ADVERTISEMENT

ಏಳು ಮಸೂದೆಗಳಿಗೆ ಅಂಗೀಕಾರ: ರಾಷ್ಟ್ರಪತಿಗೆ ಸಿಎಂ ಮನವಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 22:30 IST
Last Updated 24 ಜೂನ್ 2025, 22:30 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಸಿದ್ದರಾಮಯ್ಯ ಚರ್ಚಿಸಿದರು. ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್‌, ಸತೀಶ ಜಾರಕಿಹೊಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇದ್ದರು. 
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಸಿದ್ದರಾಮಯ್ಯ ಚರ್ಚಿಸಿದರು. ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್‌, ಸತೀಶ ಜಾರಕಿಹೊಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇದ್ದರು.    

ನವದೆಹಲಿ: ರಾಜ್ಯ ಶಾಸಕಾಂಗ ಅಂಗೀಕರಿಸಿದ ಏಳು ಮಸೂದೆಗಳಿಗೆ ಅಂಗೀಕಾರ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಮನವಿ ಮಾಡಿದರು. 

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಮುಖ್ಯಮಂತ್ರಿ, ‘ಈ ಮಸೂದೆಗಳನ್ನು ಸಂಬಂಧಿತ ಇಲಾಖೆಗಳಿಗೆ ಅಭಿಪ್ರಾಯಕ್ಕಾಗಿ ಕಳುಹಿಸಲಾಗಿದೆ ಮತ್ತು ಅಭಿಪ್ರಾಯ ಪಡೆದ ನಂತರ, ಒಪ್ಪಿಗೆ ನೀಡುವ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಷ್ಟ್ರಪತಿ ಭರವಸೆ ನೀಡಿದರು’ ಎಂದರು. ರಾಷ್ಟ್ರಪತಿಗಳೊಂದಿಗಿನ ಸಭೆ ಸೌಹಾರ್ದಯುತವಾಗಿತ್ತು ಎಂದು ಅವರು ಹೇಳಿದರು.

ಯಾವೆಲ್ಲ ಮಸೂದೆಗಳು: ಒಂದರಿಂದ ಐದನೇ ತರಗತಿವರೆಗೆ ಮಾತೃ ಭಾಷೆ ಮಾಧ್ಯಮದಲ್ಲೇ ಶಿಕ್ಷಣ ಕಡ್ಡಾಯವಾಗಿ ಕಲಿಸುವ ಕುರಿತ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ’, ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ಕಲ್ಪಿಸಲು ಅವಕಾಶ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ತಿದ್ದುಪಡಿ (ಕೆಟಿಪಿಪಿ) ಮಸೂದೆ‌’, ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯ ‘ಎ’ ವರ್ಗದ ದೇವಾಲಯಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯ ಶೇ 5ರಿಂದ ಶೇ 10ರಷ್ಟು ಆದಾಯವನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’, ‘ಕರ್ನಾಟಕ ನೋಂದಣಿ ತಿದ್ದುಪಡಿ ಮಸೂದೆ–2024’, ಕರ್ನಾಟಕ ನೋಂದಣಿ ತಿದ್ದುಪಡಿ ಮಸೂದೆ–2025, ‘ನೋಟರಿ ಕರ್ನಾಟಕ ತಿದ್ದುಪಡಿ ಮಸೂದೆ, ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ–2024. 

ADVERTISEMENT

ಹಣಕಾಸು ಸಚಿವರಿಗೆ ಮನವಿ: ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು 16ನೇ ಹಣಕಾಸು ಆಯೋಗದಲ್ಲಿ ಸರಿದೂಗಿಸಬೇಕು ಎಂದು ಮನವಿ ಮಾಡಿದರು. 

‘ತಲಾವಾರು ಆದಾಯವನ್ನು ಪರಿಗಣಿಸುವ ಮಾನದಂಡವನ್ನು ಶೇ 45 ರಿಂದ ಶೇ 20 ಕ್ಕೆ ಇಳಿಸಬೇಕೆಂದು ಕೋರಲಾಗಿದೆ. ಕೇರಳ, ಆಂಧ್ರ, ತಮಿಳುನಾಡು ರಾಜ್ಯಗಳಿಗೆ ನೀಡಿದಂತೆ ಆದಾಯ ಕೊರತೆ ಅನುದಾನವನ್ನು ಕರ್ನಾಟಕಕ್ಕೂ ನೀಡಬೇಕು. ಇಲ್ಲವೇ ಯಾವುದೇ ರಾಜ್ಯಗಳಿಗೆ ನೀಡಬಾರದು. ರಾಜಸ್ವ ಹೆಚ್ಚಳದಲ್ಲಿ ಖರ್ಚಿಗಿಂತ ಆದಾಯ ಹೆಚ್ಚಿದ್ದು, ವಿತ್ತೀಯ ಕೊರತೆಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ. ರಾಜಸ್ವ ಹೆಚ್ಚಳದಲ್ಲಿದ್ದ ಕರ್ನಾಟಕ ಕಳೆದ ವರ್ಷದಿಂದ ವಿತ್ತೀಯ ಕೊರತೆ ಎದುರಿಸುತ್ತಿದ್ದು, ಮುಂದಿನ ವರ್ಷಕ್ಕೆ ಈ ಪರಿಸ್ಥಿತಿ ಸುಧಾರಿಸಲಿದೆ. ನಿರಂತರವಾಗಿ ವಿತ್ತೀಯ ಕೊರತೆಯಲ್ಲಿರುವ ರಾಜ್ಯಗಳಿಗೆ ವಿತ್ತೀಯ ಕೊರತೆ ಅನುದಾನ ನೀಡಲಾಗುತ್ತದೆ. ಹಣಕಾಸಿನ ಕಾರ್ಯಕ್ಷಮತೆ ತೋರದಿರುವ ರಾಜ್ಯಗಳಿಗೆ ವಿತ್ತೀಯ ಕೊರತೆ ಅನುದಾನ ನೀಡುತ್ತಿರುವ ಕೇಂದ್ರದ ಕ್ರಮ ಸರಿಯಾದುದಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. 

‘ಬೆಂಗಳೂರು ಜಾಗತಿಕ ನಗರವಾಗಿದ್ದು, ನಗರದ ಬಂಡವಾಳ ಕಾರ್ಯಗಳಿಗೆ ₹1.15 ಲಕ್ಷ ಕೋಟಿ ಬೇಕಾಗಿದೆ. ಇದಕ್ಕಾಗಿ ವಿಶೇಷ ಅನುದಾನ ನೀಡುವಂತೆ ಕೋರಲಾಗಿದೆ. ಮಲೆನಾಡು ಮತ್ತು ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಪ್ರವಾಹದಿಂದಾಗುವ ಅನಾಹುತಗಳನ್ನು ನಿಭಾಯಿಸಲು ವಿಶೇಷ ಅನುದಾನ, ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡುವಂತೆ ಕೋರಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.