ADVERTISEMENT

11ನೇ ಶತಮಾನದ ನಾಗಾವಿ ಶಾಸನದಲ್ಲೇ ಕರ್ನಾಟಕ ಎಂದು ಉಲ್ಲೇಖ!

ಕಲ್ಯಾಣಿ ಚಾಲುಕ್ಯರ ಕಾಲದ ಶಾಸನದಲ್ಲಿ ‘ಕರ್ಣ್ನಾಟಕ’ ಪದ ಬಳಕೆ

ಮಲ್ಲಿಕಾರ್ಜುನ ಎಚ್.ಎಂ
Published 10 ಡಿಸೆಂಬರ್ 2024, 0:30 IST
Last Updated 10 ಡಿಸೆಂಬರ್ 2024, 0:30 IST
ಚಿತ್ತಾಪುರ ತಾಲ್ಲೂಕಿನ ನಾಗಾವಿಯ ತ್ರೈಪುರುಷ ದೇವಾಲಯದ ಆವರಣದಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ಕ್ರಿ.ಶ 1058ರ ಚತುಷ್ಕೋನ ಶಿಲಾ ಶಾಸನದಲ್ಲಿ ‘ಕರ್ಣ್ನಾಟಕ’ ಪದ ಉಲ್ಲೇಖವಿದೆ.
ಚಿತ್ತಾಪುರ ತಾಲ್ಲೂಕಿನ ನಾಗಾವಿಯ ತ್ರೈಪುರುಷ ದೇವಾಲಯದ ಆವರಣದಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ಕ್ರಿ.ಶ 1058ರ ಚತುಷ್ಕೋನ ಶಿಲಾ ಶಾಸನದಲ್ಲಿ ‘ಕರ್ಣ್ನಾಟಕ’ ಪದ ಉಲ್ಲೇಖವಿದೆ.   

ಚಿತ್ತಾಪುರ (ಕಲಬುರಗಿ ಜಿಲ್ಲೆ): ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ್ದು, ಸುವರ್ಣ ಕರ್ನಾಟಕ ಮಹೋತ್ಸವ ಆಚರಿಸುತ್ತಿದ್ದೇವೆ. ಕಪ್ಪುಮಣ್ಣಿನ ಈ ನಾಡಿಗೆ ಕರ್ನಾಟಕ ಎಂಬುದು ಪ್ರಾಚೀನ ಹೆಸರಾದರೂ ಶಾಸನದಲ್ಲಿ ಮೊದಲು ಉಲ್ಲೇಖವಾಗಿದ್ದು 11ನೇ ಶತಮಾನದಲ್ಲಿ ಎನ್ನುತ್ತಾರೆ ಇತಿಹಾಸಕಾರರು.

ಚಿತ್ತಾಪುರ ಪಟ್ಟಣದಿಂದ ಎರಡು ಕಿ.ಮೀ ಅಂತರದಲ್ಲಿರುವ ಐತಿಹಾಸಿಕ ಪ್ರಸಿದ್ಧ ತಾಣ ನಾಗಾವಿ ನಾಡಿನಲ್ಲಿ ಸಾವಿರ ವರ್ಷಗಳ ಹಿಂದೆಯೇ ಶಾಸನದಲ್ಲಿ ಕರ್ನಾಟಕ ಎಂಬುದು ನಮೂದಾಗಿದೆ. ಕನ್ನಡ ಭಾಷೆ ಬಳಕೆಯ ಪ್ರದೇಶವನ್ನು ‘ಕರ್ನಾಟಕ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಎಂಬುದು ನಾಗಾವಿಯಲ್ಲಿ ದೊರೆತ ಕ್ರಿ.ಶ 1058ರ ಶಿಲಾ ಶಾಸನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ.

ಪುರಾತನ ಶೈಕ್ಷಣಿಕ ಕೇಂದ್ರ ನಾಗಾವಿಯ ಘಟಿಕಾ ಸ್ಥಾನವಾಗಿದ್ದ ‘ತ್ರೈಪುರುಷ’ ದೇಗುಲದ ಆವರಣದಲ್ಲಿರುವ ಕ್ರಿ.ಶ 1058ರ ಚತುಷ್ಕೋನ ಶಿಲಾ ಶಾಸನದಲ್ಲಿ ಸಿಗುವ ಮಾಹಿತಿ ಪ್ರಕಾರ, ಕಲ್ಯಾಣ ಚಾಲುಕ್ಯರ ದೊರೆ ಒಂದನೇ ಸೋಮೇಶ್ವರನ ಆಳ್ವಿಕೆ ಅವಧಿಯಲ್ಲಿ ‘ನಾಗಾವಿ ಮಹಾಅಗ್ರಹಾರ’ದ ಇತಿಹಾಸದಲ್ಲಿ ಚಾಲುಕ್ಯರ ಮಹಾದಂಡನಾಯಕ ‘ಮಧುವಪ್ಪರಸ’ನನ್ನು ‘ಕರ್ಣ್ನಾಟಕ ಸಂಧಿ ವಿಗ್ರಹಾಧಿಪತಿ’ ಎಂದು ಕರೆದಿರುವುದು ಗಮನಾರ್ಹವಾಗಿದೆ.

