರುವ ಅಧಿವೇಶನದ ಮೊದಲ ದಿನ, ಜಂಟಿ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಲಿದ್ದಾರೆ.

ಕೋವಿಡ್‌ ನಿರ್ವಹಣೆಯ ಜೊತೆಗೆ ರಾಜ್ಯ ಸರ್ಕಾರದ ಅಭಿವೃದ್ಧಿಯ ವಿಷಯವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಆಡಳಿತ– ವಿರೋಧ ಪಕ್ಷದ ನಡುವೆ ವಾಕ್ಸಮರ ನಡೆಯುವುದು ಖಚಿತ. ಸಂಪುಟದಲ್ಲಿ ಅವಕಾಶ ಸಿಗದ ಸಚಿವರ ಅಸಮಾಧಾನ, ಅನುದಾನ ವಿಳಂಬದ ಬಗ್ಗೆ ಶಾಸಕರ ಅಪಸ್ವರ, ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡೂ ಸದನಗಳಲ್ಲಿ ಪ್ರತಿಧ್ವನಿಸಲಿದೆ.

ಗುರುವಾರ ಬೆಳಿಗ್ಗೆ 9 ಗಂಟೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಸರ್ಕಾರ ವಿರುದ್ಧ ಯಾವೆಲ್ಲ ವಿಚಾರವನ್ನು ಎತ್ತಿಕೊಳ್ಳಬೇಕು ಎಂಬ ಬಗ್ಗೆಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕೋವಿಡ್ ನಿರ್ವ ಹಣೆ, ಆಡಳಿತ ವೈಫಲ್ಯ, ಅಭಿವೃದ್ದಿ ಕೆಲಸ ಗಳಲ್ಲಿ ಹಿನ್ನಡೆ, ಅತಿವೃಷ್ಟಿ ಪರಿಹಾರ ವಿಷಯಗಳನ್ನೂ ಅಸ್ತ್ರವಾಗಿ ಬಳಸಿಕೊಂಡು ಸದನದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.

ADVERTISEMENT

ರೈತರ ಸಮಸ್ಯೆಗಳು, ಕೃಷಿ ಕಾಯ್ದೆಗಳ ಬಗ್ಗೆಯೂ ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಮುಂದಾಗಿದೆ. ಇತ್ತೀಚೆಗೆ ರಾಜ್ಯ ಪ್ರವಾಸ ಮಾಡಿದ್ದ ಅಮಿತ್ ಶಾ, ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ ಅನುದಾನ ಪಟ್ಟಿ ನೀಡಿದ್ದರು. ಶಾ ಸುಳ್ಳು ಅಂಕಿ–ಅಂಶ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಆ ವಿಚಾರದಲ್ಲೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಗೋಹತ್ಯೆ ನಿಷೇಧ ಕಾಯ್ದೆಯ ಮಸೂದೆಯನ್ನು ಪ್ರಸಕ್ತ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಕಾಂಗ್ರೆಸ್‌ ಈ ಮಸೂದೆಯನ್ನು ಈಗಾಗಲೇ ವಿರೋಧಿಸಿದ್ದು, ಜೆಡಿಎಸ್‌ ನಡೆ ಕುತೂಹಲ ಮೂಡಿಸಿದೆ. ಗೋ ಹತ್ಯೆ ನಿಷೇಧವನ್ನು ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದಿದೆ.

ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಆಗಿರುವ ಏಳು ಸಚಿವರು ವಿರೋಧಪಕ್ಷಗಳ ಟೀಕಾಸ್ತ್ರಗಳನ್ನು ಎದುರಿಸಬೇಕಾಗಿದೆ.

ಸಭಾಪತಿ ಅವಿಶ್ವಾಸ:ಉಪ ಸಭಾಪತಿ ಆಯ್ಕೆ

ವಿಧಾನಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಮತ್ತೊಮ್ಮೆ ಅವಿಶ್ವಾಸ ನೋಟಿಸ್‌ ನೀಡಿರುವ ಬೆನ್ನಲ್ಲೇ, ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳ ಆಯ್ಕೆ ವಿಧಾನ ಪರಿಷತ್‌ ಕಲಾಪದ ಕುತೂಹಲ ಹೆಚ್ಚಿಸಿದೆ.

ಡಿ. 15ರಂದು ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಪರಿಷತ್‌ನಲ್ಲಿ ನಡೆದ ಗಲಾಟೆಯ ಪರಿಶೀಲನೆಗೆ ರಚಿಸಿದ್ದ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿ ಮಧ್ಯಂತರ ವರದಿ ಸಲ್ಲಿಸಿದೆ. ಆದರೆ, ಈ ಸಮಿತಿ ರಚನೆಯನ್ನೇ ಬಿಜೆಪಿ ಪ್ರಶ್ನಿಸಿತ್ತು. ಸಮಿತಿ ಸದಸ್ಯರಾಗಿದ್ದ ಬಿಜೆಪಿ ಸದಸ್ಯರಿಬ್ಬರೂ ರಾಜೀನಾಮೆ ನೀಡಿದ್ದರು.

ಮತ್ತೊಮ್ಮೆ ಅವಿಶ್ವಾಸ ನೋಟಿಸ್ ಎದುರಿಸಿ ಮುಜುಗರಕ್ಕೆ ಒಳಗಾಗುವ ಬದಲು, ಉಪಸಭಾಪತಿ ಆಯ್ಕೆಯ ತಕ್ಷಣ ಪ್ರತಾಪಚಂದ್ರ ಶೆಟ್ಟಿ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಉಪ ಸಭಾಪತಿ ಚುನಾವಣೆಗೆ ಮೊದಲೇ ಸಭಾಪತಿ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿಯಬಹುದೇ ಅಥವಾ ಮಧ್ಯಂತರ ವರದಿ ಮೇಲೆ ಸಭಾಪತಿ ಕ್ರಮಕ್ಕೆ ಮುಂದಾಗಬಹುದೇ ಎನ್ನುವ ಕುತೂಹಲವೂ ಇದೆ.

ಸಭಾಪತಿಯಾಗಿ ಹೊರಟ್ಟಿ?: ಸಭಾಪತಿಯಾಗಿ ಬಿಜೆಪಿ ಬೆಂಬಲದಲ್ಲಿ ಜೆಡಿಎಸ್‌ನ ಬಸವರಾಜ ಹೊರಟ್ಟಿ ಆಯ್ಕೆಯಾಗುವುದು ಬಹುತೇಕ ಖಚಿತ. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯಲ್ಲಿ ಅರುಣ್ ಶಹಾಪುರ, ಶಶಿಲ್‌ ನಮೋಶಿ, ವೈ.ನಾರಾಯಣಸ್ವಾಮಿ, ಮಹಾಂತೇಶ ಕವಟಗಿಮಠ ಅವರ ಹೆಸರು ಕೇಳಿಬಂದಿವೆ.

ಬಿಜೆಪಿ ಈ ಸಂಬಂಧ ಬುಧವಾರ(ಜ.27) ಸಭೆ ನಡೆಸಿ, ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.