ADVERTISEMENT

ಭಾಷಣ ವಿವಾದ: ರಾಷ್ಟ್ರಪತಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ರಿಂದ ಪ್ರತ್ಯೇಕ ವರದಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 15:36 IST
Last Updated 25 ಜನವರಿ 2026, 15:36 IST
 ರಾಜ್ಯಪಾಲ ಥಾವರಚಂದ್ ಗೆಹಲೋತ್ 
 ರಾಜ್ಯಪಾಲ ಥಾವರಚಂದ್ ಗೆಹಲೋತ್    

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ನಡೆದಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ವಾಸ್ತವ ಅಂಶಗಳ ಪ್ರತ್ಯೇಕ ವರದಿಯೊಂದನ್ನು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿನ ರಾಜಕೀಯ, ಸಾಮಾಜಿಕ, ಅಭಿವೃದ್ಧಿ ಚಟುವಟಿಕೆ ಸೇರಿದಂತೆ ಎಲ್ಲ ಬೆಳವಣಿಗೆಗಳ ಕುರಿತು ಲೋಕಭವನದಿಂದ ರಾಷ್ಟ್ರಪತಿಗೆ ಪ್ರತಿ ತಿಂಗಳು ವರದಿ ಸಲ್ಲಿಸಲಾಗುತ್ತದೆ. ಜಂಟಿ ಅಧಿವೇಶನ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದಿದ್ದ ಘಟನೆ ಮತ್ತು ಆ ನಂತರದ ಬೆಳವಣಿಗೆಗಳ ಕುರಿತು ಪ್ರತ್ಯೇಕವಾದ ವರದಿಯನ್ನು ಸಲ್ಲಿಸಲಾಗಿದೆ ಎಂದು ಲೋಕಭವನದ ಮೂಲಗಳು ತಿಳಿಸಿವೆ.

ಜಂಟಿ ಅಧಿವೇಶನದ ಹಿಂದಿನ ದಿನ (ಜ. 21) ಮತ್ತು ಮರುದಿನ ನಡೆದ ವಿದ್ಯಮಾನಗಳನ್ನು ತಮ್ಮ ವರದಿಯಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರ ಕಳುಹಿಸಿದ್ದ ಭಾಷಣದಲ್ಲಿ ವಿಬಿ ಜಿ ರಾಮ್‌ ಜಿ ಕಾಯ್ದೆಯೂ ಸೇರಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಲಾಗಿತ್ತು. ಈ ಭಾಗವನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿತ್ತು. ಬಳಿಕ ವಿಧಾನಸಭಾಧ್ಯಕ್ಷ, ವಿಧಾನ ಪರಿಷತ್ ಸಭಾಪತಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರು, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರ ಜತೆಗೆ ನಡೆದ ‌ಚರ್ಚೆಯ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ‘ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಬೇಕಾದ ಸಂವಿಧಾನಬದ್ಧ ಕರ್ತವ್ಯ ನಿಭಾಯಿಸಿದ್ದೇನೆ’ ಎಂದೂ ವರದಿಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ADVERTISEMENT

ಭಾಷಣ ಮುಗಿಸಿ ವಿಧಾನಸಭೆಯಿಂದ ಹೊರ ಹೋಗುವ ಸಂದರ್ಭದಲ್ಲಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಒತ್ತಡ ಹೇರಲು ಪ್ರಯತ್ನಿಸಿದ ಕಾಂಗ್ರೆಸ್ ಸದಸ್ಯರ ವರ್ತನೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಿದೆ. ಘಟನೆಯ ನಂತರ ಸದನದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನೂ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಏನೇನು ನಡೆಯಿತು ಎಂಬ ವಿವರ ವರದಿಯಲ್ಲಿದೆ. ಈ ಘಟನಾವಳಿಗಳ ಕುರಿತು ರಾಜ್ಯಪಾಲರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಈ ವರದಿಯಲ್ಲಿ ವ್ಯಕ್ತಪಡಿಸಿಲ್ಲ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.