ADVERTISEMENT

28 ಅಧಿಕಾರಿಗಳ ಭವಿಷ್ಯಕ್ಕೆ ಕುತ್ತು?

ಕೆಪಿಎಸ್‌ಸಿಯಿಂದ ಹೈಕೋರ್ಟ್‌ಗೆ ಅನುಸರಣಾ ವರದಿ

ರಾಜೇಶ್ ರೈ ಚಟ್ಲ
Published 27 ಜನವರಿ 2019, 19:36 IST
Last Updated 27 ಜನವರಿ 2019, 19:36 IST
   

ಬೆಂಗಳೂರು: 1998, 1999, 2004ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ತೀರ್ಪು ಅನುಷ್ಠಾನಗೊಳಿಸುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹೈಕೋರ್ಟ್‌ಗೆ ಸೋಮವಾರ (ಜ.28) ಸಲ್ಲಿಸಲಿರುವ ಅನುಸರಣಾ ವರದಿ, 28 ಅಧಿಕಾರಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

ಅಷ್ಟೇ ಅಲ್ಲ, ಈ ಮೂರೂ ಸಾಲಿನಲ್ಲಿ ನೇಮಕಗೊಂಡು ಐಎಎಸ್‌ಗೆ ಬಡ್ತಿ ಪಡೆದು ಹಿಂಬಡ್ತಿಯ ಆತಂಕ ಎದುರಿಸುತ್ತಿರುವ ಏಳು ಅಧಿಕಾರಿಗಳ ಭವಿಷ್ಯವನ್ನೂ ತೀರ್ಮಾನಿಸಲಿದೆ. ಜತೆಗೆ, ತೀರ್ಪು ಜಾರಿಯಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಲಿದ್ದು, ಹಿಂಬಡ್ತಿ ಪಡೆಯುವವರ ಸಂಖ್ಯೆಯಲ್ಲೂ ಏರುಪೇರು ಆಗುವ ಸಾಧ್ಯತೆ ಇದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

2016ರ ಜೂನ್‌ 21ರಂದು ಹೈಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ, ಈ ಸಾಲಿನ ನೇಮಕಾತಿ ಅಸಾಂವಿಧಾನಿಕವಾಗಿದ್ದು, ಸರ್ಕಾರದ ಆದೇಶ ಮತ್ತು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಅನರ್ಹರನ್ನು ಕೈಬಿಟ್ಟು ಅರ್ಹರನ್ನು ನೇಮಿಸುವಂತೆ ಹೇಳಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ 2018ರ ಏ. 11ರಂದು ಎತ್ತಿ ಹಿಡಿದಿತ್ತು.

ADVERTISEMENT

ಆದರೆ, ಈ ತೀರ್ಪು ಅನುಷ್ಠಾನಗೊಂಡಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ‘ನ್ಯಾಯಾಂಗ ನಿಂದನೆ’ ಅರ್ಜಿ ದ್ವಿಸದಸ್ಯಪೀಠದ ಮುಂದೆ ವಿಚಾರಣೆಗೆ ಬರಲಿದೆ. ಇದೇ 18ರಂದುವಿಚಾರಣೆ ನಡೆಸಿದ್ದ ಪೀಠ, ವಾರದೊಳಗೆ ಅನುಸರಣಾ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ, ಮುಂದಿನ ಕ್ರಮ ಎದುರಿಸಲು ಸಿದ್ಧರಾಗಬೇಕು ಎಂದು ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಕೆಪಿಎಸ್‌ಸಿ, ಕೈಗೊಂಡಿರುವ ಕ್ರಮಗಳ ಕುರಿತು ಪೀಠಕ್ಕೆ ವಿವರಣೆ ನೀಡಲಿದೆ.

ಹೈಕೋರ್ಟ್‌ ತೀರ್ಪು ಅನ್ವಯ ಉದ್ಯೋಗ ಕಳೆದುಕೊಳ್ಳುವವರ ಮತ್ತು ಬದಲಿಗೆ ನೇಮಕಗೊಳ್ಳುವ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್‌ಸಿ ಈಗಾಗಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್‌) ಸಲ್ಲಿಸಿದೆ. ಆದರೆ, ಅದನ್ನು ಜಾರಿಗೊಳಿಸುವ ವಿಚಾರದಲ್ಲಿ ರಾಜಕೀಯ ಒತ್ತಡಗಳು ಇದ್ದ ಕಾರಣ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಸುಪ್ರೀಂ ಕೋರ್ಟ್‌ನಲ್ಲೂ ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣಾ ಹಂತದಲ್ಲಿದೆ. ಫೆ. 4ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ. ತೀರ್ಪು ಅನುಷ್ಠಾನಗೊಳಿಸಿದರೆ ಆಡಳಿತಾತ್ಮಕವಾಗಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿದೆ.

