ADVERTISEMENT

ಕೆಪಿಎಸ್‌ಸಿ ಅಕ್ರಮ: 28 ಅಧಿಕಾರಿಗಳು ಮನೆಗೆ?

1998ನೇ ಸಾಲಿನ ಗೆಜೆಟೆಡ್‌ ‍ಪ್ರೊಬೆಷನರಿ ಅಧಿಕಾರಿಗಳ ಪರಿಷ್ಕೃತ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 20:12 IST
Last Updated 3 ಫೆಬ್ರುವರಿ 2019, 20:12 IST
   

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ (ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’) ಹುದ್ದೆಗಳ ನೇಮಕದಲ್ಲಿ ಅನರ್ಹರಿಗೆ ಹುದ್ದೆ ನೀಡಿರುವುದನ್ನು ಕೊನೆಗೂಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಒಪ್ಪಿಕೊಂಡಿದೆ.

ಅನರ್ಹರೆಂದು ಗುರುತಿಸಲಾಗಿರುವ 28 ಗೆಜೆಟೆಡ್‌ ಅಧಿಕಾರಿಗಳನ್ನು ಕೈಬಿಟ್ಟು, ಹೊಸದಾಗಿ ಅವಕಾಶ ಸಿಗುವ ಅಭ್ಯರ್ಥಿಗಳ ಹೆಸರಿರುವ ಪರಿಷ್ಕೃತ ಪಟ್ಟಿಯನ್ನು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಕೈತೊಳೆದುಕೊಂಡಿದೆ. ಇದನ್ನು ರಾಜ್ಯ ಸರ್ಕಾರ ಅನುಮೋದಿಸಿ, ಜಾರಿ ಮಾಡಿದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಆಗಲಿದೆ. ಅನರ್ಹರೆಂದು ಗುರುತಿಸಿರುವ 28 ಅಧಿಕಾರಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ. 1998ರಲ್ಲಿ 383 ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು. ಅನರ್ಹರ ಪಟ್ಟಿಯನ್ನು ಕೆಪಿಎಸ್‌ಸಿ ಈ ಹಿಂದೆಯೇ ಸಿದ್ಧಪಡಿಸಿತ್ತು. ಆದರೆ, ರಾಜಕೀಯ ಕಾರಣಗಳಿಂದಾಗಿ ಪಟ್ಟಿ ಪ್ರಕಟಿಸಿರಲಿಲ್ಲ. ಇದೀಗ, ಕೋರ್ಟ್‌ ತೀರ್ಪಿನ ಅನ್ವಯ ಪಟ್ಟಿ ಪರಿಷ್ಕರಿಸಿರುವ ಆಯೋಗವು ‘ಅನರ್ಹರು’ ಯಾರು ಎಂದು ಪ್ರಕಟಿಸಿದೆ.

ಈ ಪಟ್ಟಿಯ ಪ್ರಕಾರ, ಐಎಎಸ್‌ಗೆ ಬಡ್ತಿ ಪಡೆದಿರುವ ಏಳು ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. ಈ ಅಧಿಕಾರಿಗಳು ತಹಶೀಲ್ದಾರ್, ವಾಣಿಜ್ಯ ತೆರಿಗೆ ಇಲಾಖೆಯ ಹುದ್ದೆಗಳಿಗೆ ಹೋಗಲಿದ್ದಾರೆ. ಇವರಲ್ಲಿ ವೃಷಭೇಂದ್ರಮೂರ್ತಿ ಅವರಿಗೆ ಒಂದು ವರ್ಷವಷ್ಟೇ ಬಾಕಿ ಇದೆ. ಇವರ ಸ್ಥಾನಕ್ಕೆ ನೇಮಕಗೊಂಡ ರಾಮಪ್ಪ ಹಟ್ಟಿ ಅವರು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ.

ADVERTISEMENT

140ಕ್ಕೂ ಹೆಚ್ಚು ಅಧಿಕಾರಿಗಳು ಗ್ರೂಪ್ ‘ಬಿ’ ಯಿಂದ ಗ್ರೂಪ್‌ ‘ಎ’ಗೆ ಬಡ್ತಿ ಹಾಗೂ ಗ್ರೂಪ್‌ ‘ಎ’ಯಿಂದ ಗ್ರೂಪ್ ‘ಬಿ’ಗೆ ಹಿಂಬಡ್ತಿ ಪಡೆಯಲಿದ್ದಾರೆ.

‘ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳ ಆದೇಶಗಳ ಪ್ರಕಾರ ಪರಿಷ್ಕೃತ ಪಟ್ಟಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಲೇಬೇಕು. ಅನ್ಯ ಮಾರ್ಗ ಇಲ್ಲ’ ಎಂದು ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದರು.

