ADVERTISEMENT

ಕೆಪಿಎಸ್‌ಸಿ: ಸುಗ್ರೀವಾಜ್ಞೆಗೆ ನಕಾರ

ಕ್ರಮಕ್ಕೆ ತರಾತುರಿ ಏಕೆ: ಸರ್ಕಾರಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಪ್ರಶ್ನೆ

ರಾಜೇಶ್ ರೈ ಚಟ್ಲ
Published 16 ಜೂನ್ 2019, 20:09 IST
Last Updated 16 ಜೂನ್ 2019, 20:09 IST
   

ಬೆಂಗಳೂರು: 1998ನೇ ಸಾಲಿನ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ‘ಅಕ್ರಮ’ಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ತರಲು ಮುಂದಾಗಿದ್ದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲ ವಜುಭಾಯಿ ವಾಲಾ ನಿರಾಕರಿಸಿದ್ದಾರೆ.

2016 ಜೂನ್‌ 21ರಂದು ಹೈಕೋರ್ಟ್ ನೀಡಿದ ತೀರ್ಪಿನಿಂದ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದ ಅಧಿಕಾರಿಗಳಿಗೆ ಸೇವಾ ಭದ್ರತೆ ಕಲ್ಪಿಸಲು ಮತ್ತು ಹಿಂಬಡ್ತಿ ಆತಂಕ ಎದುರಿಸುತ್ತಿದ್ದ ಅಧಿಕಾರಿಗಳ ರಕ್ಷಣೆಗಾಗಿ ಸುಗ್ರೀವಾಜ್ಞೆ ತರಲು ಸರ್ಕಾರ ನಿರ್ಧರಿಸಿತ್ತು.ಮೇ 27ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿತ್ತು.

ಇದೇ 7ರಂದು ರಾಜಭವನಕ್ಕೆ ಸರ್ಕಾರ ಸುಗ್ರೀವಾಜ್ಞೆಯನ್ನು ಕಳುಹಿಸಿತ್ತು. ಜೂನ್ 15ರಂದು ಕಡತ ವಾಪಸು ಕಳುಹಿಸಿರುವ ರಾಜ್ಯಪಾಲರು, ‘ಇಷ್ಟೊಂದು ತರಾತುರಿಯಲ್ಲಿ ಸುಗ್ರೀವಾಜ್ಞೆ ತರುವ ಅವಶ್ಯಕತೆ ಏನಿದೆ’ ಎಂದು ಪ್ರಶ್ನಿಸಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.

ADVERTISEMENT

ಹೊಸದಾಗಿ ನೇಮಕಾತಿ ಆದೇಶ: ಕೆಪಿಎಸ್‌ಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದ 1998ನೇ ಸಾಲಿನ ಪರಿಷ್ಕೃತ ಆಯ್ಕೆ ಪಟ್ಟಿಯಂತೆ 140 ಅಧಿಕಾರಿಗಳು ಬೇರೆ ಇಲಾಖೆ, ವೃಂದ, ಹುದ್ದೆಗಳಿಗೆ ಸ್ಥಾನ ಪಲ್ಲಟಗೊಳ್ಳಲಿದ್ದಾರೆ. ಈ ಪೈಕಿ, ಸದ್ಯ 115 ಅಧಿಕಾರಿಗಳು ಕರ್ತವ್ಯದಲ್ಲಿದ್ದು, ಆ ಅಧಿಕಾರಿಗಳಿಗೆ ಹೊಸದಾಗಿ ನೇಮಕಾತಿ ಆದೇಶ ನೀಡುವ ಪ್ರಕ್ರಿಯೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಶನಿವಾರವೇ(ಜೂನ್‌ 15) ಚಾಲನೆ ನೀಡಿದೆ.

