ADVERTISEMENT

ಕೊಡವ ಸಾಹಿತ್ಯದ ಅರಿವು ಮೂಡಿಸಿ: ಕೊಂಗಂಡ ಎಸ್.ದೇವಯ್ಯ

‘ಪೊಮ್ಮೊದಿರ ಪೊನ್ನಪ್ಪ’, ‘ಡೌರಿ ಡೈವೋರ್ಸ್’ ಕೃತಿಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:47 IST
Last Updated 29 ಸೆಪ್ಟೆಂಬರ್ 2020, 16:47 IST
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ತ್ರೈಮಾಸಿಕ ‘ಪೊಂಗುರಿ’ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ತ್ರೈಮಾಸಿಕ ‘ಪೊಂಗುರಿ’ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು   

ಮಡಿಕೇರಿ: ‘ಮಕ್ಕಳಿಗೆ ಮನೆಯಲ್ಲಿ ಕೊಡವ ಭಾಷೆ ಕಲಿಸಬೇಕು. ಕೊಡವ ಭಾಷೆ ಸಾಹಿತ್ಯದ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು’ ಎಂದು ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ ಕರೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ 152ನೇ ಜನ್ಮದಿನ ಆಚರಣೆ ಮತ್ತು ಪೊಂಗಾರಿ ತ್ರೈಮಾಸಿಕ ಪತ್ರಿಕೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲರೂ ಒಟ್ಟಾಗಿ ಕೊಡವ ಭಾಷೆಯ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು’ ಎಂದೂ ಸಲಹೆ ನೀಡಿದರು.

ADVERTISEMENT

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡವ ಸಾಹಿತ್ಯದಲ್ಲಿ ಇನ್ನೂ ಹೆಚ್ಚಿನ ಪುಸ್ತಕಗಳನ್ನು ಹೊರತರಬೇಕು. ಉತ್ತಮ ಗುಣಮಟ್ಟದ ಬರಹಗಳನ್ನು ಯಾವುದೇ ಕೃತಿ ಹೊಂದಿರಬೇಕು ಎಂದು ಅವರು ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯೂ ಸಹ ಈ ಉದ್ದೇಶದೊಂದಿಗೆ ಮನರಂಜನಾ ಕಾರ್ಯಕ್ರಮಗಳಿಗಿಂತಲೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹೆಚ್ಚು ಮಾಡಲಾಗುತ್ತಿದೆ ಎಂದರು.

152 ವರ್ಷಗಳ ಹಿಂದೆ ಹುಟ್ಟಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಒಬ್ಬ ಅಮರ ಕವಿ. ಕೊಡಗಿನ ಕಾಳಿದಾಸ ಎಂದೆ ಪ್ರಸಿದ್ಧಿಯಾಗಿದ್ದಾರೆ ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯಪಟ್ಟರು.

ಅಪ್ಪಚ್ಚು ಕವಿ ಜಿಲ್ಲೆ ಮಾತ್ರವಲ್ಲದೆ ರಾಜ್ಯವೇ ಹೆಮ್ಮೆ ಪಡುವಂತಹ ವ್ಯಕ್ತಿ. 150 ವರ್ಷಗಳ ನಂತರವೂ ಸಹ ಅಪ್ಪಚ್ಚು ಕವಿ ಅವರನ್ನು ಜ್ಞಾಪಿಸಿಕೊಳ್ಳುತ್ತೇವೆ ಎಂದರೆ ನಿಜಕ್ಕೂ ಅವರೊಬ್ಬ ಅಮರ ಕವಿ. ಬಾಲ್ಯದಲ್ಲಿಯೇ ಅವರು ಸಾಕಷ್ಟು ಪ್ರತಿಭಾವಂತರಾಗಿದ್ದರು ಎಂದು ಹೇಳಿದರು.

ಅಪ್ಪಚ್ಚು ಕವಿ ಅವರು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗುವಷ್ಟರ ಮಟ್ಟಿಗೆ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತ್ರಿಭಾಷ ಕವಿ ಐ.ಮ ಮುತ್ತಣ್ಣನವರೇ ಅಪ್ಪನೆರವಂಡ ಅಪ್ಪಚ್ಚು ಕವಿ ಅವರನ್ನು ಕೊಡಗಿನ ಕಾಳಿದಾಸ ಎಂದು ಕರೆದಿದ್ದಾರೆ ಎಂದು ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಹೇಳಿದರು.

ಇದೇ ಸಂದರ್ಭ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಡಾ.ಕಳ್ಳಿಚಂಡ ರಶ್ಮಿ ನಂಜಪ್ಪ ಇವರು ಬರೆದ ‘ಪೊಮ್ಮೊದಿರ ಪೊನ್ನಪ್ಪ’ (ನಾಟಕ) ಪುಸ್ತಕ ಮತ್ತು ಕೊಟ್ಟುಕತ್ತಿರ ಜಾಲಿ ಸೋಮಣ್ಣ ಇವರು ಬರೆದ ‘ಡೌರಿ ಡೈವೋರ್ಸ್’ ಪುಸ್ತಕ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ತ್ರೈಮಾಸಿಕ ‘ಪೊಂಗುರಿ’ ಸಂಚಿಕೆ ಬಿಡುಗಡೆಯನ್ನು ನೆರವೇರಿಸಿದರು.
ಅಪ್ಪನೆರವಂಡ ಕುಟುಂಬದ ಪಟ್ಟೇದಾರ್ ಅಪ್ಪನೆರವಂಡ ಅಪ್ಪಣ್ಣ, ವಿನಿತಾ ಅನೂಪ್, ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಪಡಿಞರಂಡ ಎ.ಪ್ರಭುಕುಮಾರ್, ಕುಡಿಯರ ಮುತ್ತಪ್ಪ ಹಾಜರಿದ್ದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯ ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ ಪ್ರಾರ್ಥಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ. ಗಿರೀಶ್ ಸ್ವಾಗತಿಸಿದರು. ಸಂಚಾಲಕರಾದ ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.