ADVERTISEMENT

ಮೋಟಾರು ವಾಹನ ನಿರೀಕ್ಷಕ ಹುದ್ದೆ: ಅನರ್ಹರಿಗೆ ‘ಅರ್ಹತೆ’?

ಕೆಪಿಎಸ್‌ಸಿ ಪಟ್ಟಿ: ‘ಅಕ್ರಮ’ಕ್ಕೆ ದಾರಿ ಆರೋಪ

ರಾಜೇಶ್ ರೈ ಚಟ್ಲ
Published 18 ಆಗಸ್ಟ್ 2022, 20:58 IST
Last Updated 18 ಆಗಸ್ಟ್ 2022, 20:58 IST
   

ಬೆಂಗಳೂರು: ಮೋಟಾರು ವಾಹನ ನಿರೀಕ್ಷಕ (ಐಎಂವಿ– ಬ್ರೇಕ್‌ ಇನ್‌ಸ್ಪೆಕ್ಟರ್‌) ಹುದ್ದೆಗೆ ಕೆಪಿಎಸ್‌ಸಿ ಪ್ರಕಟಿಸಿರುವ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ 141 ಅಭ್ಯರ್ಥಿಗಳಲ್ಲಿ, ಈ ಹುದ್ದೆಗೆ ‘ಅನರ್ಹ’ರೆಂದು ಕೆಪಿಎಸ್‌ಸಿಯೇ ಗುರುತಿಸಿದ್ದ 107 ಅಭ್ಯರ್ಥಿಗಳ ಹೆಸರುಗಳಿರುವುದು ಸಂಶಯಕ್ಕೆ ಕಾರಣವಾಗಿದೆ.

ಅನರ್ಹರೆಂದು ಗುರುತಿಸಲಾಗಿದ್ದವರ ಪೈಕಿ ಕೆಲವರಿಗೆಸಾರಿಗೆ ಇಲಾಖೆಯೇ ‘ಅರ್ಹತೆ’ಯ ಪ್ರಮಾಣಪತ್ರ ನೀಡಲು ಮುಂದಾಗಿದೆ ಎಂದೂ ಆರೋಪಿಸಲಾಗಿದೆ.

ಕೆಪಿಎಸ್‌ಸಿ 2019 ಜುಲೈ 4ರಂದು ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಹೊಂದಿದ ಭಾರಿ ಮತ್ತು ಲಘು ವಾಹನ ದುರಸ್ತಿಯ ಸೇವಾನುಭವದ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳಿದ್ದಾರೆ ಎಂದು ಆರೋಪಿಸಿ ಕೆಲವು ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲೇರಿದ್ದರು. 1,710 ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲೇ ಅನರ್ಹರು ಎಂದು ಕೆಪಿಎಸ್‌ಸಿ ತಿರಸ್ಕರಿಸಿತ್ತು. ಹೈಕೋರ್ಟ್‌ ನಿರ್ದೇಶನದಂತೆ ಏಪ್ರಿಲ್‌ 30ರಂದು ಪ್ರಕಟಿಸಿರುವ ಪರಿಷ್ಕೃತ ಪಟ್ಟಿಯಲ್ಲಿ ಅನರ್ಹರ ಹೆಸರುಗಳೂ ಇವೆ!

