ADVERTISEMENT

ಮೂರನೇ ಬಾರಿ ದುರ್ಬಳಕೆಯಾಗುತ್ತಿದೆ ಜಮೀನು ದಾಖಲೆಗಳ ಕಣಜ ಭೂಮಿ ಸಾಫ್ಟ್‌ವೇರ್

19 ಎಕರೆ ಸರ್ಕಾರಿ ಭೂಮಿಗೆ ನಕಲಿ ಆರ್‌ಟಿಸಿ ಸೃಷ್ಟಿ * ಗ್ರಾಮಾಂತರ ಜಿಲ್ಲಾಡಳಿತದ ಅಧಿಕಾರಿಗಳು ಶಾಮೀಲು: ಶಂಕೆ *ವಿಜಯಪುರ ಠಾಣೆಯಲ್ಲಿ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 12:47 IST
Last Updated 10 ಸೆಪ್ಟೆಂಬರ್ 2018, 12:47 IST
ಭೂಮಿ ತಂತ್ರಾಂಶ
ಭೂಮಿ ತಂತ್ರಾಂಶ   

ಬೆಂಗಳೂರು: ರಾಜ್ಯದಅತ್ಯಂತ ಜನಪ್ರಿಯ ತಂತ್ರಾಂಶವಾದ ಕಂದಾಯ ಇಲಾಖೆಯ ‘ಭೂಮಿ’ ಸಾಫ್ಟ್‌ವೇರ್‌ ಮತ್ತೊಮ್ಮೆ ದುರ್ಬಳಕೆಯಾಗಿದೆ. ಈ ಬಾರಿ ₹8 ಕೋಟಿ ಮೌಲ್ಯದ ಸರ್ಕಾರಿ ಪಾಳುಭೂಮಿಯನ್ನು ಕಬಳಿಕೆ ಮಾಡಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದ 19 ಎಕರೆ 14 ಗುಂಟೆ ಸರ್ಕಾರಿ ಬೀಳು ಭೂಮಿಯನ್ನು ಕಬಳಿಕೆ ಮಾಡಲಾಗಿದೆ. ಈ ಸಂಬಂಧ ವಿಜಯಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಕಂಪ್ಯೂಟರ್‌ನಲ್ಲಿ ಫೋರ್ಜರಿ ಮಾಡಿ ಆರ್‌ಟಿಸಿ ‌ಬದಲಾವಣೆ ಮಾಡಲಾಗಿದೆ. ರಿಯಲ್‌ ಎಸ್ಟೇಟ್‌ ಮಾಫಿಯಾದ ಜತೆಗೆ ಗ್ರಾಮಾಂತರ ಜಿಲ್ಲಾಡಳಿತದ ಕೆಲವು ಅಧಿಕಾರಿಗಳು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ.

