ADVERTISEMENT

ಕನ್ನಡ ಭಾಷೆ ಕಲಿಕಾ ಕಾಯ್ದೆ ಮರುಪರಿಶೀಲಿಸಲು ಹೈಕೋರ್ಟ್‌ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:24 IST
Last Updated 26 ಅಕ್ಟೋಬರ್ 2021, 19:24 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕನ್ನಡ ಭಾಷೆ ಕಲಿಕಾ ಕಾಯ್ದೆ ಮರುಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಕಾಲಾವಕಾಶ ನೀಡಿದೆ. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯನ್ನುಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್ ಮತ್ತು ಸಂಸ್ಕೃತ ಪ್ರಚಾರದಲ್ಲಿ ತೊಡಗಿರುವ ಇತರ ಮೂರು ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ವಿದ್ಯಾರ್ಥಿಯ ಆಯ್ಕೆಗೆ ನಿರ್ಬಂಧ ಹೇರುವುದಿಲ್ಲ. ಆದ್ದರಿಂದ ಕನ್ನಡ ಕಲಿಕೆ ಕಡ್ಡಾಯದ ಬಗ್ಗೆರಾಜ್ಯ ಸರ್ಕಾರ 2021ರ ಆ. 7 ಮತ್ತು ಸೆ.15ರಂದು ಹೊರಡಿಸಿರುವ ಆದೇಶಗಳು ಸಿಂಧು ಅಲ್ಲ’ ಅರ್ಜಿದಾರರು ವಾದಿಸಿದ್ದಾರೆ.

ADVERTISEMENT

‘ಸರ್ಕಾರ ಈ ವಿಷಯವನ್ನು ಮರುಪರಿಶೀಲಿಸಲಿ’ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು. ‘ಹೊರ ರಾಜ್ಯದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯನ್ನು ಸರ್ಕಾರ ಹೇಗೆ ಕಡ್ಡಾಯಗೊಳಿಸಲು ಸಾಧ್ಯ’ ಎಂದು ಮೌಖಿಕವಾಗಿ ಪ್ರಶ್ನಿಸಿತು.

‘ಕನ್ನಡವನ್ನು ಅವರು ಶಾಸ್ತ್ರೀಯವಾಗಿ ಕಲಿಯಬೇಕಿಲ್ಲ. ಉದ್ಯೋಗ ದೃಷ್ಟಿಯಿಂದ ಕಲಿತರೆ ಸಾಕು’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ತಿಳಿಸಿದರು.

ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಎಸ್.ಎಸ್. ನಾಗಾನಂದ ಅವರು, ‘ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ವಿದ್ಯಾರ್ಥಿಗಳ ಆಯ್ಕೆಗೆ ಅವಕಾಶ ನೀಡಬೇಕಿದೆ’ ಎಂದರು. ‘ಎಲ್ಲಾ ಪದವಿ ಪೂರ್ವ ಕೋರ್ಸ್‌ಗಳಿಗೆ ಕನ್ನಡ ಕಲಿಕೆಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶವು ಅಂದಾಜು 1,32,300 ವಿದ್ಯಾರ್ಥಿಗಳು ಮತ್ತು 4 ಸಾವಿರ ಶಿಕ್ಷಕರ ಮೇಲೆ ಪರಿಣಾಮ ಬೀರುತ್ತಿದೆ. 600ಕ್ಕೂ ಹೆಚ್ಚು ಸಂಸ್ಕೃತ ಶಿಕ್ಷಕರು, 3 ಸಾವಿರಕ್ಕೂ ಹೆಚ್ಚು ಹಿಂದಿ, 300ಕ್ಕೂ ಹೆಚ್ಚು ಉರ್ದು ಮತ್ತು ಇತರ ಭಾಷೆಯ 100 ಶಿಕ್ಷಕರಿದ್ದಾರೆ’ ಎಂದು ಅರ್ಜಿದಾರರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.