ADVERTISEMENT

Live | ಗ್ರಾ.ಪಂ.ಚುನಾವಣೆ ಫಲಿತಾಂಶ: ಮಧ್ಯರಾತ್ರಿಯವರೆಗೂ ನಡೆದ ಮತ ಎಣಿಕೆ

ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಆರಂಭಗೊಂಡಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಯ ಕ್ಷಣಕ್ಷಣದ ಅಪ್‌ಡೇಟ್ಸ್‌ ಇಲ್ಲಿ ಲಭ್ಯ.

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 20:16 IST
Last Updated 30 ಡಿಸೆಂಬರ್ 2020, 20:16 IST

ಹಾವೇರಿ ಜಿಲ್ಲೆಯಲ್ಲಿ ಅಹೋರಾತ್ರಿ ಮತ ಎಣಿಕೆ

ಹಾವೇರಿ: ಜಿಲ್ಲೆಯ 209 ಗ್ರಾಮ ಪಂಚಾಯಿತಿಗಳ ಪೈಕಿ ಇದುವರೆಗೆ 160 ಗ್ರಾಮ ಪಂಚಾಯಿತಿಗಳ ಫಲಿತಾಂಶ ಮಾತ್ರ ಪ್ರಕಟಗೊಂಡಿದೆ. ಅಂದರೆ ಶೇ 76ರಷ್ಟು ಫಲಿತಾಂಶ ಘೋಷಣೆಯಾಗಿದೆ.

ಬಿಳವಾರ: ಹರಾಜಿನಲ್ಲಿ ಭಾಗವಹಿಸಿದವರಿಗೇ ಗೆಲುವು!

ಯಡ್ರಾಮಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಬಿಳವಾರ ಗ್ರಾಮದ 1ನೇ ವಾರ್ಡ್‌ನಲ್ಲಿ ಬರುವ 4 ಪಂಚಾಯಿತಿ ಸದಸ್ಯರ ಸ್ಥಾನಗಳ ಹರಾಜಿನಲ್ಲಿ ಭಾಗವಹಿಸಿದ್ದರು ಎನ್ನಲಾದ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.

ಕಲಬುರ್ಗಿ: ಜಿಲ್ಲೆಯ 11 ಮತ ಎಣಿಕಾ ಕೇಂದ್ರಗಳಲ್ಲಿ ಬುಧವಾರ ರಾತ್ರಿ 11ರವರೆಗೆ 242 ಗ್ರಾ.ಪಂ.ಗಳ 1427 ಕ್ಷೇತ್ರಗಳ ಪೈಕಿ 205 ಗ್ರಾ.ಪಂ.ಗಳ 1191 ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, 3422 ಸದಸ್ಯರು ಆಯ್ಕೆಯಾಗಿದ್ದಾರೆ.

ADVERTISEMENT

ಶಾಸಕ ದೇವಾನಂದ ಚವ್ಹಾಣ ಸಹೋದರಿಯರ ಸವಾಲ್‌: ಅಕ್ಕನನ್ನು ಸೋಲಿಸಿದ ತಂಗಿ

ವಿಜಯಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ದೇವರಹಿಪ್ಪರಗಿ ತಾಲ್ಲೂಕಿನ ಹಿಟ್ಟಿನಹಳ್ಳಿ ತಾಂಡಾದ 4 ನೇ ವಾರ್ಡ್‌ನ ಚುನಾವಣೆ ಫಲಿತಾಂಶ ತಡರಾತ್ರಿ ಪ್ರಕಟಗೊಂಡಿದ್ದು, ಅಕ್ಕನನ್ನು ಸೋಲಿಸುವುದರ ಮೂಲಕ ಕಸ್ತೂರಿಬಾಯಿ ದೊಡಮನಿ ಆಯ್ಕೆಯಾಗಿದ್ದಾರೆ.

ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಅವರ ಸಹೋದರಿಯರಾದ ನೀಲಾಬಾಯಿ ಅಂಗಡಿ ಹಾಗೂ ಕಸ್ತೂರಿಬಾಯಿ ದೊಡಮನಿ ಪರಸ್ಪರ ಸ್ಪರ್ಧಿಗಳಾಗಿದ್ದು, ಇಡೀ ಜಿಲ್ಲೆಯಲ್ಲಿ ಸಹೋದರಿಯರ ಸ್ಪರ್ಧೆ ಗಮನ ಸೆಳೆಯಲು ಕಾರಣವಾಗಿತ್ತು. ಇವರಿಬ್ಬರ ಸ್ಪರ್ಧೆಯ ಫಲಿತಾಂಶ ಕುತೂಹಲ ಕೆರಳಿಸಿತ್ತು.

ಜಿದ್ದಾಜಿದ್ದಿನ ಹಣಾಹಣೆಯಲ್ಲಿ ಕಸ್ತೂರಿಬಾಯಿ ದೊಡಮನಿ 342 ಮತ ಪಡೆದು ವಿಜೇತರಾದರು. ಅಕ್ಕ ನೀಲಾಬಾಯಿ ಅಂಗಡಿ 245 ಮತ ಪಡೆದು ಪರಾಭವಗೊಂಡರು.

ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿ ಸಾವು

ವಿಜಯಪುರ: ಇಂಡಿ ತಾಲ್ಲೂಕಿನ ತೆನಹಳ್ಳಿ ಗ್ರಾಮ ಪಂಚಾಯ್ತಿ ವಾರ್ಡ್ ನಂಬರ್ 1ರಿಂದ ಸ್ಪರ್ಧಿಸಿದ್ದ  
ಹಫೀಜ್ ಅಹ್ಮದ್ ಖುರೇಶಿ(55) ಮತ ಎಣಿಕೆ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಸಾವನಪ್ಪಿದ್ದಾರೆ.

ಇಂಡಿ ಮತ ಎಣಿಕೆ ಕೇಂದ್ರದಲ್ಲಿ ಸಂಜೆವರೆಗೂ ಇದ್ದ ಅವರು ಮತ ಎಣಿಕೆಯಲ್ಲಿನ ಏರುಪೇರುಗಳನ್ನು ಕಂಡು ಅಸ್ವಸ್ಥಗೊಂಡರು.ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಿಗೀಡಾದರು.

ಹಫೀಜ್ ಸ್ಪರ್ಧೆ ಮಾಡಿರುವ ವಾರ್ಡ್‌ನ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಅಲ್ಪ ಮತಗಳ ಮುನ್ನಡೆ ಸಾಧಿಸಿದ್ದರು.

ಬೆಳಗಾವಿ: ಜಿಲ್ಲಾ ಪಂಚಾಯಿತಿ ಸದಸ್ಯೆಗೆ ಸೋಲು

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳೇಭಾವಿಯಲ್ಲಿ ‘ಆಪರೇಷನ್ ಕಮಲ’ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮಿ ವಿಠ್ಠಲ ಪಾರ್ವತಿ ಮತ್ತು ಅವರ ಮಾವ ನಾನಪ್ಪ ಪಾರ್ವತಿ ಅವರನ್ನು ಸುಳೇಭಾವಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬೆಂಬಲಿಗರಾದ ಫಕೀರವ್ವ ಅಮರಾಪುರ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ಬಸನಗೌಡ ಹೂಂಕರಿ ಪಾಟೀಲ ಪರಾಭವಗೊಳಿಸಿದ್ದಾರೆ.

ಸೋತ ಈ ಇಬ್ಬರೂ ಇತ್ತೀಚೆಗೆ ಉಸ್ತುವಾರಿ ಸಚಿವರೊಂದಿಗೆ ಗುರುತಿಸಿಕೊಂಡಿದ್ದರು.

ಪ್ರಣವಾನಂದ ಸ್ವಾಮೀಜಿಗೆ ಗೆಲುವು

ಹುಬ್ಬಳ್ಳಿ: 337 ಸ್ಥಾನಗಳ ಪೈಕಿ 63 ಅಭ್ಯರ್ಥಿಗಳ ಫಲಿತಾಂಶ ಪ್ರಕಟ

ಹುಬ್ಬಳ್ಳಿ ತಾಲ್ಲೂಕು ವ್ಯಾಪ್ತಿಯ 26 ಗ್ರಾ.ಪಂ. ಪಂಚಾಯತಿ 337 ಸದಸ್ಯರ ಆಯ್ಕೆಗೆ ನಡೆದ ಚುನಾವಣೆ ಮತ ಎಣಿಕೆ ಕಾರ್ಯ ಹುಬ್ಬಳ್ಳಿ ಲ್ಯಾಮಿಂಗಟನ್ ಪ್ರೌಢಶಾಲೆಯಲ್ಲಿ ಪ್ರಗತಿಯಲ್ಲಿದೆ. ಇದುವರೆಗೂ ಒಟ್ಟು 63 ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗಿದೆ.

ತಾಲೂಕು ವ್ಯಾಪ್ತಿಯ 26 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 373 ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಗಳಿವೆ. ಇದರಲ್ಲಿ 24 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಿರೆಸೂರು ಗ್ರಾಮದಲ್ಲಿ ಎಸ್.ಸಿ. ಮಹಿಳೆ ಸ್ಥಾನ ಖಾಲಿಯಿದೆ. ಕಟ್ನೂರ ಗ್ರಾಮದ 5 ಸ್ಥಾನ ಹಾಗೂ ಮಲ್ಲಿಗವಾಡ ಗ್ರಾಮದ 6 ಸ್ಥಾನಗಳಿಗೆ ಮತದಾನ ಜರುಗಿರುವುದಿಲ್ಲ.

ಒಂದು ಮತದಿಂದ ಗೆದ್ದ ರುದ್ರಪ್ಪ, 2 ಮತದಿಂದ ಗೆದ್ದ ಗಂಗವ್ವ

ನರಗುಂದ: ತೀವ್ರ ಕೂತೂಹಲ ಕೆರಳಿಸಿದ್ದ ತಾಲ್ಲೂಕಿನ ಬನಹಟ್ಟಿ ಗ್ರಾಮ ಪಂಚಾಯ್ತಿಯ 1ನೇ ವಾರ್ಡ್‌ನ ರುದ್ರಪ್ಪ ಬಂಡಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು. ಇವರು 276 ಮತ ಪಡೆದರೆ, ಪ್ರತಿ ಸ್ಪರ್ಧಿ ಹೊನ್ನಪ್ಪ ಚಲವಾದಿ 275 ಮತಗಳನ್ನು ಸಂಪಾದಿಸಿದರು.

ರಡ್ಡೇರನಾಗನೂರ ಗ್ರಾಮ ಪಂಚಾಯಿತಿಯ ಅನೂಸೂಚಿತ ಪಂಗಡ ಮಹಿಳಾ ಕ್ಷೇತ್ರದ ಗಂಗವ್ವ ತಡಸಿ ಎರಡು ಮತದ ಅಂತರದಿಂದ ಜಯ ಸಾಧಿಸಿದರು. ಇವರು 212 ಮತ ಪಡೆದರೆ, ಪ್ರತಿಸ್ಪರ್ಧಿ ಶಾಂತವ್ವ ತಳವಾರ 210 ಮತ ಗಳಿಸಿದರು.

ತಾ.ಪಂ. ಸದಸ್ಯೆ ಉಮ್ಲಿಬಾಯಿ ಈಗ ಗ್ರಾ.ಪಂ. ಸದಸ್ಯೆ!

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಐನಾಪುರ ಗ್ರಾಮ ಪಂಚಾಯಿತಿಗೆ ಕಮಲಾಪುರ ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮ್ಲಿಬಾಯಿ ಬನ್ಸಿಲಾಲ್ ಭುಂಯಾರ (ಕೆ) ಗ್ರಾಮದ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಉಮ್ಲಿಬಾಬಿ ಬನ್ಸಿಲಾಲ್ ಸ್ಪರ್ಧೆಯಿಂದ ಕುತೂಹಲ‌ ಕೆರಳಿಸಿದ್ದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಹಿಡಿತ ಸಾಬೀತು ಪಡಿಸಿದ್ದಾರೆ.

'ಚಪ್ಪಲಿ' ಗುರುತಿನ ಗಂಗಮ್ಮನಿಗೆ ಸೋಲು‌

ತುಮಕೂರು: ವಿಶಿಷ್ಟ ಪ್ರಚಾರದ ಕರಪತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದ ತಾಲ್ಲೂಕಿನ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಹಾಗೂ ದೊಡ್ಡಗುಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌.ಗಂಗಮ್ಮ ಎರಡೂ ಕಡೆಗಳಲ್ಲಿ ಸೋತಿದ್ದಾರೆ. ಅವರ ಪ್ರಚಾರದ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿತ್ತು. ಪೂರ್ಣ ಸುದ್ದಿ:

ಬೆಳಗಾವಿ: 185 ಗ್ರಾಮ ಪಂಚಾಯಿತಿಗಳ ಫಲಿತಾಂಶ ಪ್ರಕಟ

ಬೆಳಗಾವಿ: ಜಿಲ್ಲೆಯಲ್ಲಿ 477 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ. ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಬುಧವಾರ ಸಂಜೆವರೆಗೆ 185 ಗ್ರಾಮ ಪಂಚಾಯಿತಗಳ ಫಲಿತಾಂಶ ಪ್ರಕಟಿಸಲಾಗಿದೆ. ಎಲ್ಲ ‍ಪಂಚಾಯಿತಿಗಳ ಮತ ಎಣಿಕೆ ಪೂರ್ಣಗೊಳ್ಳಲು ತಡರಾತ್ರಿ ಆಗಬಹುದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಗದಗ: 175 ಸ್ಥಾನಗಳ ಫಲಿತಾಂಶ ಘೋಷಣೆ

ಗದಗ: ತಾಲ್ಲೂಕಿನ‌ 26 ಗ್ರಾಮ ಪಂಚಾಯ್ತಿಗಳ ಮತ ಎಣಿಕೆ‌ ನಗರದ ಶ್ರೀ ಗುರುಬಸವ ಎಂನಿಯರಿಂಗ್‌ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದು, ಸಂಜೆ 6 ಗಂಟೆ ಸಮಯಕ್ಕೆ ತಾಲ್ಲೂಕಿನ ಒಟ್ಟು 401 ಸ್ಥಾನಗಳ ಪೈಕಿ 175 ಸ್ಥಾನಗಳ ಫಲಿತಾಂಶ ಘೋಷಣೆಯಾಗಿದೆ. ಇನ್ನೂ 229 ಸ್ಥಾನಗಳ ಮತ ಎಣಿಕೆ ಮುಂದುವರೆದಿದ್ದು ತಡರಾತ್ರಿವರೆಗೂ ಎಣಿಕೆ ಕಾರ್ಯ ನಡೆಯಲಿದೆ.

ಒಟ್ಟು 26 ಗ್ರಾಮ ಪಂಚಾಯ್ತಿಗಳ ಪೈಕಿ 2 ಗ್ರಾಮ ಪಂಚಾಯ್ತಿಗಳ ಮತ ಎಣಿಕೆ ಸಂಪೂರ್ಣಗೊಂಡಿದೆ. ಇನ್ನೂ ಮತ ಎಣಿಕೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಫಲಿತಾಂಶ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು, ಬೆಂಬಲಿಗರು ಕಾಯ್ದು ಕುಳಿತಿದ್ದಾರೆ.