ಈ ಪ್ರಕರಣದ ಬಗ್ಗೆ ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

ADVERTISEMENT

1968–69ರಿಂದ 2001–2002ರ ಸಾಲಿನ ಕೈಬರಹದ ಪಹಣಿಯ ಕಾಲಂ 9ರಲ್ಲಿ ಸರ್ಕಾರಿ ಬೀಳು ಎಂದಿದ್ದು, ಕಾಲಂ 12(2)ರಲ್ಲಿ ವಿ.ಪಿ.ಫಾರೆಸ್ಟ್‌ ಎಂದು ದಾಖಲಾಗಿದೆ. 2016–17ನೇ ಸಾಲಿನಲ್ಲಿ ಸರ್ಕಾರದಿಂದ ಗ್ರಾಮಲೆಕ್ಕಿಗರಿಗೆ ನೀಡಿರುವ ಗಣಕೀಕೃತ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂಬ ಉಲ್ಲೇಖವಿದೆ. ಈ ಜಾಗದಲ್ಲಿ 9 ಮಂದಿ ಅನಧಿಕೃತವಾಗಿ ಮನೆ ಕಟ್ಟಿಕೊಂಡಿದ್ದಾರೆ. ಭೂ ಕಂದಾಯ ಕಾಯ್ದೆ 1964ರ ಕಲಂ 94 ಸಿ ಅಡಿಯಲ್ಲಿ ಕಾಯಂ ಹಕ್ಕುಪತ್ರಕ್ಕಾಗಿ ಅವರು ಅರ್ಜಿ ಸಲ್ಲಿಸಿದ್ದಾರೆ. ತಾಲ್ಲೂಕು ಸರ್ವೆಯರ್ ನಕ್ಷೆ ಸಿದ್ಧಪಡಿಸಿದ್ದಾರೆ. ಮಂಜೂರಾತಿಗಾಗಿ ಗ್ರಾಮ ಲೆಕ್ಕಾಧಿಕಾರಿ ವರದಿ ತಯಾರಿಸಿದ್ದಾರೆ. ಈ ನಡುವೆ, ಈ ಜಾಗ ಹುಚ್ಚಪ್ಪ ಬಿನ್‌ ನಂಜಪ್ಪ ಅವರಿಗೆ ಮಂಜೂರಾಗಿದೆ ಎಂದು ಆರ್‌ಟಿಸಿ ಕಲಂ (9)ರಲ್ಲಿ ದಾಖಲಾಗಿದೆ. ಈ ಜಾಗವನ್ನು 1939ರಲ್ಲಿ ಹರಾಜು ಮೂಲಕ ನೀಡಲಾಗಿದೆ ಎಂದೂ ಉಲ್ಲೇಖಿಸಲಾಗಿದೆ.

ದೇವನಹಳ್ಳಿ ತಾಲ್ಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಇಲ್ಲಿ ಆರ್‌ಟಿಸಿ ತಿದ್ದುಪಡಿ ಹಾಗೂ ಮ್ಯುಟೇಷನ್‌ ನಡೆದಿಲ್ಲ. ಹುಚ್ಚಪ್ಪ ಅವರ ಹೆಸರಿಗೆ ಖಾತೆ ಎಲ್ಲಿ ಹಾಗೂ ಹೇಗೆ ನಮೂದಾಗಿದೆ ಎಂಬುದು ಗೊತ್ತಾಗಿಲ್ಲ ಎಂದು ವರದಿಯಲ್ಲಿ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.

ಈ ಗ್ರಾಮಕ್ಕೆ ಸಂಬಂಧಿಸಿದ ಎಲ್ಲ ಸರ್ಕಾರಿ ಜಮೀನುಗಳ ಪಟ್ಟಿಯನ್ನು ಗ್ರಾಮ ಲೆಕ್ಕಾಧಿಕಾರಿ ಅವರು ಈ ವರ್ಷದ ಜೂನ್‌ನಲ್ಲಿ ‘ಭೂಮಿ’ ತಂತ್ರಾಂಶದಲ್ಲಿ ಪಡೆದಿದ್ದಾರೆ. ಆಗಲೂ ಸಹ ಸರ್ಕಾರಿ ಬೀಳು ಜಾಗ ಎಂದೇ ಇತ್ತು. ತಾಲ್ಲೂಕು ಕಚೇರಿಯಲ್ಲಿರುವ ಸರ್ವೆ ದಾಖಲಾತಿಗಳು ಇದನ್ನೇ ಹೇಳುತ್ತವೆ. ಈ ವರ್ಷದ ಜೂನ್‌ ಹಾಗೂ ಆಗಸ್ಟ್‌ ಅವಧಿಯಲ್ಲಿ ಪಹಣಿ ಬದಲಾವಣೆ ಆಗಿದೆ. ಸರ್ಕಾರಿ ಜಾಗ ಕಬಳಿಸುವ ಉದ್ದೇಶದಿಂದ ಫೋರ್ಜರಿ ಮಾಡಿ ಪಹಣಿ ಬದಲಾವಣೆ ಮಾಡಿರುವ ಹುಚ್ಚಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ದೇವನಹಳ್ಳಿ ಭಾಗದಲ್ಲಿ ಭೂಮಿ ಬೆಲೆ ಗಗನಕ್ಕೆ ಏರುತ್ತಿದೆ. ಇಲ್ಲಿ ಎಕರೆ ಜಾಗಕ್ಕೆ ಮಾರ್ಗಸೂಚಿ ದರ ₹40 ಲಕ್ಷದಷ್ಟು ಇದೆ. 19 ಎಕರೆ ಜಾಗದ ಬೆಲೆ ₹8 ಕೋಟಿಯಷ್ಟು ಆಗುತ್ತದೆ. ಮಾರುಕಟ್ಟೆ ಮೌಲ್ಯ ಎಕರೆಗೆ ₹1 ಕೋಟಿಯಷ್ಟು ಇದೆ. ನಕಲಿ ವ್ಯಕ್ತಿಯ ಹೆಸರಿನಲ್ಲಿ ರಿಯಲ್‌ ಎಸ್ಟೇಟ್‌ ಮಾಫಿಯಾದವರು ಜಾಗವನ್ನು ಕಬಳಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ ಕರೀಗೌಡ ಲಭ್ಯರಾಗಲಿಲ್ಲ.

