ADVERTISEMENT

ಮೂರು ಕಾಲು ವರ್ಷ ಅವಕಾಶ ಕೊಡಿ

ಸ್ವಪಕ್ಷ ಮತ್ತು ವಿರೋಧಪಕ್ಷವನ್ನು ಕೋರಿದ ಯಡಿಯೂರಪ್ಪ l ಸಚಿವ ಈಶ್ವರಪ್ಪ ಗೈರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:28 IST
Last Updated 27 ಫೆಬ್ರುವರಿ 2020, 19:28 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ನಾಯಕರು ಭಾಗವಹಿಸಿದ್ದರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ನಾಯಕರು ಭಾಗವಹಿಸಿದ್ದರು   

ಬೆಂಗಳೂರು:‘ಕರ್ನಾಟಕವನ್ನು ಮಾದರಿ ರಾಜ್ಯ ಮಾಡಲು, ರೈತರಿಗೆ ವೈಜ್ಞಾನಿಕ ಬೆಲೆ ನೀಡಲು, ಹಳ್ಳಿ ಹಳ್ಳಿಗಳಿಗೂ ನೀರು ಹರಿಸಲು ನನಗೆ ಇನ್ನೂ ಮೂರು ಕಾಲು ವರ್ಷ ಎಲ್ಲರೂ ಸಹಕಾರ ನೀಡಲೇಬೇಕು’.

–ಹೀಗೆಂದು ಕೈ ಜೋಡಿಸಿ ಕೇಳಿ ಕೊಂಡವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ಸ್ವಪಕ್ಷೀಯರು ಮಾತ್ರವಲ್ಲ; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲೂ ಎರಡು ಬಾರಿ ‘ಸಹಕಾರ’ದ ಮನವಿ ಮಾಡಿದರು.

78ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆ ಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲೂ ಇನ್ನಷ್ಟು ವರ್ಷ ಸಾರ್ವಜನಿಕ ಜೀವನದಲ್ಲಿ ಕಠಿಣ ಪರಿಶ್ರಮ ಹಾಕುವ ತುಡಿತವನ್ನು ಭಾವುಕ ವಾಗಿಯೇ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯಾವುದೇ ಮುಖಂಡರು ‘ಇನ್ನು ಸಾಕು ವಿಶ್ರಾಂತಿ ತೆಗೆದುಕೊಳ್ಳಿ’ ಎಂದು ಹೇಳುವ ಧೈರ್ಯವನ್ನೂ ಮಾಡಲಿಲ್ಲ.

ADVERTISEMENT

‘ಅನ್ನದಾತ ಸಂಕಷ್ಟದಲ್ಲಿದ್ದಾನೆ. ಆತ ನೆಮ್ಮದಿಯ ಬದುಕು ಸಾಗಿ ಸದೇ ಇದ್ದರೆ, ನಮಗೆ ಗೌರವ ತರುವು ದಿಲ್ಲ. ಅನ್ನದಾತ ನೆಮ್ಮದಿಯಿಂದ ಬದುಕು ವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಿದ್ದರಾಮಯ್ಯ ಅವರೇ ನೀವೂ ಸಹಕಾರ ನೀಡಬೇಕು’ ಎಂದು ಪ್ರೀತಿಯಿಂದಲೇ ತಾಕೀತು ಮಾಡಿದರು.

ದಿ.ಎಚ್‌.ಎನ್‌. ಅನಂತಕುಮಾರ್ ಅವರನ್ನು ನೆನಪಿಸಿಕೊಂಡ ಯಡಿಯೂ ರಪ್ಪ,‘ ಪಕ್ಷವನ್ನು ಕಟ್ಟಲು ನಾವಿಬ್ಬರು ಹಗಲು ರಾತ್ರಿ ರಾಜ್ಯದಲ್ಲಿ ಓಡಾಟ ಮಾಡಿದ್ದೇವೆ. ಅವರ ಕೊಡುಗೆ ಅಪಾರ’ ಎಂದರು.

