ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎ.ಐ) ಬಳಸಿ ಸಿದ್ಧಪಡಿಸಿದ ಮೊಬೈಲ್ ಆಧಾರಿತ ಅಭ್ಯರ್ಥಿ ದೃಢೀಕರಣ (ಮೊಬೈಲ್‌ಬೇಸ್ಡ್ ಅಥೆಂಟಿಕೇಷನ್) ವ್ಯವಸ್ಥೆಯನ್ನು ಶನಿವಾರ ನಡೆದ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯಶಸ್ವಿಯಾಗಿ ಬಳಸಿತು.
ವಿಧಾನಪರಿಷತ್‌ನಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹಾಗೂ ಇತರೆ ಹುದ್ದೆಗಳ ನೇಮಕಾತಿಗಾಗಿ ನಾಲ್ಕು ದಿನಗಳ ಪರೀಕ್ಷೆ ಶನಿವಾರ ಆರಂಭವಾಗಿದೆ. ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ತಡೆಯಲು ಪ್ರಾಧಿಕಾರದ ಎಂಜಿನಿಯರ್‌ಗಳ ತಂಡ ರೂಪಿಸಿದ ತಾಂತ್ರಿಕತೆಯನ್ನು ಪ್ರಯೋಗಾರ್ಥವಾಗಿ ಬಳಸಲಾಯಿತು.
‘ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಮೊಬೈಲ್ ಆ್ಯಪ್ ಬಳಸಿ ಅವರ ಮುಖದ ಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ. ಇದು, ತಕ್ಷಣವೇ ಕೆಇಎ ಸರ್ವರ್ ನೊಂದಿಗೆ ಆನ್‌ಲೈನ್ ಮೂಲಕ ಸಂಪರ್ಕಗೊಂಡು ಅಭ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸಿದ್ದ ಭಾವಚಿತ್ರದ ಜತೆ ತಾಳೆ ನೋಡುತ್ತದೆ. ಅಭ್ಯರ್ಥಿಯ ನೈಜತೆ ದೃಢಪಡಿಸುತ್ತದೆ. ಆ ಮೂಲಕ ನಕಲಿ ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸದಂತೆ ತಡೆಯಲು ಸಾಧ್ಯವಾಗುತ್ತದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ವಿವರಿಸಿದರು.
ಮೊದಲ ದಿನ ಬೆಳಿಗ್ಗೆ 74 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 267 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಈ ತಾಂತ್ರಿಕ ವ್ಯವಸ್ಥೆಯು ಮೊದಲ ದಿನದ ಪ್ರಯೋಗ ಯಶಸ್ವಿಯಾಗಿದ್ದು, ಇನ್ನು ಮುಂದೆ ಇತರ ಪರೀಕ್ಷೆಗಳಿಗೂ ಈ ತಂತ್ರಜ್ಞಾನದ ಬಳಕೆ ವಿಸ್ತರಿಸಲಾಗುತ್ತದೆ ಎಂದೂ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.