ADVERTISEMENT

ಮಲಯಾಳ ಮಸೂದೆ, ಬಾಂಗ್ಲಾ ವಲಸಿಗರ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲಿ: ಆರ್‌.ಅಶೋಕ

ಸಿಎಂ, ಸಭಾಧ್ಯಕ್ಷರಿಗೆ ಪತ್ರ ಬರೆದು ಆರ್‌.ಅಶೋಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 15:25 IST
Last Updated 14 ಜನವರಿ 2026, 15:25 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ‘ಕೇರಳದಲ್ಲಿ ಕನ್ನಡಕ್ಕೆ ಕುತ್ತು ತಂದಿರುವ ಮಲಯಾಳ ಮಸೂದೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್‌ ಮಾಫಿಯಾ, ಅಕ್ರಮ ಬಾಂಗ್ಲಾ ವಲಸಿಗರ ವಿಷಯವನ್ನು ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಿ’ ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್‌.ಅಶೋಕ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ‘ವಿಬಿ ಜಿ ರಾಮ್‌ ಜಿ’ ಕುರಿತು ಚರ್ಚಿಸಲು ಜನವರಿ 22ರಿಂದ 31 ರವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಸರಗೋಡು ಕನ್ನಡಿಗರಿಗೆ ಮಾರಕವಾಗಿರುವ ‘ಮಲಯಾಳ ಭಾಷಾ ಮಸೂದೆ’ಯ ಕುರಿತೇ ವಿಶೇಷ ಅಧಿವೇಶನ ನಡೆಸಬೇಕು. ಮಲಯಾಳ ಭಾಷಾ ಪ್ರಾಬಲ್ಯವನ್ನು ಮೆರೆದು ಉಳಿದ ಭಾಷೆಗಳನ್ನು ಹೊರದೂಡುವ ಮತ್ತು ಕನ್ನಡ ಭಾಷಿಕರಿಗೆ ಹಾಗೂ ಕನ್ನಡದ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಮಸೂದೆ ಒಳಗೊಂಡಿದೆ ಎಂದು ಅವರು ಹೇಳಿದರು.

ADVERTISEMENT

‘ಇವರಿಗೆ ವಿಬಿ ಜಿ ರಾಮ್‌ ಜಿ ಕುರಿತು ತಕರಾರು ಇದ್ದರೆ ಕೇಂದ್ರ ಸರ್ಕಾರದ ಬಳಿ ಹೋಗಿ ಚರ್ಚೆ ಮಾಡಲಿ. ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಯಬೇಕು. ರಾಜ್ಯಕ್ಕೆ ಮಾರಕವಾಗಿರುವ ಬಾಂಗ್ಲಾದ ಅಕ್ರಮ ವಲಸಿಗರ ಬಗ್ಗೆ ಚರ್ಚೆ ಆಗಬೇಕು. ಕೋಗಿಲು ಬಡಾವಣೆಯಲ್ಲಿ ತೆರವುಗೊಂಡಿರುವ ಅಕ್ರಮ ನಿವಾಸಿಗಳಿಗೆ ಮನೆ ಕೊಡುವುದರ ಔಚಿತ್ಯದ ಬಗ್ಗೆ ಪ್ರಶ್ನೆ ಮಾಡಬೇಕಿದೆ’ ಎಂದು ಹೇಳಿದರು.

ವಿಬಿ ಜಿ ರಾಮ್‌ ಜಿ ಯೋಜನೆಯಡಿ ಕೇಂದ್ರ ಸರ್ಕಾರ ₹17,000 ಕೋಟಿ ನೀಡಿದರೆ, ರಾಜ್ಯ ಸರ್ಕಾರ ₹10,000 ಕೋಟಿ ನೀಡಬೇಕಿದೆ. ಕೇಂದ್ರದ ಪಾಲಿನಲ್ಲಿ ಕಡಿತವಾಗಿಲ್ಲ. ಇನ್ನಷ್ಟು ಹೆಚ್ಚು ಅನುದಾನ ನೀಡುವಂತೆ ಬದಲಾವಣೆ ತರಲಾಗಿದೆ. ಕೆಲಸದ ದಿನಗಳನ್ನು 125 ಕ್ಕೆ ಹೆಚ್ಚಿಸಲಾಗಿದೆ. ಹಣ ದುರುಪಯೋಗ ಆಗಬಾರದು ಎಂಬ ಕಾರಣಕ್ಕೆ ಬಯೋಮೆಟ್ರಿಕ್‌ ಅಳವಡಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಯೋಜನೆಯ ವೆಚ್ಚವನ್ನು ಶೇ 6 ರಿಂದ ಶೇ 9 ಕ್ಕೆ ಹೆಚ್ಚಿಸಲಾಗಿದೆ ಎಂದು ಅಶೋಕ ತಿಳಿಸಿದರು.

‘ನರೆಗಾ ಯೋಜನೆಯಿಂದ ಮಹಾತ್ಮಗಾಂಧಿ ಹೆಸರನ್ನು ತೆಗೆದು ಹಾಕಿದ್ದಾರೆ ಎಂಬ ಕಾರಣಕ್ಕೆ ವಿಶೇಷ ಅಧಿವೇಶನ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನವರು ಗಾಂಧಿಯವರ ಯಾವುದೇ ತತ್ವಗಳನ್ನು ಪಾಲಿಸುತ್ತಿಲ್ಲ. ಗಾಂಧಿ ರಾಮಭಕ್ತರಾಗಿದ್ದರು, ಕಾಂಗ್ರೆಸ್‌ನವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದನ್ನು ವಿರೋಧಿಸಿತ್ತು. ಗಾಂಧಿ ಪಾನ ನಿಷೇಧಕ್ಕೆ ಹೋರಾಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಗಲ್ಲಿ ಗಲ್ಲಿಗಳಲ್ಲೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಿದೆ. ಈಗ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಇದು ಆಷಾಢಭೂತಿತನ ಅಲ್ಲವೇ’ ಎಂದು ಪ್ರಶ್ನಿಸಿದರು.

ಈ ಕಾಯ್ದೆ ವಿರುದ್ಧ ತುರ್ತಾಗಿ ನಿರ್ಣಯ ಪಾಸು ಮಾಡಿಕೊಂಡು ರಾಜಕೀಯ ಹೋರಾಟ ಮಾಡಬೇಕೆಂಬುದೇ ಇವರ ಉದ್ದೇಶ. ಹೈಕಮಾಂಡ್‌ ಅಣತಿಗೆ ತಕ್ಕಂತೆ ಅಧಿವೇಶನ ನಡೆಯುತ್ತಿದೆ
- ವಿ.ಸುನಿಲ್ ಕುಮಾರ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.