ADVERTISEMENT

ಪರಿಷ್ಕೃತ ಪಟ್ಟಿಯಲ್ಲಿರುವವರಿಗೆ ನೇಮಕಾತಿ ಆದೇಶ ನೀಡುವ ಮೊದಲು ಅಭ್ಯರ್ಥಿಗಳ ವಯೋಮಿತಿ, ವಿದ್ಯಾರ್ಹತೆ, ಮೀಸಲಾತಿ, ದೈಹಿಕ ಕ್ಷಮತೆ, ವಾಹನ ಪರವಾನಗಿ ಮತ್ತು ಸೇವಾನುಭವಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆ ಮತ್ತು ಅವುಗಳ ನೈಜತೆ ಬಗ್ಗೆ ಸಿಂಧುತ್ವ ಪ್ರಮಾಣಪತ್ರ ಪಡೆಯುವಂತೆ ಸಾರಿಗೆ ಇಲಾಖೆಗೆ ಕೆಪಿಎಸ್‌ಸಿ ಸೂಚಿಸಿದೆ. ಪರಿಷ್ಕೃತ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮೇ 6ರವರೆಗೆ ಸಮಯ ನೀಡಿದ್ದರೂ, ಸಾರಿಗೆ ಆಯುಕ್ತರು ಆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಪೊಲೀಸ್‌ ಪರಿಶೀಲನೆಗೆ ಮೇ 4ರಂದೇ ಸೂಚಿಸಿದ್ದರು. ಜಿಲ್ಲಾಧಿಕಾರಿಗಳು ಮತ್ತು ವೈದ್ಯಕೀಯ ಮಂಡಳಿ ಮೂಲಕ ಎಲ್ಲ 141 ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ, ಸೇವಾನುಭವ ಪ್ರಮಾಣಪತ್ರಗಳ ಮೂಲ ದಾಖಲೆಗಳ ಪರಿಶೀಲನೆಗೆ ಸಾರಿಗೆ ಇಲಾಖೆ ಮುಂದಾಗಿದೆ. ಇದು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲಿದ್ದು, ಅನರ್ಹರಿಗೂ ‘ಅರ್ಹತೆ’ಯ ಪ್ರಮಾಣಪತ್ರ ಸಿಗುವ ಸಾಧ್ಯತೆ ಇದೆ’ ಎಂದು ಹುದ್ದೆ ವಂಚಿತ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ ತಾತ್ಕಾಲಿಕ ಆಯ್ಕೆ ಪ್ರಕಟಿಸಿದ್ದ ಸಂದರ್ಭದಲ್ಲಿಯೇ, ಸೇವಾನುಭವ ಪ್ರಮಾಣಪತ್ರಗಳ ಪರಿಶೀಲನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೆಲವು ಅಭ್ಯರ್ಥಿಗಳು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. ತನಿಖೆ ನಡೆಸಿದ್ದ ಎಸಿಬಿ, 42 ಅಭ್ಯರ್ಥಿಗಳ ಕುರಿತು ಮಧ್ಯಂತರ ವರದಿ ನೀಡಿತ್ತು. ಅದಾದ ಬಳಿಕ, ‘ಈ ವಿಷಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಅಭ್ಯರ್ಥಿಗಳು ಸಲ್ಲಿಸಿದ್ದ ಪ್ರಮಾಣಪತ್ರ ನೈಜವಾಗಿಲ್ಲ ಎಂದು ನೀಡಿದ್ದ ವರದಿಯನ್ನು ಪರಿಗಣಿಸಬಾರದು’ ಎಂದು ಎಸಿಬಿ ಹೇಳಿತ್ತು.

ಈ ಮಧ್ಯೆ, ನಕಲಿ ಸೇವಾನುಭವ ಪ್ರಮಾಣಪತ್ರ ಸಲ್ಲಿಸಿದವರು ಆಯ್ಕೆಯಾಗಿದ್ದರೆಂದು ಆರೋಪಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಮೊರೆ ಹೋಗಿದ್ದರು. ಆ ಬಳಿಕ, ಕೆಪಿಎಸ್‌ಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆಯ ಮಧ್ಯೆ, ಸರ್ಕಾರಕ್ಕೆ ಪತ್ರ ಬರೆದಿದ್ದ ಕೆಪಿಎಸ್‌ಸಿ, ಭಾರಿ ವಾಹನಗಳ ದುರಸ್ತಿ ಕಾರ್ಯಾಗಾರದ ಬಗ್ಗೆ ಸ್ಪಷ್ಟೀಕರಣ ಕೇಳಿತ್ತು. ಇದು ಗೊಂದಲಕ್ಕೆ ಕಾರಣವಾಗಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ತಿರಸ್ಕೃತ ಪಟ್ಟಿಯ ಬಗ್ಗೆ ಪ್ರಸ್ತಾಪಿಸದ ಹೈಕೋರ್ಟ್‌, ನಿಯಮಾನುಸಾರ ಮುಂದುವರಿಯಿರಿ ಎಂದು ಕೆಪಿಎಸ್‌ಸಿಗೆ ನಿರ್ದೇಶನ ನೀಡಿತ್ತು. ಆದರೆ, ಕೆಪಿಎಸ್‌ಸಿ ಅಭ್ಯರ್ಥಿಗಳ ಅಂಕಗಳ ಆಧಾರದಲ್ಲಿ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿತ್ತು.

