ADVERTISEMENT

ಆಸ್ಕರ್ ಆರೋಗ್ಯ ಯಥಾಸ್ಥಿತಿ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 16:06 IST
Last Updated 22 ಜುಲೈ 2021, 16:06 IST
   

ಮಂಗಳೂರು: ನಗರದ ಯೇನೆಪೋಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲೇ ಮುಂದುವರಿದಿದೆ. ಈ ನಡುವೆ ಅವರಿಗೆ ಗುರುವಾರ ಡಯಾಲಿಸಿಸ್ ಮಾಡಲಾಗಿದೆ.

ಭಾನುವಾರ ಮನೆಯಲ್ಲಿ ಯೋಗ ಮಾಡುತ್ತಿದ್ದ ವೇಳೆ ಅವರು ಬಿದ್ದು ತಲೆಯಲ್ಲಿ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಮಿದುಳಿನಲ್ಲಿ ರಕ್ತಸ್ರಾವ ಆಗಿದ್ದರಿಂದ ಸೋಮವಾರ ಪ್ರಜ್ಞೆ ಕಳೆದುಕೊಂಡಿದ್ದರು. ಬುಧವಾರ ದೇಹದಲ್ಲಿ ಕೊಂಚ ಚಲನೆ ಕಂಡುಬಂದಿತ್ತು. ಆದರೆ, ಪ್ರಜ್ಞಾಹೀನ ಸ್ಥಿತಿ ಮುಂದುವರಿದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

‘ಕಿಡ್ನಿ ವೈಫಲ್ಯದ ಕಾರಣ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಅವರಿಗೆ, ನಿಗದಿಯಂತೆ ಗುರುವಾರ ಡಯಾಲಿಸಿಸ್ ಮಾಡಲಾಗಿದೆ. ಅವರ ಆರೋಗ್ಯ ಸುಧಾರಣೆ ಗಮನಿಸಿ, ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿವೆ.

ADVERTISEMENT

ಯೇನೆಪೋಯ ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಆಸ್ಕರ್ ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದೆ. ಆಸ್ಕರ್ ಅವರ ಪತ್ನಿ ಬ್ಲಾಸಂ ಫರ್ನಾಂಡಿಸ್‌, ಪುತ್ರ, ಸಂಬಂಧಿಕರು ಕೂಡ ಆಸ್ಪತ್ರೆಯಲ್ಲಿದ್ದು, ನಿರಂತರವಾಗಿ ವೈದ್ಯರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್‌.ಆರ್‌.ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದರು. ಬ್ಲಾಸಂ ಫರ್ನಾಂಡಿಸ್‌ ಹಾಗೂ ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.