ADVERTISEMENT

Explainer | ಕಾರವಾರದಲ್ಲಿ ‘ಸಾಗರಮಾಲಾ’ ಬೇಗುದಿ: ಇಲ್ಲಿದೆ ಸಮಗ್ರ ಮಾಹಿತಿ

ವಹಿವಾಟು ಹೆಚ್ಚಳ ಸರ್ಕಾರದ ಉದ್ದೇಶ l ಮೀನುಗಾರಿಕೆಗೆ ತೊಡಕು ಎಂಬ ಆತಂಕ

ಸದಾಶಿವ ಎಂ.ಎಸ್‌.
Published 15 ಜನವರಿ 2020, 2:02 IST
Last Updated 15 ಜನವರಿ 2020, 2:02 IST
ಕಾರವಾರ ಬಂದರಿನ ಪ್ರವೇಶ ದ್ವಾರ
ಕಾರವಾರ ಬಂದರಿನ ಪ್ರವೇಶ ದ್ವಾರ   
""

ಕೇಂದ್ರ ಸರ್ಕಾರದ ‘ಸಾಗರಮಾಲಾ’ ಯೋಜನೆಯು ಕಾರವಾರದ ಮೀನುಗಾರರ ನಿದ್ದೆ ಕೆಡಿಸಿದೆ. ಯೋಜನೆಯ ಪ್ರಕಾರ ಈಗಿರುವ ಬಂದರು ಸಾಮರ್ಥ್ಯ, ವ್ಯಾಪ್ತಿ ವಿಸ್ತರಣೆಯಾಗಲಿದ್ದು, ಬೃಹತ್ ಹಡುಗುಗಳ ಸಂಚಾರಕ್ಕೆ ಅವಕಾಶ ಸಿಗಲಿದೆ. ಆದರೆ, ಮೀನುಗಾರರ ದೋಣಿಗಳು ಸಂಚರಿಸುವ ಜಾಗದಲ್ಲೇ ಈ ಕಾಮಗಾರಿ ನಡೆಯುವುದರಿಂದ ಅವರ ನಿತ್ಯದ ಮೀನುಗಾರಿಕೆ ಉದ್ಯೋಗಕ್ಕೆ ತೊಡಕಾಗುವ ಆತಂಕವಿದೆ. ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿ ಯೋಜನೆಯ ಒಳಹೊರಗು ಹೀಗಿದೆ

ಕೇಂದ್ರ ಸರ್ಕಾರವು ಸಣ್ಣ ಬಂದರುಗಳ ಅಭಿವೃದ್ಧಿಗಾಗಿರೂಪಿಸಿದ‘ಸಾಗರಮಾಲಾ’ ಯೋಜನೆಗೆ ಕಾರವಾರದ ವಾಣಿಜ್ಯ ಬಂದರೂ ಆಯ್ಕೆಯಾಗಿದೆ. ಆದರೆ, ಯೋಜನೆಯ ಅಡಿಯಲ್ಲಿನ ಕಾಮಗಾರಿಯು ಈಗ ಇಲ್ಲಿ ವಿವಾದದ ಕೇಂದ್ರಬಿಂದುವಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ಟೊಂಕಕಟ್ಟಿ ನಿಂತಿವೆ. ಆದರೆ, ಮೀನುಗಾರರು, ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ಅಲೆ ತಡೆಗೋಡೆ ಹಾಗೂ ಜಟ್ಟಿ ವಿಸ್ತರಣೆ ಕಾಮಗಾರಿಗಳು ಯೋಜನೆಯ ಭಾಗವಾಗಿ ನಡೆಯಲಿವೆ. ಯೋಜನೆಗೆ 2017ರ ಡಿ.6ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು.

