ADVERTISEMENT

ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಸೂರು

ಸಮೀಪಿಸಿದ ಮುಂಗಾರು; ಹೆಚ್ಚಿದ ಆತಂಕ

ಅದಿತ್ಯ ಕೆ.ಎ.
Published 6 ಮೇ 2019, 20:21 IST
Last Updated 6 ಮೇ 2019, 20:21 IST
ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆ
ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆ   

ಮಡಿಕೇರಿ: ಕೊಡಗಿಗೆ ಮುಂಗಾರು ಪ್ರವೇಶಿಸಲು ಕೆಲವು ದಿನಗಳು ಬಾಕಿ ಉಳಿದಿದ್ದು ನೆರೆ ಸಂತ್ರಸ್ತರಲ್ಲಿ ಭಯ ಶುರುವಾಗಿದೆ.

ಪ್ರಾಕೃತಿಕ ವಿಕೋಪದಿಂದ ಸೂರು ಕಳೆದುಕೊಂಡವರಿಗೆ 9 ತಿಂಗಳಾದರೂ ಸ್ವಂತ ಮನೆ ಸಿಕ್ಕಿಲ್ಲ. ಜಿಲ್ಲೆಯ ಮೂರು ಪುನರ್ವಸತಿ ಸ್ಥಳದಲ್ಲಿ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಇದುವರೆಗೆ ಒಂದೇ ಒಂದು ಮನೆ ಹಸ್ತಾಂತರಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ!

ಸಂತ್ರಸ್ತರು ಸ್ವಂತ ಸೂರಿಗಾಗಿ ಚಾತಕ ಪಕ್ಷಿಯಂತೆ ಕಾದಿದ್ದು ‘ಮುಂಗಾರು ಪ್ರವೇಶಿಸುವ ಮೊದಲು ಮನೆ ಕೊಡಿ’ ಎಂದು ಅಧಿಕಾರಿಗಳಲ್ಲಿ ಮನವಿ ಮಾಡುತ್ತಿದ್ದಾರೆ.

ADVERTISEMENT

ಕಳೆದ ವರ್ಷ ಜಿಲ್ಲೆಯಲ್ಲಿ ಜೂನ್‌ ಮಧ್ಯದಲ್ಲಿ ಆರಂಭವಾಗಿದ್ದ ಮಳೆ, ಆಗಸ್ಟ್‌ ಕೊನೆಯಲ್ಲಿ ತಣ್ಣಗಾಗಿತ್ತು. ಆಗಸ್ಟ್‌ನಲ್ಲಿ 15 ದಿನ ಬಿಡದೇ ಸುರಿದಿದ್ದ ಮಹಾಮಳೆಗೆ ನೂರಾರು ಮಂದಿ ನೆಲೆ ಕಳೆದುಕೊಂಡಿದ್ದರು. ಜೀವ ಹಾನಿ, ಅಪಾರ ಆಸ್ತಿಪಾಸ್ತಿ ನಷ್ಟವಾಗಿತ್ತು. ಸಾವಿರಾರು ಮಂದಿ ರಾತ್ರೋರಾತ್ರಿ ಮನೆಯಿಂದ ಹೊರಬಂದು ಪರಿಹಾರ ಕೇಂದ್ರ ಸೇರಿದ್ದರು. ಆಗ ಆಶ್ರಯ ಕಳೆದುಕೊಂಡವರು ಈಗಲೂ ಬಾಡಿಗೆ ಮನೆಯಲ್ಲಿ ಕಾಲ ದೂಡುತ್ತಿದ್ದಾರೆ. ಪ್ರತಿ ತಿಂಗಳು ಸರ್ಕಾರವು ₹ 10 ಸಾವಿರ ಬಾಡಿಗೆ ಪಾವತಿಸುತ್ತಿದೆ.

ಜಿಲ್ಲೆಯ ಕರ್ಣಂಗೇರಿ, ಬಿಳಿಗೇರಿ, ಗಾಳಿಬೀಡು, ಮದೆ ಹಾಗೂ ಜಂಬೂರು (ಮಾದಾಪುರ) ಗ್ರಾಮದಲ್ಲಿ 78.46 ಎಕರೆ ಪ್ರದೇಶದಲ್ಲಿ 770 ಮಂದಿ ಸಂತ್ರಸ್ತರಿಗೆ ನಿವೇಶನ ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಕರ್ಣಂಗೇರಿ, ಮದೆ, ಜಂಬೂರಿನಲ್ಲಿ 433 ಮನೆಗಳನ್ನು ನಿರ್ಮಿಸಲಾಗುತ್ತಿದೆ.

