ADVERTISEMENT

ಕಯ್ಯಾರ ಕಿಞ್ಞಣ್ಣ ರೈ, ಜಯದೇವಿತಾಯಿ ಲಿಗಾಡೆ ಹೆಸರಿನಲ್ಲಿ ಪ್ರಶಸ್ತಿ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 21:02 IST
Last Updated 16 ಜುಲೈ 2021, 21:02 IST

ಬೆಂಗಳೂರು: ಗಡಿ ನಾಡಿನ ಹೋರಾಟಗಾರರಾದ ಕಯ್ಯಾರ ಕಿಞ್ಞಣ್ಣ ರೈ ಹಾಗೂ ಜಯದೇವಿತಾಯಿ ಲಿಗಾಡೆ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ ನೇತೃತ್ವದ‌ಲ್ಲಿ ನಗರದಲ್ಲಿ ಶುಕ್ರವಾರ ಸಭೆ ನಡೆಯಿತು. ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ್‌, ಪ್ರಾಧಿಕಾರದ ಸದಸ್ಯ ಪ್ರಕಾಶ್‌ ಮತ್ತೀಹಳ್ಳಿ ಮತ್ತಿತರರು ಸಭೆಯಲ್ಲಿ ಇದ್ದರು.

ನೂತನವಾಗಿ ಸ್ಥಾಪಿಸಲಿರುವ ಪ್ರಶಸ್ತಿಗಳನ್ನು ಗಡಿ ಭಾಗದಲ್ಲಿ ಕನ್ನಡ ಪರ ಕೆಲಸ ಮಾಡಿದ ಸಾಧಕರಿಗೆ ನೀಡಲು ನಿರ್ಧರಿಸಲಾಯಿತು. ರಾಜ್ಯದ ಗಡಿ ಭಾಗದಲ್ಲಿ ಬರುವ 63 ಗಡಿ ತಾಲ್ಲೂಕುಗಳಲ್ಲಿ ಹಾಗೂ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕನ್ನಡ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಉತ್ಸವಗಳು, ಚಿಂತನಾ ಶಿಬಿರಗಳನ್ನು ವರ್ಷಪೂರ್ತಿ ಆಯೋಜಿಸಲು ತೀರ್ಮಾನಿಸಲಾಯಿತು.

ADVERTISEMENT

ಸಾಕ್ಷ್ಯಚಿತ್ರ ನಿರ್ಮಾಣ: ಗಡಿ ನಾಡಿನ ಹಿರಿಯ ಸಾಧಕರ ಹಾಗೂ ಗಡಿ ಭಾಗದ ಐತಿಹಾಸಿಕ ಮಹತ್ವವನ್ನು ಸಾರುವ ಸಾಕ್ಷ್ಯಚಿತ್ರ ನಿರ್ಮಾಣ, ಗಡಿ ಭಾಗದಲ್ಲಿನ ಜಾನಪದ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಜಾನಪದ ಅಧ್ಯಯನ, ಕನ್ನಡ ದಾರ್ಶನಿಕರ ಸ್ಮಾರಕಗಳ ಅಧ್ಯಯನ ಹಾಗೂ ಸಮೂಹ ಮಾಧ್ಯಮಗಳ ಮೂಲಕ ಗಡಿ ಭಾಗದ ಜನರ ಜೀವನ ದರ್ಶನ ಮಾಡಿಸಬೇಕೆಂಬ ನಿರ್ಧಾರವನ್ನು ಕೈಗೊಳ್ಳಲಾಯಿತು. ಗಡಿ ಭಾಗದಲ್ಲಿನ ಕನ್ನಡ ಶಾಲೆಗಳಿಗೆ ಸ್ಮಾರ್ಟ್‌ ತರಗತಿ ನಡೆಸಲು ತಾಂತ್ರಿಕ ಸಲಕರಣೆಗಳ ಪೂರೈಕೆ, ಗ್ರಂಥಾಲಯ, ಶೌಚಾಲಯಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹ ತೀರ್ಮಾನಿಸಲಾಯಿತು.

ಗಡಿ ಭಾಗದ ಪ್ರತಿ ತಾಲ್ಲೂಕಿನಿಂದ ಒಂದು ಯುವ ಸಂಘ ಮತ್ತು ಸಾಂಸ್ಕೃತಿಕ ಸಂಘವನ್ನು ಆಯ್ಕೆ ಮಾಡಿ, ಸ್ವಾತಂತ್ರ್ಯ ಅಮೃತೋತ್ಸವದ ಸವಿ ನೆನಪಿನಲ್ಲಿ ಸ್ವಾತಂತ್ರ್ಯ ಚಳವಳಿಯ ಐತಿಹಾಸಿಕ ಮಹತ್ವ ಸಾರುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ರಾಜ್ಯದ ಹಾಗೂ ಹೊರರಾಜ್ಯದ ಕೆಲವು ಆಯ್ದ ಗಡಿ ಪ್ರದೇಶದ ಸ್ಥಳಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಬೇಕು. ಗಡಿ ಭಾಗದ ದಾರ್ಶನಿಕರ ಕಿರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ, ಸ್ಮಾರಕಗಳ ಬಳಿ ಅವುಗಳನ್ನು ಪ್ರದರ್ಶಿಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.