ADVERTISEMENT

ಕಂದಾಯ ಅಧಿಕಾರಿಗಳನ್ನಷ್ಟೇ ತಹಶೀಲ್ದಾರ್ ಮಾಡಿ

ಸಚಿವರ ಕೆಎಎಸ್‌ ಅಧಿಕಾರಿಗಳ ಪತ್ರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 20:08 IST
Last Updated 1 ಮಾರ್ಚ್ 2019, 20:08 IST
   

ಬೆಂಗಳೂರು: ಕಂದಾಯ ಇಲಾಖೆಯ ಅಧಿಕಾರಿಗಳನ್ನು ಮಾತ್ರ ತಹಶೀಲ್ದಾರ್‌ ಆಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕೆಎಎಸ್‌ ಅಧಿಕಾರಿಗಳ ಸಂಘವು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಪತ್ರ ಬರೆದಿದೆ.

‘ವಿವಿಧ ಸಚಿವಾಲಯದ ಸೆಕ್ಷನ್‌ ಅಧಿಕಾರಿಗಳು, ಅಧೀನ ಕಾರ್ಯದರ್ಶಿಗಳು, ಇತರ ಶ್ರೇಣಿಯ ಅಧಿಕಾರಿಗಳು ಅಲ್ಲದೆ, ಪಂಚಾಯತ್‌ರಾಜ್‌ ಇಲಾಖೆಯ ಅಧಿಕಾರಿಗಳು ವಿವಿಧ ರೀತಿಯ ಪ್ರಭಾವ ಬೀರಿ ತಹಶೀಲ್ದಾರ್ ಆಗಿ ನೇಮಕ ಹೊಂದಿದ್ದಾರೆ. ಈ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಪೂರ್ಣ ಮಾಹಿತಿ ಇರುವುದಿಲ್ಲ. ದಕ್ಷತೆಯಿಂದ ಕೆಲಸ ನಿರ್ವಹಿಸಲು ವಿಫಲರಾಗುತ್ತಿದ್ದಾರೆ. ತಾಲ್ಲೂಕು ಕಚೇರಿಯ ಅಧೀನ ಅಧಿಕಾರಿಗಳ ನಿರ್ದೇಶನದಂತೆ ಕೆಲಸ ನಿರ್ವಹಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಇದರಿಂದ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಸದ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು, ಕಂದಾಯ ಇಲಾಖೆಯ ಹಾಗೂ ಚುನಾವಣಾ ಕೆಲಸಗಳ ಅನುಭವ ಇರುವ ಕಂದಾಯ ಇಲಾಖೆಯ ತಹಶೀಲ್ದಾರ್‌ಗಳ ನೇಮಕಾತಿ ಅತ್ಯವಶ್ಯಕ. ರಾಜ್ಯದಲ್ಲಿ 227 ತಾಲ್ಲೂಕುಗಳಿದ್ದು, ಬೇರೆ ಇಲಾಖೆಯ ಅಧಿಕಾರಿಗಳು ತಹಶೀಲ್ದಾರ್‌ಗಳಾಗಿ ಕೆಲಸ ಮಾಡುತ್ತಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ. ಈ ಅಧಿಕಾರಿಗಳನ್ನು ಮೂಲ ಇಲಾಖೆಗೆ ವಾಪಸು ಕಳುಹಿಸಬೇಕು’ ಎಂದು ಒತ್ತಾಯಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.