ADVERTISEMENT

ಕಾವೇರಿ–ವೆಲ್ಲಾರ್ ಯೋಜನೆ: ಕಾಂಗ್ರೆಸ್‌, ಜೆಡಿಎಸ್‌ ಸಭಾತ್ಯಾಗ

ಡಿಸಿಎಂ ಗೋವಿಂದ ಕಾರಜೋಳ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ವಿಪಕ್ಷಗಳು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 21:53 IST
Last Updated 9 ಮಾರ್ಚ್ 2021, 21:53 IST
ವಿಧಾನ ಪರಿಷತ್‌ನಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದರು.
ವಿಧಾನ ಪರಿಷತ್‌ನಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದರು.   

ಬೆಂಗಳೂರು: ಕಾವೇರಿ ನದಿ ಪಾತ್ರದಲ್ಲಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡು ಸರ್ಕಾರ ಕೈಗೊಂಡಿರುವ ಕಾವೇರಿ–ವೆಲ್ಲಾರ್‌ ಯೋಜನೆ ಕುರಿತು ವಿಧಾನ ಪರಿಷತ್‌ನಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೀಡಿದ ಉತ್ತರ ತೃಪ್ತಿಕರವಾಗಿಲ್ಲವೆಂದು ಪ್ರತಿಭಟಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

‘ಈ ಯೋಜನೆಗೆ ಕೇಂದ್ರ ತೀರುವಳಿ ನೀಡಬಾರದು ಮತ್ತು ಯೋಜನೆ ಮುಂದುವರಿಸದಂತೆ ತಮಿಳುನಾಡು ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಈಗಾಗಲೇ ಪ್ರಧಾನಿ ಮತ್ತು ಕೇಂದ್ರ ಜಲಶಕ್ತಿ ಸಚಿವರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಚರ್ಚಿಸಲು ಶೀಘ್ರದಲ್ಲಿಯೇ ಸರ್ವಪಕ್ಷ ಸಭೆ ಕರೆಯಲು ಮುಖ್ಯಮಂತ್ರಿಗೆ ಕಡತ ಮಂಡಿಸಲಾಗಿದೆ’ ಎಂದು ಕಾರಜೋಳ ಹೇಳಿದರು.

ಆದರೆ, ಈ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್‌ ಸದಸ್ಯರು, ‘ರಾಜ್ಯ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ. ಪಕ್ಷದಿಂದ ಆಯ್ಕೆಯಾದ 25 ಸಂಸದರಿದ್ದರೂ ಪ್ರಧಾನಿ ಅವರನ್ನು ಭೇಟಿ ಮಾಡಿ ಯೋಜನೆಗೆ ತಡೆ ನೀಡಲು ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಆ ಬೆನ್ನಿಗೆ, ಜೆಡಿಎಸ್‌ನ ಮರಿತಿಬ್ಬೇಗೌಡ ಅವರು, ‘ಬೂಟಾಟಿಕೆಯ ಸರ್ಕಾರ’ ಎಂದು ಟೀಕಿಸಿದರು. ಆ ಮಾತಿಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಈ ವೇಳೆ, ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಸಮರ ನಡೆಯಿತು. ಮಾತಿನ ಮಧ್ಯೆಯೇ ಜೆಡಿಎಸ್‌ ಸದಸ್ಯರು ಕೂಡಾ ಸದನದಿಂದ ಹೊರನಡೆಸಿದರು.

ನಿಯಮ 68ರ ಅಡಿ ಸಾರ್ವಜನಿಕ ಮಹತ್ವದ ವಿಷಯವಾಗಿ ನಡೆದ ಚರ್ಚೆಯ ವೇಳೆ ಇಡೀ ಯೋಜನೆಯ ಬಗ್ಗೆ ಮಾತನಾಡಿದ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ‘₹ 6,941 ಕೋಟಿ ವೆಚ್ಚದಲ್ಲಿ ವೆಲ್ಲಾರು– ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿ ಯೊಂದಿಗೆ ಜೋಡಿಸುವ ಮೊದಲ ಹಂತದ ಯೋಜನೆಗೆ ತಮಿಳುನಾಡು ಈಗಾಗಲೇ ಅಡಿಗಲ್ಲು ಹಾಕಿದೆ. ಈ ಯೋಜನೆ ರಾಜ್ಯ ಹಿತಕ್ಕೆ ಮಾರಕವಾಗಿದೆ. ಸರ್ಕಾರ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.

ಜೆಡಿಎಸ್‌ನ ತಿಪ್ಪೇಸ್ವಾಮಿ ಮಾತನಾಡಿ, ‘ಯೋಜನೆಯನ್ನು ತಡೆಯಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಿರಿಯ ನಾಯಕ ಎಚ್‌.ಡಿ. ದೇವೇಗೌಡ ಅವರನ್ನೂ ಆಹ್ವಾನಿಸಿ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಕಾವೇರಿಯ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಕರ್ನಾಟಕದ ಯೋಜನೆಗಳಿಗೆ ತಮಿಳುನಾಡು ಕೈಗೆತ್ತಿಕೊಳ್ಳುತ್ತಿರುವ ಈ ಯೋಜನೆಯಿಂದ ತಡೆ ಬೀಳುವ ಸಾಧ್ಯತೆ ಇದ್ದರೂ, ರಾಜ್ಯ ಸರ್ಕಾರ ಇದುವರೆಗೂ ಚಕಾರ ಎತ್ತಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಮತ್ತು ಕಾಂಗ್ರೆಸ್‌ನ ನಾರಾಯಣಸ್ವಾಮಿ ಟೀಕಿಸಿದರು. ‘ಯೋಜನೆಯ ಬಗ್ಗೆ ಅರಿವಿದ್ದೂ ಕೇಂದ್ರ ಸರ್ಕಾರ ಮೌನವಹಿಸಿದೆ’ ಎಂದು ಕಾಂಗ್ರೆಸ್‌ನ ರವಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.