ಹುಬ್ಬಳ್ಳಿ ತಾಲೂಕಿನ 26 ಗ್ರಾ.ಪಂ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳ ವಿವರ

ಸಂಜೆ 6 ರವರೆಗೆ ಲಭ್ಯವಾದ ಮಾಹಿತಿ–

1) ಬ್ಯಾಹಟ್ಟಿ ಗ್ರಾ. ಪಂ.(ಸ್ಥಾನ29 ):


2) ಸುಳ್ಳ ಗ್ರಾ.ಪಂ.(ಸ್ಥಾನ 18): ಬಸವ್ವ ತಳವಾರ (ಅವಿರೋಧ)


3) ಕುಸುಗಲ್ ಗ್ರಾ.ಪಂ.(ಸ್ಥಾನ 25): ಸುರೇಶ್‍ಗೌಡ ಬಸವನಗೌಡ ಪಾಟೀಲ, ಮಾಲತೇಶ (ರಾಜಣ್ಣ) ದೇವಪ್ಪ ಸಂಕರೆಡ್ಡಿ, ವರ್ಷಾ ಗಣೇಶ ನವಲೂರು, ಸೋಮಶೇಖರ್ ಚನ್ನಪ್ಪ ಪಟ್ಟಣಶೆಟ್ಟಿ,


4) ಹೆಬಸೂರ ಗ್ರಾ. ಪಂ(ಸ್ಥಾನ 16): ಯಲ್ಲವ್ವ ಹನುಮಂತಪ್ಪ ಮೊರಬಣ್ಣವರ, ಮಂಜುನಾಥ ಗಣಪತಿ ಹೆಬಸೂರ (ಸಾಮಾನ್ಯ), ಪುಷ್ಪಾ ಗಿರೀಶ ತಳವಾರ, ಕುರುಬರ ಗಿರೀಜಾ ಫಕ್ಕೀರೇಶ, ಅಣ್ಣದಾನೇಶ್ವರಜ್ಜ ಮುದರಡ್ಡಿ,


5) ಕಿರೇಸೂರ ಗ್ರಾ. ಪಂ (ಸ್ಥಾನ 10):


6) ಇಂಗಳಹಳ್ಳಿ ಗ್ರಾ. ಪಂ (ಸ್ಥಾನ 13 ): ಸುಧಾ ಹನುಮಂತಪ್ಪ ರೊಟ್ಟಿಗವಾಡ (ಅವಿರೋಧ), ಸಂಜೀವರೆಡ್ಡಿ ಭೀಮರೆಡ್ಡಿ ಹಂಪಿಹೊಳಿ, ವಿಜಯಲಕ್ಷ್ಮಿ ಯಲ್ಲಪ್ಪ ಮಡಿವಾಳರ, ವೀರಪ್ಪ ಬಸಪ್ಪ ಕುಳ್ಳಿ,


7) ಕೋಳಿವಾಡ ಗ್ರಾ. ಪಂ (14ಸ್ಥಾನ): ಮಹಾದೇವಿ ಸುರೇಶ ದೊಡ್ಡಮನಿ (ಅವಿರೋಧ)


8) ಉಮಚಗಿ ಗ್ರಾ. ಪಂ.(11ಸ್ಥಾನ): ಪಾರ್ವತಿ ಶೇಖಣ್ಣ ಗೂಳಣ್ಣವರ (ಅವಿರೋಧ), ಬಸವ್ವ ಗಂಗಪ್ಪ ವಾಲಿ, ನಾಗರಳ್ಳಿ ಪ್ರವೀಣ ಬಸವರಾಜ ,


9) ಶಿರಗುಪ್ಪಿ ಗ್ರಾ.ಪಂ (ಸ್ಥಾನ13): ದೊಡ್ಡ ಉಡಚಪ್ಪನವರ.ರೇಣುಕಾ.ಶಿವಾನಂದ (ಅವಿರೋಧ), ಪುಷ್ಪಾ ಫಕ್ಕೀರಪ್ಪ ಯರಗುಪ್ಪಿ (ಅವಿರೋಧ), ಯಲ್ಲಮ್ಮ ಹಲಗಿ (ಅವಿರೋಧ)


10) ಮಂಟೂರ ಗ್ರಾ.ಪಂ. (ಸ್ಥಾನ 13): ಮಲ್ಲಪ್ಪ ಮಲ್ಲಿಕಾರ್ಜುನ ಹಡಪದ (ಅವಿರೋಧ), ಮಲ್ಲೇಶ ಸಂಭಾಜಿ (ಅವಿರೋಧ), ಸಾವಿತ್ರಮ್ಮ ಸೋಮಪ್ಪ ಹೊಸಳ್ಳಿ (ಅವಿರೋಧ), ವಾಲ್ಮೀಕಿ ಅನ್ನಪೂರ್ಣ(ಅವಿರೋಧ) ಮಹಾದೇವಿ ದೇವಪ್ಪ ಹರಿಜನ , ಸರೋಜಾ ಚಂದ್ರಕಾಂತ ಹಂಚಾಟೆ, ಬಸವರಾಜ ಭರಮಪ್ಪ ಜೀರಗಿ,


11) ಭಂಡಿವಾಡ ಗ್ರಾ.ಪಂ(ಸ್ಥಾನ 11): ಶಂಕ್ರವ್ವ ಗಾಣಿಗೇರ (ಅವಿರೋಧ), ಮಂಜುನಾಥ ಅ ಮೂಲಿಮನಿ, ಅರ್ಕಸಾಲಿ ರಾಜೇಶ್ವರಿ ಗಂಗಾಧರ, ಹಣಮಂತಪ್ಪ ಬಸಪ್ಪ ಹುಚ್ಚಣ್ಣವರ,


12) ಹಳ್ಯಾಳ ಗ್ರಾ.ಪಂ. (ಸ್ಥಾನ10): ಬಡೆಸಾಬನವರ ದಿಲಶಾದಬಿ ಅಲ್ಲಿಸಾಬ (ಅವಿರೋಧ), ಫಕ್ಕೀರವ್ವ ಬಸಪ್ಪ ಮಲ್ಲಮ್ಮನವರ (ಅವಿರೋಧ), ಕಮಲವ್ವ ಫಕ್ಕೀರಪ್ಪ ಜವಳಗೇರಿ (ಅವಿರೋಧ)


13) ಅದರಗುಂಚಿ ಗ್ರಾ.ಪಂ(ಸ್ಥಾನ 25): ಬಿಬಿಜಾನ ಖಾದರಸಾಬ ನದಾಫ (ಅವಿರೋಧ), ಬಡಿಗೇರಿ ಮುಕ್ತುಮಹುಸೇನ ಬುಡ್ಡೇಸಾಬ (ಅವಿರೋಧ), ಮೀನಾಕ್ಷಿ ಮುದೆಪ್ಪ ಮುದ್ದೆಣ್ಣವರ, ರಘುನಾಥಗೌಡ ಶಂಕರಗೌಡ ನೀಲಪ್ಪಗೌಡ, ಮಾಯಪ್ಪ ರಾಮಪ್ಪ ಮಾಯಣ್ಣವರ, ಚಂದ್ರಗೌಡ ಶಂಕರಗೌಡ ಖಾನಗೌಡರ ,


14) ನೂಲ್ವಿ ಗ್ರಾ.ಪಂ(ಸ್ಥಾನ 19): ನೀಲಮ್ಮಾ ಬಸವರಾಜ ಶಿರೂರ (ಅವಿರೋಧ), ಕುಂಬಾರ ನಿಂಗವ್ವ ಚಂದ್ರಪ್ಪ, ಶಂಕ್ರಪ್ಪ ಮಹಾದೇವಪ್ಪ ಪರಣ್ಣವರ,


15) ಛಬ್ಬಿ ಗ್ರಾ.ಪಂ(ಸ್ಥಾನ 12):


16) ಶರೇವಾಡ ಗ್ರಾ.ಪಂ (ಸ್ಥಾನ 12): ಮಹಾದೇವಿ ಶಿವಪ್ಪ ಅಮಟೂರ, ಫಕ್ಕೀರವ್ವ ಬಾಲಪ್ಪ ಭಜಂತ್ರಿ, ವಿರೂಪಾಕ್ಷಪ್ಪ ಮನೋಹರ ಯಡವಣ್ಣವರ,


17) ಬು.ಅರಳಿಕಟ್ಟಿ ಗ್ರಾ.ಪಂ(ಸ್ಥಾ‌ನ 11): ಸೋಮವ್ವ ಚನ್ನಪ್ಪ ನಿಂಗಣ್ಣ, ಉಮೇಶ ರಾಮಚಂದ್ರಪ್ಪ ದೊಡ್ಡಮನಿ,


18) ವರೂರ ಗ್ರಾ.ಪಂ(ಸ್ಥಾನ11):


19) ಅಗಡಿ ಗ್ರಾ.ಪಂ.(ಸ್ಥಾನ 12): ಚೆನ್ನಮ್ಮ ನಾಗಪ್ಪ ಪಾಟೀಲ (ಅವಿರೋಧ), ಮಂಜುಳಾ ಚಿದಾನಂದ ಬಡಿಗೇರ (ಅವಿರೋಧ)


20) ಕರಡಿಕೊಪ್ಪ ಗ್ರಾ. ಪಂ(ಸ್ಥಾನ 12): ಮಂಜುನಾಥ ಫ ಮಳ್ಳಪ್ಪನವರ, ಭೂಸನೂರ ಸುಜಾತಾ ಮಾರುತಿ, ಗಡಾದ ಮಾಬುಸಾಬ


21) ಬೆಳಗಲಿ ಗ್ರಾ.ಪಂ.(ಸ್ಥಾನ 14):


22) ಕಟ್ನೂರ ಗ್ರಾ.ಪಂ.(ಸ್ಥಾನ 14):


23) ಅಂಚಟಗೇರಿ ಗ್ರಾ.ಪಂ.(ಸ್ಥಾನ 14): ಮಲ್ಲವ್ವ ಜಮ್ಯಾಳ (ಅವಿರೋಧ)

24) ಚನ್ನಾಪೂರ ಗ್ರಾ.ಪಂ.(ಸ್ಥಾನ 10): ಕವಿತಾ ಮನೋದ ಕರಮಡಿ (ಅವಿರೋಧ), ಮಹಬೂಬಿ ಹುಸೇನಸಾಬ ವಲ್ಲೇನವರ (ಅವಿರೋಧ)


25) ರಾಯನಾಳ ಗ್ರಾ.ಪಂ.(ಸ್ಥಾನ 11): ಜಯಶ್ರೀ ಗದಿಗೆಪ್ಪ ಹಳ್ಳಿಕೇರಿ, ಗಂಗವ್ವ ಬಸವ್ವ ಮಾರಡಗಿ, ಮೂಡೇನವರ ಯಲ್ಲಪ್ಪ ಮಲ್ಲಪ್ಪ,


26) ದೇವರಗುಡಿಹಾಳ ಗ್ರಾ.ಪಂ.(ಸ್ಥಾನ 13): ಫಕ್ಕೀರವ್ವ ನಿಂಗಪ್ಪ ಮಾದರ (ಅವಿರೋಧ), ಶಾಂತಾ ಈರಪ್ಪ ಚೌವ್ಹಾಣ , ಮಾರುತಿ ಹಣಮಂತಪ್ಪ ಹೊಸಮನಿ ಉರ್ಫ್ ತಳವಾರ

ತಾಯಿಯ ವಿರುದ್ಧ ಮಗಳ ಗೆಲುವು

ಮಂಡ್ಯ: ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮ ಪಂಚಾಯಿತಿ ವಾರ್ಡ್‌ 1ರಲ್ಲಿ ತಾಯಿಯ ವಿರುದ್ಧ ಸ್ಪರ್ಧಿಸಿದ್ದ ಮಗಳು ಜಯಗಳಿಸಿದ್ದಾರೆ. ತಾಯಿ ನಾಗಮ್ಮ, ಮಗಳು ಮಮತಾ ಸ್ಪರ್ಧಿಸಿದ್ದರು. ಮಮತಾ 96 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಿರುಗುಪ್ಪ: 3 ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ

ಸಿರುಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮ ಪಂಚಾಯತಿ ಶಾಲಿಗನೂರು ಗ್ರಾಮದ ಲಕ್ಷ್ಮಿ 3 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಗ್ರಾಮ ಪಂಚಾಯ್ತಿ ಕ್ಷೇತ್ರ ಸಂಖ್ಯೆ4ರಲ್ಲಿ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶಿವಕುಮಾರ್ 367ಮತಗಳನ್ನು ಪಡೆದು ಸಾಮನ್ಯ ಕ್ಷೇತ್ರದಿಂದ ಅಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಒಟ್ಟು ಮೂರು ಸ್ಥನಗಳಿದ್ದು, ಎಸ್ಸಿ ಮಹಿಳೆ, ಎಸ್ಟಿ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಇದರಲ್ಲಿ ಎಸ್ಸಿ ಮಹಿಳಾ ಕ್ಷೇತ್ರದಿಂದ ಬಸಮ್ಮ229 ಮತ ಪಡೆದಿದ್ದಾರೆ. ಎಸ್ಟಿಯಿಂದ ಪ್ರಭಾಕರ್ 368 ಮತಪಡೆದಿದ್ದಾರೆ. ಇವರೊಂದಿಗೆ ಎಸ್ಟಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವಕುಮಾರ್( 367 ) ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳಿಗಿಂತ ಹೆಚ್ಚು ಪಡೆದಿದ್ದರಿಂದ ಅವರು ಸಾಮಾನ್ಯ ಕ್ಷೇತ್ರದಿಂದ ಅಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

ಗೆಲುವಿನ ನಗೆ ಬೀರಿದ ಶಿಗ್ಲಿ ಬಸ್ಯಾ ಪತ್ನಿ

ಲಕ್ಷ್ಮೇಶ್ವರ: 200ಕ್ಕೂ ಅಧಿಕ ಮನೆಗಳ್ಳತನದ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡು ತನ್ನ ಪ್ರಕರಣಗಳನ್ನು ತಾನೇ ವಾದಿಸಿ ಶಿಗ್ಲಿ ಬಸ್ಯಾ ಎಂದೇ ಗುರುತಿಸಿಕೊಂಡಿರುವ ಶಿಗ್ಲಿ ಬಸು ಅವರ ಪತ್ನಿ ಗುಲ್ಜಾರಭಾನು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿಗೆ ಸಮೀಪವಿರುವ ಶಿಗ್ಲಿಯವರಾದ ಗುಲ್ಜಾರಭಾನು 1ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 248 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ವಿಜಯಪುರ: ಕುಡಿದು ಬಂದು ರಂಪಾಟ ಮಾಡಿದ ವಿಜೇತ ಅಭ್ಯರ್ಥಿ

ವಿಜಯಪುರ: ಕುಡಿದು ಬಂದು ರಂಪಾಟ ಮಾಡಿದ ವಿಜೇತ ಅಭ್ಯರ್ಥಿ

ವಿಜಯಪುರ: ಜಿಲ್ಲೆಯ ಕೊಲ್ಹಾರ ಮತ ಎಣಿಕೆ ಕೇಂದ್ರದಲ್ಲಿ ವಿಜೇತ ಅಭ್ಯರ್ಥಿ ಕುಡಿದು ಬಂದು ರಂಪಾಟ ಮಾಡಿದ್ದಾರೆ.

ಗೆಲುವಿನ ನಂತರ ಸಹಿ ಮಾಡಲು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ವೇಳೆ ಕುಡಿದ ಮತ್ತಿನಲ್ಲಿ ಕೊರಳಿಗೆ ಹಾರಗಳನ್ನು ಹಾಕಿಕೊಂಡು ಬಂದು ಮನಬಂದಂತೆ ವರ್ತನೆ. ಹಣಮಾಪೂರ ಗ್ರಾ.ಪಂ ಬಳೂತಿ ಆರ್.ಸಿ ಮತಕ್ಷೇತ್ರದ ವಿಜೇತ ಅಭ್ಯರ್ಥಿ ರಾವುತಪ್ಪ ಶಿವಪ್ಪ ಮಟ್ಟಿಹಾಳ ಕುಡಿದ ಮತ್ತಿನಲ್ಲಿ ಆಗಮಿಸಿದ ವಿಜೇತ ಅಭ್ಯರ್ಥಿ.

ವಿಜಯಪುರ: 823 ಕ್ಷೇತ್ರಗಳ ಫಲಿತಾಂಶ ಪ್ರಕಟ

ವಿಜಯಪುರ ಜಿಲ್ಲೆಯ 199 ಗ್ರಾಮ ಪಂಚಾಯಿತಿಗಳ 1333 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸಂಜೆ 5ರ  ವರೆಗೆ ನಡೆದ ಮತ ಎಣಿಕೆಯಲ್ಲಿ 823 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಒಟ್ಟು 102 ಗ್ರಾ.ಪಂ.ಗಳ ಎಲ್ಲ ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದೆ.