ಇದೇ ತೀರ್ಪಿನಲ್ಲಿ, ಗೆಜೆಟೆಡ್‌ ‍ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವೇಳೆ ಮೀಸಲು ಅನ್ವಯಿಸುವ ಬಗ್ಗೆಯೂ ಹೈಕೋರ್ಟ್‌ ವಿವರಿಸಿತ್ತು. ಆದರೆ, ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಮುಖ್ಯ ಪರೀಕ್ಷೆ, ಪೂರ್ವಭಾವಿ ಪರೀಕ್ಷೆ, ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಪಟ್ಟಿಗಳಿಗೆ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರ ಇತ್ತೀಚೆಗೆ ಹೊಸ ಕಾಯ್ದೆ ‘ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿಯ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ಕಾರ್ಯವಿಧಾನ)’ ರೂಪಿಸಿದೆ.

ಈ ಕಾಯ್ದೆ ಬಗ್ಗೆಯೂ ಹೈಕೋರ್ಟ್‌ ಪೀಠದ ಮುಂದೆ ಸರ್ಕಾರ ಪ್ರಸ್ತಾಪಿಸುವ ಸಾಧ್ಯತೆ ಇದೆ. ಕಾಯ್ದೆ ಬಗ್ಗೆ ಪೀಠ ಯಾವ ಆದೇಶ ನೀಡಲಿದೆ ಎಂಬುದರ ಮೇಲೆಯೂ 1998, 1999, 2004ನೇ ಸಾಲಿನಲ್ಲಿ ಆಯ್ಕೆಗೊಂಡವರ ಭವಿಷ್ಯ ನಿಂತಿದೆ ಎಂದು ಕೆಪಿಎಸ್‌ಸಿ ಮೂಲಗಳು ಹೇಳಿವೆ.

106 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ

ಗೆಜೆಟೆಡ್‌ ಪ್ರೊಬೇಷನರಿ 428 ಹುದ್ದೆಗಳಿಗೆ ನೇಮಕಾತಿಗೆ ಒಂದೂವರೆ ವರ್ಷಗಳ ಹಿಂದೆ ಆರಂಭಿಸಿದ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಈ ಮಧ್ಯೆ, ಹೊಸತಾಗಿ 106 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸುವಂತೆ ಕೆಪಿಎಸ್‌ಸಿಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ.

ಗ್ರೂಪ್‌ ‘ಎ’ ವೃಂದದ 7 ಮತ್ತು ಗ್ರೂಪ್‌ ‘ಬಿ’ ವೃಂದದ 99 ಹುದ್ದೆಗಳನ್ನು ತುಂಬುವ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಡಿಪಿಎಆರ್ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಆದರೆ, 2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ಸುಪ್ರೀಂ ಕೋರ್ಟ್‌ ರದ್ದು‍ಪಡಿಸಿದ್ದು, ಆ ಸಾಲಿನಲ್ಲಿ ನೇಮಕಾತಿಗಾಗಿ ಪರೀಕ್ಷೆ ಎದುರಿಸಿದವರಿಗೆ ಇನ್ನೊಂದು ಅವಕಾಶ ನೀಡಬೇಕೇ ಎಂಬ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಕೇಳಲು ಕೆಪಿಎಸ್‌ಸಿ ನಿರ್ಧರಿಸಿದೆ. ಅದರ ಬಳಿಕ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಿದೆ.

ನೇಮಕಾತಿಗೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಪಟ್ಟಿ

ಹುದ್ದೆ; ಮೂಲ ವೃಂದ; ಹೈ–ಕ ಮೀಸಲು; ಒಟ್ಟು

ಗ್ರೂಪ್ ‘ಎ’ ಹುದ್ದೆಗಳು

ಡಿವೈಎಸ್‌ಪಿ; 0; 3; 3

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ; 2; 0; 2

ಸಹಾಯಕ ಕಾರ್ಮಿಕ ಆಯುಕ್ತ; 2; 0; 2

ಒಟ್ಟು; 4; 3; 7

ಗ್ರೂಪ್ ‘ಬಿ’ ಹುದ್ದೆಗಳು

ತಹಶೀಲ್ದಾರ್‌ ಗ್ರೇಡ್‌–2; 44; 6; 50

ವಾಣಿಜ್ಯ ತೆರಿಗೆ ಅಧಿಕಾರಿ; 7; 0; 7

ಸಹಾಯಕ ಅಧೀಕ್ಷಕ (ಕಾರಾಗೃಹ); 6; 0; 6

ಅಬಕಾರಿ ಉಪ ಅಧೀಕ್ಷಕ; 4; 1; 5

ಸಹಾಯಕ ನಿರ್ದೇಶಕ, ಆಹಾರ ಇಲಾಖೆ; 2; 0; 2

ಸಹಾಯಕ ನಿರ್ದೇಶಕ, ಸಹಕಾರ ಇಲಾಖೆ; 14; 0; 14

ಕಾರ್ಮಿಕ ಅಧಿಕಾರಿ; 4; 0; 4

ಸಹಾಯಕ ನಿರ್ದೇಶಕ (ಪ್ರವಾಸೋದ್ಯಮ ಇಲಾಖೆ); 9; 2; 11

ಒಟ್ಟು; 90; 9; 99

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.