ADVERTISEMENT

ರಾಜ್ಯದಲ್ಲಿ ಒಂದೇ ವಾರದಲ್ಲಿ 618 ಪ್ರಕರಣ

200 ದಾಟಿದ ಮಂಡ್ಯ ಜಿಲ್ಲೆಯ ಸೋಂಕಿತರ ಸಂಖ್ಯೆ: ಮುಂಬೈ ನಂಟು ತಂದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 21 ಮೇ 2020, 23:10 IST
Last Updated 21 ಮೇ 2020, 23:10 IST
ಕೊರೊನಾ ವಾರಿಯರ್ಸ್
ಕೊರೊನಾ ವಾರಿಯರ್ಸ್   

ಬೆಂಗಳೂರು: ರಾಜ್ಯದಲ್ಲಿಕೇವಲ ಒಂದು ವಾರದಲ್ಲಿ ಕೋವಿಡ್‌ ಸೋಂಕಿತರ 618 ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ ವರದಿಯಾದ ಬಹುತೇಕ ಪ್ರಕರಣಗಳು ಅನ್ಯರಾಜ್ಯಗಳ ನಂಟನ್ನು ಹೊಂದಿವೆ.

ಲಾಕ್‌ ಡೌನ್‌ ಸಡಿಲಿಸಿದ ಬಳಿಕ ಮುಂಬೈನಿಂದ ತವರೂರಿಗೆ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿ
ದ್ದಾರೆ. ಮಂಡ್ಯದಲ್ಲಿ ಮೂರು ದಿನಗಳಲ್ಲಿ 112 ಮಂದಿಗೆ ಸೋಂಕು ತಗುಲಿದೆ. ಇದರಿಂದಾಗಿ ಮಂಡ್ಯ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನ (176) ಪಡೆದಿದ್ದು, ಅಲ್ಲಿ ಸೋಂಕಿತರ ಸಂಖ್ಯೆ 201ಕ್ಕೆ ತಲುಪಿದೆ. ಲಾಕ್‌ ಡೌನ್‌ ಸಡಿಲಿಸಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರಾರಂಭಿಸಿದ ಬಳಿಕ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಗುರುವಾರ ವರದಿಯಾದ 143 ಪ್ರಕರಣಗಳಲ್ಲಿ115 ಮಂದಿ ಅಂತರರಾಜ್ಯ ಹಾಗೂ 7 ಮಂದಿ ವಿದೇಶಿ ಪ್ರಯಾಣದ ಇತಿಹಾಸ ಹೊಂದಿದ್ದಾರೆ.

ಮಂಡ್ಯದ ಮಳವಳ್ಳಿ ಪಟ್ಟಣದ ಕಂಟೈನ್‌ಮೆಂಟ್‌ ವಲಯದಲ್ಲಿ ಕರ್ತವ್ಯದಲ್ಲಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರಲ್ಲಿ (ಸಿಡಿಪಿಒ) ಸೋಂಕು ಕಾಣಿಸಿಕೊಂಡಿದೆ.ಕ್ವಾರಂಟೈನ್‌ ಕೇಂದ್ರದಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ, ಕೆ.ಆರ್‌.ಪೇಟೆ ಪಟ್ಟಣದ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರಲ್ಲಿ ಕೋವಿಡ್‌–19 ದೃಢಪಟ್ಟಿದೆ.ಹೀಗಾಗಿ, ಗ್ರಾಮಾಂತರ ಹಾಗೂ ಪಟ್ಟಣ ಠಾಣೆಯನ್ನು ನಾಲ್ಕು ದಿನ ಬಂದ್‌ ಮಾಡಲಾಗಿದೆ.ಮಂಡ್ಯದಲ್ಲಿ ಸೋಂಕಿತರಾದವರಲ್ಲಿ ಬಹುತೇಕರು ಮುಂಬೈನಿಂದ ವಾಪಸ್ ಆದವರಾಗಿದ್ದಾರೆ.ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿದ ಇತಿಹಾಸ ಇರುವವರಲ್ಲಿ ಉಡುಪಿಯ 20 ಮಂದಿಗೆ ಸೋಂಕು ತಗುಲಿದೆ. ಇನ್ನೂ ಆರು ಮಂದಿ ತೆಲಂಗಾಣ ಹಾಗೂ ಕೇರಳದಿಂದ ಬಂದವರಾಗಿದ್ದಾರೆ. ಉಡು‍ಪಿಯಲ್ಲಿ ಸೋಂಕಿತರಾದವರಲ್ಲಿ 1 ವರ್ಷದ ಬಾಲಕಿ ಸೇರಿದಂತೆ 15 ಮಂದಿ ಮಕ್ಕಳು.

