ADVERTISEMENT

ಹಾಳಾದ ಬೆಳೆ ‘ಸ್ಪೀಡ್‌ ಪೋಸ್ಟ್‌’ ಮೂಲಕ ರವಾನೆ!

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 15:38 IST
Last Updated 24 ಸೆಪ್ಟೆಂಬರ್ 2019, 15:38 IST

ಬೆಳಗಾವಿ: ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕೆಪಿಸಿಸಿ ಮಹಿಳಾ ಘಟಕದವರು, ಹಾಳಾದ ಬೆಳೆಯನ್ನು ಚೀಲದಲ್ಲಿ ಹಾಕಿ ಪ್ರಧಾನಿ ಕಚೇರಿಗೆ ಸ್ಪೀಡ್ ಪೋಸ್ಟ್ ಮಾಡುವ ಮೂಲಕ ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ‘ಗೋವಿನಜೋಳ, ಹತ್ತಿ, ಸೂರ್ಯಕಾಂತಿ, ಸೌತೆಕಾಯಿ, ಮೆಣಸಿನಕಾಯಿ ಮೊದಲಾದ ಗಿಡಗಳನ್ನು ರವಾನಿಸಲಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನೆ ನಡೆಸಲಾಗುತ್ತಿದೆ. ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖಂಡರು ಕುರುಡರಾಗಿದ್ದಾರೆ, ಕಿವುಡರಾಗಿದ್ದಾರೆ. ರಾಜ್ಯದ ನಾಲಾಯಕ್ ಸಂಸದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು, ಕೈಗೆ ಬಳೆ ತೊಟ್ಟುಕೊಂಡು ಮನೆಗಳಲ್ಲಿ ಕುಳಿತುಕೊಳ್ಳಬೇಕು’ ಎಂದರು.

ADVERTISEMENT

‘ಪ್ರಧಾನಿಯು ರಷ್ಯಾಕ್ಕೆ ₹ 72ಸಾವಿರ ಕೋಟಿ ಸಾಲ ಕೊಟ್ದಿದ್ದಾರೆ. ಅವರು ಬೇಕಿದ್ದರೆ ಅಮೆರಿಕದಲ್ಲಿಯೇ ಕುಳಿತುಕೊಳ್ಳಲಿ. ರಾಜ್ಯದ ಸಂತ್ರಸ್ತರಿಗೆ ಅನುದಾನ ಕೊಡಲಿ’ ಎಂದು ಒತ್ತಾಯಿಸಿದರು.

ಪಕ್ಷದಿಂದ ನಡೆದ ಪ್ರತಿಭಟನೆಯಲ್ಲೂ ಘಟಕದ ಕಾರ್ಯಕರ್ತೆಯರು ಹಾಳಾದ ಗಡಿಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.