ಈ ಹಿಂದೆಯೂ ನಡೆದಿತ್ತು

2008ರಲ್ಲಿಮೊದಲ ಬಾರಿಗೆ ಮಂಗಳೂರಿನಲ್ಲಿ ಭೂಮಿ ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಆಗಿನ್ನು ತಂತ್ರಾಂಶ ಜನರಿಗೆ ತಂತ್ರಾಂಶದ ಪರಿಚಯವಾಗಿತ್ತು. ಆಗಲೂ ಸರ್ಕಾರಿ ಜಮೀನನ್ನು ಖಾಸಗಿಯವರ ಹೆಸರಿಗೆ ಬದಲಿಸುವ ಯತ್ನ ಮಾಡಲಾಗಿತ್ತು.

2016ರಲ್ಲಿಯೂ ಒಮ್ಮೆ ಈ ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಂಡು ಭೂಮಿ ಕಬಳಿಸುವ ಪ್ರಯತ್ನ ನಡೆದಿತ್ತು. ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್‌ 29ರಲ್ಲಿ 76.38 ಎಕರೆ ಜಮೀನಿತ್ತು. ಅದನ್ನು ನಾನಾ ವ್ಯಕ್ತಿಗಳಿಗೆ ದರಕಾಸ್ತು ಭೂಮಿಯೆಂದು ಹಂಚಿಕೆ ಮಾಡಲಾಗಿರುತ್ತದೆ. ಇದರಲ್ಲಿ ನಾನಾ ವ್ಯಕ್ತಿಗಳಿಗೆ ಸೇರಿದ್ದ 8.30 ಎಕರೆಯನ್ನು ತಾರಾಬಾಯಿ ಜಾಧವ್‌ ಎಂಬುವರಿಗೆ ಪೋಡಿ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ, ಈ ಪ್ರಕ್ರಿಯೆಗೂ ಮುನ್ನ ಇದಕ್ಕೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿದ್ದವು. ಬಳಿಕ ಈ ಜಮೀನನ್ನು 29/1 ಎನ್ನುವ ಹೊಸ ಸರ್ವೆ ನಂಬರ್‌ ನಮೂದಿಸಿ ಪೋಡಿಗೆ ಸೂಚಿಸಲಾಯಿತು. ಹೀಗೆ ಸರ್ವೆ ನಂಬರ್‌ ಬದಲಿಸಿ ಭೂಮಿ ತಂತ್ರಾಂಶಕ್ಕೆ ಅಳವಡಿಸುವ ಸಂದರ್ಭದಲ್ಲಿ ಇಂಥ ಲೋಪವಾಗಿರುವುದು ಗಮನಕ್ಕೆ ಬಂದಿತ್ತು.

***

* 2002ರಲ್ಲಿ ಭೂಮಿ ತಂತ್ರಾಂಶ ಪರಿಚಯ

* ಮೂರು ಬಾರಿ ತಂತ್ರಾಂಶ ದುರ್ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.