ಬೆಂಗಳೂರು: ಕೆಲವು ದಿನಗಳಿಂದ ಮರೆಗೆ ಸರಿದಿದ್ದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಬದಲು ಹಾಗೂ ಅಧಿಕಾರ ಹಂಚಿಕೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ಸಂಜಯನಗರದ ಮನೆಗೆ ಉಪಾಹಾರದ ನೆಪದಲ್ಲಿ ಶುಕ್ರವಾರ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಎರಡು ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದರು. ಈ ವೇಳೆ, ಕೆಪಿಸಿಸಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಬದಲಾವಣೆಯಾದಲ್ಲಿ, ಯಾರಿಗೆ ಅವಕಾಶ ಸಿಗಬೇಕು ಎಂಬ ಬಗ್ಗೆ ಇಬ್ಬರು ನಾಯಕರು ಗಂಭೀರ ಸಮಾಲೋಚನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಕೆಲ ತಿಂಗಳ ಹಿಂದೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆಯಲ್ಲಿ ನಡೆದಿದ್ದ ಔತಣ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಬಳಗದ ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಜಿ.ಪರಮೇಶ್ವರ ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದಾಗ ನಡೆದಿದ್ದ ಈ ಸಭೆ ಪಕ್ಷದ ವಲಯದಲ್ಲಿ ನಾನಾ ಚರ್ಚೆಗಳನ್ನು ಹುಟ್ಟು ಹಾಕಿತ್ತು.
ಮುಖ್ಯಮಂತ್ರಿ ಸ್ಥಾನ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾದರೆ ಮುಂದಿನ ನಡೆ ಏನು ಎಂಬ ಬಗ್ಗೆ ಚರ್ಚಿಸಲು ಔತಣ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ನಂತರ ಗೃಹ ಸಚಿವ ಪರಮೇಶ್ವರ ಅವರ ಮನೆಯಲ್ಲಿ ನಿಗದಿಯಾಗಿದ್ದ ಔತಣ ಸಭೆಯ ವಿರುದ್ಧ ಶಿವಕುಮಾರ್ ಅವರು ವರಿಷ್ಠರಿಗೆ ದೂರು ನೀಡಿದ ನಂತರ ರದ್ದಾಗಿತ್ತು. ಪರಿಶಿಷ್ಟ ಜಾತಿ, ಪಂಗಡದ ಸಚಿವರ ಸಭೆಗೆ ದಲಿತ ಎಡಗೈ ಪಂಗಡದ ಸಚಿವರನ್ನು ಕಡೆಗಣಿಸಲಾಗಿದೆ ಎಂದು ಹಿರಿಯ ಸಚಿವರೂ ಆದ ಕೆ.ಎಚ್. ಮುನಿಯಪ್ಪ ಅಸಮಾಧಾನ ಹೊರಹಾಕಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ ಜಾರಕಿಹೊಳಿ ಅವರು, ಎಡಗೈ ಪಂಗಡವನ್ನು ಪ್ರತಿನಿಧಿಸುವ ಸಚಿವರ ವಿಶ್ವಾಸಗಳಿಸುವತ್ತ ಹೆಜ್ಜೆ ಇಟ್ಟಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಲಾವಣೆಗೆ ಹೈಕಮಾಂಡ್ ಮುಂದಾದರೆ ತಮ್ಮನ್ನು ಬೆಂಬಲಿಸುವಂತೆ ಮುನಿಯಪ್ಪ ಅವರನ್ನು ಕೋರಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಸ್ತೆ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದೆವು. ಜಾತಿ ಗಣತಿ ಒಳ ಮೀಸಲಾತಿ ಕುರಿತು ಒಂದಷ್ಟು ಮಾತುಕತೆ ನಡೆಯಿತು ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ
‘ಸಿ.ಎಂ ಸ್ಥಾನಕ್ಕೆ ಬೆಂಬಲ ಕೊಡಿ’ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಸಮುದಾಯದ ಬಲಗೈನವರಿಗೇ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ನಾನು 7 ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ನಿಷ್ಠಾವಂತ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದೆ. ರಾಜ್ಯದಲ್ಲಿ ಮುಂದೆ ದಲಿತರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವುದಾದರೆ ನನಗೆ ತಮ್ಮ ಬೆಂಬಲ ಇರಬೇಕು. ಕೆಪಿಸಿಸಿ ಸ್ಥಾನದ ವಿಚಾರದಲ್ಲಿ ನಿಮ್ಮ ಜತೆ ನಿಲ್ಲುವೆ ಎಂದು ಮುನಿಯಪ್ಪ ಬೇಡಿಕೆ ಇಟ್ಟರು’ ಎಂದು ಮೂಲಗಳು ಹೇಳಿವೆ. ‘ಪರಿಶಿಷ್ಟ ಜಾತಿ ಪಂಗಡ ಪ್ರತಿನಿಧಿಸುವ ಎಲ್ಲ ಸಚಿವರು ಶಾಸಕರು ಒಗ್ಗಟ್ಟು ಪ್ರದರ್ಶಿಸೋಣ. ಸಮಯ ಬಂದಾಗ ಅವಕಾಶದ ಸದುಪಯೋಗಕ್ಕೆ ಪ್ರಬಲ ಬೇಡಿಕೆ ಮಂಡಿಸೋಣ. ನಮ್ಮ ಜತೆಗೆ ಇರಿ’ ಎಂದು ಸತೀಶ ಜಾರಕಿಹೊಳಿ ಕೋರಿದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.