ADVERTISEMENT

ಪಕ್ಷದ ಪರ ಸೃಷ್ಟಿಯಾಗದ ವಾತಾವರಣ, ಹೆಚ್ಚದ ಬಲ: ಬಿಜೆಪಿ ವರಿಷ್ಠರಿಗೆ ಚಿಂತೆ

ಪಕ್ಷದ ಪರ ಸೃಷ್ಟಿಯಾಗದ ವಾತಾವರಣ: ಮೂರು ಪ್ರತ್ಯೇಕ ಆಂತರಿಕ ಸಮೀಕ್ಷೆ ವರದಿ

ಎಸ್.ರವಿಪ್ರಕಾಶ್
Published 26 ಜೂನ್ 2022, 19:40 IST
Last Updated 26 ಜೂನ್ 2022, 19:40 IST
ಬಿಜೆಪಿ
ಬಿಜೆಪಿ   

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ 8– 10 ತಿಂಗಳು ಬಾಕಿ ಇದ್ದರೂ ಪಕ್ಷದ ಸಂಘಟನೆ ಅಥವಾ ಸರ್ಕಾರ ನಿರೀಕ್ಷೆಗೆ ತಕ್ಕಂತೆ ಚುನಾವಣೆಗೆ ಸಿದ್ಧತೆ ನಡೆಸಿಲ್ಲ ಎಂಬುದು ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯ ವರದಿಯಲ್ಲಿ ವ್ಯಕ್ತವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಚುನಾವಣೆಯಲ್ಲಿ 70– 75 ಸ್ಥಾನಗಳ ಗಡಿ ದಾಟುವುದು ಕಷ್ಟವಾಗಬಹುದು ಎಂಬ ವರದಿ ಪಕ್ಷದ ವರಿಷ್ಠರನ್ನು ಚಿಂತೆಗೀಡು ಮಾಡಿದೆ.

ಪ್ರಧಾನಿ ಮೋದಿ ಕಳೆದ ವಾರ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಈಗಾಗಲೇ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿ, ಚುನಾವಣೆಗೆ ಪಕ್ಷವನ್ನು ಸನ್ನದ್ಧಗೊಳಿಸುವ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕೆಲಸ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಭೇಟಿ ನೀಡಿ ಚುರುಕು ಮುಟ್ಟಿಸಿದ್ದಾರೆ.

ಆದರೆ, ಅದಕ್ಕೆ ತಕ್ಕಂತೆ ಬಿಜೆಪಿ ರಾಜ್ಯ ಘಟಕವಾಗಲಿ, ಸರ್ಕಾರದಲ್ಲಿರುವವರಾ
ಗಲಿ ಜನರ ಮಧ್ಯೆ ಹೋಗಿ ಪಕ್ಷದ ಪರವಾಗಿ ವಾತಾವರಣ ಸೃಷ್ಟಿಸುತ್ತಿಲ್ಲ ಎಂಬುದು ವರಿಷ್ಠರ ಚಿಂತೆಗೆ ಕಾರಣ ಎಂದು ಮೂಲಗಳು ಹೇಳಿವೆ.

ADVERTISEMENT

ಈವರೆಗೆ ಪಕ್ಷ, ಸ್ವತಂತ್ರ ಸಂಸ್ಥೆ ಹಾಗೂ ಅಮಿತ್‌ ಶಾ ಕಡೆಯಿಂದ ಸೇರಿ ಮೂರು ಸಮೀಕ್ಷೆಗಳು ನಡೆದಿವೆ. ಅವುಗಳ ಪ್ರಕಾರ, ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಸಮಬಲ ಕಂಡುಬರುತ್ತಿದೆ. ಜೆಡಿಎಸ್‌ ಕೂಡಾ ಗಣನೀಯ ಸಂಖ್ಯೆ ಸ್ಥಾನಗಳನ್ನು ಗೆಲ್ಲಲಿದ್ದು, ಪಕ್ಷೇತರರೂ ಕೆಲ ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಹೇಳಲಾಗಿದೆ.

