ADVERTISEMENT

ಯುಗಾದಿ ಜಾತ್ರೆಗೆಂದು ಶ್ರೀಶೈಲಕ್ಕೆ ಬರಬೇಡಿ

ಕೊರೊನಾ ಎಫೆಕ್ಟ್‌: ಭಕ್ತರಿಗೆ ಶ್ರೀಶೈಲ ಶ್ರೀ ಮನವಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 12:11 IST
Last Updated 15 ಮಾರ್ಚ್ 2020, 12:11 IST

ಬೆಳಗಾವಿ: ‘ಆಂಧ್ರದ ಶ್ರೀಶೈಲದಲ್ಲಿ ನಡೆಯುವ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಭಕ್ತರು ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸಬೇಕು. ‘ಕೊರೊನಾ’ ವೈರಾಣು ಸೋಂಕು ಹರಡುತ್ತಿರುವುದರಿಂದಾಗಿ ಈ ಮುಂಜಾಗ್ರತೆ ವಹಿಸಬೇಕು’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೋರಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಸೋಂಕು ತಗುಲಿದ ವ್ಯಕ್ತಿ, ಸಾವಿರಾರು ಜನರು ಒಂದೆಡೆ ಸೇರಿದ ಪ್ರದೇಶದಲ್ಲಿ ಸೀನಿದರೆ ಅಥವಾ ಕೆಮ್ಮಿದರೆ ಇನ್ನೊಬ್ಬರಿಗೆ ಹರಡುತ್ತದೆ. ಕ್ರಮೇಣ ಅಲ್ಲಿದ್ದ ಎಲ್ಲರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಚಿಕಿತ್ಸೆಗೆ ನಿರ್ದಿಷ್ಟ ಔಷಧ ಇಲ್ಲದಿರುವುದರಿಂದ ಹರಡದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು.

‘ದೇವಸ್ಥಾನಗಳು ಮನುಕುಲದ ಕಲ್ಯಾಣ ಕೇಂದ್ರಗಳಾಗಿವೆ. ಇವು ಮನುಷ್ಯರ ಮಾರಣ ಹೋಮಕ್ಕೆ ಕಾರಣವಾಗಬಾರದು. ಆದ್ದರಿಂದ ಭಾವಾವೇಶಕ್ಕೆ ಒಳಗಾಗಿ ವಾಸ್ತವ ಪರಿಸ್ಥಿತಿ ಅಲಕ್ಷಿಸಬಾರದು. ಭಕ್ತಿಯ ಹೆಸರಿನಲ್ಲಿ ಹುಚ್ಚು ಧೈರ್ಯ ಪ್ರದರ್ಶಿಸಲು ಪ್ರಯತ್ನಿಸದೆ ಎಲ್ಲ ಭಕ್ತರೂ ತಮ್ಮ ಶ್ರೀಶೈಲ ಯಾತ್ರೆಯನ್ನು ಮೊಟಕುಗೊಳಿಸಿ ವಾಪಸಾಗಬೇಕು’ ಎಂದು ತಿಳಿಸಿದರು.

ADVERTISEMENT

‘ಈಗಾಗಲೇ ಮಾರ್ಗ ಮಧ್ಯದಲ್ಲಿ ಇರುವವರು ಮರಳುವುದು ಒಳಿತು ಅಥವಾ ವಾಹನಗಳ ಮೂಲಕ ನೇರವಾಗಿ ಕ್ಷೇತ್ರಕ್ಕೆ ಹೋಗಿ ದೇವರ ದರ್ಶನ ಪಡೆದು ತಕ್ಷಣ ಗ್ರಾಮಗಳಿಗೆ ವಾಪಸಾಗಬೇಕು. ಮರಳಲು ಸಾಧ್ಯವಿಲ್ಲದವರು ವೈದ್ಯರ ಸಲಹೆ ಪಡೆದು ಎಚ್ಚರಿಕೆ ವಹಿಸಬೇಕು. ವಾಡಿಕೆಯಂತೆ, ವಿಧಿವಿಧಾನಗಳನ್ನು ಪೂರೈಸಿ ಆದಷ್ಟು ಶೀಘ್ರದಲ್ಲಿ ಶ್ರೀಶೈಲದಿಂದ ಹೊರಡಬೇಕು’ ಎಂದರು.

‘ಶ್ರೀಶೈಲಕ್ಕೆ ಜಾತ್ರೆಗೆ ಬರುವ ಭಕ್ತರೆಲ್ಲರಿಗಾಗಿ ಪೀಠದಿಂದ ಮಾರ್ಚ್‌ 19ರಿಂದ 23ರವರೆಗೆ ‘ಮಲ್ಲಯ್ಯನ ಭಕ್ತರ ಬೃಹತ್ ಸಮಾವೇಶ’ ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು. ಮಾರ್ಚ್‌ 21ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಕೊರೊನಾ ಭೀತಿ ಇರುವುದರಿಂದಾಗಿ ಇದನ್ನೂ ರದ್ದುಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಯುಗಾದಿ ಸಂದರ್ಭದಲ್ಲಿ ಪ್ರತಿ ವರ್ಷ ಕರ್ನಾಟಕದಿಂದ ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಶ್ರೀಶೈಲದಲ್ಲಿ ಸೇರುತ್ತಾರೆ. ಕೊರೊನಾ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಬರುವವರನ್ನು ಸಂಪೂರ್ಣವಾಗಿ ತಡೆಯಲಾಗದು. ಆದ್ದರಿಂದ ಶ್ರೀಶೈಲಕ್ಕೆ ವೈದ್ಯರ ತಂಡ, ಮುಖಗವಸುಗಳು ಹಾಗೂ ಔಷಧಗಳನ್ನು ಪೂರೈಸಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದೇವೆ. ಪೀಠದಿಂದಲೂ ಹಲವು ಸ್ಥಳಗಳಲ್ಲಿ ವೈದ್ಯರ ತಂಡಗಳನ್ನು ನಿಯೋಜಿಸಲಾಗುವುದು. ಅಲ್ಲಲ್ಲಿ ನೀರು ಹಾಗೂ ಔಷಧಗಳ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಈ ಬಾರಿ, ಭಕ್ತರು ತಮ್ಮ ಊರುಗಳಲ್ಲೇ ಯುಗಾದಿ ಆಚರಿಸಬೇಕು’ ಎಂದು ಕೋರಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.