ADVERTISEMENT

ರಾಜತಾಂತ್ರಿಕ ಪಾಸ್‌ಪೋರ್ಟ್‌ಗೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಮನವಿ

ರಾಜ್ಯ ಸರ್ಕಾರದಿಂದ ಇಂಗ್ಲಿಷ್‌ನಲ್ಲಿ ಗುರುತಿನ ಚೀಟಿ ಕೋರಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ

ರಾಜೇಶ್ ರೈ ಚಟ್ಲ
Published 19 ಸೆಪ್ಟೆಂಬರ್ 2022, 18:44 IST
Last Updated 19 ಸೆಪ್ಟೆಂಬರ್ 2022, 18:44 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ರಾಜ್ಯ ಸಚಿವ ದರ್ಜೆಗೆ ಸಮನಾದ ಸ್ಥಾನಮಾನ ನೀಡಿದ ಬೆನ್ನಲ್ಲೆ, ಇಂಗ್ಲಿಷ್‌ ಭಾಷೆಯಲ್ಲಿ ‘ಗುರುತಿನ ಚೀಟಿ’ ಮತ್ತು ಡಿಪ್ಲೊಮ್ಯಾಟಿಕ್‌ (ರಾಜತಾಂತ್ರಿಕ) ಪಾಸ್‌ಪೋರ್ಟ್‌ ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಯ ಪ್ರಧಾನ ಕಾರ್ಯ ದರ್ಶಿ ಎನ್‌. ಮಂಜುನಾಥ್ ಪ್ರಸಾದ್‌ ಅವರಿಗೆ ಈ ಎರಡೂ ಮನವಿಗಳನ್ನು ಜೋಶಿ ಸಲ್ಲಿಸಿದ್ದಾರೆ. ಅವರು ಈ ಮನವಿಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಟಿಪ್ಪಣಿ ಸಹಿತ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಕಾರ್ಯದರ್ಶಿಗೆ ರವಾನಿಸಿದ್ದು, ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅನುಮೋದನೆಗೆ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

‘ಕನ್ನಡ ನಾಡು– ನುಡಿಗೆ 108 ವರ್ಷಗಳಿಂದ ಅನುಪಮ ಸೇವೆ ಸಲ್ಲಿಸು ತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ ಎಲ್ಲ ಕನ್ನಡಿಗರ ಏಕಮಾತ್ರ ಸಂಸ್ಥೆ. ಇಂಥ ಘನ ಸಂಸ್ಥೆಯ ಅಧ್ಯಕ್ಷನಾದ ನನಗೆ ಸರ್ಕಾರ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಿದೆ. ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ಪರಿಷತ್ತಿನ ಅಧ್ಯಕ್ಷರಾದ ನನಗೆ ಕನ್ನಡಪರ ಚಟುವಟಿಕೆಗಾಗಿ ಬೇರೆ ಬೇರೆ ರಾಜ್ಯ, ವಿದೇಶಗಳಿಗೆ ಹೋಗುವ ಸಂದರ್ಭಗಳಲ್ಲಿ ವೀಸಾ ಮತ್ತಿತರ ದಾಖಲೆಗಳಿಗಾಗಿ ಗುರುತಿನ ಚೀಟಿ ಅವಶ್ಯವಾಗಿದೆ. ಹೀಗಾಗಿ, 2026ರ ನ. 26ರವರೆಗೆ ಮಾನ್ಯತೆ ಕಾರ್ಡ್‌ ಒದಗಿಸಬೇಕು’ ಎಂದು ಮನವಿಯಲ್ಲಿ ಕೋರಿರುವ ಜೋಶಿ, ಇಂಗ್ಲಿಷ್‌ನಲ್ಲಿ ಗುರುತಿನ ಚೀಟಿ ಹೇಗಿರಬೇಕೆಂದು ನಮೂನೆಯನ್ನು ಲಗತ್ತಿಸಿದ್ದಾರೆ.

ADVERTISEMENT

ಮತ್ತೊಂದು ಮನವಿಯಲ್ಲಿ ಜೋಶಿ, ‘ಬಹರೇನ್‌ ಕನ್ನಡ ಸಂಘದ ನೂತನ ಕನ್ನಡ ಭವನದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲು, ಅಧಿಕೃತವಾಗಿ ಪ್ರಯಾಣ ಮಾಡಲು ‘ರಾಜತಾಂತ್ರಿಕ ಪಾಸ್‌ಪೋರ್ಟ್‌‘ನ ಸೌಲಭ್ಯ ಇರುತ್ತದೆ. ಈ ಪಾಸ್‌ಪೋರ್ಟ್‌ ಪಡೆಯಲು ಸಲ್ಲಿಸಲಾಗುವ ದಾಖಲೆಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು ಸಹಿ ಮಾಡುವಂತೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಮನವಿಯಲ್ಲಿ ಕೋರಿದ್ದಾರೆ.