1998, 1999 ಮತ್ತು 2004ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ್ದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುರಿತು 2016ರ ಜೂನ್‌ 12ರಂದು ತೀರ್ಪು ನೀಡಿರುವ ಹೈಕೋರ್ಟ್‌, ‘ಈ ಪ್ರಕ್ರಿಯೆಯೇ ಅಸಾಂವಿಧಾನಿಕ. ಸರ್ಕಾರದ ಆದೇಶಗಳು ಮತ್ತು ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿತ್ತು. ಅನರ್ಹರನ್ನು ಕೈಬಿಟ್ಟು ಅರ್ಹರನ್ನು ನೇಮಿಸುವಂತೆ ಹೇಳಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ 2018ರ ಏ. 11ರಂದು ಎತ್ತಿ ಹಿಡಿದಿತ್ತು.

‘ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ನೇಮಕಾತಿಯ ಪರಿಷ್ಕೃತ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 2016ರ ಜೂನ್‌ 21ರಂದು ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಮೇಲ್ಮನವಿಗೆ ಸಂಬಂಧಿಸಿದಂತೆ 2018ರ ಏಪ್ರಿಲ್‌ 11ರವರೆಗೆ ತಡೆ ಇತ್ತು. ಆನಂತರ ಮೇಲ್ಮನವಿ ವಜಾಗೊಂಡಿತ್ತು’ ಎಂದು ಕೆಪಿಎಸ್‌ಸಿಯು ಹೈಕೋರ್ಟ್‌ಗೆ ಕಳೆದ ತಿಂಗಳು ತಿಳಿಸಿತ್ತು. ಜನವರಿ 25ರಂದು ವಿಶೇಷ ರಾಜ್ಯಪತ್ರದಲ್ಲಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ.

ನೇಮಕಾತಿಗೆ ಮೂರು ಹಂತಗಳಲ್ಲಿ (‌ಪ್ರಾಥಮಿಕ ಪರೀಕ್ಷೆಯಿಂದ ಮುಖ್ಯ ಪರೀಕ್ಷೆ, ಮುಖ್ಯ ಪರೀಕ್ಷೆಯಿಂದ ಸಂದರ್ಶನ, ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿ) ಪಟ್ಟಿ ಸಿದ್ಧಪಡಿಸಲಾಗುತ್ತದೆ. ಮೊದಲ ಹಂತದಲ್ಲಿ 1:20, ಎರಡನೇ ಹಂತದಲ್ಲಿ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆದರೆ, ಅನುಪಾತ ಮತ್ತು ಮೀಸಲಾತಿ ಆಧರಿಸಿ ಆಯ್ಕೆ ಮಾಡುವ ವೇಳೆ ನಿಯಮ ಪಾಲಿಸದೆ ಲೋಪ ಎಸಗಲಾಗಿತ್ತು.

1998, 1999, 2004ರಲ್ಲಿ ಕೆಪಿಎಸ್‌ಸಿ ನಡೆಸಿದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೆ.ಆರ್. ಖಲೀಲ್ ಅಹ್ಮದ್‌ ಮತ್ತು ಇತರ ಅಭ್ಯರ್ಥಿಗಳು ಹೈಕೋರ್ಟ್‌ಗೆ 2008ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ 2016ರ ಜೂನ್‌ 21ರಂದು ತೀರ್ಪು ನೀಡಿತ್ತು.

ಸಮಾನಂತರ ಹುದ್ದೆ ಸೃಷ್ಟಿಗೆ ಸರ್ಕಾರ ಯತ್ನ

ಐಎಎಸ್‌ನಿಂದ ಹಿಂಬಡ್ತಿ ಪಡೆಯಲಿರುವ ಅಧಿಕಾರಿಗಳ ‘ಹಿತ’ ಕಾಪಾಡಲು ಮುಂದಾಗಿರುವ ರಾಜ್ಯ ಸರ್ಕಾರ, ಸಮಾನಾಂತರ ಹುದ್ದೆ (ಸೂಪರ್ ನ್ಯೂಮರರಿ) ಸೃಷ್ಟಿಸಲು ತಯಾರಿ ನಡೆಸಿದೆ.

ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಮುಂದಿನ ಅಧಿವೇಶನದಲ್ಲೇ ಈ ಸಂಬಂಧ ಮಸೂದೆ ತರಲು ಪ್ರಯತ್ನ ಸಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಶ್ರೇಣಿಯ ಅಧಿಕಾರಿಗಳಿಗೆ ಐಎಎಸ್ ಹುದ್ದೆಗೆ ಬಡ್ತಿ ನೀಡುವುದು ಕೇಂದ್ರ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ಮತ್ತು ಕೇಂದ್ರ ಲೋಕಸೇವಾ ಆಯೋಗದ ತೀರ್ಮಾನಕ್ಕೆ ಬಿಟ್ಟ ವಿಷಯ. ಸಮಾನಾಂತರ ಹುದ್ದೆ ಸೃಷ್ಟಿಸುವುದಕ್ಕೆ ಕಾನೂನಾತ್ಮಕವಾಗಿ ಅವಕಾಶ ಇಲ್ಲ ಎಂದೂ ಹೇಳಲಾಗುತ್ತಿದೆ.