ಚಾಮರಾಜನಗರ: ಒಂದು ಮತದಿಂದ ಅಭ್ಯರ್ಥಿ ಗೆಲುವು

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಒಂದು ಮತದಿಂದ ಗೆದ್ದಿದ್ದಾರೆ.

ಗೋಕಾಕ: 2 ಮತ್ತು 3ನೇ ಹಂತದ ಮತ ಎಣಿಕೆ

ಗೋಕಾಕ: ತಾಲ್ಲೂಕಿನ 32 ಗ್ರಾ.ಪಂ.ಗಳ ಪೈಕಿ ಒಟ್ಟು 188 ವಾರ್ಡಗಳಿಗೆ ನಡೆದ ಚುನಾವಣೆ ಬಳಿಕದ ಮತಗಳ ಎಣಿಕೆಯನ್ನು ಮೂರು ಸುತ್ತುಗಳಲ್ಲಿ ಕ್ರಮವಾಗಿ 63, 62 ಹಾಗೂ 63 ನಡೆಸಲಾಗುತ್ತಿದ್ದು, 2ನೇ ಹಂತದ ಎಣಿಕೆ ಪ್ರಕ್ರಿಯೆ ಸಂಜೆ 8 ಗಂಟೆಗೆ ಹಾಗೂ 3ನೇ ಸುತ್ತು ತಡರಾತ್ರಿವರೆಗೆ ಪೂರ್ಣ ಗೊಳ್ಳುವ ನಿರೀಕ್ಷೆ ಇದೆ ಎಂದು ತಾಲ್ಲೂಕು ಚುನಾವಣಾ ಅಧಿಕಾರಿಗಳೂ ಆಗಿರುವ ಪ್ರಕಾಶ ಹೊಳೆಪ್ಪಗೋಳ "ಪ್ರಜಾವಾಣಿ'ಗೆ ಮಾಹಿತಿ ನೀಡಿದ್ದಾರೆ.

2ನೇ ಹಂತದ ಎಣಿಕೆ ಪ್ರಕ್ರಿಯೆ ಮುಸ್ಸಂಜೆಗೆ ಹಾಗೂ 3ನೇ ಸುತ್ತು ತಡರಾತ್ರಿವರೆಗೆ ಪೂರ್ಣ ಗೊಳ್ಳುವ ನಿರೀಕ್ಷೆ ಇದೆ ಎಂದು ಖಾನಾಪುರ ತಾಲ್ಲೂಕು ಚುನಾವಣಾ ಅಧಿಕಾರಿ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ್ದಾರೆ.

ಬಾಗಲಕೋಟೆ: 384 ಕ್ಷೇತ್ರಗಳ ಫಲಿತಾಂಶ ಪ್ರಕಟ

ಬಾಗಲಕೋಟೆ: ಜಿಲ್ಲೆಯಲ್ಲಿ 198 ಪಂಚಾಯಿತಿಗಳ ಪೈಕಿ 11 ಪಂಚಾಯಿತಿಗಳ ಫಲಿತಾಂಶ ಮಾತ್ರ ಈವರೆಗೆ ಪ್ರಕಟಗೊಂಡಿದೆ. ಒಟ್ಟು 384 ಕ್ಷೇತ್ರಗಳ ಫಲಿತಾಂಶ ಪ್ರಕಟಿಸಲಾಗಿದೆ .

ಶೂನ್ಯ ಸಾಧನೆ; ಸಹೋದರನಿಗೆ ಶರಣು

ಕೊರಟಗೆರೆ: ತಾಲ್ಲೂಕಿನ ದೊಡ್ಡಸಾಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಹಳ್ಳಿ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಲ್ತಾಪ್ ಪಾಷ ಶೂನ್ಯ ಮತಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಹಾಗೂ ಇವರ ಸಹೋದರ ಅಂಜತ್ ಪಾಷ 114 ಮತ ಗಳಿಸಿ ಜಯ ಸಾಧಿಸಿದ್ದಾರೆ.

ಗೋಕಾಕ: 21ರ ಹರೆಯದ ಅಭ್ಯರ್ಥಿಗೆ ಗೆಲುವು

ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮ ಪಂಚಾಯಿತಿ 5ನೇ ವಾರ್ಡ್ ಚುನಾವಣೆಯಲ್ಲಿ 21 ವರ್ಷದ ಈಶ್ವರಯ್ಯ ಕೆ ಸತ್ತಿಗೇರಿಮಠ ಆಯ್ಕೆಯಾಗಿದ್ದಾರೆ.

ಒಂದು ಮತದ ಅಂತರ: ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಬಗರನಾಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 5ನೇ ವಾರ್ಡ್‌ ಪ.ಜಾ. ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಲವ್ವ ಮಹಾಂತೇಶ ಹರಿಜನ 473 ಮತಗಳನ್ನು ಪಡೆದ ಪ್ರತಿಸ್ಪರ್ಧಿ ಮಹಾದೇವಿ ಜಗದೀಶ ಹರಿಜನ ಅವರನ್ನು ಒಂದು ಮತದ ಅಂತರದಿಂದ ಪರಾಭವಗೊಳಿಸಿ ಆಯ್ಕೆಗೊಂಡಿದ್ದಾರೆ.

ಇವರು ಒಂದೇ ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿಗಳು

ಕೂಡ್ಲಿಗಿ: 2 ಮತಗಳ ಅಂತರದ ಗೆಲುವು

ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ಕ್ಷೇತ್ರ ಸಂಖ್ಯೆ 3ರಲ್ಲಿ ಜಿ. ಚಂದ್ರಮ್ಮ 2ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಚಂದ್ರಮ್ಮ ಅವರು 230 ಮತ ಪಡೆದಿದ್ದು, ಅವರ ಸಮೀಪ ಪ್ರತಿ ಸ್ಪರ್ಧಿ  ಸೌಭಾಗ್ಯಮ್ಮ 228ಮತ ಪಡೆದಿದ್ದಾರೆ. ಕ್ಷೇತ್ರ ಎಸ್ಸಿ ಮಹಿಳೆಗೆ ಮೀಸಲಾಗಿತ್ತು.

ಕೂಡ್ಲಿಗಿ ತಾಲ್ಲೂಕಿನ ಸೂಲದಹಳ್ಳಿ ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ 2ರಲ್ಲಿ ಕೆ. ಲಕ್ಷ್ಮೀ 2  ಮತಗಳ ಅಂತರದಲ್ಲಿ ವಿಜಯಿಯಾಗಿದ್ದಾರೆ. ಲಕ್ಷ್ಮೀ ಅವರಿಗೆ 349ಮತ ಪಡೆದಿದ್ದು, ಎದುರಾಳಿ ರೇಣುಕಮ್ಮ 347 ಮತ ಪಡೆದಿದ್ದಾರೆ.

ಸಂಡೂರು ತಾಲ್ಲೂಕಿನ ಕೃಷ್ಣಾನಗರ ಗ್ರಾಮದ ಬಿ.ಚಂದ್ರಪ್ಪನವರು 3ನೇ ಕ್ಷೇತ್ರದಿಂದ ಗೆದ್ದಿದ್ದಾರೆ. ಇವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.

'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಹಾಕುತ್ತಿರುವ ವಿಡಿಯೊ ವೈರಲ್

ಉಜಿರೆ: ಪಾಕಿಸ್ತಾನ ಜಿಂದಾಬಾದ್ ಘೋಷಣೆ

ಉಜಿರೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಮತ ಎಣಿಕೆ ಕೇಂದ್ರದ ಹೊರಗಡೆ ಬುಧವಾರ ಗ್ರಾಮ ಪಂಚಾಯಿತಿ ಮತ ಎಣಿಕೆ ಸಂದರ್ಭದಲ್ಲಿ ಎಸ್ ಡಿ ಪಿಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ.

ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಸ್ಪಷ್ಟ ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ

ಹೆಬಸೂರ ಪಂಚಾಯಿತಿ; ಗೆದ್ದವರ ಸಂಭ್ರಮ

ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಪಂಚಾಯಿತಿಯ 1ನೇ  ವಾರ್ಡ್‌ನಿಂದ ಆಯ್ಕೆಯಾದ ಗಿರಿಜಾ ಕುರುಬರ ಮತ್ತು ಪುಷ್ಪಾ ತಳವಾರ ಹಾಗೂ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.

ಮುಳಬಾಗಿಲು: ಸ್ವತಂತ್ರ ಅಭ್ಯರ್ಥಿಗಳು ಗೆಲುವು

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎಮ್ಮೇನತ್ತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಮ್ಮೇನತ್ತದ ಸಾಮಾನ್ಯ ಹಾಗೂ ಎಸ್ ಸಿ ಮೀಸಲು ಮಹಿಳಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬಣದ ಬೆಂಬಲಿತ  ಅಭ್ಯರ್ಥಿಗಳಾಗಿ ಕೆ. ನಾಗರಾಜ ರೆಡ್ಡಿ ಮತ್ತು ಸಿ. ಕಸ್ತೂರಿ ಗೆಲುವು ಸಾಧಿಸಿದ್ದಾರೆ.

ನಾಗರಾಜ ರೆಡ್ಡಿ 87 ಮತಗಳ ಅಂತರದಿಂದ ಸಾಮಾನ್ಯ ಕ್ಷೇತ್ರಕ್ಕೆ ಆಯ್ಕೆ ಆಗಿದ್ದರೆ, ಕಸ್ತೂರಿ 175 ಮತಗಳಿಂದ ಎಸ್ ಸಿ ಮಹಿಳಾ ಕ್ಷೇತ್ರದಲ್ಲಿ ಜಯ ಪಡೆದಿದ್ದಾರೆ. ಎಮ್ಮೇನತ್ತ ಕ್ಷೇತ್ರದಲ್ಲಿ 638 ಮತಗಳು ಚಲಾವಣೆಯಾಗಿದ್ದವು.\

ಆಗ ಗೃಹ ರಕ್ಷಕ, ಈಗ ಪಂಚಾಯತಿ ಸದಸ್ಯ

ಗುರುಮಠಕಲ್ (ಯಾದಗಿರಿ ಜಿಲ್ಲೆ): ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗೃಹ ರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದ ಉಷಪ್ಪ ಅವರು ಕೇಶ್ವಾರ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಕೇಶ್ವಾರ ಗ್ರಾಮದ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅವರು ಆಯ್ಕೆಯಾಗಿದ್ದಾರೆ.

ಮಿರಿಯಾಣ ಗ್ರಾ.ಪಂ. ಒಂದು ಮತದ ಗೆಲುವು

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಮಿರಿಯಾಣ ಗ್ರಾ.ಪಂ. ವ್ಯಾಪ್ತಿಯ ಕಲ್ಲೂರು ರೋಡ್ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ಒಂದೇ ಮತದಿಂದ ಗೆಲುವು ಸಾಧಿಸಿದ್ದಾರೆ.

ರವಿಶಂಕರ ಶರಣಪ್ಪ 326 ಮತ ಪಡೆದರೆ, ರಾಜಕುಮಾರ ಭೀಮಶಾ 325 ಮತಗಳು ಪಡೆದಿದ್ದರು. ಆಗ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಪಾಲಾಮೂರ ಅವರು ಅಧಿಕ‌ ಮತ ಪಡೆದ ರವಿಶಂಕರ ಗೆಲುವು ಘೋಷಿಸಿದರು.

ಗದಗ: 118 ಕ್ಷೇತ್ರಗಳ ಫಲಿತಾಂಶ ಪ್ರಕಟ

ಗದಗ: ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆವರೆಗಿನ ಮತ ಏಣಿಕೆ ವಿವರ.

ಜಿಲ್ಲೆಯ ಏಳು ತಾಲ್ಲೂಕುಗಳ ಚುನಾವಣೆ ನಡೆದ 117  ಗ್ರಾಮ ಪಂಚಾಯಿತಿಗಳ 567 ಕ್ಷೇತ್ರಗಳ ಪೈಕಿ 118 ಕ್ಷೇತ್ರಗಳ ಫಲಿತಾಂಶ ಮಾತ್ರ ಪ್ರಕಟಗೊಂಡಿದೆ.

ಹುಬ್ಬಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿ ವಾರು ಇದುವರೆಗೆ ವಿಜೇತರಾದವರ ವಿವರ ಇಲ್ಲಿದೆ–

 ಸುಳ್ಳ ಗ್ರಾ.ಪಂ: ಬಸವ್ವ ತಳವಾರ (ಅವಿರೋಧ),

 ಹೆಬಸೂರ ಗ್ರಾ. ಪಂ: ಯಲ್ಲವ್ವ ಹನುಮಂತಪ್ಪ ಮೊರಬಣ್ಣವರ (ಸಾ.ಮಹಿಳೆ), ಮಂಜುನಾಥ ಗಣಪತಿ ಹೆಬಸೂರ (ಸಾಮಾನ್ಯ),

 ಇಂಗಳಹಳ್ಳಿ ಗ್ರಾ. ಪಂ.: ಸುಧಾ ಹನುಮಂತಪ್ಪ ರೊಟ್ಟಿಗವಾಡ (ಅವಿರೋಧ),

 ಕೋಳಿವಾಡ ಗ್ರಾ‌. ಪಂ: ಮಹಾದೇವಿ ಸುರೇಶ ದೊಡ್ಡಮನಿ (ಅವಿರೋಧ),

 ಉಮಚಗಿ ಗ್ರಾ. ಪಂ.: ಪಾರ್ವತಿ ಶೇಖಣ್ಣ ಗೂಳಣ್ಣವರ (ಅವಿರೋಧ), ಬಸವ್ವ ಗಂಗಪ್ಪ ವಾಲಿ (ಸಾ.ಮಹಿಳೆ), ನಾಗರಳ್ಳಿ ಪ್ರವೀಣ ಬಸವರಾಜ (ಸಾಮಾನ್ಯ),

 ಶಿರಗುಪ್ಪಿ ಗ್ರಾ. ಪಂ: ದೊಡ್ಡ ಉಡಚಪ್ಪನವರ.ರೇಣುಕಾ.ಶಿವಾನಂದ (ಅವಿರೋಧ), ಪುಷ್ಪಾ ಫಕ್ಕೀರಪ್ಪ ಯರಗುಪ್ಪಿ (ಅವಿರೋಧ), ಯಲ್ಲಮ್ಮ ಹಲಗಿ (ಅವಿರೋಧ).

