
ಬೆಂಗಳೂರು: ಅಧಿಕಾರ ಹಸ್ತಾಂತರ, ಸಂಪುಟ ಪುನರ್‌ರಚನೆ ಚರ್ಚೆ ಬಿರುಸು ಪಡೆದಿರುವ ಬೆನ್ನಲ್ಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವರು, ಶಾಸಕರು ಭೇಟಿ ಮಾಡಿ ಚರ್ಚೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.
ಸಂಪುಟ ಪುನರ್ ರಚನೆಯಾದರೆ, ತಮ್ಮನ್ನು ಕೈಬಿಡಬಹುದೆಂಬ ಆತಂಕಕ್ಕೆ ಒಳಗಾಗಿರುವ ಮಂಕಾಳ ವೈದ್ಯ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿದ್ದ ಶಾಸಕರಾದ ಸಿ.ಪಿ. ಯೋಗೇಶ್ವರ್, ಶ್ರೀನಿವಾಸ ಮಾನೆ, ಯಾಸಿರ್ ಪಠಾಣ್, ಸಂಗಮೇಶ್ ಅವರೂ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು.
ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು: ‘ಅಧಿಕಾರ ಹಂಚಿಕೆ ಕುರಿತಾದ ಗೊಂದಲವನ್ನು ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಪಕ್ಷದಲ್ಲಿ, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಲಿದೆ’ ಎಂದು ಶಾಸಕ ಮಾಗಡಿ ಬಾಲಕೃಷ್ಣ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು ‘ಶಾಸಕರು, ಕಾರ್ಯಕರ್ತರಿಗೆ ಸ್ಪಷ್ಟತೆ ಸಿಗಬೇಕು’ ಎಂದರು.
‘ಶಾಸಕರು ದೆಹಲಿಗೆ ಗುಂಪು ಕಟ್ಟಿಕೊಂಡು ಹೋಗಿಲ್ಲ. ಕೇವಲ ಮೂರ್ನಾಲ್ಕು ಶಾಸಕರು ಹೋಗಿದ್ದಾರೆ. ಅವರು ಅವರ ಕೆಲಸಕ್ಕೆ ಹೋಗಿದ್ದಾರೆ. ಗುಂಪು ಕಟ್ಟಿಕೊಂಡು ಅಂದರೆ, 15 ಶಾಸಕರು ಇರಬೇಕು. ಶಾಸಕರೆಲ್ಲರೂ ಅವರ ಕೆಲಸಕ್ಕೆ ಹೋಗಿದ್ದಾರೆ. ಅಧಿಕಾರ ಹಂಚಿಕೆಯು ಶಾಸಕರ ನಂಬರ್ ಗೇಮ್ ಮೇಲೆ ನಿಂತಿಲ್ಲ. ಹೈಕಮಾಂಡ್ ತೀರ್ಮಾನದ ಮೇಲೆ ನಿಂತಿದೆ’
‘ನಾನೂ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡುತ್ತೇನೆ’ ಎಂದರು.
‘ಡಿಕೆ. ಶಿವಕುಮಾರ್ ಅವರು ಯಾರಿಗೂ ಬೆಂಬಲ ಕೊಡಿ ಎಂದು ಸೂಚಿಸಿಲ್ಲ. ಶಾಸಕರ ಬೆಂಬಲ ಕೋರುವ ಕೆಲಸ ನಡೆದಿಲ್ಲ. ಕೆಲವರು ವೈಯಕ್ತಿಕ ಹೇಳಿಕೆ ಕೊಡುತ್ತಿರಬಹುದು. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ’ ಎಂದರು.
’ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಅವರದ್ದೇ ಆದ ಶಕ್ತಿ ಇದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.