ADVERTISEMENT

ಏನೇನು ಕಾಮಗಾರಿ:‘ಬಂದರಿನ ವಿಸ್ತರಣೆಗೆ ಈಗಾಗಲೇ ₹ 276 ಕೋಟಿ ಮಂಜೂರಾಗಿದೆ. ಇದರಲ್ಲಿ ಬಂದರಿನ ಉತ್ತರಕ್ಕೆ (ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮೀಪ) 1,160 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ಅಂತೆಯೇ,ದಕ್ಷಿಣದ ಅಲೆ ತಡೆಗೋಡೆಯನ್ನು145 ಮೀಟರ್ ವಿಸ್ತರಿಸಲಾಗುತ್ತದೆ. ಈ ಕಾಮಗಾರಿಗಳಿಗೆ ₹ 215 ಕೋಟಿ ನಿಗದಿ ಮಾಡಲಾಗಿದೆ’ ಎಂದು ಬಂದರು ಇಲಾಖೆಯ ಕಾರ್ಯನಿರ್ವಾಹಕಎಂಜಿನಿಯರ್ ಟಿ.ಎಸ್.ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಯೋಜನೆಯ ಭಾಗವಾಗಿ ಮೊದಲು₹ 125 ಕೋಟಿಯಲ್ಲಿ 880 ಮೀಟರ್ ಅಲೆ ತಡೆಗೋಡೆ ನಿರ್ಮಾಣದ ಕೆಲಸ ಶುರು ಮಾಡಲಾಗಿದೆ. ಅದರ ಮುಂದುವರಿದ ಕಾಮಗಾರಿ ನಂತರ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಅಲೆ ತಡೆಗೋಡೆ ನಿರ್ಮಾಣದ ಗುತ್ತಿಗೆಯನ್ನು ಮುಂಬೈನಡಿ.ವಿ.ಪಿ ಇನ್‌ಫ್ರಾ ಪ್ರೊಜೆಕ್ಟ್ಸ್ ಸಂಸ್ಥೆಯು ₹ 109.65 ಕೋಟಿಗೆ ಪಡೆದುಕೊಂಡಿದೆ. ಇದಕ್ಕೆ 2019ರ ಮಾರ್ಚ್ 8ರಂದು ಕಾರ್ಯಾದೇಶ ನೀಡಲಾಗಿದೆ. ಜೆಟ್ಟಿ ವಿಸ್ತರಣೆ ಕಾಮಗಾರಿಗೆ ಅಂದಾಜು ₹ 61 ಕೋಟಿ ವೆಚ್ಚವಾಗಲಿದ್ದು,ಗುತ್ತಿಗೆಯನ್ನುಚೆನ್ನೈನ ಎಂ.ಜೆ.ಕನ್‌ಸ್ಟ್ರಕ್ಷನ್ಸ್‌ ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾರ್ಯಾದೇಶ ಬರಬೇಕಿದೆ. ಈ ಎರಡೂ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಂದರು ಇಲಾಖೆಯು ಮೂರು ವರ್ಷಗಳಗಡುವು ವಿಧಿಸಿದೆ.

****

* ಬರ್ತ್ 1: ಕಾರವಾರದ ವಾಣಿಜ್ಯ ಬಂದರಿನಲ್ಲಿ ಸದ್ಯ ಕಾರ್ಯ ನಿರ್ವಹಣೆಯಲ್ಲಿದೆ.ಇಲ್ಲಿ ಏಕಕಾಲಕ್ಕೆ ಮೂರು ಚಿಕ್ಕ ಹಡುಗುಗಳು ನಿಲ್ಲಬಹುದು

* ಬರ್ತ್ 2: ನಿರ್ಮಾಣದ ಕಾಮಗಾರಿ ಈಗ ಶುರುವಾಗಿದೆ. ಭವಿಷ್ಯದಲ್ಲಿ ಇಂತಹ ಐದು ಬರ್ತ್‌ಗಳನ್ನು ನಿರ್ಮಿಸುವ ಉದ್ದೇಶವಿದೆ

* ತಡೆಗೋಡೆ: 1,160 ಮೀಟರ್ ಉದ್ದ ಅಲೆ ತಡೆಗೋಡೆ ನಿರ್ಮಾಣ;ಈಗಾಗಲೇ ಇರುವ ತಡೆಗೋಡೆ 145 ಮೀಟರ್‌ ವಿಸ್ತರಣೆ

* ದಾಸ್ತಾನು ಘಟಕ: ಕಬ್ಬಿಣದ ಅದಿರು, ಕಲ್ಲಿದ್ದಲು, ಸಕ್ಕರೆ, ಸಿಮೆಂಟ್ ಮೊದಲಾದ ಸರಕು ಸಂಗ್ರಹಕ್ಕೆ ಬರ್ತ್ ಹಿಂಭಾಗದಲ್ಲಿ ದಾಸ್ತಾನು ಘಟಕ ನಿರ್ಮಾಣ

* ದಟ್ಟಣೆ ನಿರ್ವಹಣೆ: ಸುರಕ್ಷಿತ ಪಥದರ್ಶಕ ಮತ್ತು ಪರಿಣಾಮಕಾರಿ ಸಂಚಾರ ನಿರ್ವಹಣೆಗೆವೆಸೆಲ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ವಿಟಿಎಂಎಸ್) ಅಳವಡಿಕೆ

* ಬೃಹತ್ ಹಡಗು: ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಪರ್ಮನೆಂಟ್ ಅಸೋಸಿಯೇಷನ್ ನ್ಯಾವಿಗೇಷನ್ ಕಾಂಗ್ರೆಸ್ (ಪಿಐಎಎನ್‌ಸಿ) ಮಾನದಂಡ ಆಧರಿಸಿ ವಿನ್ಯಾಸ ಮಾಡಿರುವ ಹಡಗುಗಳು ಬಂದರಿನಲ್ಲಿ ಲಂಗರು ಹಾಕಲು ವ್ಯವಸ್ಥೆ