 ಮಂಟೂರ ಗ್ರಾ. ಪಂ.: ಮಲ್ಲಪ್ಪ ಮಲ್ಲಿಕಾರ್ಜುನ ಹಡಪದ (ಅವಿರೋಧ),ಮಲ್ಲೇಶ ಸಂಭಾಜಿ (ಅವಿರೋಧ), ಸಾವಿತ್ರಮ್ಮ ಸೋಮಪ್ಪ ಹೊಸಳ್ಳಿ (ಅವಿರೋಧ), ವಾಲ್ಮೀಕಿ ಅನ್ನಪೂರ್ಣ(ಅವಿರೋಧ) ಮಹಾದೇವಿ ದೇವಪ್ಪ ಹರಿಜನ (ಎಸ್‍ಸಿ ಮಹಿಳೆ), ಸರೋಜಾ ಚಂದ್ರಕಾಂತ ಹಂಚಾಟೆ (ಸಾ.ಮಹಿಳೆ), ಬಸವರಾಜ ಭರಮಪ್ಪ ಜೀರಗಿ (ಸಾಮಾನ್ಯ),

ಬಂಡಿವಾಡ ಗ್ರಾ. ಪಂ: ಶಂಕ್ರವ್ವ.ಗಾಣಿಗೇರ (ಅವಿರೋಧ)

 ಹಳ್ಯಾಳ ಗ್ರಾ. ಪಂ: ಬಡೆಸಾಬನವರ ದಿಲಶಾದಬಿ ಅಲ್ಲಿಸಾಬ (ಅವಿರೋಧ), ಫಕ್ಕೀರವ್ವ ಬಸಪ್ಪ ಮಲ್ಲಮ್ಮನವರ (ಅವಿರೋಧ), ಕಮಲವ್ವ ಫಕ್ಕೀರಪ್ಪ ಜವಳಗೇರಿ (ಅವಿರೋಧ),

 ಅದರಗುಂಚಿ ಗ್ರಾ. ಪಂ: ಬಿಬಿಜಾನ ಖಾದರಸಾಬ ನದಾಫ (ಅವಿರೋಧ), ಬಡಿಗೇರಿ ಮುಕ್ತುಮಹುಸೇನ ಬುಡ್ಡೇಸಾಬ (ಅವಿರೋಧ), ಮೀನಾಕ್ಷಿ ಮುದೆಪ್ಪ ಮುದ್ದೆಣ್ಣವರ (ಎಸ್‍ಸಿ ಮಹಿಳೆ), ರಘುನಾಥಗೌಡ ಶಂಕರಗೌಡ ನೀಲಪ್ಪಗೌಡ (ಸಾಮಾನ್ಯ), ಮಾಯಪ್ಪ ರಾಮಪ್ಪ ಮಾಯಣ್ಣವರ (ಮುರಾರಹಳ್ಳಿ ಮತಕ್ಷೇತ್ರ ಹಿಂ.ವ.ಅ), ಚಂದ್ರಗೌಡ ಶಂಕರಗೌಡ ಖಾನಗೌಡರ (ಸಾಮಾನ್ಯ)

 ನೂಲ್ವಿ ಗ್ರಾ. ಪಂ.: ನೀಲಮ್ಮಾ ಬಸವರಾಜ ಶಿರೂರ (ಅವಿರೋಧ),

 ಬು.ಅರಳಿಕಟ್ಟಿ ಗ್ರಾ. ಪಂ: ಸೋಮವ್ವ ಚನ್ನಪ್ಪ ನಿಂಗಣ್ಣ (ಹಿಂ.ವ.ಅ. ಮಹಿಳೆ), ಉಮೇಶ ರಾಮಚಂದ್ರಪ್ಪ ದೊಡ್ಡಮನಿ (ಸಾಮಾನ್ಯ),

 ಅಗಡಿ ಗ್ರಾ. ಪಂ: ಚೆನ್ನಮ್ಮ ನಾಗಪ್ಪ ಪಾಟೀಲ(ಅವಿರೋಧ), ಮಂಜುಳಾ ಚಿದಾನಂದ ಬಡಿಗೇರ (ಅವಿರೋಧ),

 ಅಂಚಟಗೇರಿ ಗ್ರಾ. ಪಂ: ಮಲ್ಲವ್ವ ಜಮ್ಯಾಳ (ಅವಿರೋಧ),

 ಚನ್ನಾಪೂರ ಗ್ರಾ. ಪಂ: ಕವಿತಾ ಮನೋದ ಕರಮಡಿ (ಅವಿರೋಧ), ಮಹಬೂಬಿ ಹುಸೇನಸಾಬ ವಲ್ಲೇನವರ (ಅವಿರೋಧ),

 ದೇವರಗುಡಿಹಾಳ ಗ್ರಾ. ಪಂ: ಫಕ್ಕೀರವ್ವ ನಿಂಗಪ್ಪ ಮಾದರ (ಅವಿರೋಧ), ಶಾಂತಾ ಈರಪ್ಪ ಚೌವ್ಹಾಣ (ರೇವಡಿಹಾಳ ಮತಕ್ಷೇತ್ರ ಸಾ.ಮಹಿಳೆ), ಮಾರುತಿ ಹಣಮಂತಪ್ಪ ಹೊಸಮನಿ ಉರ್ಫ್ ತಳವಾರ (ಎಸ್‍ಟಿ).

ಟಾಸ್‌ನಲ್ಲಿ ಗೆದ್ದ ಈರಮ್ಮ

ಚಿಂಚೋಳಿ (ಕಲಬುರ್ಗಿ ‌ಜಿಲ್ಲೆ):  ತಾಲ್ಲೂಕಿನ‌ ದೇಗಲಮಡಿ ಗ್ರಾ.ಪಂ.ನಲ್ಲಿ ಇಬ್ಬರು ಅಭ್ಯರ್ಥಿಗಳು ಸಮ ಮತಗಳು ಪಡೆದಿದ್ದರಿಂದ ಟಾಸ್ ಹಾರಿಸಿ ವಿಜೇತರನ್ನು ನಿರ್ಧರಿಸಲಾಯಿತು.

ದೇಗಲಮಡಿ ಗ್ರಾಮದ ಈರಮ್ಮ ನಾಗಪ್ಪ ರಾಚೋಟಿ ಮತ್ತು ಚಂದ್ರಕಲಾ ಜಗನ್ನಾಥರೆಡ್ಡಿ ತಲಾ 349 ಮತಗಳು ಪಡೆದಿದ್ದರಿಂದ ಟಾಸ್ ಹಾರಿಸಲಾಯಿತು. ಆಗ ವಿಜಯಮಾಲೆ ಈರಮ್ಮ‌ ನಾಗಪ್ಪ ರಾಚೋಟಿ ಅವರಿಗೆ ಒಲಿಯಿತು.

ಚಾಮರಾಜನಗರ: 275 ಕ್ಷೇತ್ರಗಳ ಫಲಿತಾಂಶ ಘೋಷಣೆ

ಚಾಮರಾಜನಗರ: ಮಧ್ಯಾಹ್ನ 2.30 ಗಂಟೆಯವರೆಗೆ 275 ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದೆ.

ಚಾಮರಾಜನಗರ ತಾಲ್ಲೂಕಿನ 95 ಕ್ಷೇತ್ರಗಳು,  ಗುಂಡ್ಲುಪೇಟೆ ತಾಲ್ಲೂಕಿನ 51, ಯಳಂದೂರು ತಾಲ್ಲೂಕಿನ 37, ಕೊಳ್ಳೇಗಾಲ ತಾಲ್ಲೂಕಿನ 35 ಹಾಗೂ ಹನೂರು ತಾಲ್ಲೂಕಿನ 57 ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದೆ.

ಬಾದಾಮಿ ಗ್ರಾಮ ಪಂಚಾಯ್ತಿ ಚುನಾವಣೆಯ ಮತ ಎಣಿಕೆ ಕೇಂದ್ರದ ಹೊರಗೆ ಜನ ಜಾತ್ರೆಯಂತೆ ಸೇರಿರುವುದು

ಕಮಲಾಪುರ: ಒಂದು ಮತದಿಂದ ಗೆಲುವು

ಕಮಲಾಪುರ (ಕಲಬುರ್ಗಿ ಜಿಲ್ಲೆ):  ತಾಲ್ಲೂಕಿನ ಅಂಬಲಗಾ ಗ್ರಾಮ ಪಂಚಾಯಿತಿಯ ಮಲ್ಲಿನಾಥ ಮಾಚಿ 305 ಮತ ಪಡೆದು ಕೇವಲ ಒಂದು ಮತ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಇವರ ಪ್ರತಿಸ್ಪರ್ಧಿ ರಾಜಶೇಖರ ಮೇಗಪಿ 304 ಮತ ಪಡೆದು ಪರಾಭವಗೊಂಡಿದ್ದಾರೆ.

ಇಬ್ಬರು ಮತಪತ್ರಗಳಿಗೆ ಹೆಬ್ಬೆಟ್ಟಿನ ಗುರುತು ಹಾಕಿದ್ದು ಅವು ರಾಜಶೇಖರ ಅವರ ಆಟೊ ಚಿಹ್ನೆ ಮೇಲೆ ಒತ್ತಿದ್ದಾರೆ. 34 ಅಸಿಂಧು ಆಗಿವೆ. ಮರು ಎಣಿಕೆ ಮಾಡುವಂತೆ ಅಭ್ಯರ್ಥಿ ಪರ ಏಜೆಂಟ್ ಶಿವಪುತ್ರಪ್ಪ ಮೇಗಪ್ಪಿ ಒತ್ತಾಯಿಸುತ್ತಿದ್ದಾರೆ.

ಹುಬ್ಬಳ್ಳಿ: ಬಿಜೆಪಿ ಬೆಂಬಲಿತರ ಗೆಲವು

ಹುಬ್ಬಳ್ಳಿ: ಶೆರೆವಾಡ ಪಂಚಾಯಿತಿ 1ನೇ ವಾರ್ಡ್‌ನ ಸಾಮಾನ್ಯ ವರ್ಗದ ವಿರೂಪಾಕ್ಷಪ್ಪ ಮನೋಹರ ಯಡವಣ್ಣವರ, ಪರಿಶಿಷ್ಟ ಜಾತಿಯ ಫಕ್ಕೀರವ್ವ ಬಾಲಪ್ಪ ಭಜಂತ್ರಿ ಹಾಗೂ ಹಿಂದುಳಿದ ವರ್ಗದ ಮಹಾದೇವಿ ಶಿವಪ್ಪ ಅಮಟೂರ ಗೆಲುವು. ಮೂವರು ಬಿಜೆಪಿ ಬೆಂಬಲಿತರು.

ಗ್ರಾಮ ಪಂಚಾಯಿತಿಗೆ ಪತ್ರಕರ್ತ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಪತ್ರಕರ್ತ ಮಹಾಂತೇಶ ಪಾಟೀಲ ಹುನ್ಮರಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಲು

ಹೊಳಲ್ಕೆರೆ: ತಾಲ್ಲೂಕಿನ ಬಿ.ದುರ್ಗ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ ಪರಾಭವಗೊಂಡಿದ್ದಾರೆ. ಇವರ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ರುದ್ರೇಶ್ ಗೌಡ 135 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದೊಡ್ಡಗುಣಿ ಕೆರೆ ಏರಿ ಮೇಲೆ ಅಪಘಾತ

ಗುಬ್ಬಿ: ತಾಲ್ಲೂಕಿನ ದೊಡ್ಡಗುಣಿ ಕೆರೆ ಏರಿ ಮೇಲೆ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೆಲುವಿನ ಸಂಭ್ರಮ...

ಕಲಬುರ್ಗಿ ತಾಲ್ಲೂಕಿನ ಕುಸನೂರ ಗ್ರಾಮ‌ ಪಂಚಾಯಿತಿಯಿಂದ ಗೆಲುವು ಸಾಧಿಸಿದ ಪರಮೇಶ ಶಿವಪುರ ಹಾಗೂ ರಮೇಶ ಅವರು ಗೆಲುವಿನ ಚಿಹ್ನೆ ತೋರಿಸಿದರು.

ಒಂದು ಮತ ಅಂತರದಿಂದ ಇಬ್ಬರು ಅಭ್ಯರ್ಥಿಗಳು ವಿಜಯ

ಮೊಳಕಾಲ್ಮುರು (ಚಿತ್ರದುರ್ಗ):  ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಇಬ್ಬರು ಕೇವಲ ಒಂದು ಮತ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ತುಮಕೂರು ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಮ್ತಿ ಮತಗಟ್ಟೆಯಿಂದ ಜಂಗಮ ಕಾಮಯ್ಯ ಅವರು 167 ಮತಗಳನ್ನು ಗಳಿಸಿ ಜಯಶೀಲರಾಗಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಗುಡ್ಲನಾಯಕ 166 ಮತ ಪಡೆದುಪರಾಭವಗೊಂಡಿದ್ದಾರೆ.

ರಾಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಯರಪೋತ ಜೋಗಿ ಹಳ್ಳಿಯಲ್ಲಿ ಬಸಮ್ಮ 152 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ತಾಯಮ್ಮ 151 ಮತಗಳಿಸಿ ಪರಾಭವಗೊಂಡಿದ್ದಾರೆ.

ಬಳ್ಳಾರಿ 91 ಸ್ಥಾನಗಳ ಫಲಿತಾಂಶ ಘೋಷಣೆ

ಬಳ್ಳಾರಿ ತಾಲೂಕಿನ 449 ಸದಸ್ಯ ಸ್ಥಾನಗಳ ಪೈಕಿ ಇದುವರೆಗೆ 91 ಸದಸ್ಯ ಸ್ಥಾನಗಳ ಫಲಿತಾಂಶ ಘೋಷಣೆ.

ಮರು ಎಣಿಕೆಯಲ್ಲಿ ಗೆದ್ದವರು ಸೋತರು, ಸೋತವರು ಗೆದ್ದರು

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬನ್ನಿಗೋಳ ಗ್ರಾಮ ಪಂಚಾಯ್ತಿಯ ಒಂದು ಮತ ಅಂತರದ ಗೆಲುವು  ಸಾಧಿಸಿದ್ದ ಗಡಾದ ರೇಣುಕಮ್ಮ ಮರುಎಣಿಕೆಯಲ್ಲಿ ಒಂದು ಮತದ ಅಂತರದಲ್ಲಿ ಸೋಲುಂಡರು.

ಮರು ಎಣಿಕೆಗೆ ಯಶೋಧಮ್ಮ ಪರ ಏಜೆಂಟರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಬಿ.ಎಂ.ದಿನೇಶ್ ಮನವಿ ಪುರಸ್ಕರಿಸದರು. ಮರು ಎಣಿಕೆಯಲ್ಲಿ ಪೂಜಾರ ಯಶೋಧಮ್ಮ 335 ಮತ ಪಡೆದು ಗೆಲುವಿನ ನಗೆ ಬೀರಿದರು. ಗಡಾದ ರೇಣುಕಮ್ಮ 334 ಮತಗಳನ್ನು ಪಡೆದರು. ಗಡಾದ ರೇಣುಕಮ್ಮ ಗೆಲುವಿನ ಖುಷಿ ಕೇವಲ ಒಂದು ಗಂಟೆ ಮಾತ್ರ ಇತ್ತು.

ಶಿರಾ: ‘ಲಾಟರಿ’ ಗೆಲುವು

ಶಿರಾ: ತಾಲ್ಲೂಕಿನ ಹೆಂದೊರೆ ಗ್ರಾಮ ಪಂಚಾಯಿತಿಯ ಸಿದ್ದನಹಳ್ಳಿ ಕ್ಷೇತ್ರದಲ್ಲಿ ಗಿರಿಜಮ್ಮ ಅವರಿಗೆ ಲಾಟರಿಯಲ್ಲಿ ಅದೃಷ್ಟ ಒಲಿದು ಬಂತು.

ಗಿರಿಜಮ್ಮ ಮತ್ತು ಸುಧಾ ಇಬ್ಬರು ತಲಾ 283 ಮತಗಳನ್ನು ಪಡೆದು ಸಮಬಲ ಸಾಧಿಸಿದಾಗ ನಂತರ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಕೂಡ್ಲಿಗಿ: ಸಮ ಮತಗಳು, ಲಾಟರಿ ನಿರ್ಣಯ

ಕೂಡ್ಲಿಗಿ: ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರ್ಡ ಸಂಖ್ಯೆ 3ರಲ್ಲಿ ಜ್ಯೋತಿ ವೆಂಕಟೇಶ ಹಾಗೂ ಮಾಲತಿ ರಾಮಸ್ವಾಮಿ ತಲಾ 234 ಮತ ಪಡೆದಿದ್ದಾರೆ. ನಂತರ ನಡೆದ ಮರು ಎಣಿಕೆಯಲ್ಲಿ ಇಬ್ಬರಿಗೂ ಸಮ ಮತವಾಗಿದ್ದವು. ನಂತರ ನಡೆದ ಲಾಟರಿಯಲ್ಲಿ ಜ್ಯೋತಿ ವೆಂಕಟೇಶ ವಿಜೇತರಾಗಿದ್ದಾರೆ.

ಹಗರಿಬೊಮ್ಮನಹಳ್ಳಿ: ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ  ಸೊನ್ನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್.ಮರಿಲಿಂಗಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿ.ಷಣ್ಮುಖಪ್ಪ ಅವರ ವಿರುದ್ಧ ಕೇವಲ 1 ಮತದ ಅಂತರದಲ್ಲಿ ಜಯಗಳಿಸಿದರು.

ಮರಿಲಿಂಗಪ್ಪ 440 ಮತಗಳನ್ನು ಪಡೆದರೆ, ಬಿ.ಷಣ್ಮುಖಪ್ಪ 439 ಮತಗಳನ್ನು ಪಡೆದು ಪರಾಜಿತರಾದರು. ಮರುಎಣಿಕೆ ಮಾಡುವಂತೆ ಮನವಿ ಸಲ್ಲಿಸಿದರಾದರು, ಅರ್ಜಿ ಸಲ್ಲಿಸಲು ನೀಡಿದ ಗಡುವು ಮೀರಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮನವಿ ತಿರಸ್ಕರಿಸಿದರು.

