ಬೆಂಗಳೂರು: ‘ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ’ಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವುದಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಭವಿಷ್ಯ ನಿಧಿ, ಅಪಘಾತ ಸೌಲಭ್ಯ, ವಸತಿ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ಕಾರ್ಮಿಕ ಕೌಶಲಾಭಿವೃದ್ಧಿ, ಅಂತ್ಯಸಂಸ್ಕಾರ ಧನ ಸಹಾಯ ನೀಡಲಾಗುವುದು. ಇದಕ್ಕಾಗಿ ಪ್ರತಿ ವಹಿವಾಟಿನ ಮೇಲೆ ಶೇ 1ರಿಂದ ಶೇ 2 ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುವುದು ಎಂದರು.
ಪ್ಲಾಟ್‌ಫಾರ್ಮ್ ಆಧಾರಿತ ಸೇವೆಗಳಾದ ಸ್ವಿಗ್ಗಿ, ಜೊಮಾಟೊಗಳಲ್ಲಿ ಫುಡ್ ಡೆಲವರಿ ಮಾಡುವ, ರೈಡ್ ಶೇರಿಂಗ್ ಸೇವೆಗಳಾದ ಓಲಾ, ಉಬರ್ ಮತ್ತು ನಮ್ಮ ಯಾತ್ರಿ ಇತ್ಯಾದಿ ಅಪ್ಲಿಕೇಷನ್ ಆಧಾರಿತ ಚಾಲಕರು, ಇ–ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್ ಮತ್ತಿತ್ತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು, ಕಾರ್ಮಿಕ ಕಾನೂನುಗಳಡಿ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಪಾಟೀಲ ತಿಳಿಸಿದರು.
ಗಿಗ್ ಕಾರ್ಮಿಕರು ಸರಕು ಸೇವೆಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಸೂಚಿಸಿದ ಸ್ಥಳಗಳಿಗೆ ವಾಹನಗಳಲ್ಲಿ ತೆರಳಿ ವಿತರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಅಪಘಾತಕ್ಕೆ ಒಳಗಾಗಬಹುದು. ಅಪಘಾತದಿಂದ ಮರಣ, ಶಾಶ್ವತ ಅಂಗವೈಕಲ್ಯ ಹೊಂದಿದರೆ ಅವರು ಮತ್ತು ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ಹೇಳಿದರು.
ದೇಶದ ದುಡಿಯುವ ವರ್ಗದಲ್ಲಿ ಶೇ 83ಕ್ಕೂ ಹೆಚ್ಚು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಇರುವುದಾಗಿ ಅಂದಾಜಿಸಲಾಗಿದೆ. ಅವರು ಶಾಸನಬದ್ಧ ಸೌಲಭ್ಯಗಳಿಂದ ವಂಚಿತರಾಗದಂತೆ ಇವರ ಜೀವನ ಮಟ್ಟವನ್ನು ಉತ್ತಮಪಡಿಸಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಕಾಯ್ದೆ ಅಗತ್ಯವಿದೆ. ರಾಜ್ಯದಲ್ಲಿ 2.30 ಲಕ್ಷ ಗಿಗ್ ಕಾರ್ಮಿಕರಿದ್ದಾರೆ ಎಂದರು.
ಕಲ್ಯಾಣ ಮಂಡಳಿ ರಚನೆ:
ನಿಧಿ ಸಂಗ್ರಹಣೆ, ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ‘ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಕಲ್ಯಾಣ ಮಂಡಳಿ’ ಸ್ಥಾಪಿಸಲಾಗುವುದು ಎಂದು ಪಾಟೀಲ ತಿಳಿಸಿದರು.
ಅಲ್ಲದೇ, ಗಿಗ್ ಕಾರ್ಮಿಕರು ಅಪಘಾತದಿಂದ ಮರಣ ಹೊಂದಿದರೆ ಅಪಘಾತ ಪರಿಹಾರ ಮತ್ತು ಜೀವ ವಿಮೆ ಸೇರಿ ₹4 ಲಕ್ಷ ಮತ್ತು ₹2 ಲಕ್ಷ ಮೊತ್ತದ ಜೀವ ವಿಮೆ ಒದಗಿಸಲು ಕರ್ನಾಟಕ ರಾಜ್ಯ ಗಿಗ್ ವಿಮಾ ಯೋಜನೆ ಎಂಬ ಹೊಸ ಯೋಜನೆಯನ್ನೂ ರೂಪಿಸಿದೆ. ಇದರ ಅನುಷ್ಠಾನಕ್ಕೆ ₹1 ಕೋಟಿ ಅನುದಾನ ಒದಗಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.