ಹೈಕೋರ್ಟ್‌ ನೀಡಿದ ತೀರ್ಪು ಪಾಲನೆ ಆಗಿಲ್ಲವೆಂದು ಸಲ್ಲಿಕೆಯಾದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ (ಏ.25) ಸಂದರ್ಭದಲ್ಲಿ, ಪರಿಷ್ಕೃತ ಆಯ್ಕೆ ಪಟ್ಟಿಯಂತೆ ಅಭ್ಯರ್ಥಿಗಳ ನೇಮಕಾತಿಗೆ ಕೋರ್ಟ್‌ ನಿರ್ದೇಶನ ನೀಡಿತ್ತು. ತೀರ್ಪು ಅನುಷ್ಠಾನಗೊಳಿಸಿರುವ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಬೇಕಾಗಿದೆ. ಹೀಗಾಗಿ, ಆಯಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವ ಡಿಪಿಎಆರ್‌, ಆಯ್ಕೆ ಪಟ್ಟಿಯಲ್ಲಿರುವ ಜ್ಯೇಷ್ಠತಾ ಕ್ರಮದಲ್ಲಿಯೇ ನೇಮಕಾತಿ ಆದೇಶ (ಸ್ಥಾನಪಲ್ಲಟಗೊಳ್ಳುವ ಅಧಿಕಾರಿಗಳಿಗೆ) ನೀಡುವಂತೆ ತಿಳಿಸಿದೆ. ನಂತರ ನೇಮಕಾತಿ ಆದೇಶದ ಪ್ರತಿಯನ್ನು ಕೆಪಿಎಸ್‌ಸಿ ಮತ್ತು ಡಿಪಿಎಆರ್‌ಗೆ ಕಳುಹಿಸುವಂತೆಯೂ ಕೋರಿದೆ.

ನೇಮಕಾತಿ ಆದೇಶದಲ್ಲಿ, ‘ಹೈಕೋರ್ಟ್‌ 2016ರ ಜೂನ್‌ 21ರಂದು ನೀಡಿದ್ದ ತೀರ್ಪಿನಲ್ಲಿರುವಕಂಡಿಕೆ 3ರ (ಈ ಸಾಲಿನ 91 ಅಭ್ಯರ್ಥಿಗಳ ಮರು ಮೌಲ್ಯಮಾಪನ ಅಂಕ ಪರಿಗಣಿಸಿ ಪಟ್ಟಿ ಪರಿಷ್ಕರಿಸಬೇಕು) ನಿರ್ದೇಶನಕ್ಕೆ ಬದ್ಧ ಮತ್ತು ನ್ಯಾಯಾಂಗ ನಿಂದನೆ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ’ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದೂ ಡಿ‍ಪಿಎಆರ್‌ ಹೇಳಿದೆ.

ಆದರೆ, ಕೆಪಿಎಸ್‌ಸಿ 91 ಅಭ್ಯರ್ಥಿಗಳ ಮರು ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದೆ. ಆದರೆ ಪಟ್ಟಿಯನ್ನೂ ಗೆಜೆಟ್‌ನಲ್ಲಿ ಪ್ರಕಟಿಸಿಲ್ಲ. ಈ ಪಟ್ಟಿಯ ಪ್ರಕಾರ ಇನ್ನಷ್ಟು ಅಧಿಕಾರಿಗಳು ಸ್ಥಾನಪಲ್ಲಟಗೊಳ್ಳಲಿದ್ದಾರೆ. ಹಿಂಬಡ್ತಿ ಪಡೆಯುವ ಅಧಿಕಾರಿಗಳ ಸಂಖ್ಯೆಯೂ ವ್ಯತ್ಯಾಸವಾಗಲಿದೆ ಎಂದು ಮೂಲಗಳು ಹೇಳಿವೆ.

