ADVERTISEMENT

ಅಂತರ್‌ ಜಿಲ್ಲಾ ವರ್ಗಾವಣೆ ನೀತಿ ಜಾರಿಗೆ ಆಗ್ರಹ

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘದ ರಾಜ್ಯ ಪರಿಷತ್‌ ಸಭೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 18:07 IST
Last Updated 8 ಜೂನ್ 2019, 18:07 IST
ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘವು ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಪರಿಷತ್‌ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಎಸ್‌.ದಿನೇಶಕುಮಾರ್‌ ಅವರಿಗೆ ಸಂಘದ ಪದಾಧಿಕಾರಿಗಳು ಲಿಂಬೆಹಣ್ಣು ನೀಡಿ ಸ್ವಾಗತಿಸಿದರು –ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘವು ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಪರಿಷತ್‌ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಎಸ್‌.ದಿನೇಶಕುಮಾರ್‌ ಅವರಿಗೆ ಸಂಘದ ಪದಾಧಿಕಾರಿಗಳು ಲಿಂಬೆಹಣ್ಣು ನೀಡಿ ಸ್ವಾಗತಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಹೊಸ ನ್ಯಾಯಾಲಯಗಳಿಗೆ ಸಿಬ್ಬಂದಿ ನಿಯೋಜನೆ, ನೂತನ ಪಿಂಚಣಿ ಯೋಜನೆ ರದ್ದು ಹಾಗೂ ನ್ಯಾಯಾಂಗ ಇಲಾಖೆ ನೌಕರರ ಅಂತರ್‌ ಜಿಲ್ಲಾ ವರ್ಗಾವಣೆ ನೀತಿ ಜಾರಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಇಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘದ ರಾಜ್ಯ ಪರಿಷತ್‌ ಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಲಾಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ನಾಗೇಶ್‌ ಎಚ್‌.ಎ., ನ್ಯಾಯಾಂಗ ಇಲಾಖೆಯ ನೌಕರರ ಕುಂದುಕೊರತೆಗಳನ್ನು ಆಲಿಸಲು ಜಿಲ್ಲಾ ಮಟ್ಟದಲ್ಲಿ ಕುಂದುಕೊರತೆ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ನ್ಯಾಯಾಂಗ ನೌಕರರಿಗೆ ನೀಡುವ ಸೇವಾ ಸೌಲಭ್ಯಗಳನ್ನು ವಿಳಂಬವಿಲ್ಲದೇ ನೀಡಬೇಕು, ಇಲಾಖೆಯ ಪ್ರೊಸೆಸ್‌ ಸಿಬ್ಬಂದಿಗೆ(ಆದೇಶ ಜಾರಿದಾರರು) ನೀಡುವ ನಿಶ್ಚಿತ ಪ್ರಯಾಣ ಭತ್ಯೆ ಪರಿಷ್ಕರಣೆ ಮಾಡಬೇಕು, ನ್ಯಾಯಂಗ ನೌಕರರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಹೇಳಿದರು.

ADVERTISEMENT

‌ಪ್ರಥಮ ನ್ಯಾಯಿಕ ವೇತನ ಆಯೋಗದ ಶಿಫಾರಸಿನ ಅನ್ವಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿರುವ ರಿಟ್‌ ಅರ್ಜಿಯ ವಿಲೇವಾರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಅಧೀನ ನ್ಯಾಯಾಲಯಗಳಿಗೆ ಏಕರೀತಿ ಸಿಬ್ಬಂದಿ ಒದಗಿಸಲು ಈ ಹಿಂದೆ ಮಂಜೂರಾಗಿದ್ದ 4334 ಹುದ್ದೆಗಳಲ್ಲಿನ ಇನ್ನುಳಿದ 2734 ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿ, ಸಭೆಯಲ್ಲಿ ಉಪಸ್ಥಿತರಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಎಸ್‌.ದಿನೇಶಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ನ್ಯಾಯಾಂಗ ಇಲಾಖೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವುದಾಗಿ ನ್ಯಾಯಮೂರ್ತಿಗಳು ಭರವಸೆ ನೀಡಿದರು.

ಧಾರವಾಡ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಈಶಪ್ಪ ಕೆ.ಭೂತೆ, ನ್ಯಾಯಾಂಗ ಇಲಾಖೆ ನೌಕರರ ಸಂಘದ ಉಪಾಧ್ಯಕ್ಷ ಎಂ.ಸಿ.ಮುನಿರಾಜು, ನ್ಯಾಯಾಂಗ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ ಎಚ್‌.ಕುಂದಗೋಳ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಅಶೋಕ ವಿ.ಬಳಿಗಾರ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.