ADVERTISEMENT

ಕೆಎಎಸ್‌: ಹುದ್ದೆ ಬದಲಿಸದೆ ಬಡ್ತಿ ಭಾಗ್ಯ?

ಕೆಎಎಸ್‌: ‘ಪದೋನ್ನತಿ’ಗೆ ತಯಾರಿ: ಹೈಕೋರ್ಟ್ ಆದೇಶಕ್ಕೆ ಸಿಗದ ಕಿಮ್ಮತ್ತು

ರಾಜೇಶ್ ರೈ ಚಟ್ಲ
Published 15 ಮೇ 2019, 19:41 IST
Last Updated 15 ಮೇ 2019, 19:41 IST
   

ಬೆಂಗಳೂರು: 1998ನೇ ಸಾಲಿನ ಗೆಜೆಟೆಟ್‌ ಪ್ರೊಬೇಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಪಟ್ಟಿ ಅನುಷ್ಠಾನಗೊಳಿಸಲು ಹೈಕೋರ್ಟ್‌ನ ಖಡಕ್‌ ಆದೇಶವಿದ್ದರೂ ಆ ಸಾಲಿನಲ್ಲಿ ಆಯ್ಕೆಯಾದ ಒಬ್ಬ ಅನರ್ಹ ಮತ್ತು 18 ಅಧಿಕಾರಿಗಳಿಗೆ ಬಡ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ!

1998ನೇ ಸಾಲಿನಲ್ಲಿ ಆಯ್ಕೆ ಯಾದವರೂ ಸೇರಿದಂತೆ ಕೆಎಎಸ್‌ ಕಿರಿಯ ಶ್ರೇಣಿಯ ಒಟ್ಟು 108 ಅಧಿಕಾರಿಗಳನ್ನು ಹಿರಿಯ ಶ್ರೇಣಿಯ ವೃಂದಕ್ಕೆ ಬಡ್ತಿ (ಪದೋನ್ನತಿ) ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ತಯಾರಿ ನಡೆಸಿದೆ. ಕೆಪಿಎಸ್‌ಸಿ 2019ರ ಜ. 25ರಂದು ಗೆಜೆಟ್‌ನಲ್ಲಿ ಪ್ರಕಟಿಸಿದ್ದ ಪರಿಷ್ಕೃತ ಪಟ್ಟಿಯ ಪ್ರಕಾರ ಕಂದಾಯ ಇಲಾಖೆಯಿಂದ ಬೇರೆ ಇಲಾಖೆಗೆ ಸ್ಥಾನಪಲ್ಲಟಗೊಳ್ಳಬೇಕಿರುವ 18 ಕೆಎಎಸ್‌ ಅಧಿಕಾರಿಗಳು ಬಡ್ತಿಗಾಗಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಇದ್ದಾರೆ. ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದ (ಅನರ್ಹ) ಒಬ್ಬ ಅಧಿಕಾರಿಯ ಹೆಸರೂ ಪಟ್ಟಿಯಲ್ಲಿ ಸೇರಿಕೊಂಡಿದೆ.

‘ಬಡ್ತಿ ನೀಡಲು ಪಟ್ಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ, ಕ್ರಿಮಿನಲ್‌ ಮೊಕದ್ದಮೆ ಏನಾದರೂ ಬಾಕಿ ಇವೆಯೇ’ ಎಂಬ ಬಗ್ಗೆ ತಕ್ಷಣ ಮಾಹಿತಿ ಸಲ್ಲಿಸುವಂತೆ ಡಿಪಿಎಆರ್‌ ಇದೇ 13ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.