ADVERTISEMENT

ಬಾದಾಮಿ ಚಾಲುಕ್ಯರ ಕಾಲದಲ್ಲಿ ಸೈನ್ಯಕ್ಕೆ ‘ಕರ್ಣಾಟ ಬಲ’ ಎಂದು ಹೆಸರಿತ್ತು. ಆದರೆ, ಕರ್ನಾಟಕ ಎಂದು ಸಂಪೂರ್ಣ ಉಲ್ಲೇಖವಾಗಿದ್ದು, ಇದೇ ಶಾಸನದಲ್ಲಿ ಮೊದಲು ಎನ್ನುತ್ತಾರೆ ಚಿತ್ತಾಪುರ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಶಿವಶರಣಪ್ಪ ಬಿರಾದಾರ.

ಕಲ್ಯಾಣ ಚಾಲುಕ್ಯರ ದಂಡನಾಯಕ ಮಧುವಪ್ಪರಸನು ‘ಎಪ್ಪತ್ತೆರಡು ಜನರ ನಿಯೋಗ’ದ (ದ್ವಿಸಪ್ತತಿ ನಿಯೋಗ) ಮುಖ್ಯಸ್ಥನಾಗಿದ್ದನು. ಅದಕ್ಕೆ ಆತನನ್ನು ‘ಕರ್ಣ್ನಾಟಕ ಸಂಧಿ ವಿಗ್ರಹಾಧಿಪತಿ’ ಎಂದು ಶಿಲಾ ಶಾಸನಗಳಲ್ಲಿ ಹೆಸರಿಸಿದೆ. ‘ಕನ್ನಡ’ ಮತ್ತು ‘ಕರ್ನಾಟಕ’ ಶಬ್ದಗಳು ನಾಗಾವಿಯ ಶಾಸನಗಳಲ್ಲಿ ಉಲ್ಲೇಖವಾಗಿವೆ.

ರಾಜ್ಯಕ್ಕೆ 1973 ನ.1ರಂದು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು. ಆದರೆ, ಕಲ್ಯಾಣ ಚಾಲುಕ್ಯರ ಕಾಲದ ಶಾಸನದಲ್ಲಿಯೇ ‘ಕರ್ನಾಟಕ’ ಪದ ಬಳಕೆಯಾಗಿದೆ. ಹೀಗಾಗಿ ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎನ್ನುತ್ತಾರೆ ಸಂಶೋಧಕರು.

***

ನಾಗಾವಿ ಶಾಸನದಲ್ಲಿ ಕರ್ನಾಟಕ ಎಂಬ ಉಲ್ಲೇಖವಿದ್ದು ಕಾಲಗರ್ಭದಲ್ಲಿ ಹುದುಗಿರುವ ನಾಗಾವಿ ಇತಿಹಾಸದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕು

–ನಾಗಯ್ಯಸ್ವಾಮಿ ಅಲ್ಲೂರ್ ಅಧ್ಯಕ್ಷರು ನಾಗಾವಿ ಸಾಂಸ್ಕೃತಿ ಪ್ರತಿಷ್ಠಾನ ಚಿತ್ತಾಪುರ

ಕಲ್ಯಾಣ ಚಾಲುಕ್ಯರ ಕಾಲದಲ್ಲಿನ ನಾಗಾವಿಯ ಶಾಸನದಲ್ಲಿ ಕರ್ನಾಟಕ ಪದದ ಉಲ್ಲೇಖವು ಐತಿಹಾಸಿಕ ಪ್ರಾಮುಖ್ಯತೆಯಿಂದ ಕೂಡಿದೆ. ಇದು ಈ ಭಾಗದ ಜನ ಹೆಮ್ಮೆ ಪಡುವ ಸಂಗತಿ

–ಶಿವಶರಣಪ್ಪ ಬಿರಾದಾರ ಪ್ರಾಂಶುಪಾಲರು ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪದವಿ ಕಾಲೇಜು ಚಿತ್ತಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.