ADVERTISEMENT

ನಾಯಕತ್ವ ಬದಲಿಸುವಂತೆ ವರಿಷ್ಠರಿಗೆ ಒತ್ತಡ?

ಸಚಿವ ಸಿ.ಪಿ. ಯೋಗೇಶ್ವರ್‌ ಮತ್ತೆ ದೆಹಲಿಯಲ್ಲಿ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 19:45 IST
Last Updated 26 ಜೂನ್ 2021, 19:45 IST
ಯೋಗೇಶ್ವರ್‌
ಯೋಗೇಶ್ವರ್‌   

ನವದೆಹಲಿ: ‘ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಪರೀಕ್ಷೆಯ ಫಲಿತಾಂಶ ಶೀಘ್ರವೇ ಹೊರಬೀಳಲಿದೆ’ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ದೆಹಲಿಗೆ ಬಂದಿದ್ದ ಸಚಿವ ಸಿ.ಪಿ. ಯೋಗೇಶ್ವರ್, ಶನಿವಾರ ಪಕ್ಷದ ಕೆಲವು ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಕರ್ನಾಟಕ ಭವನಕ್ಕೆ ಬದಲು ಖಾಸಗಿ ಹೋಟೆಲ್‌ನಲ್ಲಿ ರಾತ್ರಿ ತಂಗಿದ್ದ ಅವರು, ಶನಿವಾರ ಬೆಳಗಿನಜಾವ ಕೆಲವರನ್ನು ಭೇಟಿಯಾಗಿ ನಾಯಕತ್ವ ಬದಲಾವಣೆಗಾಗಿ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ನಡೆಯಲಿರುವ ಸಂಸದೀಯ ಮಂಡಳಿ ಸಭೆಯಲ್ಲಿ ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸುವಂತೆಯೂ ಅವರು ಕೆಲವರಲ್ಲಿ ಮನವಿ ಮಾಡಿದ್ದಾರೆ ಎಂದೂ ಗೊತ್ತಾಗಿದೆ.

ADVERTISEMENT

ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಸ್ಥಾನ ವಹಿಸಿದ್ದರೂ, ಯಡಿಯೂರಪ್ಪ ಅವರು ಮಾತು ಕೊಟ್ಟಂತೆ ಇಂಧನ ಖಾತೆ ನೀಡದಿರುವುದರ ಬಗ್ಗೆ ಹಾಗೂ ರಾಮನಗರ ಜಿಲ್ಲೆಯ ಉಸ್ತುವಾರಿ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ತೋಡಿಕೊಂಡಿರುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.

ಆದರೆ, ‘ನಾನು ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದು, ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಅವರು ಮಧ್ಯಾಹ್ನ ಕರ್ನಾಟಕ ಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

‘ಪ್ರತಿ ಬಾರಿಯೂ ನನ್ನ ದೆಹಲಿ ಭೇಟಿಗೆ ರಾಜಕೀಯ ಸ್ಪರ್ಶ ನೀಡಲಾಗುತ್ತದೆ. ಈ ಬಾರಿ ವೈಯಕ್ತಿಕ ಕೆಲಸದ ನಿಮಿತ್ಯ ಬಂದಿದ್ದು, ರಾಜಕೀಯ ಉದ್ದೇಶ ಇಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ಸಂಜೆ ಬೆಂಗಳೂರಿಗೆ ವಾಪಸ್ ತೆರಳಿದರು.

‘ಪರೀಕ್ಷೆ ಬರೆದವರನ್ನೇ ಕೇಳಿ’

ಚಿಕ್ಕಮಗಳೂರು ಶಾಸಕ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೂ ಯೋಗೇಶ್ವರ್‌ ಭೇಟಿಯ ಸಂದರ್ಭವೇ ದೆಹಲಿಗೆ ದಿಢೀರ್‌ ಬಂದಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಆದರೆ, ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದಾಗಿ ತಿಳಿಸಿರುವ ರವಿ, ‘ಯೋಗೇಶ್ವರ್ ಭೇಟಿಯ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಪರೀಕ್ಷೆಯ ಫಲಿತಾಂಶ ಕುರಿತು ಪರೀಕ್ಷೆ ಬರೆದವರ ಬಳಿಯೇ ಕೇಳಬೇಕು ಎಂದು ಸಲಹೆ ನೀಡಿದ ಅವರು, ಕೇಂದ್ರದ ಸಚಿವ ಸಂಪುಟ ಪುನರ್‌ರಚನೆ ವೇಳೆ ರಾಜ್ಯದಿಂದ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಪ್ರಧಾನಿ ಮೋದಿ ಅವರೇ ನಿರ್ಧರಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.