ADVERTISEMENT

ನೇಮಕಾತಿಗಾಗಿ 220 ಅಭ್ಯರ್ಥಿಗಳ ಅಲೆದಾಟ: ಆರೋಗ್ಯ ಇಲಾಖೆಯಿಂದ ಮೀನಮೇಷ

ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದರೂ ಆರೋಗ್ಯ ಇಲಾಖೆಯಿಂದ ಮೀನಮೇಷ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:11 IST
Last Updated 22 ಜುಲೈ 2021, 20:11 IST
ಕೆ.ವಿ. ತ್ರಿಲೋಕಚಂದ್ರ
ಕೆ.ವಿ. ತ್ರಿಲೋಕಚಂದ್ರ   

ಬೆಂಗಳೂರು: ಕೆಪಿಎಸ್‌ಸಿ ಮೂಲಕ ಆಯ್ಕೆಯಾದ 220 ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಅಭ್ಯರ್ಥಿಗಳು ನೇಮಕಾತಿ ಆದೇಶ ನೀಡುವಂತೆ ಆರೋಗ್ಯ ಇಲಾಖೆಯ ಸುತ್ತ ಅಲೆದಾಡುತ್ತಿದ್ದಾರೆ. ನೇಮಕಾತಿ ಪತ್ರ ನೀಡುವಂತೆ ಆರ್ಥಿಕ ಇಲಾಖೆ ಸೂಚಿಸಿದರೂ ಆರೋಗ್ಯ ಇಲಾಖೆ ವಿನಾ ಕಾರಣ ವಿಳಂಬ ಮಾಡುತ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಈ ಹುದ್ದೆಗಳಿಗೆ 2017ರಲ್ಲಿ ಅಧಿಸೂಚನೆ ಹೊರಡಿಸಿ 2018ರಲ್ಲಿ ಪರೀಕ್ಷೆ ನಡೆಸಿ 2019ರಲ್ಲಿ ಫಲಿತಾಂಶ ಪ್ರಕಟಿಸಿದ್ದ ಕೆಪಿಎಸ್‌ಸಿ, 2020ರಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಅಲ್ಲದೆ, ಸಂಬಂಧಿಸಿದ ಇಲಾಖೆಗಳಿಂದ ನೇಮಕಾತಿ ಆದೇಶ ಪಡೆದುಕೊಳ್ಳುವಂತೆ ಆಯ್ಕೆಯಾದವರಿಗೆ ತಿಳಿಸಿತ್ತು.

ಆಯ್ಕೆಗೊಂಡಿದ್ದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯನ್ನು ವರ್ಷದ ಹಿಂದೆಯೇ (2020ರ ಜುಲೈ 9) ಆರೋಗ್ಯ ಇಲಾಖೆ ಮಾಡಿದೆ. ಅದೇ ಸಂದರ್ಭದಲ್ಲಿ ಕೋವಿಡ್‌ ಮೊದಲ ಅಲೆ ತೀವ್ರವಾಗಿದ್ದರಿಂದ ಆರ್ಥಿಕ ಮಿತವ್ಯಯದ ಕಾರಣ ನೀಡಿ ಆರ್ಥಿಕ ಇಲಾಖೆ ಎಲ್ಲ ನೇಮಕಾತಿಗಳಿಗೆ ತಡೆ ನೀಡಿತ್ತು. ತಡೆ ತೆರವುಗೊಳಿಸುವಂತೆ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಇದೇ ಜನವರಿಯಲ್ಲಿ ಆದೇಶ ವಾಪಸು ಪಡೆದ ಆರ್ಥಿಕ ಇಲಾಖೆ, ನೇಮಕಾತಿ ಪೂರ್ವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿತ್ತು. ಆಯ್ಕೆಯಾದ 220 ಅಭ್ಯರ್ಥಿಗಳಿಗೆ ಜೂನ್‌ ಬಳಿಕ ನೇಮಕಾತಿ ಆದೇಶ ನೀಡುವಂತೆ ಆರೋಗ್ಯ ಇಲಾಖೆಗೆ ಏ. 29ರಂದು ಆರ್ಥಿಕ ಇಲಾಖೆ ಸೂಚಿಸಿತ್ತು.

ADVERTISEMENT

‘ಇಲಾಖೆಯ ಆಯುಕ್ತರು ಮತ್ತು ಮುಖ್ಯ ಆಡಳಿತಾಧಿಕಾರಿಯನ್ನು (ಸಿಎಒ) ತಿಂಗಳ ಹಿಂದೆಯೇ ಭೇಟಿ ಮಾಡಿದ್ದೆವು. ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಮಾಡಿ ನೇಮಕಾತಿ ಆದೇಶ ನೀಡುವುದಾಗಿ ಆಗ ಹೇಳಿದ್ದರು. ಈ ಮಧ್ಯೆ, ಇಲಾಖೆ ಸುಮಾರು 500 ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನೌಕರರಿಗೆ ಕೌನ್ಸೆಲಿಂಗ್‌ ನಡೆಸಿ ಎಫ್‌ಡಿಎ ಹುದ್ದೆಗೆ ಬಡ್ತಿ ನೀಡಿದೆ. ಅವರೆಲ್ಲರೂ ‌ರಾಜಕೀಯ, ಜಾತಿ, ಹಣದ ಪ್ರಭಾವ ಬಳಸಿ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ಜುಲೈ 8ರಿಂದ 12ರ ಒಳಗೆ ನಮಗೂ ಕೌನ್ಸೆಲಿಂಗ್‌ ಇಲ್ಲದೆ ಸ್ಥಳ ನಿಯುಕ್ತಿ ಮಾಡುವುದಾಗಿ ಸಿಎಒ ಭರವಸೆ ನೀಡಿದ್ದರು. ಆದರೆ, ಜುಲೈ 13ರಂದು ಮತ್ತೆ 35 ನೌಕರರಿಗೆ ಎಫ್‌ಡಿಎ ಹುದ್ದೆಗೆ ಕೌನ್ಸೆಲಿಂಗ್‌ ಮೂಲಕ ಪದೋನ್ನತಿ ನೀಡಲಾಗಿದೆ’ ಎಂದು ಎಫ್‌ಡಿಎ ಹುದ್ದೆಗೆ ನೇಮಕಗೊಂಡಿರುವ ಅಭ್ಯರ್ಥಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.