ADVERTISEMENT

ಎಸ್‌ಡಿಎ ನೇಮಕಾತಿ: ‘ಬ್ಲೂ ಟೂತ್‌’ ಬಳಸಿ ಅಕ್ರಮ; ಮೂವರು ಅಭ್ಯರ್ಥಿಗಳ ಡಿಬಾರ್‌

ರಾಜೇಶ್ ರೈ ಚಟ್ಲ
Published 6 ಆಗಸ್ಟ್ 2022, 21:30 IST
Last Updated 6 ಆಗಸ್ಟ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) 1,323 ಹುದ್ದೆಗಳ ನೇಮಕಾತಿಗೆ 2021ರ ಸೆಪ್ಟೆಂಬರ್ 19ರಂದು ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬ್ಲೂ ಟೂತ್‌ ಪರಿಕರ ಮತ್ತು ಮೈಕ್ರೋಫೋನ್‌ ಬಳಸಿ ಅಕ್ರಮ ನಡೆಸಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ.

ಪರೀಕ್ಷಾ ಅಕ್ರಮದಲ್ಲಿ ಅಭ್ಯರ್ಥಿಗಳಾದ ಆನಂದ್ ಎಚ್‌.ಅಮಜಿಗೋಳ್, ಬಾಬಣ್ಣ ಕೆ.ವಡ್ಡರ್‌, ವಿಠಲ ಹುಲಗಬಾಳ ಭಾಗಿಯಾಗಿರುವುದು ಸಾಬೀತಾಗಿದೆ ಎಂದು ಕೆಪಿಎಸ್‌ಸಿ ನೇಮಿಸಿದ್ದ ವಿಚಾರಣಾಧಿಕಾರಿ ವರದಿ ನೀಡಿದ್ದಾರೆ.

ಈ ವರದಿ ಆಧರಿಸಿ ಇನ್ನು ಮುಂದೆ ಆಯೋಗ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಈ ಮೂವರನ್ನೂ ಕೆಪಿಎಸ್‌ಸಿ ಡಿಬಾರ್‌ ಮಾಡಿದೆ. ಇನ್ನೂ ಹಲವು ಅಭ್ಯರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನದಲ್ಲಿ ವಿಚಾರಣೆ ಮುಂದುವರಿಸಿದೆ.

ADVERTISEMENT

‘ಅಕ್ರಮ ಖಚಿತಗೊಂಡ ಬೆನ್ನಲ್ಲೇ, ಇನ್ನಷ್ಟು ಅಭ್ಯರ್ಥಿಗಳು ಇದೇ ರೀತಿಯ ಅಕ್ರಮ ನಡೆಸಿರುವ ಅನುಮಾನವಿದೆ. ಹೆಚ್ಚಿನ ತನಿಖೆ ನಡೆಸಬೇಕು’ ಎಂದು ಎಸ್‌ಡಿಎ ಉದ್ಯೋಗಾಕಾಂಕ್ಷಿಗಳುಆಗ್ರಹಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಬಿವಿವಿ ಸಂಘದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆನಂದ್ ಎಚ್‌.ಅಮಜಿಗೋಳ್, ಬೆಳಗಾವಿಯ ಅಂಜುಮನ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಬಾಬಣ್ಣ ಕೆ. ವಡ್ಡರ್‌, ಬಾಗಲಕೋಟೆಯ ಶಂಕರಪ್ಪ ಸಕ್ರಿ ಪಿಯು ಕಾಲೇಜಿನಲ್ಲಿ ವಿಠಲ ಹುಲಗಬಾಳ ಪರೀಕ್ಷೆಗೆ ಹಾಜರಾಗಿದ್ದರು.

ಈ ಮೂವರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು,ಕೊಠಡಿ ಮೇಲ್ವಿಚಾರಕರು ಮತ್ತು ಜಿಲ್ಲಾಧಿಕಾರಿ ಅವರು ಕೆಪಿಎಸ್‌ಸಿಗೆ ವರದಿ ಸಲ್ಲಿಸಿದ್ದರು. ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ, ಮೂವರಿಗೂ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಅಲ್ಲದೆ, ಆಯಾ ಕೇಂದ್ರಗಳ ವ್ಯಾಪ್ತಿಯ ಠಾಣೆಗಳಲ್ಲಿ ದೂರು ದಾಖಲಿಸಲಾಗಿತ್ತು.

ಆದರೆ, ಆರೋಪಗಳನ್ನು ಅಭ್ಯರ್ಥಿಗಳು ನಿರಾಕರಿಸಿದ್ದರು. ಹೀಗಾಗಿ, ಸತ್ಯಾಂಶ ಪರಿಶೀಲಿಸಲು ವಿಚಾರಣಾಧಿಕಾರಿಯನ್ನು ಕೆಪಿಎಸ್‌ಸಿ ನೇಮಿಸಿತ್ತು. ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳ ಸಹಿತ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿ ವಿಚಾರಣಾಧಿಕಾರಿ ವರದಿ ನೀಡಿದ್ದರು. ಇತ್ತೀಚೆಗೆ ಆಯೋಗದ ಸಭೆಯಲ್ಲಿ, ಈ ಮೂವರನ್ನು ಮುಂದೆ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಶಾಶ್ವತವಾಗಿ ಡಿಬಾರ್‌ ಮಾಡಿ ನಿರ್ಣಯ ಕೈಗೊಂಡಿದೆ.

ವಿಚಾರಣೆಯ ಬಳಿಕ ಇನ್ನಷ್ಟು ಮಂದಿ ಡಿಬಾರ್‌:ವಿಕಾಸ್ ಕಿಶೋರ್

‘ಎಸ್‌ಡಿಎಯಲ್ಲಿ ನೇಮಕಾತಿಗೆ ನಡೆದ ಪರೀಕ್ಷಾ ಅಕ್ರಮದ ಬಗ್ಗೆ ವಿಚಾರಣೆ ಮುಂದುವರಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಇನ್ನಷ್ಟು ಅಭ್ಯರ್ಥಿಗಳನ್ನು ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಶಾಶ್ವತವಾಗಿ ಡಿಬಾರ್‌ ಮಾಡುತ್ತೇವೆ. ಎಷ್ಟು ಅಭ್ಯರ್ಥಿಗಳ ಮೇಲೆ ವಿಚಾರಣೆ ನಡೆಯುತ್ತಿದೆ, ಎಷ್ಟು ಮಂದಿಯನ್ನು ಡಿಬಾರ್‌ ಮಾಡಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದರು.

‘ಕೆಲವರ ವಿರುದ್ಧ ಈಗಾಗಲೇ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸ್‌ ತನಿಖೆ ನಡೆಯುತ್ತಿದೆ. ಕೆಲವರು ಪರೀಕ್ಷಾ ಕೊಠಡಿಯಲ್ಲಿ, ಇನ್ನೂ ಕೆಲವರು ಪರೀಕ್ಷೆಗೆ ಮೊದಲೇ ಅಕ್ರಮ ಭಾಗಿಯಾಗಿರುವುದು ಗೊತ್ತಾಗಿದೆ. ಹೀಗಾಗಿ ಬೇರೆ, ಬೇರೆ, ಸೆಕ್ಷನ್‌ಗಳಡಿಯಲ್ಲಿ ತನಿಖೆ ನಡೆಯುತ್ತಿದೆ. ಎಲ್ಲ ವಿಷಯವನ್ನು ಈಗಲೇ ಬಹಿರಂಗಪಡಿಸುವುದಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.