‘ಬಿಜೆಪಿ ರಾಜ್ಯ ಘಟಕಕ್ಕೆ ಅಮಿತ್‌ ಶಾ 150 ಸ್ಥಾನ ಗಳಿಸುವ ಗುರಿ ನೀಡಿದ್ದಾರೆ. ರಾಜ್ಯದ ಕೆಲವು ನಾಯಕರು ವೇದಿಕೆಗಳಲ್ಲಿ ಅದನ್ನು ಜಪಿಸುವುದು ಬಿಟ್ಟರೆ, ಆ ನಿಟ್ಟಿನಲ್ಲಿ ಯಾವುದೇ ಕೆಲಸ ಆಗದಿರುವುದನ್ನು ವರಿಷ್ಠರು ಗಮನಿಸಿದ್ದಾರೆ. ಪಕ್ಷದೊಳಗೆ ಒಗ್ಗಟ್ಟೂ ಕಂಡು ಬರುತ್ತಿಲ್ಲ. ಚುನಾವಣೆ ಬಂದಾಗ ವರಿಷ್ಠರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂಬ ಭಾವನೆ ಬಹುತೇಕರಲ್ಲಿದೆ. ಹೆಚ್ಚಿನ ಶಾಸಕರು ತಮ್ಮ ಕ್ಷೇತ್ರಗಳನ್ನು ಭದ್ರಪಡಿಸಿಕೊಳ್ಳಲು ಏನೆಲ್ಲ ಮಾಡಬೇಕೋ ಅದರಲ್ಲಿ ಮಗ್ನರಾಗಿದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಪಕ್ಷದಲ್ಲಿ ಬಿ.ಎಸ್‌.ಯಡಿಯೂರಪ್ಪ ಈಗಲೂ ಪ್ರಭಾವಿ ಶಕ್ತಿ ಆಗಿದ್ದಾರೆ. ಆದರೆ, ಬಿಎಸ್‌ವೈ ಮತ್ತು ದೆಹಲಿಯಲ್ಲಿ ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದು, ರಾಜ್ಯ ಬಿಜೆಪಿ ಮೇಲೆ ಹಿಡಿತ ಹೊಂದಿರುವ ನಾಯಕರ ಮಧ್ಯೆ ಹೊಂದಾಣಿಕೆ ಇಲ್ಲದೇ ಇರುವುದು ಕೂಡ ಪಕ್ಷದ ಓಟಕ್ಕೆ ತೊಡಕಾಗಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶದಲ್ಲಿ ಇದು ನಿಚ್ಚಳವಾಗಿ ಗೋಚರವಾಗಿದೆ. ಅಭ್ಯರ್ಥಿ ಆಯ್ಕೆ ಎಲ್ಲವೂ ದೆಹಲಿ ನಾಯಕರ ಮಾತಿನಂತೆಯೇ ನಡೆದಿತ್ತಿ. ಆದರೆ, ಸ್ಥಳೀಯವಾಗಿ ಸಹಕಾರ ದೊರಕದ ಕಾರಣ ಎರಡು ಸ್ಥಾನಗಳಲ್ಲಿ ಸೋಲಬೇಕಾಯಿತು’ ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷದಲ್ಲಿ ಎಸ್‌.ಸಿ ಮೋರ್ಚಾ, ಒಬಿಸಿ, ರೈತ ಮತ್ತು ಅಲ್ಪಸಂಖ್ಯಾತರ ಮೋರ್ಚಾ ಕ್ರಿಯಾಶೀಲವಾಗಿವೆ. ಉಳಿದ ಮೋರ್ಚಾಗಳು ಅಷ್ಟು ಸಕ್ರಿಯವಾಗಿಲ್ಲ. ಹಿಂದೆ ಪಕ್ಷ ಅಧಿಕಾರ ಹಿಡಿಯಲುಎಲ್ಲ ಮೋರ್ಚಾಗಳು ಸಕ್ರಿಯವಾಗಿ ಶ್ರಮ ಹಾಕುತ್ತಿದ್ದವು. ಈಗ ಸಂಘಟಿತ ಯತ್ನದ ಕೊರತೆ ಕಾಣುತ್ತಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.