ಸದಾ ಹೋರಾಟಗಾರ: ‘ರೈತ ಪರ ಹೋರಾಟ ಮತ್ತು ವ್ಯಕ್ತಿತ್ವ ನಿಮ್ಮನ್ನು ರಾಷ್ಟ್ರ ಮಟ್ಟದ ನಾಯಕನನ್ನಾಗಿ ಮಾಡಿದೆ. ಹೋರಾಟಗಾರ ಎಂದೆಂ ದಿಗೂ ಹೋರಾಟಗಾರನಾಗಿಯೇ ಇರು ತ್ತಾನೆ. ನಾವು ನಿಮ್ಮನ್ನು ಹೋರಾಟಗಾರನಾಗಿಯೇ ನೋಡುತ್ತೇವೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು.

ಹಣಕಾಸು ಮಂತ್ರಿಯಾಗಿ ಶೇ 4 ರ ಬಡ್ಡಿ ದರದಲ್ಲಿ ಸಾಲ ನೀಡಿದ್ದು, ಆ ಬಳಿಕ ಅದನ್ನು ಶೂನ್ಯ ದರಕ್ಕೆ ಇಳಿಸಿದ್ದು, ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡಿದ್ದು ರಾಷ್ಟ್ರ ಮಟ್ಟದಲ್ಲಿ ಪ್ರೇರಣೆ ನೀಡಿತು ಎಂದು ಅವರು ತಿಳಿಸಿದರು.

ದೇವ ದುರ್ಲಭ ದಿನ:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಈ ಕಾರ್ಯಕ್ರಮವನ್ನು ‘ದೇವ ದುರ್ಲಭ’ ಎಂದು ಬಣ್ಣಿಸಿದರು. ‘ಯಡಿಯೂರಪ್ಪ 78 ರ ಹರೆಯದಲ್ಲೂ ತಾವೊಬ್ಬ ಕಾರ್ಯಕರ್ತ ಎಂಬ ಭಾವನೆಯನ್ನು ಪ್ರಖರವಾಗಿಯೇ ಉಳಿಸಿಕೊಂಡಿದ್ದಾರೆ. ಇದು ನಮ್ಮೆಲ್ಲರಿಗೂ ಪ್ರೇರಣೆ’ ಎಂದರು.

ಕಮಾಲ್‌ ಮಾಡಿದ ಬಿಎಸ್‌ವೈ: ‘ಕೆಲವು ಮುಖ್ಯಮಂತ್ರಿಗಳ ಕೈಗುಣ ಹೇಗಿರುತ್ತದೆ ಎನ್ನುವುದಕ್ಕೆ ಯಡಿಯೂರಪ್ಪ ಸಾಕ್ಷಿ. ಶಿವಮೊಗ್ಗವನ್ನು ಕಮಾಲ್‌ ಎನ್ನುವ ಹಾಗೆ ಅವರು ಪರಿವರ್ತನೆ ಮಾಡಿದರು’ ಎಂದು ಬಿಜೆಪಿ ಹಿರಿಯ ನಾಯಕ ಎಸ್‌.ಎಂ. ಕೃಷ್ಣ ಹೇಳಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಯಡಿಯೂರಪ್ಪ ಮೇಲ್ಮನೆ ವಿರೋಧ ಪಕ್ಷದ ನಾಯಕ. ಅವರಿಗೆ ಭಯಂಕರ ಸಿಟ್ಟು. ಆ ಸಿಟ್ಟು ಬಹಳ ಕಾಲ ಇರುತ್ತಿರಲಿಲ್ಲ. ಅವರು ಸಿಟ್ಟಿನಿಂದ ಹೇಳುತ್ತಿದ್ದ ಕೊಳ್ಳೆ ಹೊಡೆಯಿತ್ತೀರಿ ಎಂಬ ಪದ ಇನ್ನು ನೆನಪಿದೆ. ಕೊಟ್ಟ ಮಾತನ್ನು ಉಳಿಸಿ ಕೊಳ್ಳುವ ಅಪರೂಪದ ರಾಜಕಾರಣಿ’ ಎಂದರು. ಅಭಿನಂದನಾ ಭಾಷಣ ಮಾಡಿದ ಕವಿ ಡಾ.ಸಿದ್ದಲಿಂಗಯ್ಯ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅತಿ ಹೆಚ್ಚು ಅನುದಾನ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ. ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಬಳಿಕವೇ ಕೇಂದ್ರ ಅದಕ್ಕೆ ಒಪ್ಪಿಕೊಂಡಿತು ಎಂದರು.

