ADVERTISEMENT

ಕೆಪಿಎಸ್‌ಸಿ: ಅಂಕ ಕಡಿತ- ಸಿದ್ದಗಂಗಾ ಶ್ರೀ, ಎಚ್‌ಡಿಕೆ ಆಕ್ಷೇಪ

ವ್ಯಕ್ತಿತ್ವ ಪರೀಕ್ಷೆ: ನಿರ್ಧಾರ ಮರುಪರಿಶೀಲಿಸಲು ಸಿಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 19:32 IST
Last Updated 2 ಮಾರ್ಚ್ 2022, 19:32 IST
   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಯ ನೇಮಕಾತಿಯ ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಅಂಕವನ್ನು 50ರಿಂದ 25ಕ್ಕೆ ಇಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರತ್ಯೇಕ ಪತ್ರ ಬರೆದಿದ್ದಾರೆ.

‘ವ್ಯಕ್ತಿತ್ವ ಪರೀಕ್ಷೆಯ ಅಂಕವನ್ನು ಕಡಿತ ಮಾಡಿರುವುದರಿಂದ ರಾಜ್ಯದ ಗ್ರಾಮೀಣ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಇತರ ರಾಜ್ಯಗಳ ಲೋಕಸೇವಾ ಆಯೋಗದ ರೀತಿಯಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಯ ವ್ಯಕ್ತಿತ್ವ ಪರೀಕ್ಷೆಯ ಅಂಕವನ್ನು ನಿಗದಿಪಡಿಸಬೇಕು. ನಾನ್‌ ಗೆಜೆಟೆಡ್‌ ಪ್ರೊಬೇಷನರಿ ವೃಂದದ ಹುದ್ದೆಗಳ ಸಂದರ್ಶನಕ್ಕೂ ಒಟ್ಟು ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳಲ್ಲಿ ಶೇ 12.5ರಷ್ಟು ನಿಗದಿಪಡಿಸಬೇಕು’ ಎಂದು ಸಿದ್ಧಲಿಂಗ ಸ್ವಾಮೀಜಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಗೆಜೆಟೆಡ್‌ ಹುದ್ದೆಯ ಮುಖ್ಯಪರೀಕ್ಷೆಯ ಅಂಕವನ್ನು ಮತ್ತೆ 1,750ಕ್ಕೆ ಹೆಚ್ಚಿಸಲು ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕ 25ಕ್ಕೆ ಕಡಿಮೆ ಮಾಡಲು ಹೊರಟಿರುವುದು ಸಂಶಯಕ್ಕೆ ಕಾರಣವಾಗುತ್ತದೆ. ಅಲ್ಲದೆ, ವ್ಯಕ್ತಿತ್ವ ಪರೀಕ್ಷೆ ಕೇವಲ ಅಂಕ ನೀಡಲು ಸೀಮಿತವಾಗಿರದೆ ಅಭ್ಯರ್ಥಿಯ ಎಲ್ಲ ಗುಣಮಟ್ಟವನ್ನು ಪರಿಶೀಲಿಸಲೆಂದೇ ನಿಗದಿಪಡಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) ಸಾಮಾನ್ಯ ನಿಯಮಗಳು– 2020ಕ್ಕೆ ತಿದ್ದುಪಡಿ ಮಾಡಿ ನಾನ್‌ ಗೆಜೆಟೆಡ್‌ ವೃಂದದ ಹುದ್ದೆಗಳ ವ್ಯಕ್ತಿತ್ವ ಪರೀಕ್ಷೆಯ ಅಂಕವನ್ನು ಕಡಿಮೆ ಮಾಡಿರುವುದು ಸರಿಯಲ್ಲ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ADVERTISEMENT

‘ಗೆಜೆಟೆಡ್‌ ಹುದ್ದೆಗಳ ನೇಮಕಾತಿಗೆ ವ್ಯಕ್ತಿತ್ವ ಪರೀಕ್ಷೆಯ ಅಂಕವನ್ನು 50ರಿಂದ 25ಕ್ಕೆ ಇಳಿಸಿರುವುದು ಅವೈಜ್ಞಾನಿಕ. ಕೇಂದ್ರ ಲೋಕಸೇವಾ ಆಯೋಗ 275, ಇತರ ರಾಜ್ಯಗಳು ಮುಖ್ಯ ಪರೀಕ್ಷೆಯ ಅಂಕದ ಶೇ 12ರಿಂದ 17ರಷ್ಟು ಅಂಕವನ್ನು ನಿಗದಿಪಡಿಸಿವೆ. ರಾಜ್ಯ ಸರ್ಕಾರ 1,750 ಅಂಕಕ್ಕೆ ನಡೆಯುವ ಮುಖ್ಯಪರೀಕ್ಷೆಗೆ ವ್ಯಕ್ತಿತ್ವ ಪರೀಕ್ಷೆಯ ಅಂಕ 25 (ಶೇ 1.4) ರಷ್ಟು ಮಾತ್ರ ಆಗುತ್ತಿದೆ. ಅಲ್ಲದೆ, ಗ್ರೂಪ್‌ ಬಿ ವೃಂದ ನೇಮಕಾತಿಗೆ ಶೇ 12.5ರಷ್ಟು ಸಂದರ್ಶನ ಅಂಕವನ್ನು ತೆಗೆದುಹಾಕಿರುವುದಕ್ಕೆ ಬಲವಾದ ವೈಜ್ಞಾನಿಕ ಕಾರಣಗಳು ಇಲ್ಲ’ ಎಂದು ಎಚ್‌.ಡಿ. ಕುಮಾರಸ್ವಾಮಿ ಪತ್ರದಲ್ಲಿ ಹೇಳಿದ್ದಾರೆ.

‘ಕರ್ನಾಟಕ ನಾಗರಿಕ ಸೇವೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇವಲ ಶೈಕ್ಷಣಿಕ ಅಥವಾ ಅಂಕ ಗಳಿಸಿದ ಜ್ಞಾನ ಇದ್ದರೆ ಸಾಲದು. ರಾಜ್ಯದ ವಾಸ್ತವಿಕ ಸ್ಥಿತಿಗತಿಯ ಜೊತೆ, ಜನರ ನಾಡಿಮಿಡಿತ ಗೊತ್ತಿರಬೇಕು. ಅದನ್ನು ಪರೀಕ್ಷಿಸಲು ವ್ಯಕ್ತಿತ್ವ ಪರೀಕ್ಷೆ ಅಗತ್ಯ. ಶೈಕ್ಷಣಿಕ ಅಂಕವನ್ನಷ್ಟೆ ಪರಿಗಣಿಸಿದರೆ, ದೆಹಲಿ, ಹೈದರಾಬಾದ್‌, ಬೆಂಗಳೂರಿನಂಥ ನಗರಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿತು ಹೆಚ್ಚು ಅಂಕ ಪಡೆದವರು ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚು. ಗ್ರಾಮೀಣ, ಹಿಂದುಳಿದ ವರ್ಗದ ಪ್ರತಿಭಾವಂತ, ಕೌಶಲ ಹೊಂದಿದ ಅಭ್ಯರ್ಥಿಗಳು ಅವಕಾಶ ವಂಚಿತರಾಗುವ ಅಪಾಯವಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.