ADVERTISEMENT

ಜನಸಂಖ್ಯೆಯಿಂದಾಗಿ ಕಲಿಕೆಯ ವ್ಯಾಪಕ ಆಯ್ಕೆಗೆ ಅವಕಾಶವಿಲ್ಲ: ಹೈಕೋರ್ಟ್‌

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಬಾಲಕನ ಅರ್ಜಿ * ಕೊಡಗಿನ ಸೈನಿಕ ಶಾಲೆ ಬದಲು ಬೇರೆ ವಸತಿ ಶಾಲೆಗೆ ದಾಖಲಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 20:07 IST
Last Updated 15 ಜನವರಿ 2022, 20:07 IST
HIGH COURT
HIGH COURT   

ಬೆಂಗಳೂರು:’ಕೋವಿಡ್‌–19ರಲ್ಲಿ ಪೋಷಕರನ್ನು ಕಳೆದುಕೊಂಡು ತಬ್ಬಲಿಯಾದ ಮಗು ತಾನು ಇಂತಹದ್ದೇ ಶಾಲೆಯಲ್ಲಿ ಕಲಿಯಬೇಕು. ಅದಕ್ಕಾಗಿ ಅವಕಾಶ ಕಲ್ಪಿಸಿಕೊಡಿ ಎಂದು ನಿರ್ದಿಷ್ಟ ಶಾಲೆಯಲ್ಲಿ ಪ್ರವೇಶ ಬಯಸಿದರೆ; ಅಂತಹ ಮನವಿಗೆ ಕೋರ್ಟ್‌ನ ಕೃಪಾದೃಷ್ಟಿ ದಕ್ಕುವುದು ಕಷ್ಟ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ನನಗೆ ಕುಶಾಲನಗರ ತಾಲ್ಲೂಕಿನ ಸೈನಿಕ ಶಾಲೆಯಲ್ಲಿ 8ನೇ ತರಗತಿಗೆ ಪ್ರವೇಶ ದೊರಕಿಸಿಕೊಡಲು ನಿರ್ದೇಶಿಸಬೇಕು’ ಎಂದು ಕೋರಿ ಮಲ್ಲೇಶ್ವರದ ಮೊಹಮದ್ ಬ್ಲಾಕ್‌ನ 14 ವರ್ಷದ ಮೊಹಮದ್‌ ತಾಖಿ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕ ಎಂಬುದೇನೊ ಸರಿ. ಆದರೆ, ಭಾರತೀಯ ಸಮಾಜ ಜನಸಂಖ್ಯೆಯಿಂದ ತುಂಬಿ ತುಳುಕಾಡುತ್ತಿದ್ದು, ಕಲಿಕೆಯ ವ್ಯಾಪಕ ಆಯ್ಕೆಗೆ ಅವಕಾಶವೇ ಇಲ್ಲದಂತಾಗಿದೆ’ ಎಂದು ಹೇಳಿರುವ ನ್ಯಾಯಪೀಠ, ‘ಅರ್ಜಿದಾರ ವಿದ್ಯಾರ್ಥಿಗೆ ಬೆಂಗಳೂರು ವ್ಯಾಪ್ತಿಯಲ್ಲಿನ ನೇತಾಜಿ ಸುಭಾಷ್‌ಚಂದ್ರ ಬೋಸ್‌ ವಸತಿ ಶಾಲೆ ಅಥವಾ ನವೋದಯ ವಿದ್ಯಾಲಯದಲ್ಲಿ 2021–2022ರ ಶೈಕ್ಷಣಿಕ ಸಾಲಿನಲ್ಲಿ 8ನೇ ತರಗತಿಗೆ ಪ್ರವೇಶ ನೀಡಿ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ
ನಿರ್ದೇಶಿಸಿದೆ.