ಸ್ಥಾನಪಲ್ಲಟಗೊಂಡು ಸಹಕಾರ ಇಲಾಖೆಗೆ ಹೊಸತಾಗಿ ನೇಮಕಗೊಳ್ಳಲಿರುವ ಏಳು ಮತ್ತು ಕಾರ್ಮಿಕ ಇಲಾಖೆಗೆ ನೇಮಕಗೊಳ್ಳಲಿರುವ ಐದು ಅಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಲು ಡಿಪಿಎಆರ್‌ ಹೊರಡಿಸಿದ ಅನಧಿಕೃತ ಟಿಪ್ಪಣಿಯ ಪ್ರತಿ ‍‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಇತರ ಇಲಾಖೆಗಳ ಮುಖ್ಯಸ್ಥರಿಗೂ ಇದೇ ರೀತಿ ಸೂಚನೆ ನೀಡಲಾಗಿದೆ. ಐಎಎಸ್‌ನಿಂದ ಹಿಂಬಡ್ತಿ ಪಡೆಯಲಿರುವ ಅಧಿಕಾರಿಗಳೂ ಸೇರಿ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಪರಿಷ್ಕೃತಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಮತ್ತು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿರುವುದರಿಂದ ಈ ಅಧಿಕಾರಿಗಳಿಗೆ ಹೊಸತಾಗಿ ನೇಮಕಾತಿ ಆದೇಶ ನೀಡಲು ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.

‘ಸ್ಥಾನಪಲ್ಲಟ’ಗೊಳ್ಳುವವರಿಗೆ ಷರತ್ತು!
ಸ್ಥಾನಪಲ್ಲಟಗೊಂಡು ಹಿಂಬಡ್ತಿಗೆ ಒಳಗಾಗಲಿರುವ ಅಧಿಕಾರಿಗಳ ಜಾಗಕ್ಕೆ ಹೊಸದಾಗಿ ನೇಮಕವಾಗುವ ಅಧಿಕಾರಿಗಳಿಗೆ ಷರತ್ತು ವಿಧಿಸಲಾಗಿದೆ.

ಕೆಪಿಎಸ್‌ಸಿ ಜ.25ರಂದು ಪ್ರಕಟಿಸಿದ ಪರಿಷ್ಕೃತ ಪಟ್ಟಿ ಪ್ರಕಾರ ಈಗಾಗಲೇ ಐಎಎಸ್‌ಗೆ ಬಡ್ತಿ ಪಡೆದ ಏಳು ಅಧಿಕಾರಿಗಳು (ಎಂಟು ಅಧಿಕಾರಿಗಳು ಬಡ್ತಿಗೆ ಅರ್ಹರಿದ್ದರೂ ಒಬ್ಬರು ಕೆಎಎಸ್‌ ಹುದ್ದೆ ಆಯ್ಕೆ ಮಾಡಿಕೊಂಡಿರಲಿಲ್ಲ) ಬೇರೆ ಹುದ್ದೆಗಳಿಗೆ ಸ್ಥಾನಪಲ್ಲಟಗೊಳ್ಳುವುದರಿಂದ ಹಿಂಬಡ್ತಿ ಪಡೆಯಬೇಕಾಗಿದೆ. ಅವರ ಬದಲು, ಇತರ ಇಲಾಖೆಗಳಲ್ಲಿ ಕರ್ತವ್ಯದಲ್ಲಿರುವ ಎಂಟು ಅಧಿಕಾರಿಗಳು ಕೆಎಎಸ್‌ ಗ್ರೂಪ್‌ ‘ಎ’ಗೆ (ಕಿರಿಯ ಶ್ರೇಣಿ) ನೇಮಕಗೊಳ್ಳಲಿದ್ದಾರೆ.

ಆ ಅಧಿಕಾರಿಗಳನ್ನು ಹೊಸದಾಗಿ ನೇಮಿಸಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸಿರುವ ಡಿಪಿಎಆರ್‌, ಜ್ಯೇಷ್ಠತೆ ನೀಡುವ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಅಲ್ಲದೆ, ಹೊಸ ಹುದ್ದೆಗೆ ನಿಗದಿಪಡಿಸಿರುವ ಎಲ್ಲ ಇಲಾಖಾ ಪರೀಕ್ಷೆ ತೇರ್ಗಡೆಯಾಗಬೇಕು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಅಂತಿಮ ತೀರ್ಪಿಗೆ ಬದ್ಧವಾಗಿರಬೇಕು ಎಂಬ ಷರತ್ತು ಕೂಡಾ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.