‘ರಾಜಕಾರಣ ಬೇರೆ, ಸಂಬಂಧ ಬೇರೆ’

‘ರಾಜಕಾರಣ ವೈಯಕ್ತಿಕ ಸಂಬಂಧಕ್ಕೆ ಅಡ್ಡಿ ಆಗಬಾರದು. ರಾಜಕೀಯ ಬೇರೆ ಮನುಷ್ಯತ್ವ ಬೇರೆ. ದೀರ್ಘ ಕಾಲ ನಾವು ಪರಸ್ಪರ ವಿರೋಧ ಮಾಡುತ್ತಾ ಬಂದರೂ ಮನುಷ್ಯ ನಂಬಿಕೆಗಳಿಗೆ ಧಕ್ಕೆ ಬರಬಾರದು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಸಿದ್ಧಾಂತ ರಾಜಕಾರಣಕ್ಕೆ ಸೀಮಿತವಾಗಬೇಕು. ನಮ್ಮ ಸಿದ್ಧಾಂತ ನಮಗೆ ಅವರ ಸಿದ್ಧಾಂತ ಅವರಿಗೆ. ಪ್ರಜೆಗಳೇ ಪ್ರಭುಗಳು, ಯಾವುದು ಬೇಕು ಎಂಬುದನ್ನು ಅವರು ತೀರ್ಮಾನಿಸುತ್ತಾರೆ. ರಾಜಕಾರಣ ವೈಯಕ್ತಿಕ ಸಂಬಂಧಗಳಿಗೆ ಅಡ್ಡಿ ಬರಬಾರದು’ ಎಂದು ಹೇಳಿದರು.

ಯಡಿಯೂರಪ್ಪ ಹೋರಾಟದ ಹಿನ್ನೆಲೆಯಿಂದ ಬಂದವರು. ಇವರ ಶ್ರಮ ಮತ್ತು ಹೋರಾಟದಿಂದಲೇ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಯಿತು ಎಂದರು.

‘ಹೌದಾ ಹುಲಿಯಾ’ ಮತ್ತು ‘ರಾಜಾ ಹುಲಿ’

ಬಿಜೆಪಿ ಮತ್ತು ಬಿಎಸ್‌ವೈ ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ‘ಹೌದಾ ಹುಲಿಯಾ’ ಎಂದೂ ತಮ್ಮ ನೆಚ್ಚಿನ ನಾಯಕ ನಿಗೆ ‘ರಾಜಾ ಹುಲಿ’ ಎಂದು ಪ್ರೀತಿಯಿಂದ ಘೋಷಣೆ ಕೂಗಿದರು.

ಎಲ್ಲ ಭಾಷಣಗಳ ಸಾರಾಂಶ ವನ್ನು ರಾಜನಾಥಸಿಂಗ್‌ ಅವರು ಸಿದ್ದರಾಮಯ್ಯ ಅವರಿಂದ ಕೇಳಿ ಆಸ್ವಾದಿಸಿದರು. ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪೂರ್ವ ನಿರ್ಧರಿತ ಕಾರ್ಯಕ್ರಮದ ಕಾರಣ ಸಮಾರಂಭಕ್ಕೆ ಬರಲು ಆಗುವುದಿಲ್ಲ ಎಂದು ಶುಭ ಹಾರೈಸಿ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.