ADVERTISEMENT

ತಾಂಡಾಗಳಲ್ಲಿ 372 ನ್ಯಾಯಬೆಲೆ ಅಂಗಡಿ ಆರಂಭ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:11 IST
Last Updated 13 ಡಿಸೆಂಬರ್ 2021, 22:11 IST

ಬೆಳಗಾವಿ (ಸುವರ್ಣ ವಿಧಾನಸೌಧ): 100ಕ್ಕಿಂತ ಹೆಚ್ಚು ಪಡಿತರ ಚೀಟಿಗಳಿರುವ 372 ಲಂಬಾಣಿ ತಾಂಡಾಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಪ್ರಾರಂಭಿಸಲಾಗಿದ್ದು, ಬೇಡಿಕೆ ಆಧರಿಸಿ ಉಳಿದ ಕಡೆಯೂ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಾಗುವುದು ಎಂದು ಆಹಾರ ಸಚಿವ ಉಮೇಶ ವಿ. ಕತ್ತಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಕಾಂಗ್ರೆಸ್‌ನ ಪ್ರಕಾಶ್ ಕೆ. ರಾಥೋಡ್‌ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿರುವ ಎಲ್ಲ ಹಾಡಿ, ತಾಂಡಾ, ಗೊಲ್ಲರಹಟ್ಟಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಇದೇ ಸೆಪ್ಟೆಂಬರ್‌ 22ರಂದು ಆದೇಶ ಹೊರಡಿಸಲಾಗಿದೆ’ ಎಂದರು.

ಆಯಾ ಜನವಸತಿಗಳಲ್ಲಿನ ಪಡಿತರ ಚೀಟಿದಾರರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ತಕ್ಷಣದಲ್ಲೇ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲಾಗುವುದು. ಈ ವಿಷಯದಲ್ಲಿ ಅಧಿಕಾರಿಗಳು ಲೋಪ ಎಸಗಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ 3,300 ಲಂಬಾಣಿ ತಾಂಡಾಗಳಿವೆ. ಹಾಡಿಗಳು, ಗೊಲ್ಲರಹಟ್ಟಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳನ್ನು ಸೇರಿಸಿದರೆ ಈ ರೀತಿಯ 11,000 ಜನವಸತಿಗಳಿವೆ. ಅಂತಹ ಎಲ್ಲ ಕಡೆಗಳಲ್ಲೂ ತ್ವರಿತವಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು’ ಎಂದು ಪ್ರಕಾಶ್ ರಾಥೋಡ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.