‘ಜೋಶಿ ಅವರ ಎರಡೂ ಮನವಿ ಗಳನ್ನು ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಸರ್ಕಾರದ ನೌಕರ ರಿಗೆ ಮಾತ್ರ ಗುರುತಿನ ಚೀಟಿ ನೀಡಲಾಗುತ್ತದೆ. ಅಲ್ಲದೆ, ರಾಜತಾಂತ್ರಿಕ ಪಾಸ್‌ಪೋರ್ಟ್‌ ಸೌಲಭ್ಯ ಪಡೆಯಲು ಪ್ರತ್ಯೇಕ ಮಾನದಂಡಗಳಿವೆ’ ಎಂದು ಡಿಪಿಎಆರ್‌ ಕಾರ್ಯಕಾರಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಸಂಪುಟ ಸ್ಥಾನಮಾನ ಕೊಡಿ– ಪ್ರಧಾನ ಗುರುದತ್ತ ಮನವಿ

‘ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಿ ಹೊರಡಿಸಿರುವ ಸರ್ಕಾರಿ ಆದೇಶವನ್ನು ಪರಿಷ್ಕರಿಸಿ ‘ಕನ್ನಡ ರಾಯಭಾರಿ’ ಶೀರ್ಷಿಕೆಯೊಂದಿಗೆ ಸಂಪುಟ ಸಚಿವ ದರ್ಜೆಯ ಸ್ಥಾನಮಾನ ಮತ್ತು ಸವಲತ್ತುಗಳನ್ನು ಶೀಘ್ರವಾಗಿ ನೀಡಬೇಕು’ ಎಂದು ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷ ಪ್ರಧಾನ ಗುರುದತ್ತ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಮೂರು ಪುಟಗಳ ಪತ್ರದಲ್ಲಿ ಜೋಶಿಯವರ ಸಾಧನೆಗಳನ್ನು ವಿವರಿಸಿರುವ ಅವರು, ‘ಎಚ್‌.ಡಿ.ದೇವೇಗೌಡರು ಹಾಗೂ ನಿಮ್ಮ ಸಚಿವ ಸಂಪುಟದ ಕೆಲವು ಸಚಿವರು ಕೂಡಾ ಸಂಪುಟ ಸಚಿವ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿರುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ’ ಎಂದೂ ಕೋರಿದ್ದಾರೆ.

ಏನಿದು ‘ರಾಜತಾಂತ್ರಿಕ ಪಾಸ್‌ಪೋರ್ಟ್‌’

ದೇಶವನ್ನು ವಿದೇಶದಲ್ಲಿ ಪ್ರತಿನಿಧಿಸುವ ಅಥವಾ ಸರ್ಕಾರಿ ಕೆಲಸಕ್ಕಾಗಿ ವಿದೇಶ ಪ್ರವಾಸ ಮಾಡುವ ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಲಾಗುತ್ತದೆ. ವ್ಯಾಪಾರ ಉದ್ದೇಶಗಳಿಗಾಗಿ ಅಥವಾ ರಜೆಗಾಗಿ ಪ್ರಯಾಣಿಸುವ ಸ್ಥಳೀಯ ನಾಗರಿಕರು ಈ ಪಾಸ್‌ಪೋರ್ಟ್‌ ಪಡೆಯಲು ಅರ್ಹರಲ್ಲ. ಭಾರತೀಯ ವಿದೇಶಾಂಗ ಸೇವಾ ವಿಭಾಗದಲ್ಲಿ ಕೆಲಸ ಮಾಡುವ ಭಾರತೀಯರು ವಿದೇಶಿ ಪ್ರವಾಸಗಳಿಗೆ ಪಾಸ್‌ಪೋರ್ಟ್‌ ಪಡೆಯಲು ಅರ್ಹರು. ಅಲ್ಲದೆ, ಭಾರತೀಯ ವಿದೇಶಾಂಗ ಸೇವೆ ಮತ್ತು ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಕುಟುಂಬ ಸದಸ್ಯರು ಶಿಕ್ಷಣ, ರಜೆ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ಕೂಡಾ ಈ ಪಾಸ್‌ಪೋರ್ಟ್ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.