‘ಈ ನೇಮಕಾತಿ ಪ್ರಕ್ರಿಯೆ ಆರಂಭಗೊಂಡು ಆರು ವರ್ಷ ದಾಟಿದೆ. ಅರ್ಜಿ ಸಲ್ಲಿಸಿದವರ ಮೂಲ ದಾಖಲಾತಿಗಳ ಪರಿಶೀಲನೆಗೆ ಕೆಪಿಎಸ್‌ಸಿ ಮೂರೂವರೆ ವರ್ಷ ತೆಗೆದುಕೊಂಡಿತ್ತು. ಈ ಹಿಂದೆ, ಜಿಲ್ಲಾಧಿಕಾರಿಗಳು ಮತ್ತು ಆರ್‌ಟಿಒಗಳು ಪರಿಶೀಲಿಸಿ ಅರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳ ಹೆಸರು ಆರು ವರ್ಷಗಳ ಬಳಿಕ ಪ್ರಕಟಿಸಿದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಇಲ್ಲ. ಇದರಿಂದ ಅನ್ಯಾಯವಾಗಿದೆ’ ಎಂದು ಕೆಲವು ಅಭ್ಯರ್ಥಿಗಳು ದೂರಿದ್ದಾರೆ.

2,347 ಅಭ್ಯರ್ಥಿಗಳಲ್ಲಿ 1,710 ‘ಅನರ್ಹ’
ಐಎಂವಿ 150 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ 2016ರ ಫೆ. 4ರಂದು ಅಧಿಸೂಚನೆ ಹೊರಡಿಸಿತ್ತು. 2,347 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 2016ರ ಜೂನ್‌ 26ರಂದು ನಡೆದಿದ್ದ ಆಯ್ಕೆ ಪರೀಕ್ಷೆಗೆ 2,048 ಮಂದಿ ಹಾಜರಾಗಿದ್ದರು. ಈ ಪೈಕಿ, ಮೂಲ ದಾಖಲೆಗಳ ಪರಿಶೀಲನೆಗೆ 1,905 ಅಭ್ಯರ್ಥಿಗಳು ಹಾಜರಾಗಿದ್ದರು. ಕೆಪಿಎಸ್‌ಸಿ ಕೋರಿಕೆಯಂತೆ ಅಭ್ಯರ್ಥಿಗಳ ದೈಹಿಕ ಕ್ಷಮತೆ ಮತ್ತು ಸೇವಾನುಭವ ಪ್ರಮಾಣಪತ್ರವನ್ನು ವೈದ್ಯಕೀಯ ಮಂಡಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಮತ್ತು ಜಿಲ್ಲಾಧಿಕಾರಿಗಳು ಪರಿಶೀಲಿಸಿದ್ದರು. ಆಗ ಸೇವಾನುಭವ ಹೊಂದಿಲ್ಲದ 631, ದೈಹಿಕ ಕ್ಷಮತೆ ಇಲ್ಲದ 435, ವಿದ್ಯಾರ್ಹತೆ ಪಡೆಯುವ ಪೂರ್ವದಲ್ಲಿ ಸೇವಾನುಭವ ಹೊಂದಿದ್ದ 16, ಅಪೂರ್ಣ ಸೇವಾನುಭವದ ಕಾರಣಕ್ಕೆ ಇಬ್ಬರು ಸೇರಿ ಒಟ್ಟು 1,710 ಅಭ್ಯರ್ಥಿಗಳನ್ನು ಅನರ್ಹರೆಂದು ಕೆಪಿಎಸ್‌ಸಿ ತಿರಸ್ಕರಿಸಿತ್ತು. ಉಳಿದ, 195 ಅಭ್ಯರ್ಥಿಗಳು ಹುದ್ದೆಗೆ ಅರ್ಹತೆ ಪಡೆದರೂ ಜ್ಯೇಷ್ಠತೆಯ ಕಾರಣಕ್ಕೆ 66 ಅಭ್ಯರ್ಥಿಗಳು ಪಟ್ಟಿಯಿಂದ ಹೊರಗುಳಿದು, ಕೆಪಿಎಸ್‌ಸಿ 129 ಅಭ್ಯರ್ಥಿಗಳ (11 ಅಭ್ಯರ್ಥಿಗಳು ಹೈ–ಕ) ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.