ADVERTISEMENT

ಹೈಕೋರ್ಟ್‌ಗೆ ಪ್ರಮಾಣ ಪತ್ರ: 1998ನೇ ಸಾಲಿನ ನೇಮಕಾತಿ ಪ್ರಕರಣದ ವ್ಯಾಜ್ಯಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ, ಸ್ಥಾನಪಲ್ಲಟಗೊಳ್ಳಲಿರುವ 115 ಅಧಿಕಾರಿಗಳ ಹೆಸರು ಮತ್ತು ಬದಲಾದ ಹುದ್ದೆಯ ಪಟ್ಟಿ ಹಾಗೂ 28 ಅನರ್ಹರನ್ನು ಕೈಬಿಡುವ ಸಂಬಂಧ ಸಕ್ಷಮ ಪ್ರಾಧಿಕಾರಕ್ಕೆ ಕಡತ ಮಂಡಿಸಿರುವ ಮಾಹಿತಿಯನ್ನು ಕಳೆದ ತಿಂಗಳ 16ರಂದು ಪ್ರಮಾಣ ಪತ್ರದ ಮೂಲಕ ಹೈಕೋರ್ಟ್‌ಗೆ ತಿಳಿಸಿತ್ತು.

ಈ ಪ್ರಕರಣ ಏಪ್ರಿಲ್‌ 26ರಂದು ಪುನಃ ವಿಚಾರಣೆಗೆ ಬಂದಾಗ, ‘ಪಟ್ಟಿ ಅನುಷ್ಠಾನ ವಿಷಯದಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ನ್ಯಾಯಪೀಠ ಕಿಡಿಕಾರಿತ್ತು. ‘ಪಟ್ಟಿಯನ್ನು ಮೇ 4ರಂದು ಡಿಪಿಎಆರ್‌ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಬೇಕು’ ಎಂದು ಆದೇಶಿಸಿತ್ತು. ಜೊತೆಗೆ, ‘ಈ ಅಧಿಕಾರಿಗಳಿಗೆ ಹುದ್ದೆ ಬದಲಾವಣೆ ಕುರಿತು ಆದೇಶ ನೀಡಬೇಕು. ಒಂದುವೇಳೆ ಆದೇಶ ನೀಡದೇ ಇದ್ದರೆ, ಅಧಿಕಾರಿಗಳು ತಮ್ಮ ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಬಹುದು’ ಎಂದೂ ಹೇಳಿತ್ತು.

ನ್ಯಾಯಪೀಠದ ಚಾಟಿಗೆ ಎಚ್ಚೆತ್ತ ಸರ್ಕಾರ, 115 ಅಧಿಕಾರಿಗಳ ಪಟ್ಟಿಯನ್ನು ಮೇ 6ರಂದು ಜಾಲತಾಣದಲ್ಲಿ ಪ್ರಕಟಿಸಿತ್ತು. ಆದರೆ, ಸರ್ಕಾರ ಈವರೆಗೂ ನೇಮಕಾತಿ ಆದೇಶ ನೀಡುವ ಕುರಿತಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಈ ಹಿನ್ನೆಲೆಯಲ್ಲಿ, ಸ್ಥಾನಪಲ್ಲಟಗೊಳ್ಳಲಿರುವ ಕೆಲವು ಅಧಿಕಾರಿಗಳು ತಮ್ಮ ಇಲಾಖೆಯ ಮುಖ್ಯಸ್ಥರು ಮತ್ತು ಡಿಪಿಎಆರ್‌ ಪ್ರಧಾನ ಕಾರ್ಯದರ್ಶಿಯನ್ನು ಮೇ 8ರಂದು ಭೇಟಿ ಮಾಡಿ, ‘ಹೈಕೋರ್ಟ್‌ ಆದೇಶ ಪಾಲಿಸುವ ಉದ್ದೇಶದಿಂದ ಹೊಸ ಹುದ್ದೆಗೆ ವರದಿ ಮಾಡಿಕೊಳ್ಳಲು ಅನುಮತಿ ನೀಡಬೇಕು ಮತ್ತು ನಾವು ನ್ಯಾಯಾಂಗ ನಿಂದನೆಗೆ ಗುರಿಯಾಗದಂತೆ ನೋಡಿಕೊಳ್ಳಬೇಕು’ ಎಂದೂ ಮನವಿ
ಸಲ್ಲಿಸಿದ್ದಾರೆ.