* ಆಮದು–ರಫ್ತು:ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್, ಸಕ್ಕರೆ, ಅಲ್ಯುಮೀನಿಯಂ, ಆಹಾರ ಧಾನ್ಯ, ಗ್ರಾನೈಟ್, ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರ, ಬಿಟುಮಿನ್ ಮೊದಲಾದ ಸರಕು ಇಲ್ಲಿ ಆಮದು–ರಫ್ತು ಆಗುತ್ತಿದ್ದು, ಇವುಗಳ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ

******

ರೈಲ್ವೆ ಸಂಪರ್ಕ ಅಭಿವೃದ್ಧಿ

ರಫ್ತಾಗುವ ಕಬ್ಬಿಣದ ಅದಿರು ಮತ್ತು ಅಮದಾಗುವ ಕಲ್ಲಿದ್ದಲು ಸೇರಿದಂತೆ ಇನ್ನುಮುಂದೆ ಬೃಹತ್ ಪ್ರಮಾಣದ ಸರಕು ಇಲ್ಲಿಂದ ನಿರ್ವಹಣೆ ಆಗಲಿದೆ. ಇದಕ್ಕಾಗಿ ಕೊಂಕಣ ರೈಲ್ವೆ ಸಜ್ಜಾಗಿದೆ. ಎರಡು ಲೇನ್‌ಗಳ ಮಾರ್ಗವನ್ನು ಬಂದರಿಗಾಗಿ ಮೀಸಲಿಡುವ ಯೋಜನೆ ಇದೆ

ಹೆದ್ದಾರಿ ಅಭಿವೃದ್ಧಿ

ಬಂದರು ವಿಸ್ತರಣೆಯಿಂದ ಹೆಚ್ಚುವರಿ ಸರಕು ಸಾಗಿಸಲು ಹೆದ್ದಾರಿ ಇಲಾಖೆ ಯೋಜನೆ ಹಾಕಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 66ನ್ನು ಮರುಹೊಂದಾಣಿಕೆ ಮಾಡಿ, ಸಂಚಾರ ದಟ್ಟಣೆ ನಿವಾರಣೆಗೆ ಮಾರ್ಗದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗುವುದು.

ಪ್ರಯೋಜನವೇನು?

ಕಾರವಾರದ ವಾಣಿಜ್ಯ ಬಂದರುಎರಡು ಬೆಟ್ಟಗಳ ನಡುವೆ ನೈಸರ್ಗಿಕವಾಗಿ ನಿರ್ಮಾಣವಾದಕಾಲುವೆಯ ಬದಿಯಲ್ಲಿದೆ. ಇಲ್ಲಿ ಈಗ ಬೃಹತ್ ಗಾತ್ರದ ಹಡಗುಗಳು ಬರಲು ಸ್ಥಳದ ಕೊರತೆಯಿದೆ. ಅಲ್ಲದೇ ಇಲ್ಲಿ ಆಳವೂ ಕಡಿಮೆ. ಕಳೆದ ಎರಡು ವರ್ಷಗಳಲ್ಲಿ₹ 33 ಕೋಟಿ ವೆಚ್ಚ ಮಾಡಿಬಂದರಿನ ಸುತ್ತಮುತ್ತ ಸಮುದ್ರದಿಂದ ಹೂಳು ತೆಗೆಯಲಾಗಿದೆ. ಹಾಗಾಗಿ ಸರಾಸರಿ 8.5 ಮೀಟರ್ ಆಳವಿದೆ. ಯೋಜನೆ ಪೂರ್ಣಗೊಂಡಾಗ ಈ ಪ್ರದೇಶದ ಆಳ 14 ಮೀಟರ್ ಆಗಲಿದೆ.

ಈಗ ಮಂಜೂರಾಗಿರುವ ಕಾಮಗಾರಿ ಪೂರ್ಣಗೊಂಡ ಬಳಿಕ200ಮೀಟರ್‌ನಒಂದು ಬೃಹತ್ ಹಡಗನ್ನು ಲಂಗರು ಹಾಕಬಹುದಾಗಿದೆ. 130 ಮೀಟರ್‌ನ ಎರಡು ಹಡಗುಗಳನ್ನು ಏಕಕಾಲದಲ್ಲಿನಿಲ್ಲಿಸಬಹುದು ಎನ್ನುತ್ತಾರೆಬಂದರು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಎಸ್.ರಾಠೋಡ್.

ಸರ್ಕಾರದ ವಾದವೇನು?

