ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ/ದಾವಣಗೆರೆ: ರಾಜ್ಯದ ವಿವಿಧೆಡೆ ಶನಿವಾರ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಗುಡುಗು, ಬಿರುಗಾಳಿ ಇದ್ದು, ಹಾವೇರಿ, ಚಿತ್ರದುರ್ಗ ಜಿಲ್ಲೆಗಳ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು, ಗದಗ ಜಿಲ್ಲೆಯ ಮುಂಡರಗಿ ಸೇರಿ ವಿವಿಧೆಡೆ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಯಿತು. ಬಹುತೇಕ ಕಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು.
ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಆಂಜನೇಯ ಸ್ವಾಮಿ ರಥೋತ್ಸವ ಮತ್ತು ಸಿದ್ಧೇಶ್ವರನಗರದ ಸಿದ್ದೇಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಮಳೆಗೆ ಸಿಲುಕಿದರು.
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ. ಹಲವೆಡೆ ಬಿರುಗಾಳಿಗೆ ಪಪ್ಪಾಯ, ಬಾಳೆಬೆಳೆಗಳು ನೆಲಕ್ಕುರುಳಿವೆ.
ಹೊಳಲ್ಕೆರೆ, ಚಿಕ್ಕಜಾಜೂರು, ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ ಉತ್ತಮ ಮಳೆಯಾಗಿದ್ದು, ಪಪ್ಪಾಯ ಹಾಗೂ ಬಾಳೆ ಬೆಳೆ ನೆಲಕ್ಕುರುಳಿದೆ.
ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ, ಜಗಳೂರು ತಾಲ್ಲೂಕಿನ ಕಡರನಾಯ್ಕನಹಳ್ಳಿ, ನಂದಿಗುಡಿ ಸೇರಿ ವಿವಿಧೆಡೆ ಸುಮಾರು 45 ನಿಮಿಷ ಸುರಿದಿದೆ. ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಂದಿ, ಆಲ್ದೂರು, ಕೆಂಜಿಗೆ, ಬಣಕಲ್ ಹೊರಟ್ಟಿ, ಬಣಕಲ್, ಸುತ್ತಮುತ್ತ ಕೂಡ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.