ADVERTISEMENT

ಕೋ.ಚೆ: ಆರಿತು ಹೋರಾಟದ ಕಿಚ್ಚು!

‘ಕರ್ನಾಟಕ ಏಕೀಕರಣ ಹೋರಾಟದ ಯುದ್ಧದ ಕುದುರೆ’

ಕೆ.ನರಸಿಂಹ ಮೂರ್ತಿ
Published 23 ಫೆಬ್ರುವರಿ 2019, 20:30 IST
Last Updated 23 ಫೆಬ್ರುವರಿ 2019, 20:30 IST
ಕೋ.ಚೆನ್ನಬಸಪ್ಪ
ಕೋ.ಚೆನ್ನಬಸಪ್ಪ   

ಬಳ್ಳಾರಿ: ‘ಪರವಾಲೇದಂಡಿ, ಸ್ಮಾರ್ಟ್‌ಗಾ ಉನ್ನಾಡು, ಪಿಲ್ಲಕಾಯ, ಬ್ರೈಟ್‌ಬಾಯ್‌’ –1935ರಲ್ಲಿ 8ನೇ ತರಗತಿ ಪಾಸಾಗಿ ಹೈಸ್ಕೂಲ್‌ಗೆ ಸೇರಿಕೊಳ್ಳಲು ರೈತ ಕುಟುಂಬದ ಕೋ. ಚೆನ್ನಬಸಪ್ಪ ಅವರು ಸಂಬಂಧಿಕರೊಂದಿಗೆ ಕೂಡ್ಲಿಗಿಯ ಕಾನಾಮಡುಗು ಕುಗ್ರಾಮದಿಂದ ಬಳ್ಳಾರಿಯ ಮುನ್ಸಿಪಲ್‌ ಪ್ರೌಢಶಾಲೆಗೆ ಬಂದಿದ್ದರು. ಆಗ ಹೆಡ್‌ಮಾಸ್ಟರ್‌ ಆಗಿದ್ದ ವೇದಾಂತಂ ಅಯ್ಯಂಗಾರ್‌, ಅವರ ಬಗ್ಗೆ ಆಡಿದ್ದ ಮೆಚ್ಚುಗೆಯ ಮಾತಿದು.

ಅವರ ಮಾತಿನಂತೆ ತಮ್ಮ ಜೀವನದುದ್ದಕ್ಕೂ ‘ಬ್ರೈಟ್‌ ಬಾಯ್‌’ ಗುಣವನ್ನು ಕೋಚೆ ಬೆಚ್ಚಗೆ ಕಾಪಾಡಿಕೊಂಡಿದ್ದರು.

‘ಆಗ ಕನ್ನಡದಲ್ಲಿ ಉತ್ತರಿಸಲು ಅಯ್ಯಂಗಾರ್‌ ಅವಕಾಶ ನೀಡದಿದ್ದರೆ ವಿದ್ಯಾಭ್ಯಾಸ ಮುಂದುವರಿಸುವುದು ಕಷ್ಟವಾಗುತ್ತಿತ್ತು’ ಎಂದು ತಮ್ಮ ಆತ್ಮಕಥೆ ‘ನನ್ನ ಮನಸ್ಸು ನನ್ನ ನಂಬುಗೆ’ಯಲ್ಲಿ ಬರೆದುಕೊಂಡಿದ್ದ ಕೋಚೆ, ‘ಇಂಗ್ಲಿಷ್‌ ಶಿಕ್ಷಣ ಮಾಧ್ಯಮ ಬೇಕೆಂದು ವಾದಿಸುವವರಿಗೆ ಹಳ್ಳಿಯಲ್ಲಿ ಹುಟ್ಟಿದ ನಮ್ಮಂಥ ಬಡಪಾಯಿಗಳ ಅರಿವೇ ಇಲ್ಲವೆಂದು ನನಗೆ ವ್ಯಸನವಾಗುತ್ತದೆ’ ಎಂದು ವಿಷಾದಿಸಿದ್ದರು. ಕೊನೆಗಾಲದವರೆಗೂ ಕನ್ನಡ ಮಾಧ್ಯಮದ ಪರವಾಗಿದ್ದರು.

ADVERTISEMENT

ಕರ್ನಾಟಕ ಏಕೀಕರಣಕ್ಕಿಂತ ಮುಂಚೆಯೇ ಬಳ್ಳಾರಿಯನ್ನು 1953, ಅಕ್ಟೋಬರ್ 1ರಂದು ಮೈಸೂರು ರಾಜ್ಯಕ್ಕೆ ಸೇರಿಸುವಲ್ಲಿ ನಡೆದ ಹೋರಾಟದ ಕಿಡಿಗಳಲ್ಲಿ ಕೋಚೆ ಕೂಡ ಒಬ್ಬರಾಗಿದ್ದರು. ಮಾರನೆ ದಿನ ಅವರ ಮನೆ ಬಾಗಿಲು ಮುರಿದು ಗೂಂಡಾಗಳು ದಾಂಧಲೆ ನಡೆಸಿದ್ದರು. ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದರು.

ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ಕರ್ನಾಟಕ ಏಕೀಕರಣ ಮಹಾಸಭೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದವರು. ‘ಏಕೀಕರಣ ಹೋರಾಟದ ಯುದ್ಧದ ಕುದುರೆ’ ಎಂದೇ ಖ್ಯಾತರಾಗಿದ್ದರು. ‘ರೈತ’ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡ ನಂತರ ಪ್ರಕಟಣೆಯನ್ನು ನಿಲ್ಲಿಸಿದ್ದರು.

2006ರಲ್ಲಿ ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದ 50 ಮಂದಿಯಲ್ಲಿ ಕೋ.ಚೆ ಸೇರಿದಂತೆ ಬಳ್ಳಾರಿಯವರೇ ಎಂಟು ಮಂದಿ ಇದ್ದುದು ವಿಶೇಷ.

ಸ್ವಾತಂತ್ರ್ಯ ಹೋರಾಟಗಾರರಿಗೆ ದೊರಕುವ ಪಿಂಚಣಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಆರು ತಿಂಗಳು ಜೈಲುವಾಸ ಅನುಭವಿಸಿಲ್ಲ ಎಂಬ ಕಾರಣಕ್ಕೆ ಸರ್ಕಾರ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಗ್ಗೆ ಅವರಿಗೆ ವಿಷಾದವಿತ್ತು.

1946ರಲ್ಲೂ ಬಳ್ಳಾರಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತೆಲುಗು ಮಾಧ್ಯಮವೇ ಇತ್ತು. ಇಪ್ಪತ್ತು ವಿದ್ಯಾರ್ಥಿನಿಯರಿದ್ದರೆ ಕನ್ನಡ ಮಾಧ್ಯಮ ತೆರೆಯಬಹುದು ಎಂಬ ಕಾರಣಕ್ಕೆ ಬಳ್ಳಾರಿಯ ಮನೆಮನೆಗೂ ಅಲೆದು ಬಾಲಕಿಯರನ್ನು ಸೇರಿಸುವ ಕೆಲಸವನ್ನೂ ಮಾಡಿದ್ದರು.

2013ರಲ್ಲಿ ವಿಜಯಪುರದಲ್ಲಿ ನಡೆದಿದ್ದ 79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಹಾಗೂ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ‘ ಗೌರವಕ್ಕೆ ಪಾತ್ರರಾಗಿದ್ದರು.

ವೀರಶೈವ ಲಿಂಗಾಯತದ ಧರ್ಮದ ವಿವಾದದ ಕುರಿತು ಬರೆದ ‘ಲಿಂಗಾಯತ: ಹಿಂದೂ ಅಲ್ಲ, ವೀರಶೈವವೂ ಅಲ್ಲ’ ಅವರ ಕೊನೇ ಕೃತಿ.

ಅಸ್ವಸ್ಥತೆಯ ನಡುವೆಯೂ, ಜನವರಿಯಲ್ಲಿ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅವರಿಗೆ ದೂರವಾಣಿ ಕರೆ ಮಾಡಿದ್ದ ಅವರು, ‘ಏಕೀಕರಣ ಹೋರಾಟದಲ್ಲಿ ಜೀವ ತೆತ್ತ ಅಬ್ದುಲ್‌ ರಂಜಾನ್‌ ಸಾಬ್‌ ಅವರ ಪುತ್ಥಳಿಯನ್ನು ನಗರದಲ್ಲಿ ಪ್ರತಿಷ್ಠಾಪಿಸಬೇಕು. ಅದಕ್ಕಾಗಿ ₹ 1 ಲಕ್ಷ ಕೊಡುವೆ’ ಎಂದಿದ್ದರು. ‘ಆದರೆ, ಅವರು ಬದುಕಿದ್ದಾಗ ಅವರಾಸೆ ಈಡೇರಲಿಲ್ಲ’ ಎಂದು ಚನ್ನಬಸವಣ್ಣ ವಿಷಾದಿಸಿದರು.

ಜೀವನದ ಪ್ರಮುಖ ಘಟ್ಟ

* ಜನನ: 27–2– 1922

* ಆಲೂರು, ಕಾನಾಮಡುಗು– ಪ್ರಾಥಮಿ ಶಿಕ್ಷಣ

* ಬಳ್ಳಾರಿಯ ಮುನ್ಸಿಪಲ್‌ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ

* ಅನಂತಪುರದಲ್ಲಿ ಪದವಿ

* ಬೆಳಗಾವಿಯಲ್ಲಿ ಕಾನೂನು ಪದವಿ

* 1942 ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗಿ, ಜೈಲುವಾಸ

* 1944ಬಳ್ಳಾರಿಯಲ್ಲಿ ವಕೀಲಿ ವೃತ್ತಿ ಆರಂಭ

* 1962–65 ಬಳ್ಳಾರಿ ಜಿಲ್ಲಾ ಸರ್ಕಾರಿ ಅಭಿಯೋಜಕ

* 1965–1977 ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ

* ನಿವೃತ್ತಿ ಬಳಿಕ ಹಲವು ವರ್ಷ ಹೈಕೋರ್ಟ್‌ ವಕೀಲರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.