* ಒಟ್ಟು 510 ಮೀಟರ್ ಉದ್ದದ ಜೆಟ್ಟಿ ನಿರ್ಮಾಣದಿಂದ ಮೂರು ಹಡಗು ಏಕಕಾಲದಲ್ಲಿ ಲಂಗರು ಹಾಕಬಹುದು

* 14 ಮೀಟರ್‌ ಹೂಳೆತ್ತಲು ಅವಕಾಶ ನೀಡಲಾಗಿದ್ದು, ಬೃಹತ್ ಹಡಗುಗಳ ಸಂಚಾರಕ್ಕೆ ಅನುಕೂಲವಾಗಲಿದೆ

* ಕಾರವಾರ ಸುತ್ತಮುತ್ತ ಪ್ರತ್ಯಕ್ಷ ಹಾಗೂ ‍ಪರೋಕ್ಷವಾಗಿ ವಿವಿಧ ಉದ್ಯೋಗಾವಕಾಶಗಳು ಹೆಚ್ಚಲಿವೆ

* ಮೀನುಗಾರಿಕಾ ದೋಣಿಗಳಿಗೂ ರಕ್ಷಣೆ ಸಿಕ್ಕಿ, ಮತ್ಸ್ಯೋದ್ಯಮಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ

––––––––

ಮೀನುಗಾರರ ಆತಂಕವೇನು?

* ಮೀನುಗಾರರ ಪ್ರಮುಖ ತಾಣವಾದ ಅಲಿಗದ್ದಾವನ್ನು
ಮುಚ್ಚಿದಾಗ ಮೀನುಗಾರಿಕೆಗೆ ಬಹಳ ತೊಂದರೆಆಗಬಹುದು

* ಭವಿಷ್ಯದಲ್ಲಿ ಬೈತಖೋಲ್‌ನಮೀನುಗಾರಿಕಾ ಬಂದರಿಗೆ ಮೀನುಗಾರರ ದೋಣಿಗಳು ಹೋಗಲುಸ್ಥಳ ದೊರೆಯದೇ ಇರಬಹುದು

* ಬಂದರು ನಗರಕ್ಕೆ ಹೊಂದಿಕೊಂಡಿದ್ದು,ಅದಿರು ಸಾಗಣೆಯಂತಹ ಚಟುವಟಿಕೆಗಳುಆರೋಗ್ಯ ಸಮಸ್ಯೆ ತರಬಹುದು

* ಬೃಹತ್ ಅಲೆ ತಡೆಗೋಡೆ ನಿರ್ಮಾಣದಿಂದ ಕಡಲತೀರದ ಮತ್ತೊಂದು ಭಾಗದಲ್ಲಿ ಕೊರೆತ ಆಗಲಿದೆ

* ಬಂದರು ವಿಸ್ತರಣೆಯಿಂದ ಕಡಲತೀರದ ಮೇಲೆ ಒತ್ತಡ ಹೆಚ್ಚಲಿದ್ದು, ವಾಯುವಿಹಾರಕ್ಕೆ ಅವಕಾಶವಿರದು

* ಕೋಣೆನಾಲಾ (ಮುಖ್ಯ ಚರಂಡಿ) ಸಮುದ್ರ ಸೇರುವ ಸ್ಥಳವನ್ನು ಮುಚ್ಚುವುದರಿಂದ ನಗರದಲ್ಲಿ ಆರೋಗ್ಯ ಸಮಸ್ಯೆ ಆಗಬಹುದು

* ಬಂದರಿಗೆ ನಗರದ ಮೂಲಕವೇ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಮತ್ತಷ್ಟು ಜನರು ನೆಲೆ ಕಳೆದುಕೊಳ್ಳಬಹುದು

*****

ದಾಸ್ತಾನು ಘಟಕ: ಸರಕು ಸಂಗ್ರಹಕ್ಕೆ ಬರ್ತ್ ಹಿಂಭಾಗದಲ್ಲಿ ಗೋದಾಮು, ಸಾರಿಗೆ ಶೆಡ್, ಶೀತಲೀಕರಣ ಘಟಕ, ಕಂಟೇನರ್ ಸೌಲಭ್ಯ, ಸಿಬ್ಬಂದಿ ವಸತಿಗೃಹ ಅಭಿವೃದ್ಧಿ ಪ್ರಸ್ತಾವ

ಆಮದು–ರಫ್ತು: ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್, ಸಕ್ಕರೆ, ಅಲ್ಯುಮೀನಿಯಂ, ಆಹಾರ ಧಾನ್ಯ, ಗ್ರಾನೈಟ್, ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರ, ಬಿಟುಮಿನ್ ಮೊದಲಾದ ಸರಕು ಇಲ್ಲಿ ಆಮದು–ರಫ್ತು ಆಗುತ್ತಿದ್ದು, ಇವುಗಳುಭಾರಿ ಪ್ರಮಾಣದಲ್ಲಿ ಹೆಚ್ಚಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.