ADVERTISEMENT

ಉತ್ತರ ಪತ್ರಿಕೆ ನಾಶಕ್ಕೆ ಮಾಹಿತಿ ಆಯೋಗ ಆಕ್ಷೇಪ

ಮಾಹಿತಿ ಹಕ್ಕು ಕಾಯ್ದೆ ಆಶಯಕ್ಕೆ ಅನುಗುಣವಾಗಿಲ್ಲದ ಕೆಪಿಎಸ್‌ಸಿ ನಿಯಮ ಬದಲಾವಣೆಗೆ ಸೂಚನೆ

ವಿಜಯಕುಮಾರ್ ಎಸ್.ಕೆ.
Published 12 ಫೆಬ್ರುವರಿ 2020, 19:45 IST
Last Updated 12 ಫೆಬ್ರುವರಿ 2020, 19:45 IST
ಎನ್.ಪಿ. ರಮೇಶ್
ಎನ್.ಪಿ. ರಮೇಶ್   

ಬೆಂಗಳೂರು: ಪರೀಕ್ಷೆ ಬರೆದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು 6 ತಿಂಗಳ ನಂತರ ನಾಶಪಡಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮಾಡಿಕೊಂಡಿರುವ ನಿಯಮಗಳಿಗೆ ಕರ್ನಾಟಕ ಮಾಹಿತಿ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ.

‘ಉತ್ತರ ಪತ್ರಿಕೆಗಳನ್ನು ಹೀಗೆ ನಾಶ ಮಾಡುವುದರಿಂದ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು ನ್ಯಾಯಕ್ಕಾಗಿ ಹೋರಾಟ ನಡೆಸುವ ಅವಕಾಶವನ್ನು ತಪ್ಪಿಸಿದಂತೆ ಆಗಲಿದೆ. ಆಯೋಗವು ನಡೆಸಿದ ಪರೀಕ್ಷೆಗಳು ನಿಷ್ಪಕ್ಷಪಾತ ಅಥವಾ ಪಾರದರ್ಶಕವಾಗಿ ನಡೆದಿದೆಯೇ ಎಂಬುದನ್ನು ತಿಳಿದು ಕೊಳ್ಳುವ ಹಕ್ಕು ಪ್ರತಿಯೊಬ್ಬ ಅಭ್ಯರ್ಥಿಗೆ ಇದೆ’ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

‘ಉತ್ತರ ಪತ್ರಿಕೆಗಳನ್ನು 6 ತಿಂಗಳ ಕಾಲವಷ್ಟೇ ಸಂರಕ್ಷಿಸುವ ಪದ್ಧತಿಯು ಮಾಹಿತಿ ಹಕ್ಕು ಕಾಯ್ದೆಯ ಆಶಯಕ್ಕೆ ಅನುಗುಣವಾಗಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇದೆ ಎಂಬ ಸಂದೇಶವನ್ನು ಅಭ್ಯರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀಡಬೇಕಿರುವುದು ಕೆಪಿಎಸ್‌ಸಿ ಕರ್ತವ್ಯ. ಉತ್ತರ ಪತ್ರಿಕೆಗಳನ್ನು ಕನಿಷ್ಠ 1 ವರ್ಷ ಸಂರಕ್ಷಿಸಬೇಕು. ಈ ಸಂಬಂಧ ಒಂದು ತಿಂಗಳಲ್ಲಿ ಸುತ್ತೋಲೆ ಹೊರಡಿಸಿ ಅದರ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಬೇಕು’ ಎಂದು ಸೂಚನೆ ನೀಡಿದೆ.

ADVERTISEMENT

ಬಿ.ಗಂಗಾಧರ ಎಂಬುವರು 2011ರಲ್ಲಿ ಬರೆದಿದ್ದ ಇಲಾಖಾ ಪರೀಕ್ಷೆಯ ಫಲಿತಾಂಶ ಮತ್ತು ಉತ್ತರ ಪತ್ರಿಕೆ ನೀಡುವಂತೆ ಕೆಪಿಎಸ್‌ಸಿಗೆ ಅರ್ಜಿ ಸಲ್ಲಿಸಿದ್ದರು. ಕೇಳಿದ ಮಾಹಿತಿ ದೊರಕದ ಕಾರಣ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ‘ಲೋಕಸೇವಾ ಆಯೋಗದ ಆಡಳಿತ ಮಂಡಳಿ ರೂಪಿಸಿಕೊಂಡಿರುವ ನಿಯಮಾವಳಿಗಳ ಪ್ರಕಾರ ಉತ್ತರ ಪತ್ರಿಕೆಗಳನ್ನು 6 ತಿಂಗಳ ನಂತರ ನಾಶಪಡಿಸಲಾಗುತ್ತದೆ’ ಎಂಬ ಉತ್ತರವನ್ನು ಕೆಪಿಎಸ್‌ಸಿ ನೀಡಿತ್ತು.

ಇದನ್ನು ಒಪ್ಪದ ರಾಜ್ಯ ಮಾಹಿತಿ ಆಯುಕ್ತ ಎನ್‌.ಪಿ.ರಮೇಶ್, ‘ಅರ್ಜಿದಾರರು ಕೇಳಿರುವ ಮಾಹಿತಿಯನ್ನು ಮೂರು ದಿನದೊಳಗೆ ಒದಗಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ಪರೀಕ್ಷಾ ನಿಯಂತ್ರಕರೇ ಮಾಹಿತಿ ಅಧಿಕಾರಿ

ಅರ್ಜಿದಾರರು ಕೇಳಿರುವ ಮಾಹಿತಿ ನೀಡಲು ವಿಳಂಬವಾಗುತ್ತಿರುವ ಕಾರಣ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರನ್ನೇ ಮಾಹಿತಿ ಅಧಿಕಾರಿಯನ್ನಾಗಿ ಮಾಹಿತಿ ಆಯೋಗ ನೇಮಕ ಮಾಡಿದೆ.

‘ಸಹಾಯಕ ಕಾರ್ಯದರ್ಶಿ ಮಾಹಿತಿ ಅಧಿಕಾರಿಯಾಗಿದ್ದರು. ಪರೀಕ್ಷಾ ನಿಯಂತ್ರಕರೇ ಮಾಹಿತಿ ಅಧಿಕಾರಿಯಾಗಿದ್ದರೆ ಅರ್ಜಿದಾರರಿಗೆ ತ್ವರಿತವಾಗಿ ಮಾಹಿತಿ ದೊರೆಯಲಿದೆ’ ಎಂದು ರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

***

ಮಾಹಿತಿ ಹಕ್ಕು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡುವ ಅಧಿಕಾರ ಕಾಯ್ದೆಯ ಕಲಂ 25(5)ರಲ್ಲಿ ಇದೆ. ಹಾಗಾಗಿ ನಿರ್ದೇಶನ ನೀಡಲಾಗಿದೆ

-ಎನ್.ಪಿ.ರಮೇಶ್‌, ರಾಜ್ಯ ಮಾಹಿತಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.