ಬೆಂಗಳೂರು: ‘ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆ ದಂಧೆಯಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಶ್ರೀನಾಥ್ ಎಂ.ಜೋಶಿ ವಿರುದ್ಧ ಇದೇ 29ರವರೆಗೆ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು’ ಎಂದು ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದೆ.
ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿ ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶ್ರೀನಾಥ್ ಎಂ.ಜೋಶಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಜೋಶಿ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ ಅವರ ವಾದ ಆಲಿಸಿದ ನ್ಯಾಯಪೀಠ, ’ಅರ್ಜಿದಾರರ ವಿರುದ್ಧ ಇದೇ 29ರವರೆಗೆ ಯಾವುದೇ ಅನಪೇಕ್ಷಿತ ಕ್ರಮ ಕೈಗೊಳ್ಳಬಾರದು’ ಎಂದು ಲೋಕಾಯುಕ್ತ ಪರ ವಿಶೇಷ ಪ್ರಾಸಿಕ್ಯೂಟರ್ ವೆಂಕಟೇಶ್ ಎಸ್.ಅರಬಟ್ಟಿ ಅವರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.
Cut-off box - ‘ವಿವೇಚನೆ ಬಳಸಿ ಪೆರೋಲ್ ನೀಡಿ’ ‘ಪೆರೋಲ್ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಕರ್ನಾಟಕ ಜೈಲು ಕೈಪಿಡಿಯಲ್ಲಿನ ನಿಯಮಗಳ ಅಡಿಯಲ್ಲಿ ಪ್ರದತ್ತವಾದ ವಿವೇಚನಾಧಿಕಾರವನ್ನು ಸೂಕ್ತವಾಗಿ ಬಳಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ. ‘ನನ್ನ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನನ್ನ ಮಗ ಸದ್ದಾಂನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿ ಬೀದರ್ ಜಿಲ್ಲೆ ಬಸವಕಲ್ಯಾಣದ ತಾಜ್ ಕಾಲೋನಿಯ ಚೊಟ್ಟಿ ಬಿ ಕೋಂ ಸೈಯದ್ ರಸೂಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ವಿವರಿಸಿದೆ. ‘ತಪ್ಪಿತಸ್ಥರು ಮತ್ತು ಅಪರಾಧಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಜೈಲು ಶಿಕ್ಷೆ ವಿಧಿಸಲಾಗುತ್ತದೆಯೇ ಹೊರತು ಅವರನ್ನು ಸಮಾಜದಿಂದ ದೂರ ಇರಿಸುವ ಉದ್ದೇಶ ಜೈಲು ಶಿಕ್ಷೆಯದ್ದಲ್ಲ. ಆ ರೀತಿ ಆಗಿದ್ದೇ ಆದರೆ ಅದು ಸುಧಾರಣೆ ಎಂಬ ಪರಿಕಲ್ಪನೆಗೆ ಧಕ್ಕೆ ಉಂಟು ಮಾಡುತ್ತದೆ’ ಎಂದು ಹೇಳಿರುವ ನ್ಯಾಯಪೀಠ ಸದ್ದಾಂಗೆ 60 ದಿನಗಳ ಪೆರೋಲ್ ಮಂಜೂರು ಮಾಡಲು ಜೈಲು ಅಧಿಕಾರಿಗಳಿಗೆ ಆದೇಶಿಸಿದೆ. ‘ಕರ್ನಾಟಕ ಜೈಲು ಕೈಪಿಡಿಯಲ್ಲಿನ ಪೆರೋಲ್ ನಿಯಮಗಳ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದೂ ಇದೇ ವೇಳೆ ನ್ಯಾಯಪೀಠ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ. ಸದ್ದಾಂ ಕೊಲೆ ಪ್ರಕರಣದಲ್ಲಿ 2017ರಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.