ADVERTISEMENT

ಕರಾವಳಿ: ನಾಳೆಯಿಂದ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 21:24 IST
Last Updated 8 ಜೂನ್ 2021, 21:24 IST
ಮಳೆ–ಸಾಂದರ್ಭಿಕ ಚಿತ್ರ
ಮಳೆ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂಗಾರು ಆರಂಭಗೊಂಡಿರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂ.10ರಿಂದ 13ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಐದು ದಿನಗಳ ಹಿಂದೆ ರಾಜ್ಯ ಪ್ರವೇಶಿಸಿದ್ದ ಮುಂಗಾರು, ಎರಡು ದಿನ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಸಿತ್ತು.

ಈಗ ಕರಾವಳಿ ಭಾಗದಲ್ಲಿ ಮತ್ತೆ ಮಳೆ ಹೆಚ್ಚಾಗುವ ಮುನ್ಸೂಚನೆ ಇದೆ. ಈ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೂರೂ ದಿನ ‘ಯೆಲ್ಲೊ ಅಲರ್ಟ್‌’ ಘೋಷಿಸಿರುವುದಾಗಿ ಇಲಾಖೆ ತಿಳಿಸಿದೆ.

ADVERTISEMENT

‘ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಈ ವಾರ ಒಣಹವೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದ್ದು, ಸಾಧಾರಣ ಮಳೆಯಾಗಬಹುದು’ ಎಂದೂ ಹೇಳಿದೆ.

ಕಾರವಾರ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲು ಭಾಗದಲ್ಲಿ ಸೋಮವಾರ ತಲಾ 1 ಸೆಂ.ಮೀ ಮಳೆಯಾಗಿದೆ. ರಾಯಚೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರ್ಗಿ, ವಿಜಯಪುರ, ಬೀದರ್‌, ಹಾಸನದಲ್ಲಿ ತಲಾ 34 ಹಾಗೂ ಚಿಕ್ಕಮಗಳೂರಿನಲ್ಲಿ 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಅಲ್ಲಲ್ಲಿ ಮಳೆ

ಮಡಿಕೇರಿ/ಕಾರವಾರ: ಕೊಡಗು ಜಿಲ್ಲೆಯ ಪೊನ್ನಂಪೇಟೆ, ತಿತಿಮತಿ ಹಾಗೂ ಮಡಿಕೇರಿಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ.

ಕಾರವಾರ ಜಿಲ್ಲೆಯ ವಿವಿಧೆಡೆ ಆಗಾಗ ಜಿಟಿಜಿಟಿ ಮಳೆಯಾಗಿದೆ. ಕಾರವಾರ ಮತ್ತು ಶಿರಸಿಯಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಕೆಲ ಸಲ ಸಾಧಾರಣ ಮಳೆಯಾಯಿತು.

ದಾಂಡೇಲಿ, ಜೊಯಿಡಾ, ಅಂಕೋಲಾ, ಸಿದ್ದಾಪುರ, ಹೊನ್ನಾವರ, ಗೋಕರ್ಣ ಸುತ್ತಮುತ್ತಲೂ ತುಂತುರು ಮಳೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.