ಆದರೆ, ಸ್ಥಾನಪಲ್ಲಟ ಪಟ್ಟಿ ಅನುಷ್ಠಾನ ವಿಷಯದಲ್ಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಹಿಂಬಡ್ತಿ ಭೀತಿಗೆ ಸಿಎಟಿ ಅಭಯ!

ಹೈಕೋರ್ಟ್‌ ತೀರ್ಪಿನ (ಇದೇ ತೀರ್ಪು ಅನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ) ಅನ್ವಯ ಸ್ಥಾನಪಲ್ಲಟಗೊಂಡು ಐಎಎಸ್‌ನಿಂದ ಕೆಎಎಸ್‌ಗೆ ಹಿಂಬಡ್ತಿ ಪಡೆಯಲಿರುವ ಅಧಿಕಾರಿಗಳು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯಿಂದ (ಸಿಎಟಿ) ತಡೆ ಆದೇಶ ಪಡೆದಿದ್ದಾರೆ.

‘ಕೋರ್ಟ್‌ ನೀಡುವ ಅಂತಿಮ ಆದೇಶಕ್ಕೆ ಬದ್ಧವಾಗಿರಬೇಕು’ ಎಂಬ ಷರತ್ತು ವಿಧಿಸಿ ಈ ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ ನೀಡಲಾಗಿತ್ತು. ಆದರೂ ಸಿಎಟಿಗೆ ಅರ್ಜಿ ಸಲ್ಲಿಸಿರುವ ಅಧಿಕಾರಿಗಳ ವಿರುದ್ಧ, ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್‌, ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದೆ. ಇದೀಗ ಹುದ್ದೆ ಬದಲಾಗುವ ಇತರ ಕೆಲವು ಅಧಿಕಾರಿಗಳೂ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲು ಹತ್ತಲು ಮುಂದಾಗಿದ್ದಾರೆ.

14 ವರ್ಷಗಳ ಬಳಿಕ ಸಂದರ್ಶನ!

ಕೆಪಿಎಸ್‌ಸಿ 1998ನೇ ಸಾಲಿನ ಪಟ್ಟಿ ಪರಿಷ್ಕರಿಸುವ ಸಂದರ್ಭದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪಿನಂತೆ 91 ಅಭ್ಯರ್ಥಿಗಳ ಮೂರನೇ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿರಲಿಲ್ಲ. ಇದೀಗ ಈ ಅಂಕಗಳನ್ನು ಪರಿಗಣಿಸಿ ಮತ್ತೊಮ್ಮೆ ಪಟ್ಟಿ ಪರಿಷ್ಕರಿಸಿ ಜೂನ್‌ 10ರಂದು ಹೈಕೋರ್ಟ್‌ಗೆ ಅನುಪಾಲನಾ ವರದಿ ಸಲ್ಲಿಸಬೇಕಿದೆ. ಆದರೆ, ಈ 91 ಅಭ್ಯರ್ಥಿಗಳ ಪೈಕಿ, 9 ಅಭ್ಯರ್ಥಿಗಳಿಗೆ 14 ವರ್ಷಗಳ ಬಳಿಕ ಗುರುವಾರ (ಮೇ. 16) ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ನಡೆಸಲು ಸಿದ್ಧತೆ ನಡೆದಿದೆ. ಆದರೆ, ಈ ಪೈಕಿ ಒಬ್ಬ ಅಭ್ಯರ್ಥಿ ಮೃತಪಟ್ಟಿದ್ದು, ಒಬ್ಬ ಅಭ್ಯರ್ಥಿ ನಿವೃತ್ತಿ ವಯಸ್ಸು ದಾಟಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.