ತುರುವೇಕೆರೆ: ಲಾಟರಿ ಮೂಲಕ ಗೆಲುವು

ತುರುವೇಕೆರೆ: ತಾಲ್ಲೂಕಿನ ಕಣತೂರು ಗ್ರಾಮ ಪಂಚಾಯಿತಿಯಲ್ಲಿ ಎ.ಬಿ.ತ್ಯಾಗರಾಜು ಲಾಟರಿ ಮೂಲಕ ಗೆಲವು ಪಡೆದಿದ್ದಾರೆ. ಮೋಹನ್ ಮತ್ತು ಎ.ಬಿ.ತ್ಯಾಗರಾಜು ಇಬ್ಬರೂ ತಲಾ 133 ಮತ ಪಡೆದಿದ್ದರು. ಲಾಟರಿಯಲ್ಲಿ ಗೆಲುವು ಒಲಿದು ಬಂತು.

3 ಮತಗಳ ಅಂತರದ ಗೆಲುವು

ಹೊಸಪೇಟೆ (ಬಳ್ಳಾರಿ) : ಮೂರು ಮತಗಳ ಅಂತರದಿಂದ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ. ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾ.ಪಂಯ ಎರಡನೇ ಕ್ಷೇತ್ರದ ಅಭ್ಯರ್ಥಿ ಎನ್. ಗೀತಾಗೆ ಗೆಲುವು.

ಅದೇ ಗ್ರಾಮದ ಕಾಂಗ್ರೆಸ್  ಬೆಂಬಲಿತ ಅಭ್ಯರ್ಥಿ ಸುರೇಶ್ 54 ಮತಗಳಿಂದ  ಗೆಲುವು.

ಅತ್ತೆ–ಸೊಸೆ ಗೆಲುವು

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿ‌ ಗ್ರಾ.ಪಂ.ನಲ್ಲಿ ಅತ್ತೆ-ಸೊಸೆ ಇಬ್ಬರೂ ಗೆಲುವು ದಾಖಲಿಸಿದ್ದಾರೆ.

ಗ್ರಾ.ಪಂ.ನ ಬಿ.ವಿ. ಪಾಳ್ಯದ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ಪಾರ್ವತಮ್ಮ ಹಾಗೂ ಬಿಸಿಎಂ-ಎ ಕ್ಷೇತ್ರದಿಂದ ಅವರ ಸೊಸೆ ಲಕ್ಷ್ಮಿ ಸ್ಪರ್ಧಿಸಿದ್ದು, ಇಬ್ಬರೂ ಗೆಲುವಿನ‌ ನಗೆ ಬೀರಿದರು. ಅತ್ತೆ-ಸೊಸೆ ಸ್ಪರ್ಧೆಯಿಂದ ಈ ಕ್ಷೇತ್ರ ಗಮನ ಸೆಳೆದಿತ್ತು.

ರಾಜ್ಯದ ಹಲವೆಡೆ ಡ್ರಾ ಫಲಿತಾಂಶ; ಟಾಸ್ ಮೂಲಕ ವಿಜೇತರ ಘೋಷಣೆ

ವಿಜಯಪುರ: ವಿಜೇತರ ಸಂಭ್ರಮಾಚರಣೆ

ವಿಜಯಪುರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮೊದಲ ಸುತ್ತಿನ ಮತ ಎಣಿಕೆ ಮುಗಿದು, ಫಲಿತಾಂಶ ಪ್ರಕಟವಾಗುತ್ತಿದಂತೆ ವಿಜೇತ ಅಭ್ಯರ್ಥಿ ಗಳು ಮತ್ತು ಅವರ ಬೆಂಬಲಿಗರು ಗುಲಾಲ್ ಎರಚಿ, ಸಿಹಿ ಹಂಚಿ, ಹೂವಿನ ಹಾರ ಹಾಕಿ ವಿಜಯೋತ್ಸವ ಆಚರಿಸಿದರು.  ಕೇಕೆ. ಜಯಘೋಷಣೆಗಳು ಜೋರಾಗಿತ್ತು. ಸ್ಥಳದಲ್ಲೇ ಹೂವು, ಗುಲಾಲ್, ಪೇಡಾ ಮಾರಾಟವೂ ಜೋರಾಗಿತ್ತು.

ಛಲ ಬಿಡದೆ ‌ಗೆದ್ದ ಅಭ್ಯರ್ಥಿಯಿಂದ ಆನಂದ ಬಾಷ್ಪ

ಬೆಳಗಾವಿ: ತಾಲ್ಲೂಕಿನ ಮುತಗಾ ಗ್ರಾಮ ‍ಪಂಚಾಯಿತಿ ವಾರ್ಡ್ ನಂ.4ರಲ್ಲಿ ಗೆದ್ದ ಶ್ಯಾಮ್ ಮುತಗೇಕರ್ ಆನಂದದಿಂದ ಕಣ್ಣೀರಿಟ್ಟ ಘಟನೆ ನಡೆಯಿತು. ಪತ್ನಿ, ಮಕ್ಕಳೊಂದಿಗೆ ಅವರು ಸಂಭ್ರಮ ಹಂಚಿಕೊಂಡರು.

ಮಡಿಕೇರಿ: ಪತಿ, ಪತ್ನಿಗೆ ಜಯ

ಮಡಿಕೇರಿ: ಹಾಕತ್ತೂರು ಪಂಚಾಯ್ತಿ ವ್ಯಾಪ್ತಿಯ ಬಿಳಿಗೇರಿ 2ರಿಂದ ಸ್ಪರ್ಧಿಸಿದ್ದ ಪತಿ-ಪತ್ನಿ ಗೆಲುವು ದಾಖಲಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಬ್ದುಲ್ ಖಾದರ್, ಬಿಜೆಪಿ ಬೆಂಬಲಿತ ದರ್ಶನ ಅವರನ್ನು ಪರಾಭವಗೊಳಿಸಿದ್ದಾರೆ. ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಕೀರ 220 ಮತ ಪಡೆದು, ಎದುರಾಳಿ ಜಯಂತಿ ಅವರನ್ನು ಸೋಲಿಸಿದ್ದಾರೆ. ಪತಿ‌ ಅಬ್ದುಲ್ ಖಾದರ್ 2ನೇ ಬಾರಿ ಗೆಲುವು ಪಡೆದರೆ, ಪತ್ನಿ ಸಾಕೀರ ಮೊದಲ ಬಾರಿ ಜಯಶಾಲಿಯಾಗಿದ್ದಾರೆ.

ತುಮಕೂರು: ಮೊದಲ ಹಂತದಲ್ಲಿ ತುರುವೇಕೆರೆಯ 52 ಮತಗಟ್ಟೆಗಳ ಎಣಿಕೆ ಪೂರ್ಣ ವಾಗಿದೆ. ಎರಡನೇ ಸುತ್ತಿನಲ್ಲಿ 44 ಮತಗಟ್ಟೆಗಳ ಎಣಿಕೆ ಆರಂಭ.

ದಾವಣಗೆರೆ: ನಿಧಾನಗತಿಯಲ್ಲಿ ಸಾಗುತ್ತಿರುವ ಎಣಿಕೆ

ದಾವಣಗೆರೆ: ಏಕ ಸದಸ್ಯ, ದ್ವಿ ಸದಸ್ಯ ಮತ್ತು ತ್ರಿ ಸದಸ್ಯ ಸ್ಥಾನಗಳ ಎಣಿಕೆ ಕಾರ್ಯ ಮುಗಿದಿದೆ. ನಾಲ್ಕು ಮತ್ತು ಅದಕ್ಕಿಂತ ಹೆಚ್ಚಿನ ಸ್ಥಾನ ಹೊಂದಿರುವ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ.

ಚುನಾವಣೆಯಲ್ಲಿ ಗೆಲುವಿನ ‘ಫೋಟೊ!’

ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಗ್ರಾಮ ಪಂಚಾಯಿತಿಯ ವಾರ್ಡ್‌ ನಂ. 10ರಿಂದ ಸ್ಪರ್ಧಿಸಿದ್ದ ವೃತ್ತಪರ ಛಾಯಾಗ್ರಾಹಕ ಡಿ.ಬಿ. ಪಾಟೀಲ ಗೆಲುವು ಸಾಧಿಸಿದ್ದಾರೆ. ಹಿಂಡಲಗಾ ರಕ್ಷಕ ಕಾಲೊನಿ ರಹವಾಸಿ ಸಂಘಟನೆಯ ಬೆಂಬಲಿತರಾಗಿ ಅವರು ಕಣಕ್ಕೆ ಇಳಿದಿದ್ದರು. 317 ಮತಗಳನ್ನು ಗಳಿಸಿ, ಪ್ರತಿಸ್ಪರ್ಧಿಗಿಂತ 190 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಪತ್ರಿಕೆಯೊಂದರ ಛಾಯಾಗ್ರಾಹಕರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ನಗರದಲ್ಲಿ ತಮ್ಮದೇ ಸ್ಟುಡಿಯೊ ಮಾಡಿಕೊಂಡು, ವೃತ್ತಿಪರ ಛಾಯಾಗ್ರಾಹಕರಾಗಿದ್ದಾರೆ. ರೋಟರಿಯಲ್ಲೂ ಗುರುತಿಸಿಕೊಂಡಿದ್ದಾರೆ.

ಗೋಲಭಾವಿ: ಒಂದು ಮತದ ಅಂತರದ ಗೆಲುವು

ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲ್ಲೂಕಿನ ಗೋಲಭಾವಿ ಗ್ರಾಮ ಪಂಚಾಯ್ತಿಯ ವಾರ್ಡ್ ನಂ 2ರಲ್ಲಿ ಸ್ಪರ್ಧಿಸಿದ್ದ ಕಲಾವತಿ ಮಾಂಗ ಒಂದು ಮತದ ಅಂತರದಿಂದ ಜಯ ಗಳಿಸಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕಲಾವತಿ 297 ಮತಗಳ ಪಡೆದರೆ ಅವರ ಪ್ರತಿ ಸ್ಲರ್ಧಿ ಚಂದ್ರವ್ವ ಮಾಂಗ ಅವರಿಗೆ 296 ಮತಗಳು ಬಿದ್ದಿವೆ.

ಚಾಮರಾಜನಗರ ಮತ ಎಣಿಕೆ ಫಲಿತಾಂಶ ಘೋಷಣೆ ವಿವರ

ಒಟ್ಟು ಕ್ಷೇತ್ರಗಳು- 823, ಅವಿರೋಧ ಆಯ್ಕೆ-24 ಕ್ಷೇತ್ರ, ಮಧ್ಯಾಹ್ನ 1 ಗಂಟೆಯವರೆಗೆ 185 ಕ್ಷೇತ್ರಗಳ ಫಲಿತಾಂಶ ಘೋಷಣೆ 

ಚಾಮರಾಜನಗರ ತಾಲ್ಲೂಕು 72 ಕ್ಷೇತ್ರ

ಗುಂಡ್ಲುಪೇಟೆ ತಾಲ್ಲೂಕು- 40 ಕ್ಷೇತ್ರ

ಯಳಂದೂರು ತಾಲ್ಲೂಕು- 22 ಕ್ಷೇತ್ರ

ಕೊಳ್ಳೇಗಾಲ ತಾಲ್ಲೂಕು -18 ಕ್ಷೇತ್ರ

ಹನೂರು- 33 ಕ್ಷೇತ್ರ

ಚಾಮರಾಜನಗರ: ಹನೂರು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯಿತಿಯ ಅಭ್ಯರ್ಥಿ ಪ್ರಮೀಳಾ ಅವರು ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮೀಸಲು ಕ್ಷೇತ್ರದಲ್ಲಿ ಸೋತು ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದ ಮಹಿಳೆ

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯರ್ಥಿಯೊಬ್ಬರು ಮೀಸಲು ಕ್ಷೇತ್ರದಲ್ಲಿ ಸೋಲು ಕಂಡು ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ವೃಂದವ್ವನಹಳ್ಳಿ ಗ್ರಾಮದ ಹಿಂದುಳಿದ ವರ್ಗದ "ಎ" ಮಹಿಳೆ ಮೀಸಲು ಕ್ಷೇತ್ರದಲ್ಲಿ ಗುರುಶಾಂತಮ್ಮ ಸೋಲು ಅನುಭವಿಸಿದ್ದರು. ಇವರು 323 ಮತಗಳನ್ನು ಪಡೆದಿದ್ದರು. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶಿವಮ್ಮ ಎಂಬುವರು 316 ಮತಗಳನ್ನು ಪಡೆದಿದ್ದರು. ಮೀಸಲು ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಗುರುಶಾಂತಮ್ಮ ಅವರು ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು. ಸಾಮಾನ್ಯ ಕ್ಷೇತ್ರದಲ್ಲಿ ಇವರಿಗೆ ಏಳು ಮತಗಳ ಅಂತರದಲ್ಲಿ ಗೆಲುವು ಸಿಕ್ಕಿತು.

ಕೂಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ4ರಲ್ಲಿ ಸ್ನಾತಕೋತ್ತರ ಪದವಿದರ ಬಿ.ಎಂ. ನವೀನ ಕುನಾರ್ 937ಮತ ಪಡೆದು ವಿಜೇತರಾಗಿದ್ದಾರೆ.

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಲಿಮುನ್ನೋಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮೀರಾಸಾಬ ಮುಲ್ತಾನಿ ಅತಿ ಹೆಚ್ಚು ಮತ ಪಡೆದು ಸತತವಾಗಿ 3ನೇ ಬಾರಿಗೆ ಆಯ್ಕೆ

ಚಿಕ್ಕೋಡಿ: ತಾಲ್ಲೂಕಿನ ಶಿರಗಾಂವ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಸತತ ನಾಲ್ಕನೇ ಬಾರಿಗೆ ಪ್ರಕಾಶ ಮಾನೆ ಆಯ್ಕೆ

ಹಡಗಲಿ: ದೇವಲಾಪುರ 2ನೇಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಬೇರಪ್ಪ ಸಾಲಿ ಕೇವಲ ಒಂದು ಮತ ಮತಗಳಿಸಿ ಪರಾಭವಗೊಂಡಿದ್ದಾರೆ.

ಚುನಾವಣೆ ನಂತರ ನಿಧನರಾಗಿದ್ದ ಅಭ್ಯರ್ಥಿ ಗೆಲುವು

ಬೆಳಗಾವಿ: ಚುನಾವಣೆ ನಡೆದ ನಂತರ ಹೃದಯಾಘಾತದಿಂದ ನಿಧನರಾಗಿದ್ದ ಖಾನಾಪುರ ತಾಲ್ಲೂಕಿನ ಕಕ್ಕೇರಿಯ ಸಿ.ಬಿ. ಅಂಬೋಜಿ (67) ಗೆಲುವು ಸಾಧಿಸಿದ್ದಾರೆ. ಅಲ್ಲಿ ಡಿ. 22ರಂದು ಮತದಾನ ನಡೆದಿತ್ತು. ಅವರು, ಡಿ. 27ರಂದು ನಿಧನರಾಗಿದ್ದರು. ಬುಧವಾರ ಫಲಿತಾಂಶ ಪ್ರಕಟವಾಗಿದ್ದು, ಅವರು 414 ಮತಗಳನ್ನು ಪಡೆದಿರುವುದು ತಿಳಿದುಬಂದಿದೆ.