ಐಎಎಸ್‌ನಿಂದ ಹಿಂಬಡ್ತಿ ಪಡೆಯುವವರು

* ಕರೀಗೌಡ– ವಾಣಿಜ್ಯ ತೆರಿಗೆ ಅಧಿಕಾರಿ

* ಪಿ.ವಸಂತ ಕುಮಾರ್–ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ

* ಶಿವಾನಂದ ಕಾಪಸಿ–ವಾಣಿಜ್ಯ ತೆರಿಗೆ ಅಧಿಕಾರಿ (ಸಿಟಿಒ)

* ಎಚ್‌.ಬಸವರಾಜೇಂದ್ರ–ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ

* ಜಿ.ಸಿ.ವೃಷಭೇಂದ್ರಮೂರ್ತಿ–ಸಹಾಯಕ ನಿಯಂತ್ರಕ (ಎಸ್‌ಎಡಿ)

* ಕವಿತಾ ಎಸ್‌.ಮನ್ನಿಕೇರಿ–ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ

* ಎಚ್‌.ಎನ್‌.ಗೋಪಾಲಕೃಷ್ಣ–ತಹಶೀಲ್ದಾರ್

ಉದ್ಯೋಗ ಕಳೆದುಕೊಳ್ಳುವವರು

* ಬಿ.ಬಸಪ್ಪ (ಸಾಮಾನ್ಯ)

* ಖಾಜಿ ನಫೀಸಾ (ಸಾಮಾನ್ಯ – ಮಹಿಳೆ)

* ಟಿ.ರಾಮಪ್ರಸಾದ್‌ (ಸಾಮಾನ್ಯ)

* ವಿನಯ್‌ ವಿಠಲ್‌ ಬಿರಾದಾರ್‌ (ಸಾಮಾನ್ಯ)

* ಜಿ.ಆರ್‌.ವಿಜಯಕುಮಾರ್‌ (ಸಾಮಾನ್ಯ)

* ಸಣ್ಣ ತಂಗಿಯವರ್‌ ಬಸನಗೌಡ (ಸಾಮಾನ್ಯ)

* ವಿ.ರಮೇಶ್‌ (3ಎ)

* ಪಿ.ಶಶಿಧರ್‌ (2ಎ)

* ತೀರ್ಥೇಗೌಡ (2ಎ)

* ಕೆ.ಬಿ.ಸಿದ್ದಲಿಂಗಸ್ವಾಮಿ (3ಬಿ)

* ಬಿ.ಎನ್‌.ಗೋಪಾಲಸ್ವಾಮಿ (ಸಾಮಾನ್ಯ–3ಎ)

* ಎಂ.ಸಿ.ಕೇಶವಮೂರ್ತಿ (2ಎ)

* ಬಿ.ರಾಮಾಂಜನೇಯ (ಎಸ್‌ಟಿ)

* ಖಲಂದರ್‌ ಖಾನ್‌ (2ಬಿ)

* ಅರುಣ್‌ ಕುಮಾರ್‌ ಸಾಂಘ್ವಿ (ಎಸ್‌ಸಿ)

* ರವಿಕುಮಾರ್‌ ಎಂ. (ಎಸ್‌ಸಿ)

* ನಾಗರಾಜ ಕೆ.ಬಿ. (ಪ್ರವರ್ಗ 1)

* ಸುಮತಿ ಎಸ್‌. (ಸಾಮಾನ್ಯ– ಮಹಿಳೆ)

* ಹಟ್ಟಪ್ಪ ಪಿ.ಎಸ್‌ (ಪ್ರವರ್ಗ 1)

* ಜಗದೀಶ ಎಂ. (ಪ್ರವರ್ಗ1)

* ರಮೇಶ್‌ ಎಂ.ಸಿ. (ಎಸ್‌ಸಿ)

* ಮಹಬೂಬೆ (2ಬಿ– ಮಹಿಳೆ)

* ಈಶ್ವರ ಎನ್‌. (ಸಾಮಾನ್ಯ)

* ರಾಣಿ ಎಚ್‌.ಸಿ.ಎಂ. (2ಎ– ಮಹಿಳೆ)

* ರೇಖಾ ಡಿ. (ಎಸ್‌ಸಿ– ಮಹಿಳೆ)

ವ್ಯಕ್ತಿತ್ವ ಪರೀಕ್ಷೆಯಲ್ಲಿ ಇವರ ಹೆಸರು ಇಲ್ಲ

* ತೇಜೋಮೂರ್ತಿ ಆರ್‌. (2ಎ)

* ನರಸಿಂಹಮೂರ್ತಿ ಕೆ. (ಸಾಮಾನ್ಯ)

* ಮಾಯಣ್ಣ ಗೌಡ ಕೆ. (ಸಾಮಾನ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.