ADVERTISEMENT

ಐದರ ಆಟ; ಭಿನ್ನಮತ ಸ್ಫೋಟ

ಅಂತಿಮ ಕ್ಷಣದಲ್ಲಿ ಉಗ್ರಪ್ಪ ಹೆಸರು ಪ್ರಕಟಿಸಿದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 19:31 IST
Last Updated 15 ಅಕ್ಟೋಬರ್ 2018, 19:31 IST
   

ಬೆಂಗಳೂರು: ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆ ಅವಧಿ ಮುಗಿಯುವ ಹೊತ್ತಿಗೆ ಭಿನ್ನಮತ ಒಡಲಾಗ್ನಿಯಂತೆ ಹೊತ್ತಿಕೊಂಡಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ವಿಧಾನ ‍ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಅವರನ್ನು ‘ಕೈ’ ಪಾಳಯ ಕಣಕ್ಕೆ ಇಳಿಸಿದೆ. ನಾಮಪ‍ತ್ರ ಸಲ್ಲಿಕೆಗೆ ಕೊನೆಯ 24 ಗಂಟೆಗಳು ಉಳಿದಿದ್ದಾಗ ಅಭ್ಯರ್ಥಿ ಹೆಸರು ಪ್ರಕಟಿಸಿದ ಕಾಂಗ್ರೆಸ್‌ ಹೈಕಮಾಂಡ್‌ ಅಚ್ಚರಿ ಮೂಡಿಸಿದೆ.

ಐದು ಕ್ಷೇತ್ರಗಳಲ್ಲೂ ಸೋಮವಾರ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿತ್ತು. ಬಳ್ಳಾರಿ, ಮಂಡ್ಯ ಹಾಗೂ ಜಮಖಂಡಿ ಕ್ಷೇತ್ರಗಳಲ್ಲಿ ಭಿನ್ನಮತ ಶಮನ ದೊಡ್ಡ ಸವಾಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮಿತ್ರರಾಗಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ಈ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ, ಉಪ ಚುನಾವಣಾ ಕಣದಲ್ಲಿ ಮುನಿಸು, ಅಸಮಾಧಾನ ತಾರಕಕ್ಕೇರಿದೆ. ಹೊರಗಿನ ಅಭ್ಯರ್ಥಿಯ ಆಯ್ಕೆಗೆ ಬಳ್ಳಾರಿಯ ಕೈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಲ್‌.ಆರ್.ಶಿವರಾಮೇಗೌಡ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ ಪ್ರಮುಖರಾದ ಎಂ.ಎಸ್. ಆತ್ಮಾನಂದ, ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ ಅತ್ತ ಸುಳಿಯಲಿಲ್ಲ. ಈ ಮೂಲಕ ‘ದೋಸ್ತಿ’ಗಳ ನಡುವಿನ ಒಡಕಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದರು. ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವ ವೇಳೆಯಲ್ಲೂ ಪಕ್ಷದ ಸ್ಥಳೀಯ ಮುಖಂಡರು ದೂರ ಉಳಿದು, ತಮ್ಮ ಅಸಮಾಧಾನ ತೋರಿದರು.

ಶಿವಮೊಗ್ಗದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಮುಖಾಮುಖಿಯಾಗಲಿದ್ದಾರೆ. ಈ ಹೊತ್ತಿನಲ್ಲೇ ಸಹೋದರರ ನಡುವಿನ ವಾಕ್ಸಮರ ತಾರಕಕ್ಕೆ ಏರಿದೆ. ‘ಇದು ಜೆಡಿಎಸ್‌ಗೆ ಕೊನೆಯ ಚುನಾವಣೆ’ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಕಣದ ಕಿಚ್ಚು ಹೆಚ್ಚಿಸಿದ್ದಾರೆ. ಮಧು ಬಂಗಾರಪ್ಪ ಅಷ್ಟೇ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದಾರೆ.

ರಾಮನಗರ ಕ್ಷೇತ್ರದಲ್ಲಿ ಪತ್ನಿ ಅನಿತಾ ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾಥ್‌ ನೀಡಿದರು. ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಸಂಸದ ಡಿ.ಕೆ.ಸುರೇಶ್‌ ಗೈರುಹಾಜರಾಗಿದ್ದರು. ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ನಾಮಪತ್ರ ಸಲ್ಲಿಕೆ ವೇಳೆ ಮಾತ್ರ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.

***

ಉಗ್ರಪ್ಪಗೆ ಟಿಕೆಟ್ ಏಕೆ?

ಬಳ್ಳಾರಿ ಜಿಲ್ಲೆ ಪ್ರತಿನಿಧಿಸುವ ಆರು ಶಾಸಕರ ಮಧ್ಯೆ ಇರುವ ಭಿನ್ನಮತ ಶಮನವಾಗದೇ ಇರುವ ಕಾರಣಕ್ಕೆ ಕೊನೆಗಳಿಗೆಯಲ್ಲಿ ಉಗ್ರಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ.

ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅಣ್ಣ ವೆಂಕಟೇಶ ಪ್ರಸಾದ್‌ ಅವರನ್ನು ಅಖಾಡಕ್ಕೆ ಇಳಿಸಬೇಕು ಎಂಬುದು ಒಂದು ಗುಂಪು ಪಟ್ಟು ಹಿಡಿದಿತ್ತು. ನಾಗೇಂದ್ರ ಮತ್ತು ಆನಂದ ಸಿಂಗ್‌ ಅವರಿಗೆ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಬೆಂಗಾವಲಾಗಿ ನಿಂತಿದ್ದರು. ಈ ಪ್ರಸ್ತಾವಕ್ಕೆ ಶಾಸಕರಾದ ಈ.ತುಕಾರಾಂ, ಪಿ.ಟಿ.ಪರಮೇಶ್ವರ ನಾಯ್ಕ್‌, ಭೀಮಾ ನಾಯ್ಕ್, ಜೆ.ಎನ್‌. ಗಣೇಶ್‌ ವಿರೋಧ ವ್ಯಕ್ತಪಡಿಸಿದ್ದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಂಧಾನದ ಬಳಿಕ ಮೇಲ್ನೋಟಕ್ಕೆ ಒಮ್ಮತ ಕಂಡುಬಂದಿತ್ತು. ವೆಂಕಟೇಶಪ್ರಸಾದ್‌ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತವಾಗಿತ್ತು. ಕೊನೆಯ ಕ್ಷಣದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಉಗ್ರಪ್ಪ ಅವರನ್ನು ಕಣಕ್ಕೆ ಇಳಿಸುವ ತಂತ್ರ ರೂಪಿಸಿದರು.

***

ಕಾಂಗ್ರೆಸ್–ಜೆಡಿಎಸ್ ಮಧ್ಯೆ ಅಸಮಾಧಾನ ಕುದಿಯುತ್ತಿದೆ. ಮಂಗಳವಾರ ಮಧ್ಯಾಹ್ನ 3ಕ್ಕೆ ಎರಡೂ ಪಕ್ಷಗಳಲ್ಲಿ ಅಲ್ಲೋಲಕಲ್ಲೋಲವಾಗಲಿದೆ

-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.