ವಿಜೇತರು ಹುಬ್ಬಳ್ಳಿಯ ನೆಹರೂ ಮೈದಾನದ ಬಳಿ ಸಂಭ್ರಮಾಚರಣೆ ಮಾಡಿದರು

ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ರೋಚಕ ಕ್ಷಣಗಳು: ಚಿತ್ರಗಳನ್ನು ನೋಡಿ

ಧಾರವಾಡ ಜಿಲ್ಲೆ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ

ಮಂಟೂರ ಗ್ರಾ.ಪಂ. 1ನೇ ವಾರ್ಡ್ ಎಸ್ ಸಿ ಕ್ಷೇತ್ರದಿಂಸ ಮಹಾದೇವಿ ಹರಿಜನ, ಸಾಮಾನ್ಯ ಕ್ಷೇತ್ರದಿಂದ ಸರೋಜಾ ಹಂಚಾಟೆ ಹಾಗೂ ಬಸವರಾಜ ಭರಮಪ್ಪ ಜೀರಿಗೆ ಆಯ್ಕೆ.

ದೇವರ ಗುಡಿಹಾಳ ಪಂಚಾಯಿತಿ: ರೇವಡಿಹಾಳ ಗ್ರಾಮದ ವಾರ್ಡ್ 2ರ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಶಾಂತಾ ಈರಪ್ಪ ಚವಾಣ, ಪರಿಶಿಷ್ಟ ಪಂಗಡದಿಂದ ಮಾರುತಿ ಹನುಮಂತಪ್ಪ ಹೊಸಮನಿ ಉರುಪ್ ತಳವಾರ ಆಯ್ಕೆ

ಇಂಗಳಹಳ್ಳಿ ಗ್ರಾ.ಪಂ.: ಪರಿಶಿಷ್ಟ ಜಾತಿ ಕ್ಷೇತ್ರದಿಂದ ನೀಲವ್ವ ಕರಿಯಪ್ಪ ಹೊಸಮನಿ, ಹಿಂದುಳಿದ ಅ ವರ್ಗದಿಂದ ಶಾಂತವ್ವ ತಿಪ್ಪಣ್ಣ ಬಟಕುರ್ಕಿ ಆಯ್ಕೆ

ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇಗಾಂವ ಗ್ರಾಮ ಪಂಚಾಯಿತಿಯ ಗಿರಿಯಾಲ್ ಗ್ರಾಮದ ಅನಿಲ್ ಎಮ್ಮಿಗೆ ಹ್ಯಾಟ್ರಿಕ್ ಗೆಲುವು

ಚಿತ್ರದುರ್ಗ: ಲಾಟರಿ ಮೂಲಕ ಗೆಲುವು

ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆಡ ಗ್ರಾಮಪಂಚಾಯಿತಿಯ 241 ಮತಗಟ್ಟೆಯಲ್ಲಿ ಅಂಜು ಎಂ. ಮತ್ತು ಬಿ.ಎ.ಕ್ಷಿತಿಜಾ ತಲಾ 375 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದಾರೆ. ಅಂತಿಮವಾಗಿ ಲಾಟರಿ ಮೂಲಕ ಅಂಜು.ಎಂ. ಗೆಲುವು ದಾಖಲಿಸಿದ್ದಾರೆ.

ಯಾದಗಿರಿ: ಆಟೊ ಚಾಲಕ ಗೆಲುವು

ಯಾದಗಿರಿ: ತಾಲ್ಲೂಕಿನ ಅಲ್ಲಿಪುರ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 3ರಲ್ಲಿ ಸ್ಪರ್ಧಿಸಿದ್ದ ಆಟೊ ಚಾಲಕ ಸೋಮು ಚವ್ಹಾಣ ಅಲ್ಲಿಪುರ ವಾರಿ ತಾಂಡಾ 52 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಚಲಾವಣೆಯಾದ 712 ಮತಗಳ ಪೈಕಿ ಸೋಮು ಚವ್ಹಾಣ 382 ಮತ ಪಡೆದರೆ, ಅವರ ಎದುರಾಳಿ ವೆಂಕಟೇಶ 330 ಮತ ಪಡೆದಿದ್ದಾರೆ.

ಮರು ಮತ ಎಣಿಕೆ: ಎರಡು ಮತದ ಅಂತರದಿಂದ ಗೆಲುವು

ಚಿತ್ರದುರ್ಗ: ತಾಲ್ಲೂಕಿನ ಯಳಗೋಡು ಗ್ರಾಮ ಪಂಚಯಿತಿಯ ಬಸ್ತಿಹಳ್ಳಿ ಗ್ರಾಮದ ಅಭ್ಯರ್ಥಿ ಶಾಂತಮ್ಮ ಎಂಬುವರು ಮರು ಮತ ಎಣಿಕೆಯಲ್ಲಿ ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಶಾಂತಮ್ಮ ಅವರು 279 ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಗೌರಮ್ಮ ಅವರು 277 ಮತ ಪಡೆದು ಸೋಲು ಕಂಡರು. ಅಂಚೆ ಮತ ಎಣಿಕೆಯಲ್ಲಿ ಒಂದು ಮತ ಶಾಂತಮ್ಮ ಅವರಿಗೆ ಸಿಕ್ಕಿತು.

ಗೋಪಶಾನಿ: ಟಾಸ್ ಮೂಲಕ ಗೆಲುವು ಸಾಧಿಸಿದ ಅಭ್ಯರ್ಥಿ

ಬಾಗಲಕೋಟೆ: ಇಳಕಲ್ ತಾಲ್ಲೂಕಿನ ಗೊರಬಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಪಶಾನಿ ಗ್ರಾಮದ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಮಹಾಂತೇಶ ಲಾಟರಿ ಬಲದಿಂದ ಗೆಲುವು ಸಾಧಿಸಿದರು. ಮತ ಎಣಿಕೆಯಲ್ಲಿ ಮಹಾಂತೇಶ ಹಾಗೂ ಅವರ ಪ್ರತಿಸ್ಪರ್ಧಿ ಕಳಕಪ್ಪ ಸಮಬಲ (ತಲಾ 88 ಮತಗಳು) ಸಾಧಿಸಿದ್ದರು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಟಾಸ್ ಮೊರೆ ಹೋಗಲಾಯಿತು. ಈ ವೇಳೆ ಮಹಾಂತೇಶ ಗೆಲುವಿನ ನಗೆ ಬೀರಿದರು.

ಓತಗೇರಿ ಗ್ರಾಮ ಪಂಚಾಯ್ತಿ: ತಾಯಿ-ಮಗ ಗೆಲುವು

ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ  ತಾಯಿ-ಮಗ ಇಬ್ಬರೂ ಗೆಲುವಿನ ನಗೆ ಬೀರಿದರು. ಇಳಕಲ್ ತಾಲ್ಲೂಕಿನ ಓತಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋನಾಳ ಗ್ರಾಮದ  ಹನಮವ್ವ ಕುರಿ ಹಾಗೂ ದೊಡ್ಡಪ್ಪ ಕುರಿ ಗೆಲುವು ಸಾಧಿಸಿದವರು. ನಾವಿಬ್ಬರೂ ಬಿಜೆಪಿ ಬೆಂಬಲಿತರು ಎಂದು ಗೆಲುವಿನ ನಂತರ ಅಮ್ಮ- ಮಗ ಹೇಳಿಕೊಂಡರು.

ತಿಪಟೂರು: ಲಾಟರಿ ಮೂಲಕ ಗೆದ್ದ ಓಂಕಾರ ಮೂರ್ತಿ

ತಿಪಟೂರು ತಾಲ್ಲೂಕಿನ ಕರಡಿ ಪಂಚಾಯಿತಿಯ ರಾಮೇನಹಳ್ಳಿ 2 ಕ್ಷೇತ್ರದ  ಹಿಂದುಳಿದ ವರ್ಗ- ಬಿ ಅಭ್ಯರ್ಥಿ  ಓಂಕಾರಮೂರ್ತಿ ಹಾಗೂ ಪಾಲಕ್ಷಯ್ಯ ನಡುವೆ ಡ್ರಾ ಅಗಿದ್ದು ಇಬ್ಬರು 194  ಮತಗಳನ್ನು ತೆಗೆದುಕೊಂಡಿದ್ದರು. ನಂತರ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಓಂಕಾರಮೂರ್ತಿ ಜಯಗಳಿಸಿದ್ದಾರೆ.

ಮಂಡ್ಯ: ಬೂಕನಕೆರೆ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಲಾಟರಿ ಮೂಲಕ ಜಯ

ಒಂದು ಮತದ ಅಂತರದಿಂದ ಗೆಲುವು

ಚಿತ್ರದುರ್ಗ: ತಾಲ್ಲೂಕಿನ ಯಳಗೋಡು ಗ್ರಾಮ ಪಂಚಯಿತಿಯ ಬಸ್ತಿಹಳ್ಳಿ ಗ್ರಾಮದ ಅಭ್ಯರ್ಥಿ ಶಾಂತಕುಮಾರ್ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು. ಶಾಂತಕುಮಾರ್ ಅವರು 278 ಮತಗಳನ್ನು ಪಡೆದಿದ್ದಾರೆ. 277 ಮತ ಪಡೆದ ಅಭ್ಯರ್ಥಿ ಸೋಲು ಕಂಡಿದ್ದಾರೆ.

ಹಾಸನ: ಸೊಸೆಯ ಸೋಲಿಸಿದ ಅತ್ತೆ

ಹಾಸನ: ತಾಲ್ಲೂಕಿನ ಹೆರಗು ಗ್ರಾಮ ಪಂಚಾಯಿತಿಯ ಎಚ್. ಭೈರಾಪುರ ಗ್ರಾಮದಿಂದ  ಸ್ಪರ್ಧಿಸಿದ್ದ ಅತ್ತೆ ಸೊಂಬಮ್ಮ ಅವರು ಮೂರು ಮತಗಳ ಅಂತರದಿಂದ ಸೊಸೆ ಪವಿತ್ರರನ್ನ ಸೋಲಿಸಿದ್ದಾರೆ. ಸೊಂಬಮ್ಮಗೆ 276 ಮತ, ಪವಿತ್ರ 273 ಮತ ಪಡೆದಿದ್ದಾರೆ. ಬೇಲೂರು ತಾಲ್ಲೂಕಿನ ‌ಕೋಡಿಹಳ್ಳಿ ಗ್ರಾಮ ಪಂಚಾಯಿತಿಯಿಂದ ಸ್ಪರ್ಧಿಸಿದ್ದ  ಕುಮಾರ್ ಅವರು ಸೋಲಿನಿಂದ ಕಣ್ಣೀರಿಟ್ಟರು. ಬೆಂಬಲಿಗರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ಹೊನ್ನಕಿರಣಗಿ: ಮೂವರು ಗೆಲುವು

ಕಲಬುರ್ಗಿ: ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮ ಪಂಚಾಯಿತಿ ಮೊದಲ ವಾರ್ಡ್ ನಿಂದ ಮಲ್ಲಿನಾಥ  ತುಪ್ಪದ-341, ಮಲ್ಲಿಕಾರ್ಜುನ ‌ಅಳ್ಳೊಳ್ಳಿ-394, ಮೋನಮ್ಮ ಭಜಂತ್ರಿ-303 ಮತಗಳನ್ನು ಪಡೆದು ಆಯ್ಕೆಯಾದರು.

ನಂದೂರ (ಕೆ)ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಮೂವರಿಗೆ ಗೆಲುವು

ಕಲಬುರ್ಗಿ: ತಾಲ್ಲೂಕಿನ ನಂದೂರ (ಕೆ) ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್‌ನಿಂದ ಸೀತಾಬಾಯಿ ರಾಠೋಡ 282, ಗೀತಾ ರವಿ ಪವಾರ 279 ಹಾಗೂ ಗಂಗಾಧರ ಸಾವಕಾರ 255 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಮೂವರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು.

ಮಡಿಕೇರಿ: ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಎಮ್ಮೆಗುಂಡಿ ಕ್ಷೇತ್ರದ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಗೆಲುವು

ಕರ್ನಾಟಕ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ: ಸ್ವಾರಸ್ಯಕರ ಅಂಶಗಳು

ಇಜೇರಿ ಗ್ರಾ.ಪಂ: ಇಬ್ಬರು ಗೆಲುವು

ಕಲಬುರ್ಗಿ: ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್ ನಿಂದ ಅಣ್ಣಾರಾಯ ಗೊಲ್ಲಾಳಪ್ಪ 578 ಹಾಗೂ ದೇವಿಂದ್ರ ನಿಂಗಣ್ಣ 464 ಮತಗಳನ್ನು ಪಡೆದು ಆಯ್ಕೆಯಾದರು.

ಹೊಸಪೇಟೆಯಲ್ಲಿ ಲಘುಲಾಠಿ ಪ್ರಹಾರ

ಹೊಸಪೇಟೆಯಲ್ಲಿ ಎರಡನೇ ಹಂತದ ಮತ ಎಣಿಕೆ ಸಂದರ್ಭದಲ್ಲಿ ಶಾಲಾಮುಂಭಾಗದಲ್ಲಿ ನೆರೆದಿದ್ದ ಜನಸ್ತೋಮದಲ್ಲಿ ನೂಕಾಟ ಉಂಟಾಯಿತು. ಗುಂಪನ್ನು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಲಘುಲಾಠಿ ಪ್ರಯೋಗ ನಡೆಸಿದರು. ಈ ವೇಳೆ ಪೊಲೀಸರೊಂದಿಗೆ ವಾದಕ್ಕಿಳಿದ ವ್ಯಕ್ತಿಯೋರ್ವನನ್ನು ಡಿವೈಎಸ್ಪಿ ರಘುಕುಮಾರ್ ಕಪಾಳಮೋಕ್ಷ ಮಾಡಿ ಬಂಧಿಸಿದರು.

ಗಂಡನಿಗೆ ಗೆಲುವು, ಹೆಂಡತಿಗೆ ಸೋಲು

ಕೂಡ್ಲಿಗಿ: ಗುಂಡುಮುಣು ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ 1ರಲ್ಲಿ ಗಂಡ ಗೆದ್ದು ಹೆಂಡತಿ ಸೋತಿದ್ದಾರೆ. ಎರಡು ಸ್ಥಾನಗಳಿದ್ದ ಕ್ಷೇತ್ರದಲ್ಲಿ ಒಂದು ಸಾಮಾನ್ಯಕ್ಕೆ ಹಾಗೂ ಒಂದು ಸ್ಥಾನ ಎಸ್ಟಿಗೆ ಮೀಸಲಾಗಿತ್ತು. ಇದರಲ್ಲಿ ಶ್ರೀಕಾಂತ 314 ಪಡೆದು ಗೆಲವು ಕಂಡಿದ್ದು, ಅವರ ಪತ್ನಿ ಲಕ್ಷ್ಮೀದೇವಿ 283 ಸೋತಿದ್ದಾರೆ. ಇನ್ನೊಬ್ಬ ಅಭ್ಯರ್ಥಿ ಚಂದ್ರಗೌಡ 314 ಮತ ಪಡೆದು ಗೆಲವು ಪಡೆದಿದ್ದಾರೆ. ಅಜ್ಜಯ್ಯ 279 ಚಂದ್ರಗೌಡ ವಿರುದ್ದ ಸೋತಿದ್ದಾರೆ

ಎಜೆಂಟರ್, ಅಭ್ಯರ್ಥಿಗಳು ತಂದಿದ್ದ ನಿಂಬೆಹಣ್ಣು ವಶ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ನಡೆಯುತ್ತಿರುವ ಮತ ಎಣಿಕೆಗೆ ಅಭ್ಯರ್ಥಿಗಳು, ಎಜೆಂಟರ್ ತಂದಿದ್ದ ನಿಂಬೆ ಹಣ್ಣುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಿಎಸ್‌ವೈ ತವರು ಬೂಕನಕೆರೆ ಫಲಿತಾಂಶ ಡ್ರಾ

ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ಸಮ ಮತ ಪಡೆದ ಅಭ್ಯರ್ಥಿಗಳು. ತಲಾ 183 ಮತ ಗಳಿಸಿದ ಅಭ್ಯರ್ಥಿಗಳು. ಲಾಟರಿ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜಳಾ ಗೆಲುವು. ಲಾಟರಿ ಮೂಲಕ ಆಯ್ಕೆ ಮಾಡಿದ ಅಧಿಕಾರಿಗಳು.