ADVERTISEMENT

ಪ್ರಕರಣವೇನು?: ಎರಡೂವರೆ ವರ್ಷದ ಮಗುವಿದ್ದಾಗ ಮೊಹಮದ್‌ ತಾಖಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ದತ್ತು ಪಡೆಯಲಾಗಿತ್ತು. ದತ್ತು ಪಡೆದಿದ್ದ ತಾಯಿ, ತನ್ನ ಕುಟುಂಬದಲ್ಲಿದ್ದ ಆನುವಂಶಿಕ ಕಾಯಿಲೆಯ ಪರಿಣಾಮ ಮದುವೆಯಾಗಿರಲಿಲ್ಲ.

ದುರದೃಷ್ಟ ಎಂಬಂತೆ ಕೋವಿಡ್‌–19 ಪಿಡುಗಿನ ವೇಳೆ ಈ ತಾಯಿಯನ್ನೂ ಕಳೆದುಕೊಂಡು ತಬ್ಬಲಿಯಾಗಿದ್ದ ಮೊಹಮದ್ ತಾಖಿಯನ್ನು ಸದ್ಯ ಬೆಂಗಳೂರಿನ ಬಸವೇಶ್ವರ ನಗರದ ಬಿಇಎಂಎಲ್‌ ಲೇ ಔಟ್‌ನ ಸಾಮಾಜಿಕ ಕಾರ್ಯಕರ್ತ ಎನ್.ಶ್ರೀಕಂಠಯ್ಯ ಅವರು ಕಾನೂನು ಪ್ರಕ್ರಿಯೆಗೆ ಒಳಪಟ್ಟು ಪೋಷಕರಾಗಿ ಸಲಹುತ್ತಿದ್ದಾರೆ.

ಕೋವಿಡ್‌–19ರ ಪಿಡುಗಿನ ಸಂದರ್ಭದಲ್ಲಿ ತಬ್ಬಲಿಯಾದ ಮಕ್ಕಳಿಗೆ ಪಿ.ಎಂ ಕೇರ್ಸ್‌ ಮಕ್ಕಳ ನಿಧಿ ಅಡಿಯಲ್ಲಿ ನೀಡಲಾಗುವ ಅವಕಾಶಗಳ ಅನುಸಾರಮೊಹಮದ್‌ ತಾಖಿಗೆ ಕೊಡಗು ಸೈನಿಕ ಶಾಲೆಯಲ್ಲಿ 8ನೇ ತರಗತಿಗೆ ಪ್ರವೇಶ ನೀಡಬೇಕೆಂದು ಕೋರಲಾಗಿತ್ತು. ಆದರೆ, ಕೊಡಗು ಸೈನಿಕ ಶಾಲೆ ಪ್ರವೇಶ ನಿರಾಕರಿಸಿತ್ತು.

‘6ನೇ ಮತ್ತು 9ನೇ ತರಗತಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಮಾತ್ರವೇ ಇಲ್ಲಿ ಪ್ರವೇಶಾವಕಾಶ ಉಂಟು. ಇದಕ್ಕಾಗಿ ಪೂರ್ವಭಾವಿಯಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸಾಗಿರಬೇಕು. ಹೀಗಾಗಿ ನಿಯಮ ಮೀರಿ ಮೊಹಮದ್‌ಗೆ 8ನೇ ತರಗತಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ’ ಎಂದು ಸೈನಿಕ ಶಾಲೆ ಪ್ರತಿಕ್ರಿಯಿಸಿತ್ತು.

ಈ ಉತ್ತರವನ್ನು ಪ್ರಶ್ನಿಸಿದ್ದ ಮೊಹಮದ್ ತಾಖಿ, ‘ನನಗೆ ಸೈನಿಕ ಶಾಲೆಯಲ್ಲಿಯೇ ಪ್ರವೇಶ ನೀಡಬೇಕು. ಇದಕ್ಕಾಗಿ ಸೈನಿಕ ಶಾಲೆಯ ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನು ಸಡಿಲಿಸಿ ಪ್ರವೇಶ ನೀಡುವಂತೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಸಂಪುಟ ಕಾರ್ಯದರ್ಶಿ ಹಾಗೂ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಕಾಣಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.