ADVERTISEMENT

ಹಾಸನದಲ್ಲಿ ವರದಿಯಾದ 13 ಪ್ರಕರಣಗಳಿಗೂ ಮಹಾರಾಷ್ಟದ ನಂಟಿದೆ. ಬಳ್ಳಾರಿಯಲ್ಲಿ
ವರದಿಯಾದ ಪ್ರಕರಣಗಳಲ್ಲಿ ಕೂಡ ಎಲ್ಲರೂ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ.ಜಾರ್ಖಂಡ್, ಮಹಾರಾಷ್ಟ್ರ ಸೇರಿದಂತೆ ಅನ್ಯರಾಜ್ಯಗಳಿಗೆ ಪ್ರಯಾಣಿಸಿ, ಮರಳಿದವರಲ್ಲಿ ಬೆಳಗಾವಿಯ 9 ಮಂದಿಗೆ ಸೋಂಕು ಖಚಿತವಾಗಿದೆ.ಬೆಂಗಳೂರಿನ ಕೆ.ಆರ್.ಪುರದ ಸೋಂಕಿತ ನಿವಾಸಿಯ ನಿಕಟ ಸಂಪರ್ಕದಲ್ಲಿದ್ದ
ಮಹಿಳೆ ಹಾಗೂ ಬಾಲಕ ಸೋಂಕಿತರಾಗಿದ್ದಾರೆ. ಐವರಿಗೆ ಬೇರೆ ರೋಗಿಗಳ ಸಂಪರ್ಕದಿಂದ ಸೋಂಕು ತಗುಲಿದೆ. ಮಹಾರಾಷ್ಟ್ರಕ್ಕೆ ಪ್ರಯಾಣಿಸಿದ್ದ ಉತ್ತರ ಕನ್ನಡದ 9 ಮಂದಿಗೆ ಸೋಂಕು ಬಂದಿದೆ.

ಪರೀಕ್ಷೆ:ಸಂಯುಕ್ತ ಅರಬ್ ಒಕ್ಕೂಟದಿಂದ (ಯುಎಇ) ಬಂದಿದ್ದವರಲ್ಲಿ ದಕ್ಷಿಣ ಕನ್ನಡದಲ್ಲಿ ಐದು ಮಂದಿಗೆ ಸೋಂಕು ಕಾಣಿಸಿಕೊಂಡಿದೆ.ಮುಂಬೈ ಹಾಗೂ ತೆಲಂಗಾಣಕ್ಕೆ ಪ್ರಯಾಣಿಸಿದ ಹಿನ್ನೆಲೆಯುಳ್ಳ ಧಾರವಾಡದ ಐದು ಮಂದಿಗೆ, ಮಹಾರಾಷ್ಟ್ರದಿಂದ ಮರಳಿದ ರಾಯಚೂರಿನ 5 ಮಂದಿಗೆ ಸೋಂಕು ಖಚಿತವಾಗಿದೆ.ದಾವಣಗೆರೆಯಲ್ಲಿ ಬೇರೆ ರೋಗಿಗಳ ಸಂಪರ್ಕದಿಂದ ಮೂವರಿಗೆ ಸೋಂಕು ಬಂದಿದೆ.

ರಾಜ್ಯದಲ್ಲಿ ಗುರುವಾರ ಒಂದೇ ದಿನ 7,516 ಮಂದಿಯ ಗಂಟಲ ದ್ರವವನ್ನು ಪರೀಕ್ಷೆ ಮಾಡಲಾಗಿದೆ. 15 ಮಂದಿ ಚೇತರಿಸಿಕೊಂಡು
ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ 571ಕ್ಕೆ ತಲುಪಿದೆ.

ಹೊರ ರಾಜ್ಯಗಳಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪ್ರಕರಣಗಳ ಸಂಖ್ಯೆ ಇನ್ನು ಸ್ಪಲ್ಪ ದಿನ ಏರುಗತಿಯಲ್ಲೇ ಇರಲಿದೆ

-ಎಸ್. ಸುರೇಶ್ ಕುಮಾರ್
ಶಿಕ್ಷಣ ಸಚಿವ

***

ಕ್ರೀಡಾ ಚಟುವಟಿಕೆಗೆ ಅವಕಾಶ

ಕ್ಲಬ್‌ಗಳು, ಕ್ರೀಡಾ ಸಂಸ್ಥೆಗಳಲ್ಲಿ ಭಾನುವಾರ ಬಿಟ್ಟು ಉಳಿದ ದಿನಗಳಲ್ಲಿ ಬೆಳಿಗ್ಗೆ 7ಗಂಟೆಯಿಂದ ಸಂಜೆ 7ರವರೆಗೆ ಕ್ರೀಡಾ ಚಟುವಟಿಕೆ ಮತ್ತೆ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಈ ವೇಳೆಯಲ್ಲಿ ಪ್ರೇಕ್ಷಕರು ಪಾಲ್ಗೊಳ್ಳುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ.

ಲಾಕ್‌ಡೌನ್‌ ಸಡಿಲಿಸಿ ರಾಜ್ಯ ಸರ್ಕಾರ ಮೇ 18ರಂದು ಹೊರಡಿಸಿದ ಮಾರ್ಗಸೂಚಿಯಲ್ಲಿ, ಪ್ರೇಕ್ಷಕರಿಗೆ ಅವಕಾಶ ನೀಡದೆ ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಂಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು.

ಆದರೆ, ತಮ್ಮ ವ್ಯಾಪ್ತಿಯಲ್ಲಿ ಕ್ರೀಡಾ ಚಟುವಟಿಕೆ ನಡೆಸುವ ವಿಷಯದಲ್ಲಿ ಸ್ಪಷ್ಟೀಕರಣ ನೀಡುವಂತೆ ಕ್ರೀಡಾ ಸಂಸ್ಥೆಗಳು ಮತ್ತು ಕ್ಲಬ್‌ಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಸರ್ಕಾರ, ಅಂತರ ಕಾಪಾಡಿಕೊಂಡು ಮತ್ತು ನೈರ್ಮಲ್ಯ ಕ್ರಮಗಳನ್ನೂ ಪಾಲಿಸಿ ಕ್ರೀಡಾ ಚಟುವಟಿಕೆಗೆ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.