ಟಾಸ್ ಮಾಡಿ ಫಲಿತಾಂಶ ಪ್ರಕಟ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ  ಹೆಬ್ಬಾಳ ಗ್ರಾಮ ಪಂಚಾಯಿತಿ ಎರಡನೇ ವಾರ್ಡಿನ ಇಬ್ಬರು ಅಭ್ಯರ್ಥಿಗಳಿಗೆ 311 ಸಮನಾದ ಮತಗಳು ಬಂದ ಕಾರಣ ಟಾಸ್ ಮಾಡಿ ಫಲಿತಾಂಶ ಪ್ರಕಟಿಸಲಾಯಿತು. ಟಾಸ್ ಗೆದ್ದ ಶ್ರೀಶೈಲ ಹಿಪ್ಪರಗಿ ಆಯ್ಕೆಯಾದರು.  ಸಮಮತ ಪಡೆದು, ಟಾಸ್ ನಲ್ಲಿ ಸೋತ ಅಭ್ಯರ್ಥಿ ರಾವುತಪ್ಪ ಆಲೂರಗೆ ಸೋಲಾಯಿತು.

ಒಂದೇ ಮತದಲ್ಲಿ ರೋಚಕ ಗೆಲುವು

ಗಂಗಾವತಿ: ತಾಲ್ಲೂಕಿನ 18 ಗ್ರಾಮ ಪಂಚಾಯಿತಿಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜಿನಹಳ್ಳಿ ಗ್ರಾಮದ ರಾಣಿ ನಾಗೇಂದ್ರ ಎನ್ನುವವರು ಕೇವಲ ಒಂದು ಮತದಿಂದ ರೋಚಕ ಗೆಲುವು ದಾಖಲಿಸಿದ್ದಾರೆ. 

ಚುನಾವಣಾ ಅಧಿಕಾರಿ ಅಸ್ವಸ್ಥ: ಆಸ್ಪತ್ರೆಗೆ ರವಾನೆ

ರಾಯಚೂರು: ಮತೆ ಎಣಿಕೆ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಅಸ್ವಸ್ಥರಾಗಿದ್ದರಿಂದ ಕೂಡಲೇ‌ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು. ಕಲ್ಮಲಾ ಗ್ರಾಮ ಪಂಚಾಯಿತಿ ಮತಗಟ್ಟೆ ಅಧಿಕಾರಿ ಚಂದ್ರಶೇಖರ್ ಅಸ್ವಸ್ಥರಾದ ಅಧಿಕಾರಿ. ಗ್ಯಾಸ್ಟಿಕ್ ಸಮಸ್ಯೆ ಇದ್ದು, ಬೆಳಿಗ್ಗೆಯಿಂದ ಉಪಹಾರ ಸೇವಿಸದೆ ಇರುವುದು ಅಸ್ವಸ್ಥತೆಗೆ ಕಾರಣವಾಗಿದೆ.

ತುಮಕೂರು: ಒಂದು ಮತದ ಗೆಲುವು

ತುಮಕೂರು ತಾಲ್ಲೂಕಿನ ಬುಗಡನಹಳ್ಳಿ ಗ್ರಾ.ಪಂ. ಹನುಮಂತಪುರ ಕ್ಷೇತ್ರದ ಟಿ.ವಿ.ಶಿವಕುಮಾರ್ 163 ಮತ ಪಡೆದರೆ ಪ್ರತಿಸ್ಪರ್ಧಿ ಕೃಷ್ಣಪ್ಪ 162 ಮತಪಡೆದಿದ್ದಾರೆ.‌ ಒಂದು ಮತದ ಅಂತರದಿಂದ ಶಿವಕುಮಾರ್ ಜಯಗಳಿಸಿದರು.

ಹುಬ್ಬಳ್ಳಿ: ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬುಧವಾರ ಭೇಟಿ ನೀಡಿದರು. 

ಹುಬ್ಬಳ್ಳಿ: ಪ್ರತ್ಯೇಕವಾಗಿ ಮತ ಎಣಿಕೆ ಮಾಡಲು ಅಭ್ಯರ್ಥಿಗಳ ಪಟ್ಟು

ಹುಬ್ಬಳ್ಳಿ: ಸಾಮಾಜಿಕ ಅಂತರ ಇಲ್ಲ, ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆ, ಒಂದೇ ಕೊಠಡಿಯಲ್ಲಿ 45ರಿಂದ 50 ಜನರ ಜಮಾವಣೆ ಮಾಡಲಾಗಿದೆ. ಹಾಗಾಗಿ, ಪ್ರತ್ಯೇಕವಾಗಿ ಮತ ಎಣಿಕೆ ಮಾಡಬೇಕು ಎಂದು ಆಗ್ರಹಿಸಿ, ಅಭ್ಯರ್ಥಿಗಳು ಹಾಗೂ ಏಜೆಂಟರು ಎಣಿಕೆ ಕೇಂದ್ರದಿಂದ ಹೊರ ನಡೆದರು. ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಹಾಗೂ ಶಿರಗುಪ್ಪಿ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳು ಹಾಗೂ ಏಜೆಂಟರು ಹೀಗೆ ನಡೆದರು.

ತಂಬ್ರಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಬಣಕಾರ ಬಸಮ್ಮ

ಹನಸಿ ಕ್ಷೇತ್ರ: ಗಂಗಾಧರಯ್ಯ ನಾಲ್ಕನೆ ಬಾರಿಗೆ ಗೆಲವು.

ಹಗರಿಬೊಮ್ಮನಹಳ್ಳಿ: ತಾಲೂಕಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಹನಸಿ ಗ್ರಾಪಂ ನಾಲ್ಕನೇಯ ಕ್ಷೇತ್ರ ದಿಂದ ಹಿರಿಯ ನಾಯಕ ಎಎಂ.ಗಂಗಾಧರಯ್ಯ ನಾಲ್ಕನೆ ಬಾರಿಗೆ ವಿಜಯದ ನಗೆ ಬೀರಿದ್ದಾರೆ. ಈ ಕ್ಷೇತ್ರದಲ್ಲಿ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಭಾರೀ ಹಣಾಹಣಿಯಲ್ಲಿ ಅಂತಿಮವಾಗಿ ಗಂಗಾಧರಯ್ಯ 251 ಮತಗಳನ್ನು ಗಳಿಸಿ ತಮ್ಮ ಎದುರಾಳಿ ಶಿವಕುಮಾರಗೌಡರನ್ನು 36 ಮತಗಳಿಂದ ಸೋಲಿಸಿದರು. ಪರಾಜಿತ ಅಭ್ಯರ್ಥಿ ಶಿವಕುಮಾರಗೌಡರಿಗೆ 215 ಮತ ಹಾಗೂ 14 ಮತಗಳು ತಿರಸ್ಕರಿಸಲ್ಪಟ್ಟವು.

ಹಂಪಾದೇವನಹಳ್ಳಿ ಕೊರವರ ಈರಣ್ಣ 6ಮತಗಳ ಅಂತರದಿಂದ ಗೆಲುವು. ಒಟ್ಟು 168 ಮತ ಪಡೆದಿದ್ದಾರೆ.

ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು 6ನೇ ಕ್ಷೇತ್ರದ ಗುಂಡ್ರಾಣಿ ಮಾರೆಮ್ಮ ಗೆಲುವು.

ಹೂವಿನಹಡಗಲಿ ತಾಲ್ಲೂಕು ಪಶ್ಚಿಮ ಕಾಲ್ವಿ ಗ್ರಾ.ಪಂ. ಸಾಣ್ಯಾನಾಯ್ಕ, ಕೊಂಬಳಿ ಗ್ರಾ.ಪಂ. ಕೆ. ಸುಭಾನ್ ಸಾಬ್, ದೇವಗೊಂಡನಹಳ್ಳಿ ಗ್ರಾ.ಪಂ. ಕೆ.ದೇವರಾಜ, ಹೊಳಗುಂದಿ ಗ್ರಾ.ಪಂ. ಎ.ರಮೇಶ ಚುನಾಯಿತರಾಗಿದ್ದಾರೆ.

ಶಿರಸಿ: ತಿರಸ್ಕೃತ ಮತ ಪರಿಶೀಲನೆಯಲ್ಲಿ ಗೆದ್ದ ಅಭ್ಯರ್ಥಿ

ಶಿರಸಿ: ತಾಲ್ಲೂಕಿನ ವಾನಳ್ಳಿ ಗ್ರಾಮ ಪಂಚಾಯ್ತಿಯ ಗೋಣಸರ ವಾರ್ಡಿನಲ್ಲಿ ವೀಣಾ ಗೌಡ ತಿರಸ್ಕೃತ ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದರು. ಹಿಂದುಳಿದ ಅ ವರ್ಗ ಮಹಿಳೆ ಮೀಸಲು ಸ್ಥಾನಕ್ಕೆ ನಡೆದಿದ್ದ ಸ್ಪರ್ಧೆಯಲ್ಲಿ ಪಾರ್ವತಿ ಗೌಡ ಹಾಗೂ ವೀಣಾ ಗೌಡ 127 ಮತ ಪಡೆದಿದ್ದರು. ಈ ವೇಳೆ ತಿರಸ್ಕೃತಗೊಂಡಿದ್ದ ಮತಗಳನ್ನು ಮರುಪರಿಶೀಲಿಸಲಾಯಿತು. ವೀಣಾ ಗೌಡ ಅವರು ಪಡೆದಿದ್ದ ಆಟೊ ಚಿಹ್ನೆಗೆ ಮತದ ಮುದ್ರೆಯ ಅಲ್ಪ ಭಾಗ ತಾಗಿಕೊಂಡಿದ್ದರಿಂದ ಅದನ್ನು ಗೆಲುವಿಗೆ  ಪರಿಗಣಿಸಲಾಯಿತು.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕು ತೆಲಗಿ ಗ್ರಾ.ಪಂ 2ನೇ ವಾರ್ಡಿನ ಎರಡು ಸ್ಥಾನಗಳ ಫಲಿತಾಂಶ ಪ್ರಕಟ.

ಸಾಮಾನ್ಯ ಮಹಿಳೆ ಮೀಸಲಾದ ಸ್ಥಾನಕ್ಕೆ ಸುವರ್ಣಾ ಬಿರಾದಾರ 282 ಮತಗಳು ಪಡೆದು ಗೆಲುವು ಸಾಧಿಸಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಮಲ್ಲೇಶಪ್ಪ ಹಂಡಗಿ 348 ಮತಗಳು ಪಡೆದು ಗೆಲುವು ಸಾಧಿಸಿದ್ದಾರೆ.

ಮಧುಗಿರಿ ತಾಲ್ಲೂಕು ಬಿದರಕೆರೆ ಕಾವಲ್ ಕ್ಷೇತ್ರದಿಂದ ಗೌರಮ್ಮ ಒಂದು ಮತದಿಂದ ಜಯಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಮಂಜುಳ 114 ಮತ ಪಡೆದಿದ್ದಾರೆ. ಗೌರಮ್ಮ 115 ಮತ ಪಡೆದಿದ್ದಾರೆ.

ತುಮಕೂರು: ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಗಂಗಾ ಮತಗಟ್ಟೆಯ ಮತ ಎಣಿಕೆ ಪೂರ್ಣ, ಕೃಷ್ಣಪ್ಪ ಎರಡು ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ 2ನೇ ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಆನೇಕಲ್ ದೊಡ್ಡಬಸಪ್ಪ, ಬಣಕಾರ ಬಸಮ್ಮ ಗೆಲುವು

ತುಂಗಾ ಕಾಲುವೆಗೆ ಕಾರು ಉರುಳಿ ಗ್ರಾಮ ಪಂಚಾಯಿತಿ ಅಭ್ಯರ್ಥಿಯ ಪುತ್ರ ಗಂಭೀರ

ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಹೃದಯಾಘಾತದಿಂದ ಸಾವು

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮತ‌ ಎಣಿಕೆ ಕೇಂದ್ರದ ಅಧಿಕಾರಿ ಬೋರೇಗೌಡ (52) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮ ಪಂಚಾಯಿತಿ ಅರವಳ್ಳಿ ವಾರ್ಡ್ ಅಭ್ಯರ್ಥಿ ದಾನವ್ವ ನಾಗಪ್ಪ ಛಬ್ಬಿ ಗೆಲುವು ಸಾಧಿಸಿದ್ದಾರೆ.

ಶಿರಸಿ ತಾಲ್ಲೂಕಿನ ಭೈರುಂಬೆ ಗ್ರಾಮ ಪಂಚಾಯ್ತಿಯ ಭೈರುಂಬೆ ವಾರ್ಡಿನಲ್ಲಿ ಎಂ.ಟೆಕ್ ಪದವೀಧರ ಕಿರಣ್ ಭಟ್ಟ ಗೆಲುವು ಸಾಧಿಸಿದರು.

ಕೊಟ್ಟೂರು ತಾಲ್ಲೂಕಿನ ಕುರುಬನಹಳ್ಳಿ ಮತಗಟ್ಟೆಯ ಪರಿಶಿಷ್ಟ ಜಾತಿಯ ಗೌರಮ್ಮ 22 ಮತಗಳ ಅಂತರದಿಂದ ಗೆಲುವು ದಾಖಲಿಸಿದರು.

ಕಾರವಾರ: ಎಲ್ಲೆಲ್ಲಿ ಯಾರ್‍ಯಾರಿಗೆ ಗೆಲುವು?

ಕಾರವಾರ ತಾಲ್ಲೂಕಿನ ವೈಲವಾಡ ಗ್ರಾಮ  ಪಂಚಾಯಿತಿಯ ಖಾರ್ಗಜೂಗದಲ್ಲಿ ರಾಜೇಶ್  ಸುಧಾಕರ ನಾಯ್ಕ, ಕೆರವಡಿ ಗ್ರಾಮ ಕಡಿಯೆ ಕ್ಷೇತ್ರದಲ್ಲಿ ಬಾಲಚಂದ್ರ ನಾರಾಯಣ ಕಾಮತ್, ಮುಡಗೇರಿ ಗ್ರಾಮದ ಅಂಗಡಿ ಕ್ಷೇತ್ರದಿಂದ  ಸುರೇಂದ್ರ ಗಾಂವಕರ್ ಜಯ ಸಾಧಿಸಿದ್ದಾರೆ.

ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಮಲ್ಲಾಪುರದ ದೇವಗಿರಿಯಲ್ಲಿ ನಿಕಟಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ  ಚಂದ್ರಶೇಖರ  ಗಣಪತಿ  ಬಾಂದೇಕರ್ ಮತ್ತೊಮ್ಮೆ ಗೆಲುವು ಕಂಡಿದ್ದಾರೆ. ಕೈಗಾದಲ್ಲಿ ಸುಜಾತಾ  ಶಾಂತಾರಾಮ ಕುಣಬಿ, ಕುಚೇಗಾರ್ ನಲ್ಲಿ ಸಂತೋಷ ಪ್ರಕಾಶ ದೇವಳಿ ಗೆ‌ದ್ದಿದ್ದಾರೆ.

ಭಟ್ಕಳ ತಾಲ್ಲೂಕಿನ ಹಾಡುವಳ್ಳಿ ಗ್ರಾಮ ಪಂಚಾಯಿತಿಯ ಕೆಕ್ಕೋಡ್ ವಾರ್ಡ್‌ನಲ್ಲಿ ನಾರಾಯಣ ಮರಾಠಿ ಮೂರು ಮತಗಳ ಅಂತರದಲ್ಲಿ  ಜಯ ಸಾಧಿಸಿದ್ದಾರೆ. ಕಾಯ್ಕಿಣಿ ಪಂಚಾಯಿತಿಯಲ್ಲಿ ಶಬರೀಷ 230 ಮತಗಳಿಂದ, ಕೊಣಾರ್ ಗ್ರಾಮ ಪಂಚಾಯಿತಿಯ ಹದ್ಲೂರ್ ವಾರ್ಡಿನ ನಾಗಪ್ಪ ಗೊಂಡ 11 ಮತಗಳಿಂದ ಗೆದ್ದಿದ್ದಾರೆ.