ಈ ಮನೆಗಳ ನಿರ್ಮಾಣ ಜವಾಬ್ದಾರಿಯನ್ನು ‘ಕರ್ನಾಟಕ ರಾಜೀವ ಗಾಂಧಿ ವಸತಿ ನಿಗಮ’ಕ್ಕೆ ವಹಿಸಿದ್ದು, ₹ 9.85 ಲಕ್ಷ ವೆಚ್ಚದಲ್ಲಿ (ಪ್ರತಿ ಮನೆ) ಎರಡು ಬೆಡ್‌ ರೂಂವುಳ್ಳ ಮನೆ ನಿರ್ಮಿಸಲಾಗುತ್ತಿದೆ. ಡಿ. 8ರಂದು ಜಂಬೂರು ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಮಗಾರಿಗೆ ಚಾಲನೆ ನೀಡಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿತ್ತು. ದಿನ ಕಳೆದಂತೆ ಕೆಲಸ ನಿಧಾನವಾಗುತ್ತಿದೆ. ಮಳೆಗಾಲ ಸಮೀಪಿಸುತ್ತಿದ್ದು ಸಂತ್ರಸ್ತರಲ್ಲಿ ಆತಂಕ, ನೋವು ಹೆಚ್ಚಾಗುತ್ತಿದೆ.

ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ ಮಾತ್ರ 35 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಬಣ್ಣ ಬಳಿಯುವ, ವಿದ್ಯುತ್ ಹಾಗೂ ನೀರಿನ ಸಂಪರ್ಕ, ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಬಾಕಿಯಿವೆ. ಈ 35 ಮನೆಗಳನ್ನು ಮಾತ್ರ ಶೀಘ್ರವೇ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ನಿಗಮದ ಎಂಜಿನಿಯರ್‌ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮದೆ ಪುನರ್ವಸತಿ ಸ್ಥಳದಲ್ಲಿ 69, ಜಂಬೂರಿನಲ್ಲಿ 86 ಮನೆಗಳು ಚಾವಣಿ ಹಂತ ತಲುಪಿವೆ. ಉಳಿದ ಮನೆಗಳು ವಿವಿಧ ಹಂತದಲ್ಲಿವೆ. ಕಾಮಗಾರಿ ಎಂದೂ ಸ್ಥಗಿತಗೊಂಡಿಲ್ಲ; ನಿರಂತರವಾಗಿ ಸಾಗುತ್ತಿದೆ. ಇನ್ಫೊಸಿಸ್‌ ಪ್ರತಿಷ್ಠಾನವು 200 ಮನೆ ನಿರ್ಮಿಸುವ ಹೊಣೆಹೊತ್ತಿದ್ದು ತಳಪಾಯ ಪೂರ್ಣವಾಗಿದೆ. ಮೇ ಅಂತ್ಯಕ್ಕೆ ಒಟ್ಟು 150 ಮನೆಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ಗುರಿಯಿದೆ. ಬಳಿಕ ನಿರ್ಮಿತಿ ಕೇಂದ್ರ ಮೂಲಸೌಕರ್ಯ ಕಲ್ಪಿಸಲಿದೆ. ಜುಲೈ ಅಂತ್ಯಕ್ಕೆ ಮೂರು ಸ್ಥಳದಲ್ಲೂ ಮನೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದೂ ಮಾಹಿತಿ ನೀಡಿದರು.

53 ಸಂತ್ರಸ್ತರು ತಮ್ಮ ಸ್ವಂತ ಸ್ಥಳದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಜಿಲ್ಲಾಡಳಿತವು ಪ್ರತಿ ಕುಟುಂಬಕ್ಕೆ ₹ 9.85 ಲಕ್ಷವನ್ನು ನಾಲ್ಕು ಹಂತದಲ್ಲಿ ಬಿಡುಗಡೆ ಮಾಡಲು ಒಪ್ಪಿದೆ. ಅದರಲ್ಲಿ ಕೆಲವರು ಕಾಮಗಾರಿ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.