ತಿಪಟೂರಿನಲ್ಲಿ ಇನ್ನೂ ಆರಂಭವಾಗದ ಮತ ಎಣಿಕೆ

ತುಮಕೂರು: ಜಿಲ್ಲೆಯ ತಿಪಟೂರಿನಲ್ಲಿ ಮತ ಎಣಿಕೆ ಇನ್ನೂ ಆರಂಭವಾಗಿಲ್ಲ. ಅಭ್ಯರ್ಥಿಗಳು ಏಟೆಂಟರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಆಗುತ್ತಿದೆ.

ಕಿತ್ತೂರು (ಬೆಳಗಾವಿ): ಮೊದಲ ಫಲಿತಾಂಶ ಘೋಷಣೆ.

ದೇಗಾವಿ ಗ್ರಾಮ ಪಂಚಾಯಿತಿ 6ನೇ ವಾರ್ಡಿನಲ್ಲಿ ಚನ್ನಾಪುರ ಗ್ರಾಮದ ಕಿರಣ್ ವಾಲಿಕಾರ್ 206 ಮತ ಪಡೆದು ಆಯ್ಕೆ. ಪ್ರತಿಸ್ಪರ್ಧಿಗಳಿಗೆ 18, 29 ಮತಗಳು ಮಾತ್ರ ಬಿದ್ದಿವೆ.

ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಸೇರಿರುವ ಜನ

ಚಾಮರಾಜನಗರದಲ್ಲಿ ಪೊಲೀಸರೊಂದಿಗೆ ಅಭ್ಯರ್ಥಿಗಳ ಮಾತಿನ ಚಕಮಕಿ

ಚಾಮರಾಜನಗರ: ಮತ ಎಣಿಕೆ ಕೇಂದ್ರ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪಾಸ್ ವಿಚಾರಕ್ಕೆ ಪೊಲೀಸರೊಂದಿಗೆ ಅಭ್ಯರ್ಥಿಗಳು ಮತ್ತು ಏಜೆಂಟರ ಮಾತಿನ ಚಕಮಕಿ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಅಭ್ಯರ್ಥಿಗಳು ಏಜೆಂಟರಿಂದ ದಿಢೀರ್ ಪ್ರತಿಭಟನೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಧಿಕ್ಕಾರ ಕೂಗಿದ ಏಜೆಂಟ್ ಹಾಗೂ ಅಭ್ಯರ್ಥಿಗಳು. ಸಬ್ ಇನ್‌ಸ್ಪೆಕ್ಟರ್ ಕ್ಷಮೆ ಕೇಳಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

ದಾವಣಗೆರೆಯಲ್ಲಿ ನಿಧಾನಗತಿಯಲ್ಲಿ ಮತ ಎಣಿಕೆ

ದಾವಣಗೆರೆ: ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಿಗೆ ಸದಸ್ಯರ ಆಯ್ಕೆಗಾಗಿ ಮತ ಎಣಿಕೆ ಬುಧವಾರ ಆರಂಭಗೊಂಡಿದೆ. ನಿಧಾನಗತಿಯಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 2583 ಸ್ಥಾನಗಳಲ್ಲಿ 374 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 9 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. 2200 ಸದಸ್ಯರ ಆಯ್ಕೆಗೆ ಮತ ಎಣಿಕೆಯಾಗುತ್ತಿದೆ.

ಮೈಸೂರು ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

ಮತ ಎಣಿಕೆ ನಡೆಯುತ್ತಿರುವ ಮೈಸೂರು ನಗರದ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಕಾಲೇಜಿನ ಬಳಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲ್ಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ‌ಆರಂಭವಾಗಿದೆ. ಮತ ಕೇಂದ್ರಗಳ ಸಮೀಪ ಅಭ್ಯರ್ಥಿಗಳ ಬೆಂಬಲಿಗರು ಬಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ರಾಮನಗರ: ಮತ ಎಣಿಕೆ ಕಾರ್ಯ ಬಿರುಸು

ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ 118 ಗ್ರಾ.ಪಂ.ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಬಿರುಸಾಗಿ ನಡೆದಿದೆ. ಒಟ್ಟು 1160 ಕ್ಷೇತ್ರಗಳಿಂದ 4266 ಅಭ್ಯರ್ಥಿಗಳು ಕಣದಲ್ಲಿ ಇದ್ದರು. 325 ಮತ ಎಣಿಕೆ ಕಾರ್ಯ ನಡೆದಿದ್ದು, 1200ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ.

ರಾಯಚೂರು: ಎಸ್ ಆರ್ ಪಿಯು ಕಾಲೇಜಿನಲ್ಲಿ ಮತ ಎಣಿಕೆ

ರಾಯಚೂರು: ನಗರದ ಎಸ್ ಆರ್ ಪಿಯು ಕಾಲೇಜಿನಲ್ಲಿ ಮತಗಳ ಎಣಿಕೆ ಆರಂಭವಾಗಿದೆ.

ನೋಡಲ್‌ ಅಧಿಕಾರಿ ಸಿದ್ದಲಿಂಗಯ್ಯ ಹಿರೇಮಠ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ಎಣಿಕೆ ಮೇಜುಗಳಿಗೆ ತೆಗೆದುಕೊಂಡು ಹೋಗಲಾಯಿತು.
ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ: ಜಿಲ್ಲೆಯ 6 ಕಡೆ ಮತ ಎಣಿಕೆ ಆರಂಭ

ಯಾದಗಿರಿ: ಎರಡೂ ಹಂತದ ಗ್ರಾಮ ಪಂಚಾಯಿತಿ ಮತ ಎಣಿಕೆ ಜಿಲ್ಲೆಯ 6 ತಾಲ್ಲೂಕು ಕೇಂದ್ರಗಳಲ್ಲಿ ಆರಂಭವಾಗಿದೆ.

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್, ವಡಗೇರಾ ತಾಲ್ಲೂಕುಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

115 ಗ್ರಾಮ ಪಂಚಾಯಿತಿಗಳ 4,536 ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ.

ಜಿಲ್ಲೆಯಲ್ಲಿ 969 ಸಿಬ್ಬಂದಿಯನ್ನು ಮತ ಎಣಿಕೆಗಾಗಿ ನೇಮಕ ಮಾಡಲಾಗಿದೆ.

284 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಗಾಗಿ ಕಲ್ಪಿಸಲಾಗಿದೆ. ಅಭ್ಯರ್ಥಿಗಳು, ಎಜೆಂಟರ್ ಕಾಲೇಜು ಆವರಣದಲ್ಲಿ ಜಮಾಯಿಸಿದ್ದಾರೆ. 

ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಬೆಂಬಲಿತರಿಗೆ ತಲಾ ಒಂದೊಂದು ಸ್ಥಾನ

- ಹಗರಿಬೊಮ್ಮನಹಳ್ಳಿಯ ತಂಬ್ರಹಳ್ಳಿ ಗ್ರಾಮ ಪಂಚಾಯತಿ ಐದನೇ ವಾರ್ಡ್ ನ ಬಂಡಿಕ್ಯಾಂಪ್ ನ ಬಿಜೆಪಿ ಬೆಂಬಲಿತ ಏಣಿಗಿ ಪೂರ್ಣಿಮಾ ಗೆಲುವು.

- ಸೊನ್ನ ಗ್ರಾಮ ಪಂಚಾಯತಿ ಸಕ್ರಹಳ್ಳಿಯ ಕಾಂಗ್ರೆಸ್ ಬೆಂಬಲಿತ ದೇವಣ್ಣರ ದೇವಪ್ಪ ಗೆಲುವು

- ಕೂಡ್ಲಿಗಿ ತಾಲ್ಲೂಕಿನ ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿಯ ಡಿ.ಸಿದ್ದಾಪುರದ ಏಕಾ ಸದಸ್ಯ ಸ್ಥಾನದ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಫಲಿತಾಂಶ ಪ್ರಕಟ ಬಾಕಿ ಇದೆ. ಪುಷ್ಪವತಿ171 ಹಾಗೂ ಪಿ.ವಿ. ಲಕ್ಷ್ಮೀಬಾಯಿ ಬಾಸ್ಕರ್214 ಮತಗಳನ್ನು ಪಡೆದಿದ್ದಾರೆ.

ತುಮಕೂರು: 762 ಟೇಬಲ್‌ಗಳಲ್ಲಿ ಮತ ಎಣಿಕೆ

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಆರಂಭವಾಗಿದೆ. ಒಟ್ಟು 167 ಕೊಠಡಿಗಳಲ್ಲಿ 762 ಟೇಬಲ್‌ಗಳಲ್ಲಿ ಎಣಿಕೆ ನಡೆಯುತ್ತಿದೆ. 817 ಎಣಿಕೆ ಮೇಲ್ವಿಚಾರಕರು ಮತ್ತು 1,624 ಮಂದಿ ಸಹಾಯಕರು ಈ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಬೀದರ್‌ನ ಮತ ಎಣಿಕೆ ಕೇಂದ್ರದ ಮುಂದೆ ಸೇರಿರುವ ಜನ

ಕೊಪ್ಪಳದಲ್ಲಿ ಮತ ಎಣಿಕೆ ಆರಂಭ

ಕೊಪ್ಪಳ: ಜಿಲ್ಲೆಯಾದ್ಯಂತ ಬೆಳಿಗ್ಗೆ 8 ರಿಂದ ಮತ ಎಣಿಕೆ ಆರಂಭವಾಗಿದೆ. ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಕನಕಗಿರಿ, ಕಾರಟಗಿ, ಕುಕನೂರ ಸೇರಿದಂತೆ ಜಿಲ್ಲೆಯಲ್ಲಿ 7 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 478 ಮತ ಎಣಿಕೆ ಟೇಬಲ್ ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಆರು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಿಗದಿಯಂತೆ ಬೆಳಿಗ್ಗೆ 8ಕ್ಕೆ ಆರಂಭವಾಗಿದೆ.

ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆರಂಭವಾಗಿದೆ.

ಚಾಮರಾಜನಗರದಲ್ಲಿ ಮತ ಎಣಿಕೆ ಆರಂಭ

ಚಾಮರಾಜನಗರ ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳ ಮತ ಎಣಿಕೆ ಕಾರ್ಯ 14 ಕೇಂದ್ರಗಳಲ್ಲಿ ಎಂಟು ಗಂಟೆಗೆ ಆರಂಭಗೊಂಡಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಿತು. ಈಗ ಮತಮತ್ರಗಳ ಎಣಿಕೆ ಆರಂಭವಾಗಿದೆ.

ಧಾರವಾಡ: ಗ್ರಾಮ ಪಂಚಾಯ್ತಿ ಚುನಾವಣೆಗಳ ಮತ ಏಣಿಕೆ ಕಾರ್ಯ ಆಯಾ ತಾಲ್ಲೂಕಿನ ನಿಗದಿತ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ

ದಕ್ಷಿಣ ಕನ್ನಡ: ಮತ ಎಣಿಕೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ 7 ತಾಲ್ಲೂಕುಗಳ 220 ಗ್ರಾಮ ಪಂಚಾಯಿತಿಗಳ  3181 ಸ್ಥಾನಗಳಿಗೆ ಮತ ಎಣಿಕೆ ಆರಂಭವಾಗಿದೆ. ಆಯಾ ತಾಲ್ಲೂಕುಗಳಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು,  7,275 ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. 91 ಮಂದಿ ಈಗಾಗಲೇ ಅವಿರೋಧ ಆಯ್ಕೆ ಆಗಿದ್ದಾರೆ. 

ಬೀದರ್: ಮತ ಎಣಿಕೆ ಆರಂಭ

ಬೀದರ್ ಜಿಲ್ಲೆಯ ಆರು ತಾಲ್ಲೂಕು  ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳ ಮತ ಎಣಿಕೆ ಕಾರ್ಯ ಏಕಕಾಲಕ್ಕೆ ಬೆಳಿಗ್ಗೆ  8 ಗಂಟೆಗೆ ಆರಂಭವಾಗಿದೆ.

ಕಲಬುರ್ಗಿ: 11 ತಾಲ್ಲೂಕುಗಳಲ್ಲಿ ಮತ ಎಣಿಕೆ ಆರಂಭ

ಕಲಬುರ್ಗಿ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಏಕಕಾಲಕ್ಕೆ ಆರಂಭವಾಗಿದೆ. ಒಟ್ಟು 530 ಮತ ಎಣಿಕೆ ಟೇಬಲ್ ಗಳನ್ನು ಹಾಕಲಾಗಿದ್ದು, ಪ್ರತಿ ಟೇಬಲ್ ಗಳಿಗೆ ಒಬ್ಬರು ಮೇಲ್ವಿಚಾರಕರು, ಇಬ್ಬರು ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ.

ವಿಜಯಪುರದಲ್ಲಿ ಮತ ಎಣಿಕೆ ಆರಂಭ

ವಿಜಯಪುರ ಜಿಲ್ಲೆಯಾದ್ಯಂತ ಬೆಳಿಗ್ಗೆ 8 ರಿಂದ ಮತ ಎಣಿಕೆ ಆರಂಭವಾಗಿದೆ. ವಿಜಯಪುರ, ಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ, ಇಂಡಿ, ಚಡಚಣ, ಸಿಂದಗಿ ಮತ್ತು ದೇವರ ಹಿಪ್ಪರಗಿ ಸೇರಿದಂತೆ ಜಿಲ್ಲೆಯಲ್ಲಿ 12 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 441 ಮತ ಎಣಿಕೆ ಟೇಬಲ್ ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಕಲಬುರ್ಗಿ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ‌ ಮತ ಎಣಿಕೆ ನಡೆಯುತ್ತಿರುವ ಕಲಬುರ್ಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಎಣಿಕೆ ಕೇಂದ್ರದ ಒಳಗೆ ‌ಹೋಗಲು ಕಾಯ್ದು ನಿಂತಿರುವ ಅಭ್ಯರ್ಥಿಗಳು ಹಾಗೂ ಏಜೆಂಟರು.

ಬಳ್ಳಾರಿಯಲ್ಲಿ ‌ಚುನಾವಣಾ ವೀಕ್ಷಕರ ಎದುರು ಸ್ಟ್ರಾಂಗ್ ರೂಂ‌ ಬೀಗ ಮುದ್ರೆ ಒಡೆದ‌ ಸಿಬ್ಬಂದಿ

ಉಡುಪಿಯಲ್ಲಿ ಮತ ಏಣಿಕೆಗೆ ಸಿದ್ಧತೆ

ಬಳ್ಳಾರಿ ಮತ ಎಣಿಕೆ ಕೇಂದ್ರ ರಸ್ತೆಯಲ್ಲಿ‌ ಸಾರ್ವಜನಿಕರ‌ ಸಂಚಾರವನ್ನು ನಿಷೇಧಿಸಲಾಗಿದ್ದು, 200 ಮೀಟರ್ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ

ಬಳ್ಳಾರಿಯ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆಯುತ್ತಿರುವ ಎಣಿಕೆ ಸಿಬ್ಬಂದಿ

ಮೀಸಲು ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಾಮಾನ್ಯ ಕ್ಷೇತ್ರಗಳ ಸ್ಪರ್ಧಿಗಳ ಗೆಲುವು ಸೋಲಿನ ಮೇಲೆ ಪ್ರಭಾವ ಬೀರಲಿದ್ದಾರೆ.

8,074 ಸ್ಥಾನಗಳಿಗೆ ಅವಿರೋಧ ಆಯ್ಕೆ

ಒಟ್ಟು 226 ತಾಲ್ಲೂಕುಗಳ 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಇದರಲ್ಲಿ 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. ಉಳಿದ ಸ್ಥಾನಗಳಿಗೆ 3,11,887 ಅಭ್ಯರ್ಥಿಗಳು ಕಣದಲ್ಲಿದ್ದರು.

ಎಣಿಕೆ ಕಾರ್ಯ ಪೂರ್ಣಗೊಳ್ಳುವುದು ತಡ

ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಸಲಾಗಿದ್ದು, ಉಳಿದ ಎಲ್ಲ ಕಡೆಗಳಲ್ಲಿ ಮತ ಪತ್ರಗಳನ್ನು ಬಳಸಲಾಗಿದೆ. ಇದರಿಂದಾಗಿ ಎಣಿಕೆ ಕಾರ್ಯ ಪೂರ್ಣಗೊಳ್ಳುವುದು ತಡವಾಗಲಿದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.